
ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗೆ 625 ಅಂಕ
Team Udayavani, May 19, 2022, 2:19 PM IST

ಉಡುಪಿ: ಮನೆಯಲ್ಲಿ ಬಡತನ, ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಮೀನುಗಾರಿಕೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯ ನಡುವೆಯೂ ಮಲ್ಪೆಯ ವಿದ್ಯಾರ್ಥಿಯೋರ್ವ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕ ಪಡೆದ ಸಾಧನೆ ಮಾಡಿದ್ದಾನೆ.
ಉಡುಪಿ ಜಿಲ್ಲೆಯ ಮಲ್ಪೆ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಪುನೀತ್ ನಾಯ್ಕ್ ಈ ಸಾಧಕ. ಇಂದು ಪ್ರಕಟವಾದ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಪುನೀತ್ ನಾಯ್ಕ್ 625 ಅಂಕ ಪಡೆದಿದ್ದಾನೆ.
ಈ ಬಗ್ಗೆ ಉದಯವಾಣಿ ಜೊತೆಗೆ ಮಾತನಾಡಿದ ಪುನೀತ್ ನಾಯ್ಕ್, ಶಾಲೆಯಲ್ಲಿ ಶಿಕ್ಷಕರು ಕಲಿಸಿದ್ದನ್ನು ಕೇಳಿ ಮನೆಯಲ್ಲಿ ಅಭ್ಯಾಸ ನಡೆಸುತ್ತಿದ್ದೆ. ಯಾವುದೇ ಟ್ಯೂಷನ್ ಗೆ ಹೋಗಿಲ್ಲ. ಒಳ್ಳೆಯ ಅಂಕ ಬರುವ ನಿರೀಕ್ಷೆಯಿತ್ತು. ಶಾಲೆಯ ಶಿಕ್ಷಕರ ಪ್ರೋತ್ಸಾಹದಿಂದ ಇದು ಸಾಧ್ಯವಾಯ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ : 85.63% ವಿದ್ಯಾರ್ಥಿಗಳು ಉತ್ತೀರ್ಣ; ಹುಡುಗಿಯರೇ ಮೇಲುಗೈ
ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಬೆಳಗ್ಗೆ ಬೇಗ ಎದ್ದು ಮೀನುಗಾರಿಕೆಯ ಕೆಲಸಕ್ಕೆ ಹೋಗುತ್ತಿದ್ದೆ. 9 ಗಂಟೆಗೆ ಬಂದು ಶಾಲೆಗೆ ಹೋಗುತ್ತಿದ್ದೆ. ಕಷ್ಟ ಪಟ್ಟಿದ್ದಕ್ಕೆ ಇಂದು ಫಲ ಸಿಕ್ಕಿದೆ. ಮುಂದೆ ಇನ್ನಷ್ಟು ಉತ್ತಮವಾಗಿ ಓದಿ ಜಿಲ್ಲಾಧಿಕಾರಿ ಆಗಬೇಕೆಂಬ ಕನಸಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯೆ ಸಂಧ್ಯಾ ಪ್ರಭು ಮಾತನಾಡಿ, ನಮ್ಮ ಶಾಲೆಗೆ ಇದೇ ಮೊದಲ ಬಾರಿಗೆ ಇಂತಹ ಫಲಿತಾಂಶ ಬಂದಿದೆ. ಪ್ರತಿ ಪರೀಕ್ಷೆಯಲ್ಲಿ ನೂರು ಶೇಕಡಾ ಅಂಕ ಪಡೆಯುತ್ತಿದ್ದ. ಹೀಗಾಗಿ ನಮಗೆ ನಂಬಿಕೆಯಿತ್ತು. ಸರ್ಕಾರಿ ಶಾಲೆಯ ಬಗ್ಗೆ ಜನರಿಗೆ ಇರುವ ಕೀಳರಿಮೆ ದೂರವಾಗಬೇಕು. ನಮ್ಮಲ್ಲೂ ಉತ್ತಮ ಶಿಕ್ಷಕರಿದ್ದಾರೆ. ಉತ್ತಮ ಸೌಲಭ್ಯ ದೊರಕುತ್ತದೆ ಎಂದರು.
ಟಾಪ್ ನ್ಯೂಸ್
