ಬೈತಖೋಲ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ 

Team Udayavani, Sep 8, 2018, 5:18 PM IST

ಕಾರವಾರ: ಇಲ್ಲಿನ ಬೈತಖೋಲದಲ್ಲಿ ಗುಡ್ಡದ ಮೇಲೆ ಪ್ರತಿ ದಿನ ಬೆಳಗ್ಗೆ ಅಥವಾ ಸಂಜೆ ಚಿರತೆಯೊಂದು ಕುಳಿತುಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ಈ ದೃಶ್ಯವನ್ನು ಇಲ್ಲಿಯ ಜನ ಕಳೆದ 20 ದಿನಗಳಿಂದ ನೋಡುತ್ತಿದ್ದಾರೆ. ಆದರೆ ಇದು ಜನರಿಗೆ ಯಾವುದೇ ತೊಂದರೆ ನೀಡಿಲ್ಲ ಎಂದು ಅಲ್ಲಿನ ನಿವಾಸಿ ಶಾಮಲಾ ಗೌಡ ತಿಳಿಸಿದರು.

ಚಿರತೆ ಗುಡ್ಡದ ಮೇಲೆ ಕುಳಿತುಕೊಳ್ಳುವ ಚಿತ್ರವನ್ನು ಜನ ಸೆರೆ ಹಿಡಿದಿದ್ದಾರೆ. ಬೈತಖೋಲ ಸಮೀಪದ ಭೂದೇವಿ ದೇವಸ್ಥಾನದ ಸುತ್ತ ಬಂದು ಹೋಗುವ ಚಿರತೆ ಒಂದು ನಾಯಿ ಮತ್ತು ಬೆಕ್ಕನ್ನು ಮಾತ್ರ ಬೇಟೆಯಾಡಿದೆ. ಜನರಿಗೆ ಯಾವುದೇ ತೊಂದರೆ ನೀಡಿಲ್ಲ. ಬೈತಖೋಲ ಜನವಸತಿ ಪ್ರದೇಶದ ಸಮೀಪ ಅರಣ್ಯವಿದ್ದು, 600 ಮೀ. ಸಮೀಪದಲ್ಲಿ ದೊಡ್ಡ ಬಂಡೆಗಲ್ಲು ಇದೆ. ಈ ಬಂಡೆಗಲ್ಲಿನ ಮೇಲೆ ಚಿರತೆ ಬಂದು ಕುಳಿತುಕೊಳ್ಳುತ್ತಿದೆ. ಚಿರತೆ ಮರಿ ಹಾಕಿದೆ. ಅದು ಮರಿಗಳನ್ನು ಬಂಡೆಯ ಗುಹೆಯಲ್ಲಿ ಇಟ್ಟಿದೆ ಎಂದು ಬೈತಖೋಲದ ಹಿರಿಯ ನಿವಾಸಿ ಪರುಶುರಾಂ ಗೌಡ ಹೇಳಿದರು.

ದಿನವೂ ಬೆಳಗ್ಗೆ ಮತ್ತು ಸಂಜೆ ಸೂರ್ಯನ ಬಿಸಿಲಿಗೆ ಬರುವ ಚಿರತೆ ಬೈತಖೋಲದ ಜನರಿಗೆ ಕಾಣುವ ಮೂಲಕ ಸಂತೋಷ ನೀಡುತ್ತಿದೆ. ಅರಣ್ಯಾಧಿಕಾರಿಗಳ ಭೇಟಿ: ಚಿರತೆ ಬಂದಿರುವುದನ್ನು ತಿಳಿದ ಅರಣ್ಯಾಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಚಿರತೆ ಹಿಡಿಯುವುದು ಬೇಡ. ಅದು ನಮಗೆ ಏನೂ ನೀಡಿಲ್ಲ ಎಂದು ಅಲ್ಲಿಯ ಜನ ಹೇಳಿದರು. ಹೀಗಾಗಿ ಅರಣ್ಯಾಧಿಕಾರಿಗಳು ಚಿರತೆ ಹಿಡಿದಿಲ್ಲ.

ಚಿರತೆ ಅರಣ್ಯ ಪರಿಸರದಲ್ಲಿ ಆರಾಮಾಗಿದೆ. ಆಹಾರದ ಕೊರತೆ ಸಹ ಇಲ್ಲ. ಹಾಗಾಗಿ ಜನರು ಸಹನೆಯಿಂದ ಚಿರತೆಯನ್ನು ವೀಕ್ಷಿಸುತ್ತಿದ್ದಾರೆ. ಚಿರತೆ ಕಂಡಾಗ ಬೊಬ್ಬೆ ಹಾಕುವುದು ಮತ್ತು ಗದ್ದಲ ಎಬ್ಬಿಸುವುದು ಮಾಡಬಾರದು. ಕಾಡುಪ್ರಾಣಿಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಟ್ಟರೆ ಅವು ಮನುಷ್ಯರಿಗೆ ತೊಂದರೆ ಮಾಡುವುದಿಲ್ಲ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯಪಟ್ಟರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ