ಯಕ್ಷವಿದ್ಯೆ ಎಲ್ಲ ಕಲೆಗಳನ್ನು ಮೀರಿ ನಿಂತಿದೆ: ಪಲಿಮಾರು ಶ್ರೀ

Team Udayavani, Jun 2, 2019, 10:46 AM IST

ಉಡುಪಿ: ಯಕ್ಷವಿದ್ಯೆ ಎಲ್ಲ ಕಲೆಗಳನ್ನು ಮೀರಿ ನಿಂತಿದೆ. ಈ ಕಲೆ ನಮ್ಮೂರಿನ ಕಲೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.

ಪರ್ಯಾಯ ಶ್ರೀ ಪಲಿಮಾರು ಮಠ, ಯಕ್ಷಗಾನ ಕಲಾರಂಗ, ಯಕ್ಷನಿಧಿ ಆಶ್ರಯದಲ್ಲಿ ನಡೆದ ಕಲಾವಿದರ 21ನೇ ಸಮಾವೇಶದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.

ಯಕ್ಷವಿದ್ಯೆ ಎಲ್ಲ ಧರ್ಮಗಳನ್ನು ಮೀರಿ ನಿಂತಿರುವುದು ನಮ್ಮ ಕಲೆಯ ಹೆಮ್ಮೆಯಾಗಿದೆ. ಯಕ್ಷಗಾನವು ಪರಿಪೂರ್ಣ ಕಲೆಯಾಗಿದೆ. ಭಾಷೆಯ ಪರಿಮಿತಿಯಲ್ಲಿ ಬೆಳೆಯುವ ಪ್ರಪಂಚವನ್ನು ವೇದಿಕೆಗೆ ತಿಳಿಸುವುದು ಕಷ್ಟದ ಕೆಲಸ. ಇದರಲ್ಲಿ ಕಲಾವಿದರ ಶ್ರಮ ಅಪಾರ ಎಂದರು.

ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ| ಎಂ.ವಿ. ಹೆಗಡೆ ಅಧ್ಯಕ್ಷತೆ ವಹಿಸಿ, ಕಲೆ ಮತ್ತು ಕಲಾವಿದರ ನಡುವೆ ಅವಿನಾಭಾವ ಸಂಬಂಧವಿದೆ. ಕಲಾರಂಗದ ಕಾರ್ಯ ವಿಧಾನಗಳಿಗೆ ನೆರವು ಅತೀ ಅಗತ್ಯ ಎಂದರು. ಕಲಾವಿದರಿಗೆ ಅನುಕೂಲ ಮಾಡುವ ವಿಧಾನವನ್ನು ಅಕಾಡೆಮಿಯ ಮೂಲಕ ಮಾಡಲು ಚಿಂತಿಸಲಾಗುವುದು ಎಂದರು.

ಡಾ| ಎಂ. ಪ್ರಭಾಕರ ಜೋಷಿ ಮಾತನಾಡಿ, ಕಲಾವಿದರ ಕಲ್ಯಾಣಕ್ಕಾಗಿ ಕಲಾರಂಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯಕ್ಷಗಾನದಲ್ಲಿ ಒಗ್ಗಟ್ಟಿನ ಕೆಲಸ ನಡೆಯಬೇಕು. ಕಲೆಯ ಏಳಿಗೆಗೆ ಸರಕಾರ ಕೂಡ ಪ್ರೋತ್ಸಾಹ ನೀಡಬೇಕು ಎಂದರು.

ಸಹಾಯಧನ ವಿತರಣೆ
ವಿವಿಧ ಕಾರಣಗಳಿಂದ ನಿಧನ ಹೊಂದಿರುವ 12 ಮಂದಿ ಕಲಾವಿದರ ಕುಟುಂಬಗಳಿಗೆ ಸಹಾಯಧನ ವಿತರಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಪ್ರಭಾಕರ ಶಿಶಿಲ, ಗೀತಾನಂದ ಫೌಂಡೇಶನ್‌ನ ಆನಂದ ಸಿ.ಕುಂದರ್‌, ಕಲಾರಂಗದ ಅಧ್ಯಕ್ಷ ಗಣೇಶ್‌ ರಾವ್‌, ಉಪಾಧ್ಯಕ್ಷರಾದ ಎಸ್‌. ವಿ. ಭಟ್‌, ಗಂಗಾಧರ ರಾವ್‌, ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ಕಲಾರಂಗದ ಕಾರ್ಯದರ್ಶಿ ಮುರಲೀ ಕಡೇಕಾರ್‌ ಸ್ವಾಗತಿಸಿ, ನಿರೂಪಿಸಿದರು.

ಅನುದಾನದಲ್ಲಿ ಕಡಿತ
ರಾಜ್ಯದ ಸಮ್ಮಿಶ್ರ ಸರಕಾರ ಸಂಸ್ಕೃತಿ ವಿರೋಧಿಯಾಗಿದೆ. ಸಾಲಮನ್ನಾದ ನೆಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುವ ಅನುದಾನದಲ್ಲಿ ಬಹಳಷ್ಟು ಕಡಿತ ಮಾಡಲಾಗಿದೆ. ಆದರೆ ಯಾರ ನೆರವು ಇಲ್ಲದಿದ್ದರೂ ಕೂಡ ತನ್ನ ಸ್ವಂತ ಶಕ್ತಿಯಿಂದ ಯಕ್ಷಗಾನ ಕಲೆ ಉಳಿಯುತ್ತದೆ ಎಂದು ಪ್ರೊ| ಎಂ.ವಿ. ಹೆಗಡೆ ಅಭಿಪ್ರಾಯಪಟ್ಟರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ