ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
Team Udayavani, Jun 17, 2020, 7:53 AM IST
ಕೊಪ್ಪಳ: ಬಾಗಲಕೋಟೆ ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕರಾಗಿರುವ ಗೋಪಾಲ ಮಾಲಗಿತ್ತಿ ಅವರ ಕೊಪ್ಪಳದ ಮನೆ, ಬಾಗಲಕೋಟೆಯ ನಿವಾಸ, ಕಚೇರಿಯ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮನೆಯಲ್ಲಿ ವಿವಿಧ ದಾಖಲೆ, ಆಭರಣ ಹಾಗೂ ನಗದು ಇರುವ ಕುರಿತು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಎಸಿಬಿ ಡಿಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಅವರ ನೇತೃತ್ವದ ತಂಡವು ಕೊಪ್ಪಳದಲ್ಲಿ ಅಧಿಕಾರಿ ಗೋಪಾಲ ಅವರು ಅಕ್ರಮ ಆಸ್ತಿ ಸಂಪಾದನೆಯ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಗೋಪಾಲ ಅವರ ಕೊಪ್ಪಳದ ಮನೆಯಲ್ಲಿ ಎರಡು ಕೋಟಬೆಲೆ ಬಾಳುವ 3 ವಾಸದ ಮನೆಗಳು, 6 ನಿವೇಶನ, 650 ಗ್ರಾಂ ಚಿನ್ನ, 658 ಗ್ರಾಂ ಬೆಳ್ಳಿ, 1 ಕಾರು, 2 ದ್ವಿಚಕ್ರ ವಾಹನಗಳು, ನಗದು 7,35,000 ರೂ., 10 ಲಕ್ಷ ರೂ. ಗೃಹೋಪಯೋಗಿ ವಸ್ತುಗಳು ಕಂಡು ಬಂದಿವೆ. ಈ ಕುರಿತು ಆರೋಪಿಯ ವಿರುದ್ಧ ಕೇಸ್ ದಾಖಲಿಸಿ ತನಿಖೆ ಮುಂದುವರೆಸಿದ್ದು, ಆಸ್ತಿಗಳ ಮೂಲದ ಬಗ್ಗೆ ಬ್ಯಾಂಕ್ ಲಾಕರ್, ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.