ಗ್ರಂಥಾಲಯದಲ್ಲೂ ಕುಡಿಯಲು ನೀರಿಲ್ಲ!

Team Udayavani, Apr 20, 2019, 5:28 PM IST

ಯಲ್ಲಾಪುರ: ಇಲ್ಲಿಯ ಸಾರ್ವಜನಿಕ ಗ್ರಂಥಾಲಯ ಎಲ್ಲ ಮೂಲ ಸೌಲಭ್ಯಗಳನ್ನು ಹೊಂದಿದ್ದರೂ ಓದುಗರಿಗೆ ಅಗತ್ಯವಾದ ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದೆ. ಇದನ್ನು ನೀಡಲು ಪಪಂ ಮೀನ ಮೇಷ ಎಣಿಸುತ್ತಿದೆ ಎನ್ನಲಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿ ಸಾರ್ವಜನಿಕ ಗ್ರಂಥಾಲಯ ಅಕ್ಷರ ಪ್ರೇಮಿಗಳಿಗೆ ಓದಿನ ದಾಹ ತೀರಿಸುತ್ತಿದೆ. ಸುಮಾರು 31 ಸಾವಿರಕ್ಕೂ ಮಿಕ್ಕಿರುವ ಪುಸ್ತಕ ಸಂಗ್ರಹದ ಶಾಖಾ ಗ್ರಂಥಾಲಯದಲ್ಲಿ 1200ಕ್ಕೂ ಮಿಕ್ಕಿ ಓದುಗರು ತಮ್ಮ ಸದಸ್ಯತ್ವ ನೋಂದಾಯಿಸಿಕೊಂಡಿದ್ದಾರೆ. ನಿತ್ಯ ನೂರಾರು ಓದುಗರು ನಿಯತಕಾಲಿಕೆ, ಪುಸ್ತಕಗಳನ್ನು ಓದಲು ಇಲ್ಲಿಗೆ ಭೇಟಿ ಕೊಡುತ್ತಾರೆ. ಗ್ರಂಥಾಲಯದ ಒಳಾಂಗಣದಲ್ಲಿ ಆರಾಮದಾಯಕವಾಗಿ ಓದುಗರು ಓದುವ ಸೌಲಭ್ಯ ಹೊಂದಿದೆ.

ಇವರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಅಲ್ಲದೇ ಬೇರೆ ಬೇರೆ ಕ್ಷೇತ್ರದಲ್ಲಿ ಸೇವೆ ನೀಡುವ ಗಣ್ಯರೂ ಬರುತ್ತಾರೆ.

ನವೀಕೃತ ಶಾಖಾ ಗ್ರಂಥಾಲಯದ ಹೊಸಕಟ್ಟಡದಲ್ಲಿ ಉತ್ತಮ ಗಾಳಿ ಬೆಳಕು, ಕುಳಿತುಕೊಳ್ಳಲು ಆಸನಗಳು, ಪುಸ್ತಕಗಳ ವ್ಯವಸ್ಥಿತ ಜೋಡಣೆ, ಮಾಹಿತಿ ನೀಡುವ ಸಿಬ್ಬಂದಿ ಎಲ್ಲವೂ ಇದೆ. ಆದರೆ ಈ ಶಾಖಾ ಗ್ರಂಥಾಲಯವು ಪಪಂ ಪಕ್ಕದಲ್ಲಿಯೇ ಇದ್ದರೂ ಓದುಗರಿಗೆ ಅತ್ಯಗತ್ಯ ಕುಡಿಯುವ ನೀರು ಮತ್ತು ಶೌಚಾಲಯ ಬಳಕೆಗೆ ಅವಶ್ಯವಾದ ನೀರಿನ ಸಂಪರ್ಕ ನೀಡದೇ ಸತಾಯಿಸುತ್ತಿದೆ. ಮೂರು ತಿಂಗಳ ಹಿಂದೆಯೇ ಜನೆವರಿಯಲ್ಲಿಯೇ ಶಾಖಾ ಗ್ರಂಥಾಲಯದಿಂದ ನೀರಿನ ಸಂಪರ್ಕಕ್ಕಾಗಿ ಪಪಂಗೆ ವಿವಿಧ ಶಿರ್ಷಿಕೆಯಡಿ ಅಗತ್ಯ ಸೌಲಭ್ಯಕ್ಕಾಗಿ ಹಣವನ್ನು ಬ್ಯಾಂಕ್‌ ಚಲನ್‌ ಮೂಲಕ ಪಾವತಿಸಲಾಗಿದ್ದು ತಕ್ಷಣ ನೀರಿನ ಸೌಲಭ್ಯ ಒದಗಿಸುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಸೌಲಭ್ಯ ನೀಡದೇ ಓದುಗರಿಗೆ ಕಿರಿಕಿರಿ ಉಂಟುಮಾಡುವಂತಾಗಿದೆ. ಪಪಂ ಅಧಿಕಾರಿಗಳು ಗ್ರಂಥಾಲಯದ ಬಗೆಗೆ ಉದಾಸೀನ ತೋರಿಸುತ್ತಿರುವುದು ಅಕ್ಷರ ಪ್ರೇಮಿಗಳಿಗೆ ಬೇಸರ ತರಿಸಿದೆ. ಅಲ್ಲದೇ ಪಪಂ ಕಾರ್ಯವೈಖರಿ ಇದರಲ್ಲಿಯೇ ಅರ್ಥವಾಗುತ್ತಿದ್ದು ಅದರ ಬೇಜವಾಬ್ದಾರಿ ಪ್ರದರ್ಶನವಾಗಿದೆ.

ಪ್ರತಿನಿತ್ಯ ಈ ಗ್ರಂಥಾಲಯಕ್ಕೆ ಬಂದು ನಿಯತಕಾಲಿಕೆಗಳನ್ನು ಓದುವ ನನಗೆ ದಿನದ ಬಹುಮುಖ್ಯ ವೇಳೆಯ ಸದುಪಯೋಗವಾಗುತ್ತಿದೆ. ಆದರೆ ಇಲ್ಲಿ ನೀರಿನ ಸಮಸ್ಯೆ ಬಹುದಿನಗಳಿಂದ ಕಾಡಿದ್ದು, ಅಗತ್ಯ ಶೌಚಾಲಯದ ಅನುಕೂಲಕ್ಕೆ ತೊಂದರೆ ಉಂಟಾಗುತ್ತಿದೆ.
• ನಾರಾಯಣ,ಹಿರಿಯ ನಾಗರಿಕ ಉದ್ಯಮನಗರ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ