ಶಾಶ್ವತ ರಸ್ತೆ ನಿರ್ಮಿಸಿ ಕೊಡಲು ರೈತರ ಆಗ್ರಹ

Team Udayavani, Jun 18, 2019, 8:34 AM IST

ಹಳಿಯಾಳ: ಇಲ್ಲಿನ ತಹಶೀಲ್ದಾರ್‌ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.

ಹಳಿಯಾಳ: ತಾಲೂಕಿನ ಮುತ್ತಲಮುರಿ ಗ್ರಾಮದಿಂದ ಕಿವಡೆಬೈಲ್ ಗ್ರಾಮಕ್ಕೆ ಹೊಲದಲ್ಲಿ ತಾತ್ಕಾಲಿಕ ರಸ್ತೆ ಮಾಡಿಕೊಡುವಂತೆ ಆಗ್ರಹಿಸಿ ನೂರಾರು ರೈತರು ಸೋಮವಾರ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಮೂರು ಟ್ರ್ಯಾಕ್ಟರ್‌, ಟ್ರ್ಯಾಕ್ಸ್‌ ಹಾಗೂ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ರೈತರು, ಜಮೀನುಗಳಿಗೆ ಓಡಾಡಲು ಶಾಶ್ವತ ದಾರಿ ಮಾಡಿಕೊಟ್ಟು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ದಾರಿ ಸಮಸ್ಯೆಯ ಬಗ್ಗೆ ಈ ಹಿಂದೆ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದಾಗ ತಾತ್ಕಾಲಿಕವಾಗಿ ದಾರಿ ಮಾಡಿಕೊಡುವ ವ್ಯವಸ್ಥೆ ಮಾಡಿದ್ದರು. ಆದರೆ ದಾರಿ ಮಧ್ಯೆ ಜಮೀನು ಇರುವ ರೈತರು ಸದ್ಯ ತಕರಾರು ಮಾಡಿ ದಾರಿ ಬಂದ್‌ ಮಾಡಿದ್ದರಿಂದ ಅನಾನುಕೂಲವಾಗಿದೆ ಎಂದು ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ವಿದ್ಯಾಧರ ಗುಳಗುಳಿ ಹಾಗೂ ರೈತರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಕೊನೆಗೂ ರೈತರ ಮನವೊಲಿಸುವಲ್ಲಿ ಯಶಸ್ವಿಯಾದ ಗುಳಗುಳಿ ಅವರು, ಶಾಶ್ವತ ಪರಿಹಾರ ಕಲ್ಪಿಸಿ ಕೊಡುವ ಭರವಸೆ ನೀಡಿದ್ದರು. ನಂತರ ರೈತರು ಪ್ರತಿಭಟನೆ ಸ್ಥಗೀತಗೊಳಿಸಿದರು. ಆದರೆ ಜೂ.18 ರಂದೇ ಸಮಸ್ಯೆಗೆ ಪರಿಹಾರ ಒದಗಿಸಬೇಕು ಇಲ್ಲವಾದಲ್ಲಿ ಜೂ.19 ರಂದು ತಮ್ಮ ದನಕರುಗಳೊಂದಿಗೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ರೈತರು ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ರೈತರಾದ ಯಲ್ಲಪ್ಪಾ ಮಾಂಗಲಿ, ಅರುಣ ಮಿರಾಶಿ, ನಾರಾಯಣ ಕೆಸರೆಕರ, ನಾಮದೇವ ಮಿಶಾಳೆ, ರಾಮದೇವ ಕಡೊಲ್ಕರ, ಬಾಳುಂದ್ರಿ, ರಾಮಾ ಪವಾರ, ಅಶೋಕ ಜೈನ, ಮಂಗಳು ಜಾಧವ, ನಂದಾ ಗೌಡಾ, ಅರ್ಜುನ, ಪರಶುರಾಮ, ಯಲ್ಲಪ್ಪಾ ಗೌಡಾ ಮೊದಲಾದವರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ