ಉಡುಪಿ- ಕಾರ್ಕಳ: ಸರಕಾರಿ ಬಸ್ ಸಂಚಾರಕ್ಕೆ ಚಾಲನೆ
Team Udayavani, Mar 10, 2017, 6:57 AM IST
ಉಡುಪಿ: ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ನಿಗಮದ ವತಿಯಿಂದ ಉಡುಪಿ- ಕಾರ್ಕಳ ಮಾರ್ಗದಲ್ಲಿ ನೂತನ ಸಾಮಾನ್ಯ ಸಾರಿಗೆ ಬಸ್‌ಗಳು ಈಗಾಗಲೇ ಚಲಿಸುತ್ತಿದ್ದು, ಸಚಿವ ಪ್ರಮೋದ್ ಮಧ್ವರಾಜ್ ಅವರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಅಧಿಕೃತವಾಗಿ ಚಾಲನೆ ನೀಡಿದರು.
ಉಡುಪಿ ಹಾಗೂ ಕಾರ್ಕಳದ ಜನರ ಬಹುದಿನಗಳ ಬೇಡಿಕೆ ಈ ಮೂಲಕ ಈಡೇರಿದ್ದು, ಸದ್ಯ ಉಡುಪಿ- ಕಾರ್ಕಳ ದಾರಿಯಲ್ಲಿ 4 ಬಸ್‌ಗಳು ಒಟ್ಟು 36 ಟ್ರಿಪ್‌ಗ್ಳ ಮೂಲಕ ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆ ನೀಡಲಿದೆ. ಮುಂದಿನ ದಿನಗಳಲ್ಲಿ ಇನ್ನೂ 4 ಬಸ್‌ಗಳು ಈ ದಾರಿಯಲ್ಲಿ ಸಂಚಾರ ನಡೆಸಲಿವೆ. ಖಾಸಗಿ ಬಸ್‌ನ ದರವನ್ನೇ ಇಲ್ಲಿಯೂ ನಿಗದಿಪಡಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಾದೇಶಿಕ ವಿಭಾಗಧಿಕಾರಿ ವಿವೇಕಾನಂದ ಹೆಗಡೆ ಹೇಳಿದ್ದಾರೆ.
ಕಾರ್ಕಳ – ಉಡುಪಿ ಮಧ್ಯೆ ಕಳೆದ ಫೆ. 14ರಿಂದ ಸಾಮಾನ್ಯ ಸಾರಿಗೆ ಬಸ್‌ಗಳ ಸಂಚಾರ ಆರಂಭ ಗೊಂಡಿದ್ದು, ಗುರುವಾರ ಅದಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಧಿಕೃತ ಚಾಲನೆ ನೀಡಿದರು.
ವಿಶೇಷ ರಿಯಾಯತಿ ಪಾಸ್ ವ್ಯವಸ್ಥೆ: ಸರಕಾರಿ
ಬಸ್‌ನಲ್ಲಿ ವಿದ್ಯಾರ್ಥಿಗಳು, ಹಿರಿಯರು, ಅಂಗವಿಕಲರಿಗೆ ರಿಯಾಯತಿ ಪಾಸ್ ವ್ಯವಸ್ಥೆ ಕೂಡ ನೀಡಲಾಗಿದೆ. ನಿತ್ಯ ಪ್ರಯಾಣಿಕರಿಗೆ ಮಾಸಿಕ ಪಾಸಿನ ಮೂಲಕ ರಿಯಾಯತಿ ಇರಲಿದೆ. ಇನ್ನು ಅನೇಕರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ನೀಡಲಾಗಿದೆ. ಉಡುಪಿ ಹಾಗೂ ಕಾರ್ಕಳಕ್ಕೆ ಇನ್ನಷ್ಟು ಹೆಚ್ಚಿನ ಸರಕಾರಿ ಬಸ್‌ಗಳು ಸಂಚರಿಸಿದರೆ ಅನುಕೂಲ ಎನ್ನುವುದು ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಹಿರಿಯ ನಾಗರೀಕರ ಅಭಿಮತ. ಮುಂದಿನ ದಿನಗಳಲ್ಲಿ ಕುಂದಾಪುರ, ಹೆಬ್ರಿ ವ್ಯಾಪ್ತಿಯಲ್ಲಿಯೂ ಸರಕಾರಿ ಬಸ್‌ಗಳು ಓಡಾಡಬೇಕು ಎನ್ನುವುದು ಬಹುಜನರ ಬೇಡಿಕೆಯಾಗಿದೆ.
ಡಿಟಿಒ ಜೈಶಾಂತ್ ಕುಮಾರ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸದಸ್ಯರಾದ ರಮೇಶ್ ಕಾಂಚನ್, ರಮೇಶ್ ಪೂಜಾರಿ, ಜನಾರ್ಧನ ಭಂಡಾರ್ಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
“26 ಹೊಸ ನಗರ ಸಾರಿಗೆ ಬಸ್ ಸೇವೆ’
ನೂತನ ಸಾಮಾನ್ಯ ಸಾರಿಗೆ ಸಂಚಾರಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ಸಚಿವ ಪ್ರಮೋದ್ ಮಧ್ವರಾಜ್ ಅವರು ಉಡುಪಿ ಹಾಗೂ ಕಾರ್ಕಳ ಮಧ್ಯೆ ಸರಕಾರಿ ಬಸ್ ಸೇವೆ ಆರಂಭಿಸಬೇಕು ಎಂದು ಬಹುಜನರ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ. ಈ ಮಾರ್ಗದಲ್ಲಿ ಇನ್ನಷ್ಟು ಹೆಚ್ಚಿನ ಬಸ್‌ಗಳ ಸಂಚಾರ ಆರಂಭವಾಗಲಿದೆ. ಈಗಾಗಲೇ ಉಡುಪಿ ನಗರದಲ್ಲಿ 12 ನರ್ಮ್ ಬಸ್‌ಗಳು ಓಡಾಟ ನಡೆಸುತ್ತಿವೆ. 26 ಹೊಸ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸಲಿವೆ. ಮಾ. 21ರಂದು ನಡೆಯುವ ಆರ್‌ಟಿಎ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. ಇದು ಖಾಸಗಿಯವರೆಗೆ ಪೈಪೋಟಿಯಲ್ಲ. ಖಾಸಗಿ, ಸರಕಾರಿ ಸಹಭಾಗಿತ್ವ ದಲ್ಲಿ ಬನ್ನಂಜೆಯಲ್ಲಿ ಉಡುಪಿ ಗ್ರಾಮಾಂತರ ಬಸ್ ನಿಲ್ದಾಣವನ್ನು 30 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಬಸ್‌ಗಳ ವೇಳಾಪಟ್ಟಿ
ಉಡುಪಿಯಿಂದ ಕಾರ್ಕಳಕ್ಕೆ ಸಂಚರಿಸುವ ಬಸ್‌ಗಳ ಸಮಯ ಹೀಗಿದೆ : ಬೆಳಗ್ಗೆ 6.10, 6.40, 7.50, 8.30, 9.30, 9. 40, 11.10, ಮಧ್ಯಾಹ್ನ 12.00, 12.40, 2.15, 2.25, ಸಂಜೆ 4.05 ಹಾಗೂ 4.25.
ಕಾರ್ಕಳದಿಂದ ಉಡುಪಿಗೆ ಸಂಚರಿಸುವ ಬಸ್‌ಗಳ ಸಮಯ ಹೀಗಿದೆ: ಬೆಳಗ್ಗೆ 6.10, 6.55, 7.55, 8.10, 9.25, 10.25, 11.05, 11.15, ಮಧ್ಯಾಹ್ನ 12.40, 1.40, 2.15, ಸಂಜೆ 4.10 ಹಾಗೂ 5.15.