ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಿಸಲು ಆಗ್ರಹ

ಪ್ರತಿ ಗ್ರಾಪಂಗೆ ಒಂದರಂತೆ ಇಂಗ್ಲಿಷ್‌ ಮಾಧ್ಯಮ ಸರ್ಕಾರಿ ಶಾಲೆ ಕೊಡಿ

Team Udayavani, Jun 19, 2019, 3:52 PM IST

ಕಾರವಾರ: ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿರುವ ಬಗ್ಗೆ ಜಿಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ತಾಲೂಕಿಗೆ ಒಂದು, ಎರಡು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ 1ನೇ ತರಗತಿ, ಕೆಲವು ಕಡೆ ಎಲ್ಕೆಜಿ ಪ್ರಾರಂಭಿಸಿದ್ದು, ಇದು ಜಿ.ಪಂ. ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.

ಗೋಕರ್ಣದ ಮುಖ್ಯಕೇಂದ್ರ ಬಿಟ್ಟು ದೂರದ ಶಾಲೆಯಲ್ಲಿ ಆಂಗ್ಲ ಮಾಧ್ಯಮ 1ನೇ ತರಗತಿ ಆರಂಭಿಸಲಾಗಿದೆ. ಇದಕ್ಕೆ ಮಾನದಂಡ ಏನು ಎಂದು ಗಾಯತ್ರಿ ಗೌಡ ಪ್ರಶ್ನಿಸಿದರು. ಆಗ ಸದಸ್ಯರೊಬ್ಬರು ನೂರು ವರ್ಷ ತುಂಬಿದ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಬೇಕಿತ್ತು ಎಂದು ವಾದಿಸಿದರೆ, ಜನರ ಬೇಡಿಕೆ ಇದ್ದ ಕಡೆಯಲ್ಲೆಲ್ಲಾ ಆಂಗ್ಲ ಮಾಧ್ಯಮ ಪ್ರಾರಂಭಿಸಿ. ಗ್ರಾಮೀಣ ಜನರು ಏನು ತಪ್ಪು ಮಾಡಿದ್ದಾರೆ. ಕಡತೋಕ ಗ್ರಾಮದಲ್ಲಿ ಸರ್ಕಾರದಿಂದ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ ಎಂದು ಶಿವಾನಂದ ಹೆಗಡೆ ಆಗ್ರಹಿಸಿದರು. ಅಲ್ಲದೇ ಪ್ರತಿ ಗ್ರಾಪಂ ವ್ಯಾಪ್ತಿಗೆ ಒಂದು ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಪ್ರಾರಂಭಿಸಿ ಎಂದು ಸರ್ಕಾರಕ್ಕೆ ಠರಾವು ಮಾಡಿಕಳಿಸಿ ಎಂದರು.

ಪುಷ್ಪಾ ನಾಯ್ಕ ಸಹ ಸರ್ಕಾರ ಒಳ್ಳೆಯ ಹೆಜ್ಜೆ ಇಟ್ಟಿದೆ. ಹೊನ್ನಾವರದಲ್ಲಿ ಸಹ ಭಾರೀ ಬೇಡಿಕೆ ಇದೆ ಎಂದರು. ಬರ್ಗಿಯಲ್ಲಿ ಇಂಗ್ಲಿಷ್‌ ಮಾಧ್ಯಮ ಸರ್ಕಾರಿ ಶಾಲೆ ಕೊಡಿ ಎಂಬ ಆಗ್ರಹ ಕೇಳಿಬಂತು. ಶಿರಸಿ, ಯಲ್ಲಾಪುರದಲ್ಲಿ ಆಂಗ್ಲ ಮಾಧ್ಯಮಕ್ಕೆ ಹೆಚ್ಚಿನ ಮಕ್ಕಳು ಬರುತ್ತಿದ್ದಾರೆ. ಎಲ್ಲೆಲ್ಲಿ ಬೇಡಿಕೆ ಇದೆಯೋ ಆಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿ ಹಾಗೂ 30 ಮಕ್ಕಳಿಗೆ ಒಬ್ಬ ಶಿಕ್ಷಕರ ಬದಲಾಗಿ, ತರಗತಿಗೆ ಒಬ್ಬ ಶಿಕ್ಷಕರನ್ನು ಕೊಡಿ ಎಂದು ಮುರೇಗಾರ, ಸುಜಾತ ನಾಯ್ಕ, ಜಗದೀಶ್‌ ನಾಯಕ ಆಗ್ರಹಿಸಿದರು.

ಡಿಡಿಪಿಐ ಮಂಜುನಾಥ ನಾಯ್ಕ ಮಾತನಾಡಿ ಕರಾವಳಿಯಲ್ಲಿ 68 ಶತಮಾನೋತ್ಸವ ಶಾಲೆಗಳಿವೆ. ಈ ಪೈಕಿ ಎರಡು ಶಾಲೆಗಳಲ್ಲಿ ಕೊಠಡಿ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವಾಗ ಮಕ್ಕಳ ಸಂಖ್ಯೆ ಹೆಚ್ಚಿರುವಲ್ಲಿ ಮತ್ತು 1 ರಿಂದ 10ನೇ ತರಗತಿ ಇರುವ ಶಾಲೆಗಳು ಹಾಗೂ ಅಲ್ಲಿನ ಅನುಕೂಲತೆಗಳನ್ನು ನೋಡಿ, ರಾಜ್ಯ ಮಟ್ಟದಲ್ಲಿ ಸ್ಥಳ ಆಯ್ಕೆ ಮಾಡಲಾಗಿದೆ. ಜಿಪಂ ಸದಸ್ಯರ ಬೇಡಿಕೆಗಳನ್ನು ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.

ಸಣ್ಣ ನೀರಾವರಿ ಇಲಾಖೆ ಹಗರಣದ ಪ್ರತಿಧ್ವನಿ: ಶಿವಾನಂದ ಹೆಗಡೆ ಕಡತೋಕ, ಜಗದೀಶ್‌ ನಾಯಕ, ಮುರೇಗಾರ, ಪುಷ್ಪಾ ನಾಯ್ಕ ಸಣ್ಣ ನೀರಾವರಿ ಇಲಾಖೆ ಹಗರಣದ ಬಗ್ಗೆ ಕೂಗಾಡಿ ಗದ್ದಲ ಎಬ್ಬಿಸಿದರು. ಜಿ.ಪಂ. ಅಧ್ಯಕ್ಷರು ಸಮಾಧಾನ ಪಡಿಸಿದರೂ ಅವರು ಕೂಗಾಡುತ್ತಲೇ ಇದ್ದರು. ಅಧಿಕಾರಿಗಳು ಮಾತನಾಡಲು ಸಹ ಅವಕಾಶ ನೀಡಲಿಲ್ಲ. ಜಿಪಂ ಸಿಇಒ ರೋಶನ್‌ ಮಾತನಾಡಿ, ಮೊದಲು ಅಧಿಕಾರಿಗಳ ಸಮಜಾಯಿಷಿ ಕೇಳಿ. ನಂತರ ಪ್ರತ್ಯೇಕ ಸಭೆ ಕರೆದು ಚರ್ಚಿಸೋಣ. ಭ್ರಷ್ಟಾಚಾರ ಇದ್ದರೆ ಅದು ಗಂಭೀರ ಆರೋಪ. ಸಮಾಧಾನದಿಂದ ವಿಷಯ ಮಂಡಿಸಿ ಎಂದರು.

ಸಣ್ಣ ನೀರಾವರಿ ಇಲಾಖೆ ಹಗರಣಗಳ ಗೂಡಾಗಿದೆ. ಜಿ.ಪಂ ಸಭೆಗೆ ಅಧಿಕಾರಿಗಳು ಬಂದ ಇತಿಹಾಸವೇ ಇಲ್ಲ. ಆದರೆ ಈ ಸಲ ಇ.ಇ. ಮತ್ತು ಎ.ಇ.ಇ ಬಂದಿದ್ದಾರೆ. ಅವರ ಅಭಿಪ್ರಾಯ ಆಲಿಸೋಣ ಎಂದರು. ಮುರೇಗಾರ ಮಾತನಾಡಿ ಶಿರಸಿ ವಾನಳ್ಳಿಯ ಏತ ನೀರಾವರಿ ಯೋಜನೆಗೆ 27 ಲಕ್ಷ ವೆಚ್ಚವಾಗಿದೆ. ಒಂದು ಹನಿ ನೀರು ರೈತರ ಹೊಲಗಳಿಗೆ ಹರಿದಿಲ್ಲ, ಇಂಥ ಯೋಜನೆ ಯಾಕೆ ಬೇಕು ಎಂದರು. ಜಗದೀಶ ನಾಯಕ ಮಾತನಾಡಿ ಅಂಕೋಲಾದ ಸಂತೀಪೇಟೆ ಏತನೀರಾವರಿಗೆ 10 ಲಕ್ಷ ಖರ್ಚು ಹಾಕಲಾಗಿದೆ. ಕಾಮಗಾರಿ ಆಗಿಲ್ಲ. ಸ್ಥಳಕ್ಕೆ ಬನ್ನಿ ತೋರಿಸುವೆ ಎಂದರು. ಹೊನ್ನಾವರ ತಾಲೂಕಿನಲ್ಲಿ ಬಾಂದರ ಕಟ್ಟದೇ ಬಿಲ್ ಹಾಕಲಾಗಿದೆ ಎಂದು ಶಿವಾನಂದ ಹೆಗಡೆ ಆರೋಪಿಸಿದರು. ಸದಸ್ಯರ ಆರೋಪಗಳಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಉತ್ತರಿಸಲಿದ್ದಾರೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ಹೇಳಿದರು. ಹತ್ತು ದಿನ ಸಮಯ ಕೊಡಿ, ಯೋಜನೆಗಳ ಸ್ಥಿತಿಗತಿ, ಹಣ ಬಿಡುಗಡೆಯ ವರದಿ ನೀಡುವೆ ಎಂದರು.

ಎಇಇ ಎಂ.ಪಿ.ಕಳಸ ಮಾತನಾಡಿ ಎಲ್ಲಾ ಕಾಮಗಾರಿ ಫೋಟೋ ಇದೆ. ಸದಸ್ಯರು ಸಮಯ ನೀಡಿದರೆ ಅವರನ್ನೇ ಸ್ಥಳಕ್ಕೆ ಕರೆದುಕೊಂಡು ಹೋಗಿ ವಾಸ್ತವ ಸ್ಥಿತಿ ವಿವರಿಸುವೆ ಎಂದರು. ಸಿಇಓ ರೋಶನ್‌ ಸಹ ಇದಕ್ಕೆ ಸಮ್ಮತಿಸಿ, ಮೊದಲು ಅಧಿಕಾರಿಗಳ ವಿವರಣೆ ನೋಡುವಾ. ನಂತರ ಸಭೆ ಕರೆದು ವಿವರವಾಗಿ ಚರ್ಚಿಸೋಣ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ