ದಂಪತಿ ನಡುವಿನ ಸಾಮರಸ್ಯ ಹೆಚ್ಚಿಸಲೂ ಯೋಗ ಅವಶ್ಯ

Team Udayavani, Jun 25, 2019, 9:45 AM IST

ಸಮಸ್ಯೆ ಎಂಬುದು ಯಾವಾಗಲೂ ಒಂದು ತಾತ್ಕಾಲಿಕ ಸ್ಥಿತಿ; ಶಾಶ್ವತವಲ್ಲ. ಆದರೆ ಹಲವು ಬಾರಿ ಅದನ್ನೇ ಶಾಶ್ವತ ಎಂದು ತೀರ್ಮಾನಕ್ಕೆ ಬಂದು ತಪ್ಪು ನಿರ್ಧಾರಗಳನ್ನು ತಳೆಯುತ್ತೇವೆ. ಆಧುನಿಕ ಬದುಕಿನಲ್ಲಿ ದಂಪತಿ ನಡುವಿನ ಸಾಮರಸ್ಯದ ಕೊರತೆ ಹೆಚ್ಚಾಗಿ ವಿಚ್ಛೇದನ ಹಂತ ತಲುಪುವುದುಂಟು. ಇದಕ್ಕೂ ಯೋಗದಲ್ಲಿ ಪರಿಹಾರವಿದೆ.

ಮಣಿಪಾಲ: ಯೋಗ ಜೀವನವೆಂದರೆ “ಪರಸ್ಪರ ಅರಿತು ಬದುಕುವುದು’. ಅದು ಸಮಾಜ ದೊಂದಿಗೆ ಅಥವಾ ವ್ಯಕ್ತಿಯೊಂದಿಗೆ ಇರಬಹುದು. ದಂಪತಿಯ ಕಲ್ಪನೆ ಯಲ್ಲೂ ಅದೇ. ಇಬ್ಬರು ಪರಸ್ಪರ ಅರಿತು ನಡೆದರೆ ದಂಪತಿ; ಇಲ್ಲವೇ ಬರೀ ಪತಿ-ಪತ್ನಿ. ಶರೀರಕ್ಕಿಂತ ಸೂಕ್ಷ್ಮ ಮನಸ್ಸು; ಮನಸ್ಸಿಗಿಂತ ಸೂಕ್ಷ್ಮ ಬುದ್ಧಿ (ಬೌದ್ಧಿಕ); ಅದಕ್ಕಿಂತ ಸೂಕ್ಷ್ಮ ಭಾವನೆ; ಭಾವನೆಗಳಿಗಿಂತ ಸೂಕ್ಷ್ಮ ಆನಂದ. ಸುಖ-ಶಾಂತಿ- ನೆಮ್ಮದಿಗಾಗಿ ಎಲ್ಲ ಹರಸಾಹಸ.

ದಂಪತಿಯ ನಡುವಿನ ಸಾಮ ರಸ್ಯದ ಕೊರತೆ ಈ ಹೊತ್ತಿನ ಸಮಸ್ಯೆ. ಸಣ್ಣ ಕಾರಣಗಳಿಗೆ ವಿಚ್ಛೇದನದ ಹಂತ ತಲುಪುವುದುಂಟು. ಇಲ್ಲಿ ತಪ್ಪು ಅವಳಧ್ದೋ,  ಅವನಧ್ದೋ ಎನ್ನುವುದಕ್ಕಿಂತ ಇಬ್ಬರ ನಡುವಿನ ಹೊಂದಾಣಿಕೆ ಕೊರತೆ- ಅಹಂಕಾರವೆಂಬುದರ ತಪ್ಪು. ಇದಕ್ಕೆ ಮದ್ದು ಭಾವ ಸಂಸ್ಕಾರದಲ್ಲಿದೆ.
ನಿತ್ಯವೂ ಯೋಗಾಭ್ಯಾಸ ಮಾಡಿದರೆ (ಬರೀ ಆಸನಗಳಲ್ಲ, ಧ್ಯಾನ ಇತ್ಯಾದಿ ಭಾವ ಸಂಸ್ಕಾರ ಕ್ರಿಯೆಯನ್ನು ಒಳಗೊಂಡು) ನಮ್ಮೊಳಗಿನ ಭಾವನೆಗಳಿಗೆ ಸಂಸ್ಕಾರ ಸಿಗುತ್ತದೆ. ಅದರರ್ಥ ಪರಸ್ಪರ ಭಾವನೆಗಳ ಗೌರವಿಸುವ ಬಗೆಯನ್ನು ಕಲಿತಂತೆ.ಆಗ ಧನಾತ್ಮಕ ಬದುಕು ನಮ್ಮದು.

ತಮ್ಮ ಭಾವನೆಗಳಲ್ಲಿ ಉಂಟಾಗುವ ಗೊಂದಲ, ಏರಿಳಿತಗಳು ಮನಸ್ಸಿನ ಮೇಲೆ ಬೀರುವ ಪರಿಣಾಮವೇ ಅಲ್ಲೋಲ ಕಲ್ಲೋಲ ಮನಸ್ಥಿತಿ. ಅತಿ ಅಪೇಕ್ಷೆ ಇದ್ದಾಗ ಸ್ವಾರ್ಥ ಬರುವುದು ಸಾಮಾನ್ಯ. ಎಲ್ಲಿ ಹೊಂದಾಣಿಕೆ ಇರದೋ ಅಲ್ಲಿ ಅಸೂಯೆ, ದ್ವೇಷ, ಅಸಹನೆ ಹುಟ್ಟಿಕೊಳ್ಳುವುದು ಸಹಜ. ಅತೀ ಅಭಿಮಾನವೇ ಅಹಂಕಾರದ ಸ್ವರೂಪ. ಇಂಥವರದ್ದು ಎರಡೇ ಬಯಕೆ-ನಾವು ಹೇಳಿದಂತೆ ಎಲ್ಲರೂ ಕೇಳಬೇಕು ಮತ್ತು ನಮಗೆ ಯಾರೂ ಹೇಳಬಾರದು.

ವಿಚ್ಛೇದನವೆಂದರೆ ಒಟ್ಟಿಗೇ ಇರಲಾಗದೆ ಒಬ್ಬರನ್ನೊಬ್ಬರು ಒಪ್ಪಿಕೊಳ್ಳಲಾಗದೆ ಬೇರಾಗುವುದು ಎಂದರ್ಥ. ಆ ಹೊತ್ತಿಗೆ ಬೇಕಾದದ್ದು ತಾಳ್ಮೆ, ಸಮಾಧಾನ.
ಯೋಗ ಎಂದರೆ “ಒಂದು ಮಾಡುವುದು’ ಎಂದರ್ಥ. ನಿತ್ಯ ಯೋಗಾಭ್ಯಾಸದಿಂದ ಶಾರೀರಿಕ ದೃಢತೆಯಷ್ಟೇ ಅಲ್ಲ; ಮಾನಸಿಕ ಸಮಾಧಾನ-ಶಾಂತಿ ಸಿಗುತ್ತದೆ. ಬೌದ್ಧಿಕ ವಿಕಾಸವಾಗುತ್ತದೆ. ಭಾವ ನಾತ್ಮಕ ಸಂಸ್ಕಾರ ದಕ್ಕುತ್ತದೆ.

ಇಷ್ಟೆಲ್ಲ ಸಾಧ್ಯವಾದರೆ ಇಡೀ ಬದುಕನ್ನು ಆಧ್ಯಾತ್ಮಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಲು, ಅನುಭವಿಸಲು ಬರಲಿದೆ. ಆಗ ನಮ್ಮಲ್ಲಿ ಹೊಂದಾ ಣಿಕೆ, ವಿನಯವಂತಿಕೆ ಹಾಗೂ ನಿರಹಂಕಾರ ಮನೆ ಮಾಡುತ್ತದೆ. ಇವು ಇರುವಲ್ಲಿ ಸಹೃದಯತೆಗಷ್ಟೇ ಸ್ಥಾನ. ಅಲ್ಲಿ ಮತ್ತೂಬ್ಬರ ತಪ್ಪು- ಒಪ್ಪುಗಳಲ್ಲಿ ಹುಳುಕು ಹುಡುಕದೇ ಹೊಂದಾಣಿಕೆ ಸಾಗುವ ಮನಸ್ಥಿತಿ ಇರಲಿದೆ. ಇದು ಸಿದ್ಧಿಸಿದ ವಿಚ್ಛೇದನ ದಂಥ ಮಾತಿಗೆ ಅರ್ಥವಿರದು.

ಕೆ. ರಾಘವೇಂದ್ರ ಪೈ ಮೂಲತಃ ಕಾರ್ಕಳದವರು. ದಾಸ ಸಾಹಿತ್ಯ ಮತ್ತು ಯೋಗದರ್ಶನದಲ್ಲಿ ಡಿ.ಲಿಟ್‌ ಪದವಿ ಪಡೆದು, 30 ವರ್ಷಗಳಿಂದ ಸಾವಿರಾರು ಮಂದಿ ಶಿಕ್ಷಕರಿಗೆ ಯೋಗ ಪ್ರಶಿಕ್ಷಣ, ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದವರು. ವಿಯೆಟ್ನಾಂ ದೇಶದಲ್ಲಿ 60 ಗಂಟೆ ಕಾಲ 7,777 ಆವರ್ತ ಸೂರ್ಯ ನಮಸ್ಕಾರ ಮಾಡಿದ್ದು ಇವರ ದಾಖಲೆ. ಪ್ರಸ್ತುತ ಮೈಸೂರು ಅವರ ಕಾರ್ಯಸ್ಥಾನ. ಲಂಡನ್‌. ಸಿಂಗಾಪುರ, ಶ್ರೀಲಂಕಾ, ದೋಹಾ ಕತಾರ್‌ ಸೇರಿದಂತೆ ವಿವಿಧೆಡೆ ಪ್ರಬಂಧ ಮಂಡನೆ, ಕಮ್ಮಟ ದಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ಉಡುಪಿಯಲ್ಲೂ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಹೆಸರಿನಲ್ಲಿ ಯೋಗ ತರಬೇತಿ ನೀಡುತ್ತಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ