ಕದ್ರಾ-ಕೊಡಸಳ್ಳಿ ಭರ್ತಿ: 24 ಗಂಟೆ ವಿದ್ಯುತ್‌ ಉತ್ಪಾದನೆ

|ಕೊಡಸಳ್ಳಿ ಕ್ರಸ್ಟ್‌ ಗೇಟ್ -ಕದ್ರಾ ಅಣೆಕಟ್ಟು ಕ್ರಸ್ಟ್‌ ಗೇಟ್ನಿಂದ ನೀರು ಹೊರಕ್ಕೆ | ಒಂದು ವಾರ ಮೊದಲೇ ತುಂಬಿದ ಜಲಾಶಯ

Team Udayavani, Jul 12, 2019, 10:33 AM IST

ಕಾರವಾರ: ಕೊಡಸಳ್ಳಿ ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡಲಾಯಿತು.

ಕಾರವಾರ: ಕಾಳಿ ನದಿಗೆ ಕಟ್ಟಲಾದ ಸರಣಿ ಜಲಾಶಯಗಳಲ್ಲಿ ಕೊಡಸಳ್ಳಿ ಜಲಾಶಯ ಗುರುವಾರ ಬೆಳಗ್ಗೆ ತುಂಬಿದ ಕಾರಣ, 0.2 ಟಿಎಂಸಿ ನೀರನ್ನು ಹೊರಕ್ಕೆ ಬಿಡಲಾಯಿತು. ಕೊಡಸಳ್ಳಿ ಜಲಾಶಯದಿಂದ ಬಿಟ್ಟ ನೀರು ಕದ್ರಾ ಜಲಾಶಯಕ್ಕೆ ಸೇರ್ಪಡೆಯಾಗಿದ್ದು, ಕದ್ರಾ ಜಲಾಶಯ ತುಂಬಲು ಕ್ಷಣಗಣನೆ ಆರಂಭವಾಗಿತ್ತು. ಕೊಡಸಳ್ಳಿ ಮತ್ತು ಕದ್ರಾ ಜಲಾಶಯಗಳಿಂದ ಇದೀಗ 24 ತಾಸು ಜಲವಿದ್ಯುತ್‌ ಉತ್ಪಾದನೆ ನಡೆದಿದೆ.

ಕದ್ರಾ ಜಲಾಶಯ ಸಹ ಗುರುವಾರ ಸಂಜೆ ಭರ್ತಿಯಾಗಿದ್ದು, 500 ಕ್ಯೂಸೆಕ್‌ ನೀರನ್ನು ಎರಡು ಕ್ರಸ್ಟ್‌ ಗೇಟ್ ತೆರೆದು, ಎರಡು ತಾಸು ನೀರು ಹೊರಬಿಡಲಾಯಿತು.

ಕಳೆದ ವರ್ಷ ಜು.18ಕ್ಕೆ ಜಲಾಶಯ ಭರ್ತಿಯಾಗಿತ್ತು. ಈ ಸಲ ಕಳೆದ ವರ್ಷಕ್ಕಿಂತ ಒಂದು ವಾರ ಮೊದಲೇ ಕೊಡಸಳ್ಳಿ ಜಲಾಶಯ ಭರ್ತಿಯಾದಂತಾಗಿದೆ. ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸತತ ಮಳೆಯಾಗುತ್ತಿದೆ. ಅಂಬಿಕಾನಗರ, ನಾಗಝರಿ, ಸುಪಾ, ಅಣಶಿ, ಯಲ್ಲಾಪುರ ಭಾಗದಲ್ಲಿ ಮಳೆ ಸತತ ಬೀಳುತ್ತಿರುವ ಕಾರಣ ಜಲಾಶಯ ತುಂಬಿದೆ. ಜಲಾಶಯದಿಂದ ಬಿಡುವ ನೀರನ್ನು ವಿದ್ಯುತ್‌ ಉತ್ಪಾದನೆಗೆ ಬಳಸಿಯೇ ಬಿಡಲು ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಅಣೆಕಟ್ಟಿನ ಭರ್ತಿಯ ಅಂತಿಮ ಹಂತ ತಲುಪಿದಾಗ ಕ್ರಸ್ಟ್‌ಗೇಟ್ ತೆರೆದು ನೀರು ಬಿಡಲಾಗುತ್ತಿದೆ. ಕೊಡಸಳ್ಳಿಯಿಂದ ಬಿಟ್ಟ ನೀರು ಕದ್ರಾ ಅಣೆಕಟ್ಟು ಸೇರಿ, ಅಲ್ಲಿ ವಿದ್ಯುತ್‌ ಉತ್ಪಾದನೆ ನಂತರ ಕಾಳಿ ನದಿ ಸೇರುತ್ತದೆ ಎಂದು ಅಣೆಕಟ್ಟುಗಳ ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್‌ ನಿಂಗಣ್ಣ ವಿವರಿಸಿದರು.

ಈ ವರ್ಷ ಮಳೆ ತಡವಾಗಿ ಆರಂಭವಾದರೂ, ಆಶಾದಾಯಕವಿದೆ. ಕೊಡಸಳ್ಳಿ ಮತ್ತು ಕದ್ರಾ ಜಲಾಶಯಗಳು ಭರ್ತಿಯಾಗುವುದರ ಜೊತೆಗೆ ವಿದ್ಯುತ್‌ ಉತ್ಪಾದನೆಯನ್ನು ಸತತವಾಗಿ ಆರಂಭಿಸಲಾಗಿದೆ. ಕೊಡಸಳ್ಳಿಯಿಂದ 120 ಮೆಗಾವ್ಯಾಟ್, ಕದ್ರಾದಿಂದ 150 ಮೆಗಾವ್ಯಾಟ್ ವಿದ್ಯುತ್‌ ಸತತ 24 ಗಂಟೆಯೂ ರಾಜ್ಯಕ್ಕೆ ದೊರೆಯುತ್ತಿದೆ ಎಂದರು.

ಕದ್ರಾ ಅಣೆಕಟ್ಟು 34.50 ಮೀಟರ್‌ ಎತ್ತರವಿದ್ದು, ಗುರುವಾರ ಬೆಳಗಿನಜಾವ 33.25 ಮೀಟರ್‌ ತಲುಪಿತ್ತು. ಗುರುವಾರ ಸಂಜೆ ವೇಳೆಗೆ ಅಣೆಕಟ್ಟು ತುಂಬಿತು. ಎರಡು ಕ್ರಸ್ಟ್‌ ಗೇಟ್ ತೆರೆದು ಹೆಚ್ಚಿನ ನೀರನ್ನು ಹೊರಬಿಡಲಾಯಿತು. ಕದ್ರಾ ಅಣೆಕಟ್ಟು 13.40 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೊಡಸಳ್ಳಿ ಅಣೆಕಟ್ಟು 75.50 ಮೀಟರ್‌ ಎತ್ತರವಿದ್ದು, ಈಗಾಗಲೇ 74.60 ಮೀಟರ್‌ ಭರ್ತಿಯಾಗಿದೆ. ಬುಧವಾರ ಸಂಜೆ ಮತ್ತಷ್ಟು ಒಳ ಹರಿವು ಹೆಚ್ಚಿದೆ. ಅಣೆಕಟ್ಟಿನಲ್ಲಿ ಸಂಜೆ ವೇಳೆಗೆ 75.32 ಮೀಟರ್‌ ವರೆಗೆ ನೀರು ಇತ್ತು. ಕೊಡಸಳ್ಳಿ ಹಿನ್ನೀರು ಭಾಗದಲ್ಲಿ ಸತತ ಮಳೆ ಬೀಳತೊಡಗಿದೆ.

ಗುರುವಾರ ಮಧ್ಯರಾತ್ರಿಯಿಂದ ಬೆಳಗಿನ ಜಾವದ ವೇಳೆಗೆ ಇದ್ದಕ್ಕಿದ್ದಂತೆ 2 ಮೀಟರ್‌ ನೀರು ಅಣೆಕಟ್ಟಿನಲ್ಲಿ ಏರಿತ್ತು. ಹಾಗಾಗಿ ಸಿವಿಲ್ ಎಂಜಿನಿಯರ್ ತಕ್ಷಣ ಸಭೆ ನಡೆಸಿ ಅಣೆಕಟ್ಟಿನ ಆರು ಕ್ರಸ್ಟ್‌ಗೇಟ್ ತೆರೆದು ನೀರು ಹೊರಬಿಡಲಾಯಿತು. 9.30 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೊಡಸಳ್ಳಿಗೆ ಗುರುವಾರ ಬೆಳಗಿನ ಹೊತ್ತಿಗೆ 30 ಸಾವಿರ ಕ್ಯೂಸೆಕ್‌ ನೀರು ಒಳಹರಿವು ಇತ್ತು.

ವಿದ್ಯುತ್‌ ಉತ್ಪಾದನೆಯಲ್ಲಿ ದಾಖಲೆ:

ಕಳೆದ ವರ್ಷ ಸಹ ಕೊಡಸಳ್ಳಿ, ಕದ್ರಾ ಅಣೆಕಟ್ಟುಗಳು ಭರ್ತಿಯಾಗಿದ್ದವು. ಕಳೆದ ಆರ್ಥಿಕ ವರ್ಷದಲ್ಲಿ 700 ದಶಲಕ್ಷ ಯುನಿಟ್ ವಿದ್ಯುತ್‌ ಉತ್ಪಾದಿಸಿ 180 ಕೋಟಿ ರೂ.ಆದಾಯ ತಂದಿವೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ. ಮಳೆಗಾಲದಲ್ಲಿ ರಾಜ್ಯಕ್ಕೆ ಬೇಕಾಗುವ ವಿದ್ಯುತ್‌ ಜಲವಿದ್ಯುತ್‌ ಅಣೆಕಟ್ಟುಗಳಿಂದ ದೊರೆಯುತ್ತಿದ್ದು, ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನೆಗೆ ಸ್ವಲ್ಪ ವಿರಾಮ ಹಾಕುವುದು ವಾಡಿಕೆ. ಕದ್ರಾದಿಂದ ಪ್ರತಿದಿನ 50 ಮೆಗಾವ್ಯಾಟ್ ಸಾಮರ್ಥ್ಯದ 3 ಯುನಿಟ್ ನಿಂದ 3.6 ಲಕ್ಷ ಯುನಿಟ್ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಕೊಡಸಳ್ಳಿ ಜಲವಿದ್ಯುತ್‌ಗಾರದಿಂದ 40 ಮೆಗಾ ವ್ಯಾಟ್ ಸಾಮರ್ಥ್ಯದ 3 ಯುನಿಟ್ ಗಳಿಂದ ಪ್ರತಿದಿನ 2.88 ದಶಲಕ್ಷ ಯುನಿಟ್ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಜಲಾಶಯ ಭರ್ತಿಯಾಗಿರುವ ಕಾರಣ ದಿನದ 24 ತಾಸು ವಿದ್ಯುತ್‌ ಉತ್ಪಾದನೆ ನಡೆದಿದೆ. ಉತ್ಪಾದಿಸಿದ ವಿದ್ಯುತ್‌ನ್ನು ಕಾರವಾರ ಮಾರ್ಗವಾಗಿ ರಾಜ್ಯ ಗ್ರಿಡ್‌ ಸೇರುತ್ತದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ