ರೈತರ ಸಾಲಮನ್ನಾದಲ್ಲಿ ತಾರತಮ್ಯ ಸಲ್ಲದು: ಭಾ.ಕಿ.ಸಂ. ಆಗ್ರಹ
Team Udayavani, Jul 9, 2017, 3:45 AM IST
ಕಾರ್ಕಳ: ಭಾರತೀಯ ಕಿಸಾನ್ ಸಂಘ, ಕಾರ್ಕಳ ತಾ| ಸಮಿತಿ ಸಭೆಯು ಜು. 1ರಂದು ಸಂಘದ ಅಧ್ಯಕ್ಷರಾದ ನವೀನ್ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಸಂಘದ ಕಾರ್ಯಾಲಯದಲ್ಲಿ ಜರಗಿತು.
ಕಾರ್ಕಳ ತಾಲೂಕಿನಲ್ಲಿ ಕಿಸಾನ್ ಸಂಘದ ಉಸ್ತುವಾರಿಯಲ್ಲಿ ಭತ್ತದ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯಾಂತ್ರೀಕೃತ ಭತ್ತದ ಕೃಷಿಯನ್ನು ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈಗಾಗಲೇ ಬಿತ್ತನೆ ಕಾರ್ಯಕ್ರಮ ಪ್ರಾರಂಭವಾಗಿರುತ್ತದೆ. ಇಲಾಖೆಯಿಂದ ಸಕಾಲದಲ್ಲಿ ರೈತರಿಗೆ ಬಿತ್ತನೆ ಬೀಜಗಳು ಸಿಗುವಂತೆ ಮಾಡಲು ಒತ್ತಾಯಿಸುವುದೆಂದು ತೀರ್ಮಾನಿಸಲಾಯಿತು.
ಕರ್ನಾಟಕ ಸರಕಾರವು ಈಗಾಗಲೇ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ಆ ಪ್ರಕಾರ ರೈತರು ಸಹಕಾರಿ ಸಂಘಗಳಿಂದ ಪಡೆದ ಸಾಲಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯ ಪ್ರಕಾರ ಸಹಕಾರಿ ಸಂಘಗಳಿಂದ ಪಡೆದ ರೂ. 50,000 ಬೆಳೆಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ಆದರೆ ಅನೇಕ ರೈತರು ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಬೆಳೆಸಾಲವನ್ನು ಪಡೆದಿದ್ದು, ಈ ಯೋಜನೆಯಿಂದ ವಂಚಿತರಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಈ ವರ್ಷ ತೀವ್ರ ಬರಗಾಲ ಕಾಡಿದ್ದು, ರಾಜ್ಯದ ರೈತರು ಬೆಳೆಹಾನಿ ಅನುಭವಿಸಿ ನಷ್ಟದಲ್ಲಿದ್ದಾರೆ. ಪ್ರಸಕ್ತ ಬೇಸಗೆಯಲ್ಲಿ ತಮ್ಮ ತೋಟಗಳಿಗೆ ನೀರು ಹಾಕಲು ವಿಫಲರಾದ ಕಾರಣದಿಂದಾಗಿ ಮುಂದಿನ ವರ್ಷದ ಫಸಲನ್ನು ಕೂಡ ಕಳೆದುಕೊಂಡಿದ್ದಾರೆ. ಹಾಗಾಗಿ ಒಂದು ಬಾರಿಗೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಸರಕಾರ ವನ್ನು ಆಗ್ರಹಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಿ. ವಿ. ಪೂಜಾರಿ ಪೆರ್ಡೂರು, ಜಿ. ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ನಿಟ್ಟೆ, ತಾ| ಪ್ರ. ಕಾರ್ಯದರ್ಶಿ ಗೋವಿಂದರಾಜ ಭಟ್ ಕಡ್ತಲ, ಉಪಾಧ್ಯಕ್ಷ ಸುಂದರ ಶೆಟ್ಟಿ ಮುನಿಯಾಲು, ಹೇಮಚಂದ್ರ ಜೈನ್, ಸಹ ಕಾರ್ಯದರ್ಶಿಗಳಾದ ಶೇಖರ್ ಕೋಟ್ಯಾನ್ ರೆಂಜಾಳ, ಪದ್ಮನಾಭ ಶೆಟ್ಟಿ ನಿಂಜೂರು, ಚಂದ್ರಶೇಖರ ರಾವ್ ಕಲ್ಯಾ, ಕೆ.ಪಿ. ಭಂಡಾರಿ ಮೋಹನ್ದಾಸ ಅಡ್ಯಂತಾಯ ಕಾಂತಾವರ ಹರಿಶ್ಚಂದ್ರ ಹೆಗ್ಡೆ ಮರ್ಣೆ, ಗ್ರಾಮಸಮಿತಿ ಪ್ರಮುಖರು ಉಪಸ್ಥಿತರಿದ್ದರು.