ಕೈಗಾ 5-6ನೇ ಘಟಕ ಸ್ಥಾಪನೆಗೆ ವಿರೋಧ

Team Udayavani, Nov 18, 2019, 3:06 PM IST

ಕಾರವಾರ: ದೇಶದ ನೆಲ, ಜಲ, ವಾಯು, ಆಕಾಶ, ಪ್ರಕೃತಿ ಸಂಪತ್ತನ್ನು ಉಳಿಸಬೇಕು. ಪ್ರಕೃತಿ ಸಂಪತ್ತು ವ್ಯಯ ಹಾಗೂ ನಷ್ಟವಾಗಬಾರದು. ಕೈಗಾ ಅಣುವಿದ್ಯುತ್‌ ಯೋಜನೆಗೆ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದೆವು. ಆದರೂ ಅದು ಸ್ಥಾಪನೆಯಾಯಿತು.

ಅಣುಸ್ಥಾವರದಿಂದ ಆಗುತ್ತಿರುವ ಪರಿಣಾಮ ನಾವು ಕಾಣುತ್ತಿದ್ದೇವೆ. ಈ ಯೋಜನೆ ವಿಸ್ತರಣೆಯಾಗದಂತೆ ಎಲ್ಲರೂ ಸೇರಿ ಹೋರಾಟ ಮಾಡಬೇಕು. ಅದಕ್ಕೆ ಈ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಪೇಜಾವರ ವಿಶ್ವೇಶ ತೀರ್ಥರು ಮನವಿ ಮಾಡಿದರು.

ಕೈಗಾ ಅಣು ವಿದ್ಯುತ್‌ ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ವಿರೋಧಿಸಿ ರವಿವಾರ ತಾಲೂಕಿನ ಮಲ್ಲಾಪುರ ಕಾಳಿಕಾದೇವಿ ಮೈದಾನ ಹಿಂದೂವಾಡಾ ಸಭಾಭವನದಲ್ಲಿ ಸಂಜೆ ನಡೆದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎರಡೂವರೆ ದಶಕಗಳ ಹಿಂದೆ ಕೈಗಾ ಅಣುವಿದ್ಯುತ್‌ ಘಟಕದ ಸ್ಥಾಪನೆಗೆ ಸರ್ಕಾರ ಸಿದ್ಧತೆ ಮಾಡಿದಾಗ ನಾನು ಕಾರವಾರಕ್ಕೆ ಬಂದು ಸ್ಥಳೀಯರೊಂದಿಗೆ ಸೇರಿ ಸತ್ಯಾಗ್ರಹ ಮಾಡಿದ್ದೆ. ಆಗ ಬಂಧಿಸಿ, ಬಿಡುಗಡೆ ಮಾಡಿದ್ದರು.

ಅಂಥ ಪ್ರಬಲ ವಿರೋಧದ ಮಧ್ಯೆಯೂ ಸರ್ಕಾರ ಕೈಗಾ ಅಣುಸ್ಥಾವರ ಆರಂಭಿಸಿ ಅಣುವಿದ್ಯುತ್‌ ಉತ್ಪಾದನೆ ಆರಂಭಿಸಿತು. ಈಗಲಾದರೂ ಜನರ ಭಾವನೆ ಅರ್ಥಮಾಡಿಕೊಂಡು ಈ ಯೋಜನೆ ವಿಸ್ತರಣೆ ಕೈಬಿಡಲಿ ಎಂದರು. ಸಭೆಯಲ್ಲಿ ಮಾತನಾಡಿದ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸ್ವಾಮೀಜಿ, ಭಗವಂತ ನಮಗೆ ಇಷ್ಟೆಲ್ಲ ಕೊಡುಗೆಯನ್ನು ಪ್ರಕೃತಿ ರೂಪದಲ್ಲಿ ನೀಡಿದ್ದಾನೆ.

ಅವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಆದರೆ ನಾವು ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಗೆ ಧಕ್ಕೆ ಮಾಡುತ್ತಲೇ ಇದ್ದೇವೆ. ವಿದ್ಯುತ್‌ ಉತ್ಪಾದನೆಗೆ ಅನ್ಯಮಾರ್ಗಗಳಿರುವಾಗ ಅಣುಸ್ಥಾವರದ ಅವಶ್ಯಕತೆ ಯಾಕೆ ಬಂತು? ಇದರ ವಿರುದ್ಧ ಹೋರಾಟಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.

ಕೈಗಾ ಅಣುಸ್ಥಾವರ 5-6 ಘಟಕ ವಿರೋಧಿ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಶಾಂತಾ ಬಾಂದೇಕರ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಣುಸ್ಥಾವರ ವಿಸ್ತರಣೆ ಬೇಡ. ಇದನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಮನಸ್ಸು ಮಾಡಿದರೆ ಎನ್‌ಪಿಸಿಎಲ್‌ನ ಅಣುಸ್ಥಾವರ ವಿಸ್ತರಣಾ ಘಟಕ ಸ್ಥಾಪನೆಗೆ ಬ್ರೇಕ್‌ ಹಾಕಬಹುದು ಎಂದರು.

ಸಮಾವೇಶದಲ್ಲಿ ಸೋಂದಾ ಸ್ವರ್ಣವಲ್ಲಿಯ ಜೈನ ಮಠದ ಭಟ್ಟಾಕಳಂಕ ಸ್ವಾಮೀಜಿ, ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿಗಳು ಹಾಗೂ ಪರಿಸರ ವಿಜ್ಞಾನಿಗಳು ಮತ್ತು ಸ್ಥಾವರ ವಿರೋಧಿಸುವ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ನಾಗರಿಕರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ