ಸಂಸ್ಕಾರ ರಹಿತ ಸಮ್ಮಿಶ್ರ ಸರಕಾರ

•ಕನಿಷ್ಠ 100 ಪ್ರಸಂಗ ವೆಬ್‌ಸೈಟ್‌ಗೆ•100 ಯಕ್ಷಗಾನ ತರಬೇತಿ ಕೇಂದ್ರಕ್ಕೆ ಸಹಕಾರ

Team Udayavani, May 28, 2019, 7:22 AM IST

ಸಿದ್ದಾಪುರ: ನಾವಿಂದು ಸಂಕೀರ್ಣ ಕಾಲಖಂಡದಲ್ಲಿದ್ದೇವೆ. ಈಗಿನ ಕಾಲ ಕಲೆ, ಸಂಸ್ಕೃತಿಗೆ ಆತಂಕಕಾರಿ. ರಾಜ್ಯವನ್ನು ಆಳುತ್ತಿರುವ ಸಮ್ಮಿಶ್ರ ಸರಕಾರ ಸಂಸ್ಕಾರ ಹೀನವಾಗಿದೆ, ಸಂಸ್ಕಾರ ವಿರೋಧಿಯಾಗಿದೆ ಎಂದು ವಿಷಾದ ಪೂರ್ಣವಾಗಿ ಹೇಳಬೇಕಾಗಿದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ದಂಟ್ಕಲ್ ನುಡಿದರು.

ಅವರು ಕಲಾರಾಮದ ಪ್ರಸ್ತುತಿಯಲ್ಲಿ ಮಹಾಗಣಪತಿ ಯಕ್ಷಗಾನ ಮಂಡಳಿ ಹಣಜೀಬೈಲ್ ಅವರ ಸಂಘಟನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಭಾನ್ಕುಳಿ ರಾಮದೇವಮಠ ಆವಾರದ ಗೋಸ್ವರ್ಗದ ಗೋಪದ ವೇದಿಕೆಯಲ್ಲಿ ಯಕ್ಷೋತ್ಸವ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುತ್ತಿದ್ದ ಅನುದಾನವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಕಳೆದ ವರ್ಷದ ಧನ ಸಹಾಯದಲ್ಲಿ 13 ಕೋಟಿ ರೂ.ಸರಕಾರದ ಬಳಿಯೇ ಉಳಿದುಕೊಂಡಿದೆ. ಮಾರ್ಚ್‌ 31ರ ಒಳಗೆ ಬಿಡುಗಡೆ ಮಾಡಬೇಕಾಗಿದ್ದ ಹಣವನ್ನು ಚುನಾವಣಾ ನೀತಿ ಸಂಹಿತೆ ಎಂದು ಬಿಡುಗಡೆ ಮಾಡಿಲ್ಲ. ಸಂಘಟಕರು ಹಣ ಬರುತ್ತದೋ ಇಲ್ಲವೋ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರು ಹಾಕುತ್ತಿದ್ದಾರೆ. ಹಣ ಬಂದರೆ ಅವರ ಪುಣ್ಯ ಎಂದರು.

ಸಂಸ್ಕೃತಿ ಸಚಿವರು ಸಹಿ ಹಾಕದೇ ಕಾಲ ಕಳೆಯುತ್ತಿದ್ದಾರೆ. ಸಿಬ್ಬಂದಿ ಸಂಬಳ ಹೆಚ್ಚಿಸಿಕೊಳ್ಳಲಾಗಿದೆ. ಅಧಿಕಾರಿ ವರ್ಗ ಸಹ ತನ್ನ ಹಿಡಿತ ಬಿಡುತ್ತಿಲ್ಲ. ವರ್ಷದಲ್ಲಿ 32-33 ಜಯಂತಿಗಳನ್ನು ಆಚರಿಸುತ್ತಾರೆ. ಅವಕ್ಕೆ ಹತ್ತತ್ತು ಲಕ್ಷ ರೂ.ಖರ್ಚು ಹಾಕುತ್ತಾರೆ. ಜಯಂತಿ ಇಲ್ಲದ ದಿನವಿಲ್ಲ ಎನ್ನುವಂತಾಗಿದೆ. ಮನುಷ್ಯರು ಇಂತಹ ಜಯಂತಿಗೆ ಬರುತ್ತಿಲ್ಲ. ಉತ್ಸವ ಜಯಂತಿ ಎಂದು ಮಿಕ್ಕಿ ಸಿಕ್ಕಿದ ಹಣದಲ್ಲಿ ಯಾವ ಸಾಧನೆಯನ್ನೂ ಮಾಡಲಾಗುತ್ತಿಲ್ಲ. ಇಂತಹ ಸಂದಿಗ್ಧದಲ್ಲಿ ಅಕಾಡೆಮಿ ಅಧ್ಯಕ್ಷನಾಗಿ ಮುಂದುವರಿಯಬೇಕೋ ಬೇಡವೋ ಎಂಬ ಚಿಂತನೆಗೆ ಒಳಗಾಗಿದ್ದೇನೆ ಎಂದರು.

ಯಕ್ಷಗಾನದಲ್ಲಿಂದು 5 ಸಾವಿರಕ್ಕೂ ಮೀರಿ ಪ್ರಸಂಗಗಳಿವೆ. ಹಳೇ ಪ್ರಸಂಗಗಳು ಕೈಬರಹ, ತಾಳೆಗರಿಗಳಲ್ಲಿವೆ. ಅವುಗಳು ಪ್ರಕಟಣೆಗೆ ಸಿಗುತ್ತಿಲ್ಲ, ಪ್ರಕಟಿಸಿದರೂ ಖರೀದಿಸುವವರಿಲ್ಲ. ಈ ಹಿನ್ನೆಲೆಯಲ್ಲಿ ಯಕ್ಷಗಾನಗಳನ್ನು ಡಿಜಿಟಲ್ ಮಾಡಿ ವೆಬ್‌ಸೈಟ್‌ಗೆ ಹಾಕುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ವರ್ಷ 200 ಪ್ರಸಂಗಗಳನ್ನು ವೆಬ್‌ಸೈಟ್‌ಗೆ ಹಾಕಲಿದ್ದೇವೆ. ವರ್ಷಕ್ಕೆ ಕನಿಷ್ಠ 100 ಪ್ರಸಂಗಗಳನ್ನಾದರೂ ವೆಬ್‌ಸೈಟ್‌ಗೆ ಹಾಕುವ ಕಾರ್ಯ ಮಾಡಲಿದ್ದೇವೆ. 100 ಯಕ್ಷಗಾನ ತರಬೇತಿ ಕೇಂದ್ರಗಳಿಗೆ ಸಹಕಾರ ನೀಡುತ್ತಿದ್ದೇವೆ. ಯಕ್ಷಸಿರಿ ಪ್ರಶಸ್ತಿಯನ್ನು 5 ರಿಂದ 10 ಕ್ಕೆ ಹೆಚ್ಚಿಸಲಾಗಿದೆ. ಕಲೆ ಕುರಿತು ಯಾವುದೇ ಯೋಜನೆ ಕೈಗೆತ್ತಿಕೊಂಡರೂ ಕನ್ನಡ ಭವನದಿಂದ ವಿಧಾನ ಸೌಧಕ್ಕೆ ಹೋಗಲು 3 ತಿಂಗಳಿಂದ 6 ತಿಂಗಳು ಹಿಡಿಯುತ್ತದೆ. ತಿರುಗಿ ಬರುವಾಗಲೂ ಒಂದೊಂದೇ ಟೇಬಲ್ ದಾಟಿಸಿಕೊಂಡು ಬರುವ ಪರಿಸ್ಥಿತಿಯಿದೆ. ಇಂತಹ ಸಂದಿಗ್ಧದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡುತ್ತಿದ್ದೇವೆ. ಮಾಡಿದ್ದೇ ದೊಡ್ಡದು ಎಂದು ಹೇಳಿಕೊಂಡು ಓಡಾಡಬೇಕಾಗಿದೆ. ಯಕ್ಷಗಾನ ಕಲೆಯು ಸರಕಾರದ ಅನುದಾನದಿಂದ ಬೆಳೆದಿದ್ದಲ್ಲ. ಸಂಸ್ಕೃತಿಯ ಆಧಾರಸ್ಥಂಭವಾಗಿರುವ ಈ ಕಲೆಯನ್ನು ಕಲಾವಿದರು ಉಳಿಸಿಕೊಂಡು ಹೋಗುತ್ತಾರೆ ಎಂದು ಪ್ರಸ್ತುತ ಪರಿಸ್ಥಿತಿಯನ್ನು ಅವರು ಬಿಡಿಸಿಟ್ಟರು.

ಮುಖ್ಯ ಅತಿಥಿಗಳಾಗಿ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ, ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಗೋಸ್ವರ್ಗ ಸಂಸ್ಥಾನ ಹಾಗೂ ಕರ್ನಾಟಕ ಅರೇಕಾ ಚೇಂಬರ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಆರ್‌.ಎಸ್‌. ಹೆಗಡೆ ಹರಗಿ ವಹಿಸಿದ್ದರು. ಗುಂಡೂ ಸೀತಾರಾಮರಾವ್‌ ವಿರಚಿತ ಕಂಸ ದಿಗ್ವಿಜಯ – ಕಂಸವಧೆ ಯಕ್ಷಗಾನ ನಡೆಯಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಾಧವ ಭಟ್ಟ ಕೊಳಗಿ, ಮಂಜುನಾಥ ಗುಡ್ಡೆದಿಂಬ,ಗಣೇಶ ಭಟ್ಟ ಕೆರೆಕೈ, ಪಾತ್ರಧಾರಿಗಳಾಗಿ ಅಶೋಕ ಭಟ್ಟ ಸಿದ್ದಾಪುರ, ಶಂಕರ ಹೆಗಡೆ ನೀಲ್ಕೋಡು, ಪ್ರಭಾಕರ ಹೆಗಡೆ ಹಣಜೀಬೈಲ್, ಶ್ರೀಧರ ಹೆಗಡೆ ಚಪ್ಪರಮನೆ, ಸದಾನಂದ ಹೆಗಡೆ, ಮಹಾಬಲೇಶ್ವರ ಭಟ್ಟ ಇಟಗಿ, ಗಣಪತಿ ಗುಂಜಗೋಡು, ರಾಮಕೃಷ್ಣ ಹೆಗಡೆ, ಅವಿನಾಶ ಕೊಪ್ಪ, ಪ್ರಕಾಶ ಹೆಗಡೆ, ಪ್ರಸನ್ನ, ಪ್ರವೀಣ, ಪ್ರದೀಪ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ