ಪಡುಬಿದ್ರಿ ಮೆಸ್ಕಾಂ ಕಚೇರಿಯಿಂದ ಕಳವು

ಎಟಿಪಿ ಮೆಷಿನ್‌ ಒಡೆದು 4.5 ಲ.ರೂ. ಕೊಂಡೊಯ್ದ ಕಳ್ಳರು

Team Udayavani, May 16, 2019, 6:15 AM IST

ಪಡುಬಿದ್ರಿ: ಮೆಸ್ಕಾಂ ಶಾಖಾ ಕಚೇರಿಯ ಎಟಿಪಿ ಮೆಷಿನ್‌ನ ತ್ರಿಬಲ್‌ ಲಾಕ್‌ ಅನ್ನು ಮಂಗಳವಾರ ರಾತ್ರಿ ವೇಳೆ ಒಡೆದು 4,52,507 ರೂ.ಗಳನ್ನು ಕದ್ದೊಯ್ಯಲಾಗಿದೆ ಎಂದು ದೂರು ದಾಖಲಾಗಿದೆ.

ಬೆಂಗಳೂರಿನ ಐಡಿಯಾ ಇನ್ಫಿನಿಟಿ ಐಟಿ ಸೊಲ್ಯೂಶನ್‌ ಫ್ತೈ ಲಿ., ಕಂಪೆನಿಗೆ ಸೇರಿದ ಎಟಿಪಿ ಮೆಷಿನ್‌ ಪಡುಬಿದ್ರಿ ಮೆಸ್ಕಾಂ ಶಾಖಾ ಕಚೇರಿಯ ಒಂದನೇ ಮಹಡಿಯಲ್ಲಿದ್ದು, ಗ್ರಾಹಕರು ಮೆಸ್ಕಾಂಗೆ ಪಾವತಿಸಿರುವ ನಗದು ಬುಧವಾರ ಬೆಳಗ್ಗೆ ಈ ಏಜೆನ್ಸಿಯಿಂದ ಮೆಸ್ಕಾಂಗೆ ಪಾವತಿಯಾಗಬೇಕಿತ್ತು.
ಸಿಬಂದಿ ಬುಧ ವಾರ ಬೆಳಗ್ಗೆ ಕಚೇರಿಗೆ ಬಂದಾಗಲೇ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.

ಮೆಸ್ಕಾಂನ ಕಚೇರಿ ಬಾಗಿಲು ತೆರೆದೇ ಇತ್ತು. ಇದ ರಿಂದ ಕಳ್ಳರು ಒಳ ನುಗ್ಗಲು ಸುಲಭವಾಯಿತು ಎಂಬ ಮಾತು ಕೇಳಿ ಬರುತ್ತಿದೆ. ಕಳ್ಳರು ಮೆಷಿನ್‌ ಇದ್ದ ಕೋಣೆಯ ಬಾಗಿಲಿನ ಬೀಗವನ್ನು ಮುರಿದು, ಬಳಿಕ ಮೆಷಿನ್‌ಗೆ ಅಳವಡಿಸಲಾಗಿದ್ದ ತ್ರಿಬಲ್‌ ಲಾಕನ್ನೂ ಒಡೆದು ನಗದನ್ನು ಕೊಂಡೊಯ್ದಿದ್ದಾರೆ. ಕಚೇರಿಯ ಪ್ರಧಾನ ಬಾಗಿಲನ್ನು ತೆರೆದಿರಿಸಿದ್ದಕ್ಕೆ ಪೊಲೀಸರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್‌ಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್‌, ಕಾರ್ಕಳ ಎಎಸ್ಪಿ ಕೃಷ್ಣಕಾಂತ್‌, ಕಾಪು ವೃತ್ತ ನಿರೀಕ್ಷಕ ಶಾಂತಾರಾಮ್‌, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ತನಿಖೆ ಪ್ರಗತಿಯಲ್ಲಿದೆ.

ಏಜೆನ್ಸಿ ಬೇಜವಾಬ್ದಾರಿ ಕಾರಣ: ಉಪ ವಿಭಾಗಾಧಿಕಾರಿ
ಈ ಕುರಿತು “ಉದಯವಾಣಿ’ಗೆ ಪ್ರತಿ ಕ್ರಿಯಿಸಿದ ಕಾಪು ಮೆಸ್ಕಾಂ ಉಪ ವಿಭಾಗಾಧಿಕಾರಿ ಚಂದ್ರಶೇಖರ್‌ ಅವರು, ಐಡಿಯಾ ಇನ್ಫಿನಿಟಿ ಬೇಜವಾ ಬ್ದಾರಿಯೇ ಈ ಘಟನೆಗೆ ಕಾರಣ. ಮೆಸ್ಕಾಂಗೆ ಗ್ರಾಹಕರು ಪಾವತಿಸಿರುವ ಮೊತ್ತವನ್ನು ಈ ಏಜೆನ್ಸಿಯೇ ಪಾವತಿಸಬೇಕಿದೆ.ಪಡುಬಿದ್ರಿ ಮೆಸ್ಕಾಂ ಶಾಖಾ ಕಚೇರಿ ಮಾತ್ರವೇ ಆಗಿದ್ದು, ಸರ್ವಿಸಿಂಗ್‌ ಕಚೇರಿ ಆಗಿರದ ಕಾರಣ ಮೆಸ್ಕಾಂ ಸಿಬಂದಿ ರಾತ್ರಿ ಕಾವಲಿ ರುವುದಿಲ್ಲ ಎಂದು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ