ಶರಾವತಿ ಉಳಿವಿಗೆ ನಾಡಿದ್ದು ಹೊನ್ನಾವರ ಬಂದ್‌

Team Udayavani, Jul 8, 2019, 11:44 AM IST

ಹೊನ್ನಾವರ: ಶರಾವತಿ ನದಿ ರಕ್ಷಣೆ ಸಂಬಂಧ ರೋಟರಿ ಭವನದಲ್ಲಿ ಸಭೆ ನಡೆಯಿತು.

ಹೊನ್ನಾವರ: ಶರಾವತಿ ಉಳಿವಿಗಾಗಿ ಮೊದಲ ಹಂತದ ಹೋರಾಟಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಬೆಂಗಳೂರಿಗೆ ಶರಾವತಿ ನೀರು ಒಯ್ಯುವ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಜು. 10ರಂದು ಹೊನ್ನಾವರ ಬಂದ್‌ಗೆ ಕರೆ ನೀಡಲಾಗಿದೆ.

ಶರಾವತಿ ನೀರನ್ನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೊಂಡೊಯ್ಯುವ ಕುರಿತು ಇತ್ತೀಚೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಶಿವಮೊಗ್ಗದ ಸಾಗರದಲ್ಲಿ ವಿವಿಧ ಸಂಘಟನೆಯವರು ನಡೆಸಿದ ಬೃಹತ್‌ ರ್ಯಾಲಿಯ ಬಳಿಕ ಹೊನ್ನಾವರದಲ್ಲಿಯೂ ಜೀವನದಿ ಶರಾವತಿ ಹೋರಾಟ ಸಮಿತಿ ರಚಿಸಿಕೊಳ್ಳಲಾಯಿತು. ನೆರೆಯ ಶಿವಮೊಗ್ಗದವರು ಇಡೀ ಜಿಲ್ಲೆಯ ಬಂದ್‌ ನಡೆಸಲು ಕರೆ ನೀಡಿದ ಬೆನ್ನಲ್ಲೇ ತಾಲೂಕಿನ ಸಮಿತಿಯಿಂದ ಹೊನ್ನಾವರ ಸ್ವಯಂ ಘೋಷಿತ ಬಂದ್‌ ನಡೆಸಿ ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ರೋಟರಿ ಭವನದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸಭೆ ಬಳಿಕ ಮಾಧ್ಯಮದವರೊಂದಿಗೆ ಶಿವಮೊಗ್ಗ ನದಿ ಹೋರಾಟ ಸಮಿತಿ ಸಂಚಾಲಕರಾದ ಜಿ.ಪಿ. ರಾಘವೇಂದ್ರ ಮಾತನಾಡಿ, ಸರ್ಕಾರದ ಈ ನಿರ್ಧಾರ ತಪ್ಪಾಗಿದೆ. ಯೋಜನೆಯು ಇಡೀ ಶಿವಮೊಗ್ಗ ಹಾಗೂ ಹೊನ್ನಾವರಕ್ಕೆ ಮಾರಕವಾಗಿದೆ. ಇಲ್ಲಿಯ ಅರಣ್ಯ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಮುಖ ಯಾತ್ರಾ ಸ್ಥಳವಾದ ಇಡಗುಂಜಿ, ಮುರ್ಡೇಶ್ವರಕ್ಕೆ ಇದೇ ನದಿ ನೀರು ಒಯ್ಯುವುದರಿಂದ ಆ ಭಾಗದ ಪ್ರವಾಸಿಗರಿಗೆ ಸಮಸ್ಯೆ ಆಗುತ್ತದೆ. ಈ ಭಾಗದ ತೋಟ-ಗದ್ದೆಗೆ ಉಪ್ಪು ನೀರು ನುಗ್ಗುವುದರಿಂದ ಬೆಳೆ ನೆಲ ಕಚ್ಚಲಿದೆ. ಇದೆಲ್ಲವನ್ನು ಗಮನಿಸಿ ಸರ್ಕಾರ ನಿರ್ಣಯವನ್ನು ವಾಪಸ್‌ ಪಡೆಯಲು ವಿವಿಧ ರೀತಿಯ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.

ತಾಲೂಕು ಹೋರಾಟ ಸಮಿತಿ ಸಂಚಾಲಕ ಕೇಶವ ನಾಯ್ಕ ಬಳ್ಕೂರ್‌ ಮಾತನಾಡಿ, ಜು. 10ರಂದು ಪಟ್ಟಣ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತವಾಗಿ ಬಂದ್‌ ಮಾಡಲು ನಿಶ್ಚಯಿಸಿದ್ದು ಯಾವುದೇ ಒತ್ತಾಯವಿಲ್ಲ. ಜೀವನದಿ ಶರಾವತಿ ಉಳಿವಿಗಾಗಿ ಎಲ್ಲರ ಸಹಕಾರ ಅಗತ್ಯ. ಆ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಕೈ ಜೋಡಿಸುತ್ತಾರೆ ಎನ್ನುವ ಭರವಸೆ ಇದೆ. ಶಾಂತಿಯುತವಾಗಿ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಮೂಲಕ ಮನವಿ ಸಲ್ಲಿಸಲಾಗುವುದು. ಇಂದು ನಡೆದ ಸಭೆಯಲ್ಲಿ ಈ ಕುರಿತು ಒಕ್ಕೊರಲಿನಿಂದ ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಸೀಮಾ ಮುಖ್ಯಪ್ರಾಣ ದೇವಾಲಯದ ಅರ್ಚಕರಾದ ಸೂರಾಲು ಚಂದ್ರಶೇಖರ್‌ ಭಟ್, ಕಾನೂನು ಸಲಹೆಗಾರ ಎಂ.ಎನ್‌. ಸುಬ್ರಹ್ಮಣ್ಯ, ದಿನೇಶ ಕಾಮತ್‌, ಮಹೇಶ ಕಲ್ಯಾಣಪುರ, ತಾಪಂ ಸದಸ್ಯ ಆರ್‌.ಪಿ. ನಾಯ್ಕ, ಪಪಂ ಸದಸ್ಯರಾದ ಶಿವರಾಜ ಮೇಸ್ತ, ನಾಗರಾಜ ಭಟ್, ಸುಜಾತ ಮೇಸ್ತ, ವಿವಿಧ ಸಂಘಟನೆ ಪ್ರಮುಖರಾದ ಎಚ್.ಆರ್‌. ಗಣೇಶ, ಹರಿಯಪ್ಪ ನಾಯ್ಕ, ರಘು ಪೈ, ಸಂಜು ಶೇಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ