ನೀರಿಂಗಿಸಲು ಬೃಹತ್‌ ಮಳೆಕೊಯ್ಲು ಯೋಜನೆ

•ಎಂಇಎಸ್‌-ರೋಟರಿ ಸಹಭಾಗಿತ್ವದಲ್ಲಿ ಲಕ್ಷಕ್ಕೂ ಅಧಿಕ ಲೀ. ನೀರು ಮರು ಬಳಕೆಗೆ ಹೊಸ ಹೆಜ್ಜೆ

Team Udayavani, Jul 12, 2019, 10:28 AM IST

ಶಿರಸಿ: ಎಂಇಎಸ್‌ ಶಿಕ್ಷಣ ಸಂಸ್ಥೆ ಆವಾರದಲ್ಲಿ ನಿರ್ಮಾಣಗೊಂಡ ಜಲತೊಟ್ಟಿ.

ಶಿರಸಿ: ನೀರಿನ ಬವಣೆಯಿಂದ ವಸತಿ ನಿಲಯಗಳಲ್ಲಿ ತಂಗಿದ್ದ ವಿದ್ಯಾರ್ಥಿನಿಯರಿಗೆ ನೆರವಾಗಲು ಇಲ್ಲಿನ ರೋಟರಿ ಕ್ಲಬ್‌ ನೇತೃತ್ವದಲ್ಲಿ ನೀರುಳಿಕೆ ಹಾಗೂ ನೀರಿಂಗಿಸುವ ಮಾದರಿ ನಿರ್ಮಿಸಲಾಗಿದ್ದು, ಆರು ಲಕ್ಷಕ್ಕೂ ಅಧಿಕ ಲೀಟರ್‌ ನೀರನ್ನು ಹಿಡಿದಿಟ್ಟು ಮರು ಬಳಕೆಗೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಎಂಇಎಸ್‌ ಆಡಳಿತ ಮಂಡಳಿ ಹಾಗೂ ರೋಟರಿ ಕ್ಲಬ್‌ ಪ್ರಮುಖರು, ವಿದ್ಯಾರ್ಥಿನಿಯರ ನಾಲ್ಕು ಹಾಸ್ಟೇಲ್ಗಳಲ್ಲಿ ಐದು ಸಾವಿರ ಲೀ.ಗಳಷ್ಟು ಸಾಮರ್ಥ್ಯದ ಟ್ಯಾಂಕ್‌ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಪ್ರತೀ ಹಾಸ್ಟೇಲ್ನ ಮೇಲ್ಛಾವಣಿ ನೀರನ್ನು ಸೋಸಿ ಸ್ವಚ್ಛಗೊಳಿಸುವ ಮೂಲಕ ಮೂವತ್ತಕ್ಕೂ ಅಧಿಕ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಅದರಲ್ಲಿ ಎಂಟು ದಿನದ ಮಳೆಗೇ ಅಷ್ಟೂ ಟ್ಯಾಂಕ್‌ಗಳು ತಂಬಿದ್ದು, ಹೆಚ್ಚುವರಿ ನೀರು ಬಟ್ಟೆ ತೊಳೆಯಲು, ಸ್ವಚ್ಛಗೊಳಿಸಲು, ಸ್ನಾನಕ್ಕೆ ಬಳಸಲು ಪಂಪ್‌ ಮಾಡಿಕೊಳ್ಳುತ್ತಿದ್ದಾರೆ. ಎರಡು ವರ್ಷ ಆದರೂ ಹಾಳಾಗದ ಗುಣಮಟ್ಟದಲ್ಲಿ ನೀರಿನ ಸಂಗ್ರಹಣೆ ಮಾಡಲಾಗಿದ್ದು, ಹೆಚ್ಚುಳಿದ ನೀರೂ ಭೂಮಿಗೆ ಇಂಗುವ ವ್ಯವಸ್ಥೆ ಮಾಡಲಾಗಿದೆ.

ಸುಮಾರು 130 ಟ್ಯಾಂಕ್‌ಗಳಿಂದ ಆರುವರೆ ಲಕ್ಷ ಲೀಟರ್‌ ಸಂಗ್ರಹಣೆಯ ಸಾಮರ್ಥ್ಯ ಈ ನಾಲ್ಕೂ ವಸತಿ ನಿಲಯಗಳಿಂದ ಸಾಧ್ಯವಾಗಿದೆ. ಸುಮಾರು 550 ವಿದ್ಯಾರ್ಥಿನೀಯರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಮುಖ್ಯವಾಗಿ ಬೇಸಿಗೆಯ ಜಲದ ಬವಣೆ ತಪ್ಪಿಸಿ, ನೀರನ್ನು ಟ್ಯಾಂಕರ್‌ ಮೂಲಕ ತರಿಸಿಕೊಳ್ಳುವುದು ತಪ್ಪಲಿದೆ. ಎಂಇಎಸ್‌ ಪ್ರಾಂಗಣ ಎರಡೂ ಕಡೆ ತಗ್ಗಿನಿಂದ ಕೂಡಿದ್ದು, ಇದರ ಒಂದೇ ಒಂದು ಹನಿ ನೀರು ಹೊರಗೆ ಹೋಗದಂತೆ ಮೂರು ದೊಡ್ಡ ಕೆರೆಗಳನ್ನೂ ನಿರ್ಮಿಸಲಾಗಿದೆ. ಇದರಲ್ಲಿ ಸುಮಾರು 40 ಲಕ್ಷ ಲೀ. ನೀರು ಸಂಗ್ರಹವಾಗಲಿದೆ.

ಈ ಜಲ ಕೋಯ್ಲು ಕೇವಲ ಎಂಇಎಸ್‌ ಕ್ಯಾಂಪಸ್‌ಗೆ ಮಾತ್ರವಲ್ಲ, ಸುತ್ತಲಿನ ಆರು ಸಾವಿರಕ್ಕೂ ಅಧಿಕ ಕುಟುಂಬಗಳಿಗೆ, ವಸತಿ ಉಳ್ಳವರಿಗೆ ನೆರವಾಗಲಿದೆ. ಅವರ ಬಾವಿಯ ನೀರೂ ಏರಿಕೆ ಆಗಲಿದೆ. ಶಾಂತಿ ನಗರ, ಆದರ್ಶನಗರ, ಗಾಯತ್ರಿ ನಗರ, ಕೆಎಚ್ಬಿ ಕಾಲನಿ, ವಿವೇಕಾನಂದ ನಗರ, ಸಹ್ಯಾದ್ರಿ ಕಾಲನಿಗಳಿಗೂ ಅನುಕೂಲ ಆಗಲಿದೆ. ಇ ಯೋಜನೆಗೆ ಸುಮಾರು 58 ಲಕ್ಷ ರೂ. ತಗುಲಿದ್ದು, ಎಂಇಎಸ್‌ ಶಿಕ್ಷಣ ಸಂಸ್ಥೆ ತನ್ನ ಪಾಲಾಗಿ 10 ಲಕ್ಷ ರೂ. ನೀಡಿದೆ. ರೋಟರಿ ಇಂಟರ್‌ನ್ಯಾಶನಲ್, ಡಾ| ವಸಂತ ಪ್ರಭು, ರೋಟರಿ ಸದಸ್ಯರು, ರೋಟರಿ ಸೆಂಟ್ರಲ್ ಚೆಸ್ಟರ್‌ ಕೌಂಟಿ ಇತರರು ನೆರವಾಗಿದ್ದಾರೆ. ಭೂ ವಿಜ್ಞಾನಿ ಡಾ| ಜಿ.ವಿ.ಹೆಗಡೆ, ಅರುಣ ನಾಯಕ ಸೇರಿದಂತೆ ಇತರರ ನೆರವು ಸಹಕಾರ ಇದೆ. ಈ ಮೂಲಕ ರೋಟರಿ ಕ್ಲಬ್‌ ಶಿಕ್ಷಣ ಸಂಸ್ಥೆ ಮೂಲಕವೂ ಜಲ ಜಾಗೃತಿಗೆ ನಾಂದಿ ಹಾಡಿದೆ.

ರೋಟರಿ ಅಧ್ಯಕ್ಷ ಪ್ರವೀಣ ಕಾಮತ್‌, ನೂತನ ಅಧ್ಯಕ್ಷ ಡಾ| ಶಿವರಾಮ ಕೆ.ವಿ, ಎಂಇಎಸ್‌ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಶ್ಯಾಂಸುಂದರ ಭಟ್ಟ, ಪಾಂಡುರಂಗ ಪೈ ಸೇರಿದಂತೆ ಇತರರು ಇದ್ದರು.

ಜು.14ರ ಬೆಳಗ್ಗೆ 11ಕ್ಕೆ ಈ ಜಲಕೊಯ್ಲಿನ ಘಟಕದ ಲೋಕಾರ್ಪಣೆ ಆಗಲಿದೆ. ಡಾ| ವಸಂತ ಪ್ರಭು, ಆನಂದ ಕುಲಕರ್ಣಿ, ಪ್ರಾಣೇಶ ಜಹಗೀರದಾರ್‌, ನಿತಿನ್‌ ಕಾಸರಕೋಡ ಇತರರು ಪಾಲ್ಗೊಳ್ಳಲಿದ್ದಾರೆ.

•ಎರಡು ವರ್ಷ ಆದರೂ ಹಾಳಾಗದ ಗುಣಮಟ್ಟದಲ್ಲಿ ನೀರಿನ ಸಂಗ್ರಹಣೆ

•ಸುಮಾರು 130 ಟ್ಯಾಂಕ್‌ಗಳಿಂದ ಆರೂವರೆ ಲಕ್ಷ ಲೀಟರ್‌ ಸಂಗ್ರಹ

•ನಾಲ್ಕು ಹಾಸ್ಟೇಲ್ಗಳಲ್ಲಿ ಐದು ಸಾವಿರ ಲೀ.ಗಳಷ್ಟು ಸಾಮರ್ಥ್ಯದ ಟ್ಯಾಂಕ್‌ ನಿರ್ಮಾಣ

•ವಸತಿ ನಿಲಯದ ವಿದ್ಯಾರ್ಥಿಗಳ ಬಟ್ಟೆ ತೊಳೆಯಲು, ಸ್ವಚ್ಛಗೊಳಿಸಲು, ಸ್ನಾನಕ್ಕೆ ಬಳಕೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ