ಸರ್ಕಾರಿ ಆಸ್ಪತ್ರೇಲಿ ವೈದ್ಯರೇ ಇಲ್ಲ
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲರೋಗಿಗಳ ಅಸಮಾಧಾನ
Team Udayavani, Feb 12, 2021, 3:40 PM IST
ಮುಂಡಗೋಡ: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಇದ್ದರೂ ವೈದ್ಯರ ಕೊರತೆ ಕಾಡುತ್ತಿದೆ. ಇದರಿಂದ ಬಡರೋಗಿಗಳು ಬಹಳ ತೊಂದರೆ ಅನುಭವಿಸುವಂತಾಗಿದೆ.
ಈ ಹಿಂದೆ 30 ಬೆಡ್ ಆಸ್ಪತ್ರೆ ಇದ್ದಾಗ ಹಲವು ಸವಲತ್ತುಗಳ ಕೊರತೆಯನ್ನು ಎದುರಿಸುತ್ತಿದ್ದ ಸರ್ಕಾರಿ ಆಸ್ಪತ್ರೆಗೆ ಇದೀಗ ಸಾಕಷ್ಟು ಸೌಲಭ್ಯಗಳು ಬಂದಿದೆ. 100 ಬೆಡ್ ಆಸ್ಪತ್ರೆಯಾಗಿ ಪರಿವರ್ತನೆಯಾದ ನಂತರವಂತೂ ಮಾದರಿ ಆಸ್ಪತ್ರೆಯಾಗಿದೆ. ನಿತ್ಯ ನೂರಾರು ಬಡ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ರೀತಿ ಶಸ್ತ್ರಚಿಕಿತ್ಸೆ, ಲ್ಯಾಬ್ ಇತರೆ ತುರ್ತು ಸೇವೆಗಳು ಸಿಗುತ್ತಿವೆ ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಅಸಮಾಧಾನ ಬಡರೋಗಿಗಳಲ್ಲಿದೆ.
ಈ ಆಸ್ಪತ್ರೆಯಲ್ಲಿ 11 ವೈದ್ಯರ ಹುದ್ದೆಯಲ್ಲಿ ಕೇವಲ 3 ವೈದ್ಯರು ಮಾತ್ರ ರೋಗಿಗಳಿಗೆ ಸೇವೆ ನೀಡುತ್ತಿದ್ದಾರೆ. ಕೋವಿಡ್‌ನಿಂದ ಜನರು ಕೆಲ ತಿಂಗಳಿನಿಂದ ತಾಲೂಕು ಆಸ್ಪತ್ರೆಯತ್ತ ಮುಖ ಮಾಡಿರಲಿಲ್ಲ. ಈಗ ಕೋವಿಡ್‌ನ ಭಯ ಹೋದ ನಂತರ ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ವೈದ್ಯರ ಕೊರತೆಯಿಂದ ರೋಗಿಗಳಿಗೆ ಅನಾನುಕೂಲವಾಗುತ್ತಿದೆ. ಆದರೆ ಸದ್ಯ ಲಭ್ಯವಿರುವ ವೈದ್ಯರೇ ಆ ಕೊರತೆಯನ್ನು ನೀಗಿಸಿ ಸೇವೆ ನೀಡುತ್ತಿದ್ದಾರೆ. ಸದ್ಯ 100 ಬೆಡ್‌ಗೆ ಅಗತ್ಯವಿರುವಷ್ಟು ಸಿಬ್ಬಂದಿ ಇದ್ದು, ಮುಖ್ಯವಾಗಿ ಜನರಲ್ ಸರ್ಜನ್, ಸ್ತ್ರೀರೋಗ ತಜ್ಞರು ಬೇಕಾಗಿದ್ದಾರೆ. ಮುಖ್ಯವಾಗಿ ಗ್ರಾಮೀಣ ಭಾಗದ ಬಡ ಕೂಲಿಕಾರರು, ಆರ್ಥಿಕ ಸಂಕಷ್ಟದಲ್ಲಿದ್ದವರು, ಹೃದಯ ರೋಗಿಗಳು, ಮಹಿಳಾ ರೋಗಿಗಳು, ಡಯಾಬಿಟಿಸ್, ಕಿವಿ, ಕಣ್ಣು, ಮೂಗಿನ ಸಮಸ್ಯೆ, ಅಪಘಾತ ಇನ್ನಿತರೇ ಸಮಸ್ಯೆಯಿಂದ ಸಾಕಷ್ಟು ಜನರು ಬರುತ್ತಿದ್ದಾರೆ.
ಈ ವೇಳೆ ತಜ್ಞರಿಲ್ಲದೇ ಸರಿಯಾದ ಚಿಕಿತ್ಸೆ ಮತ್ತು ಸಮಯಕ್ಕೆ ಸರಿಯಾದ ಸೇವೆ ನೀಡಲು ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಅ ಧಿಕಾರಿಗಳು ಇತ್ತ ಗಮನಹರಿಸಿ ವೈದ್ಯರ ಕೊರತೆ ನೀಗಿಸಬೇಕಿದೆ.