ಪೈಕಿ ಪಹಣಿ ದುರಸ್ತಿಗೆ ಶೀಘ್ರ ಹೊಸ ಆದೇಶ

•ಬೆಳೆಸಾಲ ಮನ್ನಾ ವಿಷಯ ಯಾವುದೇ ಪ್ರಕರಣ ಬಾಕಿ ಉಳಿಸದಿರಲು ಅಧಿಕಾರಿಗಳಿಗೆ ಮೌದ್ಗಿಲ್ ಸೂಚನೆ

Team Udayavani, Jul 9, 2019, 9:44 AM IST

ಕಾರವಾರ: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸರ್ವೇ ಇಲಾಖೆ ಆಯುಕ್ತ ಮನೀಷ್‌ ಮೌದ್ಗಿಲ್ ಮಾತನಾಡಿದರು.

ಕಾರವಾರ: ರಾಜ್ಯಾದ್ಯಂತ ಪೈಕಿ ಪಹಣಿಗಳ ದುರಸ್ತಿ ಮಾಡಿ ಸರಿಪಡಿಸಲು ಸದ್ಯದಲ್ಲೇ ಹೊಸ ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸರ್ವೆ ಇಲಾಖೆ ಆಯುಕ್ತ ಮನೀಷ್‌ ಮೌದ್ಗಿಲ್ ತಿಳಿಸಿದ್ದಾರೆ.

ಡಿಸಿ ಕಚೇರಿಯಲ್ಲಿ ಜಿಲ್ಲಾ ಅಭಿವೃದ್ಧಿ ವಿಷಯಗಳು ಹಾಗೂ ಸಮಸ್ಯೆಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಪೈಕಿ ಪಹಣಿಗಳು ಸರ್ವೆ ಸಂದರ್ಭದಲ್ಲಿ ದಾಖಲೆಗಳಲ್ಲಿ ಸಿಗದೆ ಗೊಂದಲ ಸೃಷ್ಟಿಸುತ್ತಿದ್ದು ರಾಜ್ಯಾದ್ಯಂತ ಇವುಗಳನ್ನು ಒಟ್ಟುಗೂಡಿಸಿ ದುರಸ್ತಿ ಮಾಡಲು ಸದ್ಯದಲ್ಲೇ ಹೊಸ ಆದೇಶ ಬರಲಿದೆ ಎಂದು ಹೇಳಿದರು.

ಈ ಹಿಂದೆ ಮೋಜಿಣಿ ಮಾಡದೆ ಪೋಡಿಗಳನ್ನು ಸರಿಪಡಿಸದೇ ಮಾಡಲಾದ ಪೈಕಿ ಪಹಣಿಗಳಲ್ಲಿ ಸರಿಯಾದ ದಾಖಲೆಗಳು ಸಿಗುತ್ತಿಲ್ಲ. ಇದರಿಂದ ಸರ್ಕಾರಿ ಜಮೀನು ಅಥವಾ ಖಾಸಗಿ ಜಮೀನು ವಹಿವಾಟಿಗೆ ಹಿನ್ನೆಡೆಯಾಗಿದೆ. ಈ ಕಾರಣದಿಂದ ಪೈಕಿ ಪಹಣಿಗಳನ್ನು ಒಟ್ಟುಗೂಡಿಸಿ ಮೂಲ ಸರ್ವೆ ನಂಬರಿನೊಂದಿಗೆ ತಾಳೆ ಮಾಡಿ ವಹಿವಾಟಿಗೆ ಅನುಕೂಲವಾಗುವಂತೆ ಸರಿಪಡಿಸಲು ಕಂದಾಯ ಇಲಾಖೆ ಮುಂದಾಗಿದೆ. ಇದರಿಂದ 11ಇ ಕಂದಾಯ ನಕ್ಷೆಗಳು ಸರಿಯಾಗಲಿವೆ. ಮುಂದಿನ 10 ದಿನಗಳೊಳಗಾಗಿ ಸರ್ಕಾರದಿಂದಲೇ ಹೊಸ ಆದೇಶ ಬರಲಿದೆ ಎಂದು ಅವರು ತಿಳಿಸಿದರು.

ತಹಶೀಲ್ದಾರ್‌ ಹಾಗೂ ಉಪ ವಿಭಾಗಾಧಿಕಾರಿಗಳು ಸರ್ವೆ ಸಂದರ್ಭದಲ್ಲಿ ಕಚೇರಿಯಲ್ಲೇ ಕುಳಿತು ಆರ್‌ಟಿಸಿಗಳಿಗೆ ಸಹಿ ಮಾಡುವ ಬದಲು ಕ್ಷೇತ್ರ ಪ್ರವಾಸ ಮಾಡಿ ದಾಖಲೆಗಳಂತೆ ಭೂಮಿ ಇದೆಯೇ ಎಂದು ಪರಿಶೀಲಿಸಬೇಕು. ಖರಾಬುಗಳು ಸರ್ವೆ ನಂಬರಿನ ಯಾವ ಹಿಸ್ಸೆಗೆ ಸೇರಬೇಕು ಎಂಬುದನ್ನು ನಿರ್ಧರಿಸಬೇಕು ಎಂದೂ ಅವರು ಹೇಳಿದರು.

ಬೆಳೆಸಾಲ ಮನ್ನಾ ಯೋಜನೆ ವಿಷಯದಲ್ಲಿ ಯಾವ ಪ್ರಕರಣವನ್ನು ಬಾಕಿ ಉಳಿಸಿಕೊಳ್ಳಬೇಡಿ ಎಂದು ಸೂಚಿಸಿದ ಅವರು, ದಾಖಲೆಗಳು ಸರಿಇದ್ದು ಅರ್ಹರಿದ್ದರೆ ಅನುಮೋದಿಸಿ. ಇಲ್ಲವಾದರೆ ತಿರಸ್ಕರಿಸಿ.ಬಾಕಿ ಉಳಿಸಿಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದರು. ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಕೆಲವು ಸಹಕಾರ ಸಂಘಗಳ ಕಾರ್ಯದರ್ಶಿಗಳೇ ಫಲಾನುಭವಿಗಳ ಹೆಸರಿನಲ್ಲಿ ಅಕ್ರಮವಾಗಿ ಸಾಲ ಪಡೆದುಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ರೈತರ ಹೆಸರಿನಲ್ಲಿ ತಾವೇ ಸಾಲ ನೀಡಿದ ಮಾಹಿತಿ ಸೃಷ್ಟಿಸಿ ಸಾಲ ಪಡೆದುಕೊಂಡು ಸಾಲಮನ್ನಾ ಯೋಜನೆಯಲ್ಲಿ ಸರ್ಕಾರಕ್ಕೆ ವಂಚಿಸಲಾಗಿದೆ. ಇಂತಹ ಪ್ರಕರಣಗಳ ಬಗ್ಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು ಎಂದೂ ಅವರು ಸೂಚಿಸಿದರು.

ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.73 ಪ್ರಗತಿ ಸಾಧಿಸಿದ್ದು ಜಿಲ್ಲೆಯಲ್ಲಿ ಕಾರವಾರ ವಿಭಾಗದಲ್ಲಿ ಮಾತ್ರ ಕಡಿಮೆ ಆದ ಮಾಹಿತಿ ಪಡೆದ ಅವರು, ಇದು ಐದು ವರ್ಷದ ಕಾರ್ಯಕ್ರಮವಾಗಿದ್ದು ಇನ್ನೂ ಸಾಕಷ್ಟು ಕಾಲಾವಕಾಶಗಳಿವೆ ಎಂದೂ ಅವರು ತಿಳಿಸಿದರು.

ವಿವಿಧ ಇಲಾಖೆಗಳ ಸಿಬ್ಬಂದಿ ಕೊರತೆ ಇತರೆ ಸೌಲಭ್ಯಗಳ ಕೊರತೆ ಬಗ್ಗೆ ಉಸ್ತುವಾರಿ ಕಾರ್ಯದರ್ಶಿ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ., ಜಿಪಂ ಸಿಇಒ ಎಂ.ರೋಷನ್‌, ಉಪ ವಿಭಾಗಾಧಿಕಾರಿಗಳಾದ ಪ್ರೀತಿ ಗೆಹ್ಲೂಟ್, ಸಾಜಿದ್‌ಮುಲ್ಲಾ, ಡಾ| ಈಶ್ವರ್‌ ಉಳ್ಳಾಗಡ್ಡಿ, ಅಭಿಜಿನ್‌ ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ