ಟಿಎಂಎಸ್ ಗ್ರೇಡಿಂಗ್ ವಿಭಾಗ ಕಟ್ಟಡ ಉದ್ಘಾಟನೆ
ಮನುಷ್ಯರ ಪ್ರಯತ್ನ-ದೇವರ ಭಕ್ತಿ ಹದವಾಗಿ ಸೇರಿದರೆ ಅದ್ಭುತ ಸಾಧನೆ ಆಗುತ್ತದೆ: ಸ್ವರ್ಣವಲ್ಲೀ ಶ್ರೀ
Team Udayavani, May 4, 2022, 1:32 PM IST
ಶಿರಸಿ: ಎಲ್ಲರೂ ವಿನಾ ದೈನ್ಯೇನ ಜೀವನಕ್ಕೆ, ಅನಾಯಾಸೇನ ಮರಣಕ್ಕೆ ದೇವರಲ್ಲಿ ಭಕ್ತಿ ಇಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶಿಸಿದರು.
ಅವರು ಮಂಗಳವಾರ ಇಲ್ಲಿನ ಟಿಎಂಎಸ್ ಸಹಕಾರಿ ಸಂಸ್ಥೆ ಗ್ರೇಡಿಂಗ್ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಆಶೀರ್ವಚನ ನುಡಿದರು.
ವಿನಾ ದೈನ್ಯೇನ ಜೀವನಂ ಆಗಬೇಕು. ಸಾಲ, ಅನಾರೋಗ್ಯ ಇರದೇ ದೈನ್ಯ ಇಲ್ಲದ ಜೀವನ ಆಗಬೇಕು. ಅನಾಯಾಸೇನ ಮರಣಂ ಆಗಬೇಕು ಎಂದ ಶ್ರೀಗಳು, ದೈನ್ಯ ರಹಿತ ಜೀವನ, ಆಯಾಸವಿಲ್ಲದ ಮರಣಕ್ಕೆ ದೇವರ ಭಕ್ತಿ ಬೇಕು. ಮನುಷ್ಯರ ಪ್ರಯತ್ನ, ದೇವರ ಭಕ್ತಿ ಹದವಾಗಿ ಸೇರಿದರೆ ಅದ್ಭುತ ಸಾಧನೆ ಆಗುತ್ತದೆ ಎಂದರು.
ಅಕ್ಷಯ ತೃತೀಯದಿಂದ ಯಾವುದನ್ನೂ ಆರಂಭಿಸಿದರೂ ಅದು ವಿಸ್ತಾರ ಆಗುತ್ತದೆ ಎಂದೂ ಹೇಳಿದ ಶ್ರೀಗಳು, ರೈತರನ್ನು ಬೆಳೆಸುತ್ತ ತಾನೂ ಬೆಳೆಯುವ ಸಂಸ್ಥೆಗಳು ದೊಡ್ಡದು. ಸಹಕಾರಿ ಸಂಸ್ಥೆಗಳು ಈ ಕೆಲಸ ಮಾಡುತ್ತಿದೆ. ರೈತರ ಹಿತ ಚಿಂತನೆ ಮಾಡುತ್ತಿದೆ ಎಂದರು. ಸದಸ್ಯರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಸಂಸ್ಥೆ ಕಾರ್ಯ ಮಾಡುತ್ತಿದೆ. ಸದಸ್ಯರಿಗೆ ಟಿಎಂಎಸ್ ಮಾದರಿ ಕಾರ್ಯ ಮಾಡುತ್ತಿದೆ. ರೈತರ ಬೆಳೆ ಸುರಕ್ಷಿತ ಇಟ್ಟುಕೊಳ್ಳುವಜುದೂ ಸಹಕಾರಿ ಕ್ಷೇತ್ರದ ದೊಡ್ಡ ಸೇವೆ ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಹಕಾರಿ ಕ್ಷೇತ್ರದಲ್ಲಿ ಹಿರಿಯರ ಕೊಡುಗೆ ಅನನ್ಯವಾದದ್ದು. ಅವರ ನಿಸ್ವಾರ್ಥ ಸೇವೆಯ ಕಾರಣದಿಂದ ಸೊಸೈಟಿ ಜೊತೆ ಬಾಂಧವ್ಯ ಬೆಳೆದಿದೆ. ಎಲ್ಲ ಕಡೆ ಸಂಘಟಿತರಾಗಿ ಕೆಲಸ ಮಾಡಬೇಕು. ಸಂಘಟಿತ ಕಾರ್ಯ ಸಹಕಾರದಲ್ಲಿ ಆಗುತ್ತಿದೆ ಎಂದರು.
ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಕ್ಷೇತ್ರ ಬಲಕ್ಕೆ ಸಹಕಾರಿಗಳು ಪ್ರಾಮಾಣಿಕ ಕಾರ್ಯ ಮಾಡಿದ್ದು ಈ ಸಾಧನೆಗೆ ಕಾರಣವಾಗಿದೆ. ಅಡಕೆಗೆ ಇಷ್ಟು ದರ ಇದೆ. ಆದರೂ ರೈತರ ಸಾಲ ಮಾತ್ರ ಕಡಿಮೆ ಆಗಿಲ್ಲ. ಸಹಕಾರಿ ಕ್ಷೇತ್ರಕ್ಕೆ ಬುದ್ಧಿವಂತರ ಅವಶ್ಯಕತೆ ಇಲ್ಲ. ಪ್ರಾಮಾಣಿಕತೆ, ಬದ್ಧತೆ ಬೇಕು ಎಂದರು.
ಸಹಕಾರಿ ರತ್ನ ಪುರಸ್ಕೃತರಾದ ಶಂಭುಲಿಂಗ ಹೆಗಡೆ ನಡಗೋಡ, ಎಚ್.ಎಸ್. ಮಂಜಪ್ಪ, ಆರ್.ಎಂ. ಹೆಗಡೆ ಬಾಳೇಸರ ಅವರನ್ನು ಗೌರವಿಸಲಾಯಿತು. ಎಪಿಎಂಸಿ ಅಧ್ಯಕ್ಷ ಶಿವಕುಮಾರ ಗೌಡರ್, ಸಹಕಾರಿ ಅಧಿಕಾರಿ ನಿಂಗರಾಜು ಎಸ್., ಎಪಿಎಂಸಿ ಸೆಕ್ರೆಟರಿ ಡಾ| ಕೆ.ಡಿ. ಕೋಡಿಗೌಡ ಇತರರು ಇದ್ದರು. ಟಿಎಂಎಸ್ ಕಾರ್ಯನಿರ್ವಾಹಕ ಎಂ.ಎ. ಹೆಗಡೆ ಕಾನಮುಷ್ಕಿ ಫಲ ಸಮರ್ಪಿಸಿದರು. ಟಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಪಿ. ಹೆಗಡೆ ಹೊನ್ನೆಕಟ್ಟ ನೆನಪಿನ ಕಾಣಿಕೆ ನೀಡಿದರು. ವಿ.ಆರ್. ಹೆಗಡೆ ಮಣ್ಮನೆ ವಂದಿಸಿದರು. ಅನಂತ ಭಟ್ಟ ಹುಳಗೋಳ ವಂದಿಸಿದರು.
ಅಡಕೆ ದರ ಹೆಚ್ಚಾದರೂ ಸಾಲದ ಪ್ರಮಾಣ ಹೆಚ್ಚಿದ್ದು ಆತಂಕಕಾರಿ. ರೈತರ ಯೋಜನಾ ಬದ್ಧ ಕಾರ್ಯ ಮಾಡದೇ ಇರುವುದು ಸಮಸ್ಯೆಗೆ ಕಾರಣ. ಇದನ್ನು ಇನ್ನೊಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಅನಗತ್ಯ ಖರ್ಚನ್ನೂ ಕಡಿಮೆ ಮಾಡಬೇಕು. ಮನೆಯೊಳಗೂ ಸಹಕಾರಿ ತತ್ವ ಉಳಿಸಿಕೊಳ್ಳಬೇಕು. -ಸ್ವರ್ಣವಲ್ಲೀ ಶ್ರೀ