ಬತ್ತಿ ಹೋಗಿವೆ ಕೆರೆ-ಬಾವಿ-ಹಳ್ಳ

•ನೆರೆ ಬಂದು ನೂರಾರು ಮನೆಗಳಿಗೆ ನುಗ್ಗುವ ಭಾಸ್ಕೇರಿ ಹೊಳೆಯಲ್ಲೀಗ ತೊಟ್ಟು ನೀರಿಲ್ಲ

Team Udayavani, May 19, 2019, 2:17 PM IST

ಹೊನ್ನಾವರ: ಬೇಸಿಗೆಯಲ್ಲಿ ಹರಿಯುತ್ತಿದ್ದ ಬರಡಾದ ಭಾಸ್ಕೇರಿ ಹೊಳೆ.

ಹೊನ್ನಾವರ: ಆಳವಾದ ಬಾವಿಯಲ್ಲೂ ಕೊಡ ಕಂತುವಷ್ಟು ನೀರಿಲ್ಲ. ಕೆರೆಯ ಕುರುಹೂ ಉಳಿದಿಲ್ಲ. ಊರ ಮಧ್ಯೆ ಮೇ ತಿಂಗಳಲ್ಲೂ ತುಂಬಿ ಹರಿಯುತ್ತಿದ್ದ ಹೊಳೆ ಈಗ ಹೆದ್ದಾರಿಯಂತಾಗಿದೆ. ಅಡಕೆ ಹೂವು ಮಾತ್ರವಲ್ಲ ಮರದ ತಲೆಯೇ ಕಳಚಿ ಬೀಳುತ್ತಿದೆ. ಕುಡಿಯುವ ನೀರಿಗೆ ಕಿ.ಮೀ. ಗಟ್ಟಲೆ ನಡೆಯಬೇಕು. ದನಗಳಿಗೆ ಮೇವೂ ಇಲ್ಲ, ನೀರೂ ಇಲ್ಲ. ಇದು ಹೊನ್ನಾವರ ತಾಲೂಕಿನ ಸದಾ ಹಸಿರಾಗಿದ್ದ ಹೊಸಾಕುಳಿ, ಸಾಲ್ಕೋಡ, ಮುಗ್ವಾ, ಚಂದಾವರ, ಮೊದಲಾದ ಗ್ರಾಮಗಳ ಕೆಲವು ಮಜರೆಗಳ ಪರಿಸ್ಥಿತಿ.

ಕೆಲವು ಕಡೆ ತೋಟದ ಮಧ್ಯೆ ಇರುವ ಕೊಳವೆ ಬಾವಿಗಳು ನೀರು ಕೊಡುವುದರಿಂದ ಕುಡಿಯುವ ನೀರಿಗೆ ವಿಶೇಷ ಕಷ್ಟ ಇಲ್ಲ. ದನಕರುಗಳಿಗೆ ಕಷ್ಟ. ಸರ್ಕಾರಿ ಬೋರ್ವೆಲ್ಗಳು ಬಹುಪಾಲು ಒಣಗಿವೆ. ಹಳ್ಳಗಳಲ್ಲಿ ಜೆಸಿಬಿ ಒಡಿಸಿ, ಅಲ್ಲಲ್ಲಿ ಹೊಂಡ ಬಗೆದು ಇಷ್ಟು ದಿನ ಅಲ್ಪಸ್ವಲ್ಪ ನೀರು ಪಡೆದು ಆಯ್ತು. ಈಗ ಹೊಂಡ ಒಣಗಿದೆ. ಸರ್ಕಾರಿ ಅಧಿಕಾರಿಗಳೇನೋ ಸಮಾರೋಪಾದಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಮಾತನಾಡುತ್ತಾರೆ. ವಸ್ತುಸ್ಥಿತಿ ಅವರಿಗೂ ಗೊತ್ತು. ಜಲಮೂಲಗಳು ಅಲ್ಲಲ್ಲಿ ಇರುವುದರಿಂದ ಗುಳೆಹೋಗುವ ಪರಿಸ್ಥಿತಿ ಇಲ್ಲ ಎಂಬುದರ ಅರ್ಥ ನೀರಿಗೆ ಬರಗಾಲವಿಲ್ಲ ಎಂದಲ್ಲ. ಒಣಹುಲ್ಲು ಗಂಟಲಿಳಿಯುವುದಿಲ್ಲ. ಹಸಿರು ಮೇವು ಕಾಣಲಿಕ್ಕಿಲ್ಲ. ವರ್ಷವರ್ಷವೂ ನೀರಿನ ಬರ ಗಂಭೀರ ದಿನಗಳ ಕುರಿತು ಎಚ್ಚರಿಸುತ್ತಲೇ ಬಂದಿದೆ. ಜನ ಎಚ್ಚರಾಗಿಲ್ಲ. ಈ ವರ್ಷ ಪರಿಸ್ಥಿತಿ ಗಂಭೀರವಾಗಿದೆ. ನೆರೆ ಬಂದು ನೂರಾರು ಮನೆಗಳಿಗೆ ನುಗ್ಗುವ ಭಾಸ್ಕೇರಿ ಹೊಳೆಯಲ್ಲಿ ತೊಟ್ಟು ನೀರಿಲ್ಲ. ಬಹುಕಾಲದಿಂದ ಬೆಳೆದು ಬಂದ ಈ ಸಮಸ್ಯೆಗೆ ತಾತ್ಪೂರ್ತಿಕ ವ್ಯವಸ್ಥೆ ನಿಜವಾದ ಪರಿಹಾರ ಅಲ್ಲ.

ಹಳ್ಳಗಳಲ್ಲಿ, ಗುಡ್ಡದ ಓರೆಗಳಲ್ಲಿ, ತೋಟದ ಮೇಲ್ಬದಿಗೆ ನೀರಿಂಗಿಸುವ ವ್ಯವಸ್ಥೆ ಮಳೆಗಾಲಕ್ಕೂ ಮುನ್ನ ಸಿದ್ಧವಾಗಬೇಕು. ಮಳೆಗಾಲ ಮುಗಿದೊಡನೆ ಹಳ್ಳದಲ್ಲಿ ಅಲ್ಲಲ್ಲಿ ಕಟ್ಟು ಕಟ್ಟಿ ನೀರಿಂಗಿಸುವ ವ್ಯವಸ್ಥೆಯಾಗಬೇಕು. ಎಷ್ಟು ಕ್ಷೇತ್ರಕ್ಕೆ ಎಷ್ಟು ಪಂಪ್‌ಸೆಟ್‌ಗಳು, ಎಷ್ಟು ಕಾಲ ನೀರೆತ್ತಬಹುದು ಎಂಬುದನ್ನು ನಿಗದಿಪಡಿಸಬೇಕಾಗಿದೆ. ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇ ಎಂದು ಕೇಳುತ್ತ ರಾತ್ರಿ ಮಲಗುವಾಗ ಹೊಳೆಗೆ ಹಚ್ಚಿದ ಪಂಪ್‌ಸೆಟ್ ಚಾಲು ಮಾಡಿ ಬೆಳಗ್ಗೆ ಎದ್ದು ಬಂದ್‌ ಮಾಡುವವರಿದ್ದಾರೆ. ಬೇಕಾಬಿಟ್ಟಿ ನೀರನ್ನು ಪೋಲು ಮಾಡುವುದು ಅಭ್ಯಾಸವಾಗಿ ಹೋಗಿದೆ. ಇದಕ್ಕೆ ಹಳ್ಳಿಗರು ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಬೇಕು. ಅಥವಾ ಸಹಕಾರ ತತ್ವದಲ್ಲಿ ಕಟ್ಟುಗಳನ್ನು ನಿರ್ಮಿಸಿ, ನೀರಿಂಗಿಸಿ ವೆಚ್ಚದಲ್ಲೂ, ನೀರಿನಲ್ಲೂ ಪಾಲು ಪಡೆಯಬೇಕು. ಎಲ್ಲದಕ್ಕೂ ಸರ್ಕಾರದ ಮುಖ ನೋಡಿದರೆ ಜೀವ ಹಿಡಿದುಕೊಳ್ಳಲು ನೀರು ಕೊಟ್ಟಿತೇ ವಿನಃ ಜೀವನ ಸಾಗಿಸುವಷ್ಟು ನೀರನ್ನು ಯಾವ ಸರ್ಕಾರವೂ ಕೊಡಲಾಗದು.

ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಕೊಳವೆಬಾವಿಗಳು ವಿಫಲವಾಗಿವೆ. ಮಾರ್ಚ್‌ವರೆಗೆ 45ಕೋಟಿ ರೂಪಾಯಿ ಕುಡಿಯುವ ನೀರಿನ ಕಾಮಗಾರಿಗೆ ವೆಚ್ಚಮಾಡಿದೆ. 585ಕೋಟಿ ಅನುದಾನವಿದೆ. ಪ್ರತಿವರ್ಷವೂ ಇಂತಹ ಅಂಕಿಸಂಖ್ಯೆಗಳು ಬರುತ್ತವೆ. ಹಣ ವೆಚ್ಚವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಮಾತ್ರ ಪ್ರತಿವರ್ಷ ಭೀಕರವಾಗುತ್ತ ಸಾಗುತ್ತದೆ. ನಿರೀಕ್ಷಿತ ಫಲನೀಡದ ಯೋಜನೆಗೆ ಹಣ ಸುರಿಯುವ ಬದಲು ಜಲಸಂರಕ್ಷಣೆಯ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಕಂದಾಯ ಸಚಿವ ಆರ್‌.ವಿ. ದೇಶಪಾಂಡೆಯವರಿಗೆ ಈ ಸತ್ಯ ಗೊತ್ತು. ಹೂಳೆತ್ತುವ, ಕೃಷಿ ಹೊಂಡ ನಿರ್ಮಿಸುವ, ಜಲಮೂಲ ಸಂಪರ್ಕಿಸುವ ಕೆಲಸ ಆಗಬೇಕಿದೆ. ತಾಲೂಕಿನಲ್ಲಿ ಬೆಳೆಯುವ ಅಡಕೆ, ತೆಂಗು, ಕಬ್ಬು, ಭತ್ತದ ಬೆಳೆಗಳಿಗೆ ಭಾರೀ ಪ್ರಮಾಣದ ನೀರು ಬೇಕು. ಇದನ್ನು ಸರ್ಕಾರ ಯಾವ ಕಾಲಕ್ಕೂ ಪೂರೈಸಲಾರದು. ಆದ್ದರಿಂದ ಜನ-ಜಲ ಜಾಗೃತಿ ಮಾಡಬೇಕಾಗಿದೆ.

ನೀರಿನ ದುಂದುವೆಚ್ಚಕ್ಕೆ ಮಿತಿ ಹೇರಬೇಕು:

ಬೇಸಿಗೆಯಲ್ಲಿ ತುಂಬಿ ಹರಿಯುವ ಒಂದು ಬದಿ ಶರಾವತಿ, ಇನ್ನೊಂದು ಬದಿಗೆ ಬಡಗಣಿ, ಮಧ್ಯೆ ಗುಂಡಬಾಳ ಹೊಳೆ ಸಹಿತ ಅಗಾಧ ಜಲಮೂಲಗಳನ್ನು ಇಟ್ಟುಕೊಂಡು ಈ ಚೌಕಟ್ಟಿನ ಮಧ್ಯೆ ಇರುವ ಜನ ಕುಡಿಯುವ ನೀರಿಗೆ ಪರದಾಡುವುದು, ತೋಟ ಒಣಗಿ ಹೋಗುವುದು ವಿಪರ್ಯಾಸ. ಸರ್ಕಾರ ಕಣ್ಣೊರೆಸುವ ಬದಲು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವುದರೊಟ್ಟಿಗೆ ನೀರಿನ ದುಂದುವೆಚ್ಚಕ್ಕೆ ಮಿತಿ ಹೇರಬೇಕು. ಅಥವಾ ಜನ ಮಿತಿ ಹೇರಿಕೊಳ್ಳಬೇಕು. ಇಲ್ಲವಾದರೆ ಬರುವ ಬೇಸಿಗೆಯಲ್ಲಿ ಮಂಗನ ಕಾಯಿಲೆ ಹೊರತಾಗಿ ಇನ್ನೇನೂ ಇರುವುದಿಲ್ಲ.
•ಜೀಯು, ಹೊನ್ನಾವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಭಟ್ಕಳ: ಕಳೆದ ಶತಮಾನಗಳಿಂದ ವಿದ್ಯಾಪ್ರಸಾರದಲ್ಲಿ ತೊಡಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಅಂಜುಮಾನ್‌ ಹಾಮಿ-ಇ-ಮುಸ್ಲಿಮೀನ್‌ ಶತಮಾನೋತ್ಸವ ವರ್ಷದ ಸಂದರ್ಭದಲ್ಲಿ...

  • ಕಾರವಾರ: ಕೇಂದ್ರ ಸರ್ಕಾರ ಕರಾವಳಿಯ ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಬಂದರು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯಕ್ಕೆ ಸೂಚಿಸಿದ ಪರಿಣಾಮ ಇಲ್ಲಿನ ಕರಾವಳಿ...

  • ಅಂಕೋಲಾ: ತಾಲೂಕಿನ ನೆರೆ ಸಂತ್ರಸ್ತರಿಗೆ ತಮ್ಮ ಉದಾತ್ತ ಕೈಂಕರ್ಯದ ಮೂಲಕ ಜೆಸಿಐ ಮಾದರಿಯಾಗಿದ್ದು ಇತರ ಸ್ವಯಂ ಸೇವಾ ಸಂಸ್ಥೆಗಳು ಸಹ ಸೇವೆ ಮಾಡುವ ಮನೋಭಾವನೆ ಇದ್ದರೆ...

  • ಹಳಿಯಾಳ: ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದರು. ಸುದ್ದಿಗೊಷ್ಠಿಯಲ್ಲಿ...

  • ಸಿದ್ದಾಪುರ: ರಾಷ್ಟ್ರಧ್ವಜ ರಾಷ್ಟ್ರದ ಜನತೆಗೆ ಅತ್ಯಂತ ಶ್ರೇಷ್ಠ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅದಕ್ಕೊಂದು...

ಹೊಸ ಸೇರ್ಪಡೆ