8ರಂದು ಕಾರವಾರ ತಾಲೂಕು ಕಸಾಪ ಸಮ್ಮೇಳನ

Team Udayavani, Sep 2, 2018, 5:41 PM IST

ಕಾರವಾರ: ತಾಲೂಕಿನ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ಸೆ.8 ರಂದು ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಶಾಸಕಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷೆ ರೂಪಾಲಿ ನಾಯ್ಕ ಬಿಡುಗಡೆ ಮಾಡಿದರು. ಪತ್ರಿಕಾ ಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಅವರು, ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿ ಬೆಳೆಸಲು ಸಮ್ಮೇಳನ ಸಹಕಾರಿಯಾಗಿದೆ. ಕನ್ನಡಿಗರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಬರಬೇಕು. ಕನ್ನಡ ಜಾಗೃತಿ ಮೂಡಿಸಲು ಎಲ್ಲರೂ ಕೈಜೋಡಿಸಬೇಕು ಎಂದರು. ಸಮ್ಮೇಳನ ಸಾಹಿತ್ಯ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ. ಭಾಷೆಯ ಉನ್ನತಿಯ ಚರ್ಚೆ ಅಲ್ಲಿ ಆಗಲಿದೆ. ಭಾಷೆಯ ಹಿರಿಮೆ ಮತ್ತು ಕವಿಗಳ ಕಾವ್ಯ ವಾಚನ ಹಾಗೂ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕನ್ನಡದ ತೇರು ಎಳೆಯಬೇಕು ಎಂದರು.

ತಾಲೂಕು ಕಸಾಪ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಮಾತನಾಡಿ ಸಮ್ಮೇಳನವನ್ನು ಈ ಸಲ ಲಿಂಗಸಮಾನತೆ ಸಾರಲು ಆದ್ಯತೆ ನೀಡಲಾಗಿದೆ. ಜೊತೆಗೆ ಮಂಗಳಮುಖೀ, ರಂಗಭೂಮಿ ಕಲಾವಿದೆ ಆಗಿರುವ ಕಾಜಲ್‌ ಬ್ರಹ್ಮಾವರ ಮುಖ್ಯ ಅತಿಥಿಯಾಗಿದ್ದಾರೆ.

5ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದ ಜಾನಪದ ಕೋಗಿಲೆ ಸುಕ್ರಿ ಬೊಮ್ಮ ಗೌಡ ಅವರೂ ಉಪಸ್ಥಿತರಿದ್ದು, ಕವಿಗೋಷ್ಠಿ ಅಧ್ಯಕ್ಷತೆ ಹಾಗೂ ಆಶಯ ಭಾಷಣವನ್ನು ಕವಯತ್ರಿಯರಿಗೆ ನೀಡಲಾಗಿದೆ. ಕವಿಗೋಷ್ಠಿಯಲ್ಲಿ ಸಹ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕನ್ನಡ ಗೀತೆಗಳ ಗಾಯನವನ್ನು ಕಲಾವಿದೆ ದೀಪ್ತಿ ಅರ್ಗೇಕರ್‌ ನಡೆಸಿಕೊಡಲಿದ್ದಾರೆ ಎಂದರು.

ಯಕ್ಷಗಾನ ಅಕಾಡೆಮಿ ಸದಸ್ಯ ರಾಮಕೃಷ್ಣ ಗುಂದಿ ಮಾತನಾಡಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಅರ್ಥಶಾಸ್ತ್ರಜ್ಞ ಡಾ| ಎಸ್‌. ಡಿ. ನಾಯ್ಕ ವಹಿಸಲಿದ್ದಾರೆ ಎಂದರು. ನಿಕಟಪೂರ್ವ ಸಮ್ಮೇಳನದ ಸರ್ವಾಧ್ಯಕ್ಷೆ ಸುಕ್ರಿ ಬೊಮ್ಮ ಗೌಡ ಧ್ವಜ ಹಸ್ತಾಂತರ ಮಾಡಲಿದ್ದಾರೆ. ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. ರಾಷ್ಟ್ರಧ್ವಜವನ್ನು ತಹಶೀಲ್ದಾರ್‌ ಶ್ರೀದೇವಿ ಭಟ್‌ ಮಾಡಲಿದ್ದು, ಮೆರವಣಿಗೆಗೆ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತ ರಾಜು ಚಾಲನೆ ನೀಡಲಿದ್ದಾರೆ. ವಿಚಾರ ಸಂಕಿರಣದಲ್ಲಿ ಡಾ| ಶಿವಾನಂದ ನಾಯಕ ಅವರು ಬಹುಸಂಸ್ಕೃತಿಯ ಕಾರವಾರ ವಿಷಯದ ಕುರಿತು ವಿಷಯ ಮಂಡಿಸಲಿದ್ದಾರೆ. ಪತ್ರಕರ್ತ ಎಂ.ಎಸ್‌. ಸದಾಶಿವ ಸಮೂಹ ಮಾಧ್ಯಮಗಳಲ್ಲಿ ಕನ್ನಡದ ಸ್ಥಾನ ಕುರಿತು ವಿಷಯ ಮಂಡಿಸಲಿದ್ದಾರೆ.

ಕವಿಗೋಷ್ಠಿಯಲ್ಲಿ ಕಾರವಾರದ ಕವಿಗಳಾದ ಕೃಷ್ಣಾನಂದ ಬಾಂದೇಕರ್‌, ಜೆ.ಡಿ. ಪಾಲೇಕರ್‌, ನಿವೇದಿತಾ ಕೋಳಂಬಕರ್‌, ಶೈಲಾ ಸಾಳುಂಕೆ, ಸಂಧ್ಯಾ ಕದಂ, ದೇವಿದಾಸ ನಾಯ್ಕ ಭಾಗವಹಿಸಲಿದ್ದಾರೆ. ಕವಿಗಳಾದ ರೇಣುಕಾ ರಮಾನಂದ, ಶ್ರೀದೇವಿ ಕೆರೆಮನೆ, ಗಂಗಾಧರ ಕೊಡ್ಲಿ, ಮಾಣೇಶ್ವರ ನಾಯಕ ಸಹ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕವಯತ್ರಿ ಪ್ರೇಮಾ ಟಿಎಂಆರ್‌ ವಹಿಸಲಿದ್ದು, ಅಕ್ಷತಾ ಕೃಷ್ಣಮೂರ್ತಿ ಆಶಯ ಭಾಷಣ ಮಾಡಲಿದ್ದಾರೆ.

ಸನ್ಮಾನ: ಸರ್ಕಾರಿ ನೌಕರ ಸಿದ್ಧಲಿಂಗಯ್ಯ ಹಿರೇಮಠ, ಶಿಕ್ಷಕಿ ಯಮುನಾ ಪಟಗಾರ, ನಾಟಕಕಾರ ಕೃಷ್ಣಾನಂದ ನಾಯ್ಕ, ಪೌರಕಾರ್ಮಿಕ ನಾಗೇಶ್‌, ಸಮಾಜ ಸೇವಕ ಅರವಿಂದ ನಾಯ್ಕರನ್ನು ಸನ್ಮಾನಿಸಲಾಗುವುದು. 

ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಅರುಣಕುಮಾರ್‌ ಹಬ್ಬು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು. ಹಿರಿಯರಾದ ಗಣಪತಿ ಉಳ್ವೇಕರ್‌, ಪರಿಷತ್‌ ಸದಸ್ಯರಾದ ಗಜಾನನ ಆಳ್ವಾ, ನಜೀರ್‌ ಶೇಖ್‌, ವಿನಾಯಕ ಗಂಗೊಳ್ಳಿ, ಖೈರುನ್ನೀಸಾ ಶೇಖ್‌, ಮಚ್ಚೇಂದ್ರ ಮಹಾಲೆ, ದೀಪಕ್‌ಕುಮಾರ್‌ ಶೆಣ್ವೆ, ಅಲ್ತಾಫ್‌ ಶೇಖ್‌, ಇಬ್ರಾಹಿಂ ಕಲ್ಲೂರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ದೀಪಕ್‌ ಕುಮಾರ್‌ ಶೆಣ್ವೆ  ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಕಡತೋಕ ಮಂಜು ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ