ಹೊರಗುತ್ತಿಗೆ ಸಿಬ್ಬಂದಿ ಪ್ರತಿಭಟನೆ

•7 ತಿಂಗಳಿಂದ ವೇತನವಿಲ್ಲ-ಎರಡು ತಿಂಗಳಿಂದ ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶ

Team Udayavani, Jun 19, 2019, 3:45 PM IST

ಹಳಿಯಾಳ: ಅನ್ಯಾಯಕ್ಕೊಳಗಾದ ಮಹಿಳಾ ಸಿಬ್ಬಂದಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಹಳಿಯಾಳ: 7 ತಿಂಗಳಿಂದ ವೇತನ ನೀಡದೆ ಸತಾಯಿಸಿದ್ದು ಅಲ್ಲದೇ ಕಳೆದ 2 ತಿಂಗಳಿಂದ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ತಾಲೂಕು ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಕೆಲಸದಿಂದ ವಂಚಿತರಾದ 9 ಮಹಿಳಾ ಸಿಬ್ಬಂದಿ ತಮ್ಮ ಕುಟುಂಬದವರೊಡನೆ ತಾಲೂಕು ಆಸ್ಪತ್ರೆ ಎದುರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ವೈದ್ಯಾಧಿಕಾರಿ ಡಾ| ರಮೇಶ ಕದಂ ಹಾಗೂ ಸಿಪಿಐ ಲೋಕಾಪುರ ಮನವೊಲಿಸಲು ಯತ್ನಿಸಿದಾಗ ಕೇಳದ ಪ್ರತಿಭಟನಾಕಾರರು ತಹಶೀಲ್ದಾರ್‌ ಸ್ಥಳಕ್ಕಾಗಮಿಸಬೇಕೆಂದು ಪಟ್ಟು ಹಿಡಿದರು.

ಹಳಿಯಾಳದ ಮಾತೆ ಸಾವಿತ್ರಿಬಾಯಿ ಪುಲೆ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ಶಾಂತಾ ಅನಂತಸೇನ ಕುಲಕರ್ಣಿ, ಸಿಐಟಿಯು ಜಿಲ್ಲಾ ಪ್ರಮುಖ ಹರೀಶ ನಾಯ್ಕ, ಜೀಜಾಮಾತಾ ಕ್ಷತ್ರೀಯ ಮರಾಠಾ ಮಹಿಳಾ ಸಂಘಟನೆ ಅಧ್ಯಕ್ಷೆ ಮಂಗಲಾ ಕಶೀಲಕರ, ದಲಿತ ಸಂಘಟನೆಯ ಭರಮೋಜಿ ವಡ್ಡರ, ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ಅಧ್ಯಕ್ಷ ವಿಬಿ ರಾಮಚಂದ್ರ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಸೇರಿದಂತೆ ಮೊದಲಾದವರಿಗೆ ಮನವಿ ಸಲ್ಲಿಸಿದ್ದು ಮಂಗಳವಾರ ನಡೆದ ಪ್ರತಿಭಟನೆಗೆ ಈ ಎಲ್ಲ ಸಂಘಟನೆಗಳವರು ಬೆಂಬಲ ವ್ಯಕ್ತಪಡಿಸಿದ್ದು ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.

ನಂತರ ಪತ್ರಿಕಾ ಹೇಳಿಕೆ ನೀಡಿರುವ ಪ್ರತಿಭಟನಾಕಾರರು ಕಳೆದ 10-15 ವರ್ಷಗಳಿಂದ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ ತಾಲೂಕು ಆಸ್ಪತ್ರೆ ಗುತ್ತಿಗೆದಾರರಾದ ಚೆನ್ನಬಸಪ್ಪಾ ಗುಳನ್ನವರ ಮತ್ತು ದಿಲೀಪ ನಾಯ್ಕ ತಮಗೆ 7 ತಿಂಗಳ ಸಂಬಳ ನೀಡಿಲ್ಲ ಮಾತ್ರವಲ್ಲದೇ ಕೆಲಸದಿಂದಲೇ ತೆಗೆದು ಹಾಕಿದ್ದಾರೆ. ತಮಗೆ ಪ್ರತಿ ತಿಂಗಳಿಗೆ 5285/- ವೇತನ ನೀಡುತ್ತಿದ್ದರು. ಇದರಲ್ಲಿ 7 ಜನರಿಗೆ ಪ್ರತಿಯೊಬ್ಬರಿಂದ 785 ರೂ. ಮತ್ತು 5 ಜನರಿಗೆ ಪ್ರತಿಯೊಬ್ಬರಿಂದ 1285/- ಸಂಬಳದ ಪಾಲು ಕೇಳುತ್ತಿದ್ದರು ಎಂದು ಆರೋಪಿಸಿರುವ ಅವರು, ಇದನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ ಸಂಬಳವನ್ನು ತಡೆಹಿಡಿದು ಕೆಲಸದಿಂದ ಕಿತ್ತು ಹಾಕಿದ್ದಾರೆಂದು ಆರೋಪಿಸಿದರು. ಅಲ್ಲದೇ ತಮಗೆ ಪಿಎಫ್‌ ಮಾಡದೆ ಇರುವುದರ ಬಗ್ಗೆ ನಾವು ಕಾರ್ಮಿಕರ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಿದ್ದನ್ನು ಈ ಗುತ್ತಿಗೆದಾರರು ಖಂಡಿಸಿ ತಮಗೆ ಸಾಕಷ್ಟು ಸಮಸ್ಯೆ ಮಾಡಿದ್ದಾರೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ವಿದ್ಯಾಧರ ಗುಳಗುಳಿ, ಪ್ರತಿಭಟನಾಕಾರರ ಅಳಲನ್ನು ಆಲಿಸಿ ಜೂ.21 ರಂದು ಹಳಿಯಾಳದಲ್ಲಿ ಈ ಕುರಿತು ಸಭೆ ನಡೆಸಿ ಡಿಎಚ್ಒ ಸಮಕ್ಷಮದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ನಯೋಮಿ ಮಾದರ, ಶಕುಂತಲಾ ಕಲ್ಲವಡ್ಡರ, ಶಾಂತವ್ವಾ ವಡ್ಡರ, ಲಕ್ಷ್ಮೀ ಪೂಜಾರಿ, ರಾಧಾ ಮಾದರ, ಮಾದೇವಿ ವಡ್ಡರ, ಮುಬಾರಕ ಅರ್ಲವಾಡ, ನಾಗವ್ವಾ ವಡ್ಡರ ಹಾಗೂ ಲಕ್ಷ್ಮೀ ವಡ್ಡರ ಸೇರಿದಂತೆ ಅವರ ಕುಟುಂಬದವರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ