ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಚಿತ್ತ ಹರಿಸಿ: ಹೆಗಡೆ

Team Udayavani, Jul 8, 2019, 4:05 PM IST

ಭಟ್ಕಳ: ಕಡವಿನಕಟ್ಟೆ ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಂಕಿಯ ವೈದ್ಯ ಡಾ| ಗಣಪತಿ ಸಭಾಹಿತ ಮಾತನಾಡಿದರು.

ಭಟ್ಕಳ: ಶರಾವತಿ ನದಿ ದಂಡೆಯ ಈ ಭಾಗದ ವಿದ್ಯಾರ್ಥಿಗಳು ಅತ್ಯಂತ ಬುದ್ಧಿವಂತರಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್‌, ಕೆಎಎಸ್‌ಗಳತ್ತ ಚಿತ್ತ ಹರಿಸಬೇಕು ಎಂದು ಜಿಪಂ ಹೊನ್ನಾವರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ವಿ. ಹೆಗಡೆ ಕರೆ ನೀಡಿದರು.

ತಾಲೂಕು ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘವು ಕಡವಿನಕಟ್ಟೆ ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಕಿಯ ಖ್ಯಾತ ವೈದ್ಯ ಡಾ| ಗಣಪತಿ ಸಭಾಹಿತ ಮಾತನಾಡಿ, ತಂದೆ-ತಾಯಿಯರಾಗಿ ಮಕ್ಕಳನ್ನು ಬೆಳೆಸುವ ಕೆಲಸ ಜೀವನದಲ್ಲಿ ಅತ್ಯಂತ ಕಷ್ಟದ ಕೆಲಸವಾಗಿದೆ. ಮಕ್ಕಳ ಭವಿಷ್ಯವನ್ನು ಅವರ ಹದಿಹರೆಯದಲ್ಲಿ ನಿರ್ಣಯಿಸುವುದು ಅತ್ಯಂತ ಕಠಿಣವಾದ ಕೆಲಸ. ಅಂತಹ ವಯಸ್ಸಿನಲ್ಲಿ ಮಕ್ಕಳ ಮನಸ್ಥಿತಿ ಅರಿತು ಅವರ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಳ್ಳುವಂತೆ ಮಾಡಬೇಕು. ನಮ್ಮ ಶಿಕ್ಷಣ ಪದ್ಧತಿಯು ಬದಲಾಗಬೇಕು. ವಿದೇಶದಲ್ಲಿ ವಿದ್ಯಾರ್ಥಿಗಳಿಗೆ ಇರುವ ವಿಷಯದ ಆಯ್ಕೆಯು ನಮ್ಮಲ್ಲಿ ಇಲ್ಲವಾಗಿದೆ. ಇದರಿಂದ ಅನೇಕ ವಿದ್ಯಾರ್ಥಿಗಳು ಒಲ್ಲದ ವಿಷಯವನ್ನು ಅಭ್ಯಾಸ ಮಾಡುವ ಅನಿವಾರ್ಯತೆ ಬರುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಶಂಭು ಎನ್‌. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಅಶೋಕ ಎನ್‌. ಭಟ್ಟ ಮಾತನಾಡಿದರು. ಉಪಾಧ್ಯಕ್ಷೆ ಸುಧಾ ಭಟ್ಟ, ಕಡವಿನಕಟ್ಟೆ ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ಎನ್‌. ಭಟ್ಟ ಉಪಸ್ಥಿತರಿದ್ದರು.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಅಂಕಿತ್‌ ಗಣಪತಿ ಭಟ್ಟ, ನಿಶಾಂತ ಸಿ. ಭಟ್ಟ, ಜಯಶ್ರೀ ಪಿ.ಭಟ್ಟ, ಮೇಧಾ ಜಿ. ಹೆಗಡೆ, ಲಿಖೀತ ಎಂ. ದೀಕ್ಷಿತ್‌, ರಾಹುಲ್ ಕೆ. ಯಾಜಿ ಅವರನ್ನು ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಸಾಧನೆ ಮಾಡಿದ ಕಾವ್ಯ ಎಂ. ಹೆಗಡೆ, ಪ್ರತಿಮಾ ಪಿ. ಭಟ್ಟ, ನಂದಕಿಶೋರ, ಪ್ರಸಾದಕುಮಾರ, ವಿ. ಅನ್ವಿತಾ, ಚಿಂತನಾ ಎನ್‌. ಯಾಜಿ, ಶ್ರೇಯಾ ಹೆಬ್ಟಾರ್‌, ವಿಭಾ ಟಿ. ರಾವ್‌, ಸಚಿನ್‌ ಎಂ. ಹೆಗಡೆ, ಶರತ್‌ ಎಸ್‌. ಉಪಾಧ್ಯಾಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಿವೃತ್ತ ನೌಕರರಾದ ಜಿ.ಕೆ. ಹೆಗಡೆ, ಅಂಭಾಭವಾನಿ, ವರ್ಗಾವಣೆಗೊಂಡ ಕುಂಟವಾಣಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್‌.ಎಂ. ಹೆಗಡೆ ಅವರನ್ನು, ರಾಜ್ಯ ಸರಕಾರಿ ನೌಕರರ ಪ್ರತಿನಿಧಿಗಳಾಗಿ ಆಯ್ಕೆಯಾದ ಜಿ.ಆರ್‌. ಭಟ್ಟ, ಗಣಪತಿ ಎ. ಭಟ್ಟ, ಗಣೇಶ ಹೆಗಡೆ, ವಿದ್ಯಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಭಟ್ಕಳ ಅರ್ಬನ್‌ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಬಡ್ತಿ ಹೊಂದಿದ ಶಂಭು ಎನ್‌. ಹೆಗಡೆ, ರಾಜ್ಯ ಸರಕಾರಿ ನೌಕರರ ಸಂಘದ ಪ್ರತಿನಿಧಿಯಾಗಿ ಆಯ್ಕೆಯಾದ ಅಶೋಕ ಎನ್‌. ಭಟ್ಟ ಅವರನ್ನು ಗೌರವಿಸಲಾಯಿತು.ಶಿಕ್ಷಕಿ ಸೀತಾ ಭಟ್ಟ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಐ.ವಿ. ಹೆಗಡೆ ನಿರೂಪಿಸಿದರು. ಗಣೇಶ ಯಾಜಿ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ