ಬಾಲಕಿ ಅಪಹರಿಸಿ ಅತ್ಯಾಚಾರಕ್ಕೆ ಯತ್ನ: ವ್ಯಕ್ತಿಯ ಬಂಧನ

Team Udayavani, Jan 29, 2018, 2:27 PM IST

ಹಳಿಯಾಳ: ವಿಳಾಸ ಕೇಳುವ ನೆಪದಲ್ಲಿ 10 ವರ್ಷದ ಬಾಲಕಿಯನ್ನು ಆಟೋ ರಿಕ್ಷಾದಲ್ಲಿ ಅಪಹರಿಸಿಕೊಂಡು ಹೋಗಿ ಕಾಡಿನ ನಿರ್ಜನ
ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಧಾರವಾಡ ರಾಜೀವಗಾಂಧಿ  ನಗರದ ನಿವಾಸಿ ಅಬ್ದುಲ್‌ ಕರಿಮ ಅಬ್ದುಲ್‌ಗ‌ಫಾರ ಮೇಸ್ತ್ರಿ (45) ಆಗಿದ್ದು ತನ್ನ ಆಟೋದಲ್ಲಿ
ಹಳಿಯಾಳಕ್ಕೆ ಬಾಡಿಗೆ ಬಂದಿದ್ದ ಈತ ಹಳಿಯಾಳದಲ್ಲಿ ಈ ದುಷ್ಕೃತ್ಯ ನಡೆಸಿದ್ದಾನೆಂದು ಹೇಳಲಾಗಿದೆ.

ಘಟನೆ: ಶನಿವಾರ ಸಂಜೆ ಪಟ್ಟಣದ ಮಿಲಾಗ್ರಿಸ್‌ ಚರ್ಚ್‌ ಬಳಿ ತೆರಳಿದ್ದ ಆರೋಪಿ ಬಾಲಕಿಯನ್ನು ವಿಳಾಸ ಕೇಳುವ ನೆಪದಿಂದ
ಮಾತನಾಡಿಸಿ ಅಪಹರಣ ಮಾಡಿಕೊಂಡು ಧಾರವಾಡ ರಸ್ತೆಗೆ ಹೊರಟು ಪಟ್ಟಣದಿಂದ 5 ಕಿಮೀ ದೂರದಲ್ಲಿ ಹೊಗಿ ಅರಣ್ಯದ
ಕಚ್ಚಾ ರಸ್ತೆಯೊಳಗೆ ಹೋಗಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಧೈರ್ಯದಿಂದ ಕಾಮುಕನನ್ನು ಎದುರಿಸಿದ 
ಬಾಲಕಿ ಪ್ರತಿರೋಧ ವ್ಯಕ್ತಪಡಿಸಿ ತಪ್ಪಿಸಿಕೊಂಡು ಬಂದು ಮುಖ್ಯ ರಸ್ತೆ ಬಳಿ ನಿಂತು ಸಾಗುತ್ತಿದ್ದ ವಾಹನಗಳಿಗೆ ಕೈಮಾಡಿದರೂ ಯಾರೂ ವಾಹನ ನಿಲ್ಲಿಸಿಲ್ಲ. ಆಗ ಅದೇ ಮಾರ್ಗದಿಂದ ತೇರಳುತ್ತಿದ್ದ ಪೊಲೀಸ್‌ ಪೇದೆಗಳಾದ ಅಶೋಕ ಹುಬ್ಬಳ್ಳಿ ಮತ್ತು ಮಾಹಾಂತೇಶ ಬಾರ್ಕೆರ ಬಾಲಕಿಯನ್ನು ವಿಚಾರಿಸಿದಾಗ ನೀಡಿದ ಮಾಹಿತಿ ಆಧರಿಸಿ ಅರಣ್ಯ ಹೊಕ್ಕಿ ಪರಾರಿಯಾಗುತ್ತಿದ್ದ ಅಬ್ದುಲ್‌ ಕರೀಮ್‌ನನ್ನು ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ.

ದೌರ್ಜನ್ಯಕ್ಕೊಳಗಾದ ಬಾಲಕಿ ಕ್ರೈಸ್ತ ಸಮುದಾಯಕ್ಕೆ ಸೇರಿದವಳಾಗಿದ್ದು ಘಟನೆಯ ಬಗ್ಗೆ ಪಟ್ಟಣದಲ್ಲಿ ತಿಳಿಯುತ್ತಿದ್ದಂತೆ ಕ್ರೈಸ್ತ ಸಮಾಜ ಸೇರಿದಂತೆ ಎಲ್ಲ ಸಮಾಜಗಳ ಮಹಿಳೆಯರು, ಸಾರ್ವಜನಿಕರು, ಯುವಕರು ನೂರಾರು ಸಂಖ್ಯೆಯಲ್ಲಿ ಠಾಣೆಯ ಎದುರು ಜಮಾಯಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.  ದಾಂಡೇಲಿ ಸಿಪಿಐ ಅನೀಸ್‌ ಮುಜಾವರ ಹಳಿಯಾಳ ಠಾಣೆಗೆ ಆಗಮಿಸಿ ಮಾಹಿತಿ ಪಡೆದು ಆರೋಪಿ ವಿಚಾರಣೆ ನಡೆಸಿದರು. ಪಿಎಸ್‌ಐ ಹೂಗಾರ್‌ ಆರೋಪಿ ಅಬ್ದುಲ್‌ಕರೀಮ್‌ ವಿರುದ್ಧ ಅಪಹರಣ ಹಾಗೂ ಫೂಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಆತನ ಆಟೋ ವಶಕ್ಕೆ ಪಡೆದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ