ಮಹಾ ಗಾಳಿ-ಮಳೆಗೆ ಉಕ್ಕಿದ ಗಂಗಾವಳಿ

Team Udayavani, Jul 12, 2019, 10:21 AM IST

ಅಂಕೋಲಾ: ತಾಲೂಕಿನ ಬಿಳಿಹೊಯ್ಗಿ ಗ್ರಾಮದ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಅಂಕೋಲಾ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಹಾ ಗಾಳಿ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು ನದಿ ಪಾತ್ರದ ಪ್ರದೇಶಗಳಲ್ಲಿ ನೀರು ನುಗ್ಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಗಂಗಾವಳಿ ನದಿ ಪಾತ್ರದ ಬಿಳಿಹೊಯ್ಗಿ, ಹಿಚ್ಕಡದ ಕೂರ್ವೆ, ದಂಡೇಭಾಗ, ಮೊಟನಕುರ್ವೆ, ಸಗಡಗೇರಿ, ಗಂಗಾವಳಿ, ಮಂಜಗುಣಿ, ಅಗ್ರಗೋಣದ ಶೆಡಿಕಟ್ಟಾದ ಭಾಗಗಳ ಮನೆಗಳಿಗೆ ನೀರು ನುಗ್ಗಿದೆ. ಈ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಪ್ರದೇಶದತ್ತ ಸಾಗಿಸಲು ತಾಲೂಕಾಡಳಿತ ದೋಣಿ ವ್ಯವಸ್ಥೆ ಕಲ್ಪಿಸಿದೆ.

ಜತೆಯಲ್ಲಿ ಪೊಲೀಸ್‌ ಇಲಾಖೆ ಈ ಭಾಗಗಳಿಗೆ ತೆರಳಿ ಮುನ್ನೆಚ್ಚರಿಕೆ ನೀಡುತ್ತಿದೆ. ನೆರೆ ಎದುರಾಗುವ ಸಂದರ್ಭ ಇರುವುದರಿಂದ ಗಂಜಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ವೈದ್ಯ ಹೆಗ್ಗಾರ ಭಾಗದಲ್ಲಿ ಗಂಗಾವಳಿ ನದಿ ನೀರಿನ ಸೆಳೆತದಿಂದ ಕಾಲು ಸಂಕ ಕೊಚ್ಚಿ ಹೋದ ಪರಿಣಾಮ ವೈದ್ಯಹೆಗ್ಗಾರ – ಹಳವಳ್ಳಿ ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಕುಂಟಕಣಿ ಭಾಗದಲ್ಲಿಯು ಕೃಷಿ ಜಮೀನು ಮತ್ತು ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷಿ ಜಮೀನಿನಲ್ಲಿ ಹಾಕಿದ ಭತ್ತದ ಬೀಜ ನೀರಿಗೆ ಕೊಚ್ಚಿಹೋಗಿ ಅನ್ನದಾತನನ್ನು ಕಂಗೆಡಿಸಿದೆ. ತಾಲೂಕಿನಲ್ಲಿ ಕಂಡು ಬಂದ ನೆರೆ ಪೀಡಿತ ಪ್ರದೇಶಗಳಿಗೆ ತಹಶೀಲ್ದಾರ್‌ ವಿವೇಕ್‌ ಶೇಣ್ವಿ ಭೇಟಿ ನೀಡಿ ಪರಿಶಿಲನೆ ನಡೆಸಿದರು.

ಬಾರಿ ಗಾಳಿ ಮಳೆಗೆ ತಾಲೂಕಿನಾದ್ಯಂತ ಮರಗಳು ಧರೆಗೆ ಉರುಳು ತ್ತಿದ್ದು ಇದರ ಪರಿಣಾಮ ಹೆಸ್ಕಾಂ ಇಲಾಖೆಯ 50ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕಚ್ಚಿವೆ. ಒಟ್ಟೂ ಹೆಸ್ಕಾಂ ಇಲಾಖೆಗೆ ರೂ. ಹತ್ತು ಲಕ್ಷಕ್ಕೂ ಅಧಿಕ ಹಾನಿ ಉಂಟಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

ಪ್ರಕೃತಿ ವಿಕೋಪವನ್ನು ಸಮರ್ಪಕವಾಗಿ ನಿರ್ವಹಿಸಲು ತಾಲೂಕಾಡಳಿತ ಸನ್ನದ್ಧವಾಗಿದೆ. ಪ್ರಕೃತಿ ವಿಕೋಪದ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ಇದು ದಿನದ 24 ಘಂಟೆ ಕಾರ್ಯ ನಿರ್ವಹಿಸುತ್ತಿದೆ. •ವಿವೇಕ ಶೇಣ್ವಿ ತಹಶೀಲ್ದಾರ್‌
ಮಣ್ಣಿನಡಿ ಸಿಲುಕಿದ ಲಾರಿ:ರಾಷ್ಟ್ರೀಯ ಹೆದ್ದಾರಿ ಮೇಲೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು ಬಿದ್ದ ಪರಿಣಾಮ ಹೆದ್ದಾರಿ 8 ತಾಸು ಕಾಲ ಸ್ಥಗಿತಗೊಂಡ ಘಟನೆ ತಾಲೂಕಿನ ರಾಮನಗುಳಿ ಬಳಿ ನಡೆದಿದೆ.ಗುರುವಾರ ಬೆಳಗಿನಜಾವ 3:30ರ ಸುಮಾರಿಗೆ ರಾಮನಗುಳಿ ಅರಣ್ಯ ಇಲಾಖೆ ವಸತಿ ಗೃಹದ ಸಮೀಪ ಹೆದ್ದಾರಿ ಬದಿಯಲ್ಲಿರುವ ಗುಡ್ಡವು ಭಾರೀ ಮಳೆಗೆ ಕುಸಿದು ಧರೆಗೆ ಉರುಳಿದೆ. ಈ ಸಂದರ್ಭದಲ್ಲಿ ಮಂಗಳೂರಿನಿಂದ ಹುಬ್ಬಳ್ಳಿಯ ಕಡೆಗೆ ಪಾಮ್‌ ಆಯಿಲ್ ಹೊತ್ತೂಯ್ಯುತ್ತಿದ್ದ ಲಾರಿ ಮಣ್ಣಿನ ಅಡಿಯಲ್ಲಿ ಸಿಲಕಿದೆ. ಲಾರಿಯಲ್ಲಿದ್ದ ಚಾಲಕ ಮೆಹಬೂಬ್‌ ಅಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತೆರವು ಕಾರ್ಯಾಚರಣೆ: ಗುಡ್ಡದ ಮಣ್ಣು ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ಬಿದ್ದಿರುವುದರಿಂದ ತೆರವು ಕಾರ್ಯಾಚರಣೆಗೆ ವಿಳಂಬವಾಯಿತು. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಅಡ್ಡಿ ಆಗುತ್ತಿತ್ತು. ಅಂಕೋಲಾ ಮತ್ತು ಯಲ್ಲಾಪುರ ಪೊಲೀಸ್‌, ಅಗ್ನಿಶಾಮಕ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸ್ಥಳೀಯರ ನೆರವಿನಿಂದ ಮೂರು ಜೆಸಿಬಿಗಳ ಮೂಲಕ ಮಣ್ಣನ್ನು ತೆರವು ಮಾಡಿ ಸಂಚಾರ ಆರಂಭಿಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 20 ಕಿಮೀ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ತಹಶೀಲ್ದಾರ್‌ ವಿವೇಕ್‌ ಶೇಣ್ವಿ, ಸಿಪಿಐ ಪ್ರಮೋದ್‌ ಕುಮಾರ್‌, ಪಿಎಸೈ ಶ್ರೀಧರ್‌ ಅವರ ತಂಡ ಸ್ಥಳದಲ್ಲಿದ್ದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ