ಸಿದ್ದಾಪುರ ಗ್ರಂಥಾಲಯಕ್ಕಿಲ್ಲ ಸ್ವಂತ ಕಟ್ಟಡ

Team Udayavani, Nov 2, 2019, 12:25 PM IST

ಸಿದ್ದಾಪುರ: ಅಪರೂಪದ ಹಳೆಯ ಪುಸ್ತಕಗಳು, ಕಾದಂಬರಿ, ಕಥಾಸಂಕಲನ, ಕಾವ್ಯ, ಪತ್ತೇದಾರಿ, ಮಹಾಭಾರತ, ರಾಮಾಯಣಗಳಂಥ ಧಾರ್ಮಿಕ ಗ್ರಂಥಗಳು, ಓಶೋ, ಅರವಿಂದ ಮುಂತಾದ ದಾರ್ಶನಿಕರ ಕೃತಿಗಳು, ಕಾನೂನು, ಸಾಮಾಜಿಕ, ರಾಜಕೀಯಕ್ಕೆ ಸಂಬಂಧಿಸಿದ ಆಕರ ಗ್ರಂಥಗಳು, ಮಕ್ಕಳಿಗೆ, ಮಹಿಳೆಯರಿಗೆ ಇಷ್ಟವಾಗುವ ಪುಸ್ತಕಗಳು.. ಹೀಗೇ ಅ.ನ.ಕೃ., ತರಾಸು, ಕಾರಂತ, ಕುವೆಂಪು ಮುಂತಾದ ಹಿರಿಯ ಲೇಖಕರ, ತ್ರಿವೇಣಿ, ಎಂ.ಕೆ. ಇಂದಿರಾ ಮುಂತಾದ ಮಹಿಳಾ ಲೇಖಕಿಯರ ಕಾದಂಬರಿಗಳಿಂದ ತೊಡಗಿ ಇತ್ತೀಚಿನ ಬರಹಗಾರರ ಪುಸ್ತಕಗಳು ಇಲ್ಲಿನ ಕೇಂದ್ರ ಗ್ರಂಥಾಲಯ ಶಾಖೆಯಲ್ಲಿ ಸಂಗ್ರಹವಿದೆ.

ಅತ್ಯುತ್ತಮ ಪುಸ್ತಕಗಳಿದ್ದರೂ, ಹೆಚ್ಚಿನ ಸಂಖ್ಯೆಯ ಓದುಗರಿದ್ದರೂ ಸಮರ್ಪಕ ಕಟ್ಟಡದ ಕೊರತೆ ಪಟ್ಟಣದ ಗ್ರಂಥಾಲಯದ ಶಾಖೆ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. 1980ರಲ್ಲಿ ಪಪಂನ ಒಂದು ಕೋಣೆಯಲ್ಲಿ ಶಾಖಾ ಗ್ರಂಥಾಲಯ ಆರಂಭಗೊಂಡಿತು. ಅಂದು ಸಾಮಾಜಿಕ ಧುರೀಣರಾಗಿದ್ದೂ ಸಾಹಿತ್ಯ, ಕಲೆ ಮುಂತಾದವುಗಳಲ್ಲಿ ಅಭಿಮಾನ ಇಟ್ಟುಕೊಂಡಿದ್ದ ಕೆಲವು ಹಿರಿಯರ ಆಸಕ್ತಿ, ಮುತುವರ್ಜಿ ಫಲವಾಗಿ ಗ್ರಂಥಾಲಯ ಆರಂಭಗೊಂಡು ಉತ್ತಮವಾಗಿಯೂ ನಡೆಯುತ್ತಿದ್ದುದನ್ನು, ವೇರ್ಣೆಕರ್‌ ಎನ್ನುವವರು ಈ ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದ ಬಗ್ಗೆ ಹಿರಿಯ ಓದುಗರು ಈಗಲೂ ನೆನಪಿಸಿಕೊಳ್ಳುತ್ತಾರೆ.

1997ರಲ್ಲಿ ಬಾಡಿಗೆ ಕಟ್ಟಡಕ್ಕೆ ಶಾಖಾ ಗ್ರಂಥಾಲಯ ಸ್ಥಳಾಂತರಗೊಂಡಿತು. ನಂತರ ಒಂದೆರಡು ಬಾಡಿಗೆ ಕಟ್ಟಡದಲ್ಲಿ ನಡೆದ ಗ್ರಂಥಾಲಯ ಕಳೆದ ಹಲವು ವರ್ಷಗಳಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಗೆ ಸೇರಿದ ಹಳೆಯ ಚಿಕ್ಕ ಕಟ್ಟಡದಲ್ಲಿ ನಡೆಯುತ್ತಿದೆ. ಈ ಶಾಖಾ ಗ್ರಂಥಾಲಯಕ್ಕೆ 1007 ಸದಸ್ಯರಿದ್ದು ಗ್ರಂಥಾಲಯ ಕಾರ್ಯನಿರ್ವಹಿಸುವ ದಿನಗಳಲ್ಲಿ ನಿತ್ಯ ಕಡಿಮೆಯೆಂದರೂ 60ಕ್ಕಿಂತ ಹೆಚ್ಚು ಓದುಗರು ಭೇಟಿ ನೀಡುತ್ತಾರೆ. ವಿವಿದ 15,857 ಪುಸ್ತಕಗಳಿದ್ದು ಈಗ ಹೊಸತಾಗಿ 3000 ಪುಸ್ತಕಗಳು ಲಭ್ಯವಾಗಿವೆ. ಪ್ರತಿನಿತ್ಯ 13 ದಿನಪತ್ರಿಕೆಗಳು, 7 ವಾರಪತ್ರಿಕೆಗಳು, 12 ಮಾಸಿಕಗಳು 12 ಉಚಿತ ಪತ್ರಿಕೆಗಳು ಲಭ್ಯವಿರುತ್ತದೆ.

ಈ ಗ್ರಂಥಾಲಯದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಲಭ್ಯವಿರುವದು ಒಂದು ವಿಶೇಷ. ಗ್ರಂಥಾಲಯದಲ್ಲಿ ಕಾಯಂ ನೇಮಕಾತಿ ಹೊಂದಿದ ಗ್ರಂಥಾಲಯ ಸಹಾಯಕಿ ಮಾತ್ರವಿದ್ದು ಇನ್ನೊಬ್ಬ ಸಹಾಯಕಿಯನ್ನು ಗೌರವಧನದ ಮೇಲೆ ನಿಯೋಜಿಸಲಾಗಿದೆ.

ಈ ಗ್ರಂಥಾಲಯದಡಿ 21 ಗ್ರಾಪಂಗಳಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದ್ದು ಸದ್ಯ 3 ಸ್ಥಗಿತಗೊಂಡಿವೆ. ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡ, ಪುಸ್ತಕಗಳನ್ನು ಜೋಪಾನವಾಗಿ ಇರಿಸಿಕೊಂಡ ಸಿಬ್ಬಂದಿಗಳಿದ್ದರೂ ಸಮರ್ಪಕ ಕಟ್ಟಡವಿಲ್ಲದಿರುವುದು ಸಮಸ್ಯೆ ತಂದೊಡ್ಡಿದೆ. ಹಳೆಯ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದ್ದು ಸದ್ಯ ಮೇಲ್ಭಾಗದಲ್ಲಿ ತಗಡುಗಳನ್ನು ಜೋಡಿಸಿದ ಕಾರಣ ಪುಸ್ತಕಗಳು ಸುರಕ್ಷಿತವಾಗಿವೆ.

ಆದರೂ ಹಳೆಯ ಬಾಗಿಲು, ಒದ್ದೆಯಾಗುವ ಗೋಡೆ ಆತಂಕ ತರುತ್ತಿವೆ. ಈ ಹಿಂದೆ ಕಾರ್ಯ ನಿರ್ವಹಿಸಿದ ಜಿಲ್ಲಾ ಗ್ರಂಥಾಲಯದ ಅಧಿಕಾರಿಗಳು ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಒದಗಿಸಲು ಸಾಕಷ್ಟು ಶ್ರಮಿಸಿದ್ದರೂ ಸೂಕ್ತ ಸ್ಥಳ ದೊರಕದ ಕಾರಣ ಪ್ರಯತ್ನ ಫಲ ನೀಡಿಲ್ಲ. ಈ ಬಗ್ಗೆ ಇಲ್ಲಿನ ಓದುಗರು, ಕೆಲವು ಸಾಹಿತ್ಯಾಸಕ್ತ ಅಧಿಕಾರಿಗಳು ಪ್ರಯತ್ನಪಟ್ಟಿದ್ದರೂ ಜನಪ್ರತಿನಿಧಿಗಳ ಅಸಡ್ಡೆಯಿಂದ ಅದು ಕಾರ್ಯರೂಪಕ್ಕೆ ಬಂದಿಲ್ಲ. ವೇದಿಕೆಯ ಮೇಲೆ ಗ್ರಂಥಾಲಯವೇ ದೇವಾಲಯ, ಊರಿಗೊಂದು ಗ್ರಂಥಾಲಯ ಬೇಕು ಎಂದೆಲ್ಲ ಭಾಷಣ ಬಿಗಿಯುವ ಜನಪ್ರತಿನಿಧಿಗಳ ಬಳಿ ಗ್ರಂಥಾಲಯ ಕಟ್ಟಡಕ್ಕೆ ನಿವೇಶನ ಒದಗಿಸುವ ಬೇಡಿಕೆ ಇಟ್ಟಿದ್ದರೂ ಅವರಿಂದ ಕವಡೆ ಕಿಮ್ಮತ್ತಿನ ಪ್ರಯೋಜನವಾಗಿಲ್ಲದಿರುವುದು ಓದುಗರ ದುರಂತ.ಈಗಿರುವ ಚಿಕ್ಕದಾದ 4 ಚಿಕ್ಕ ಕೋಣೆಗಳಲ್ಲೇ ಪುಸ್ತಕ ಸಂಗ್ರಹ, ಓದುಗರ ಚಾವಡಿ, ಸಿಬ್ಬಂದಿ ಕಚೇರಿ ಕಾರ್ಯ ನಿರ್ವಹಿಸಬೇಕಿದೆ. ಇಂಥ ಹಲವು ಕೊರತೆ, ಸಮಸ್ಯೆಗಳ ನಡುವೆಯೂ ಇಲ್ಲಿನ ಸಿಬ್ಬಂದಿ ಗ್ರಂಥಾಲಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಪುಸ್ತಕ, ನಿಯತಕಾಲಿಕಗಳನ್ನು ಸಮರ್ಪಕವಾಗಿ ಇಟ್ಟುಕೊಂಡಿದ್ದರ ಜೊತೆಗೆ ಓದುಗರೊಂದಿಗೂ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಒಂದು ಮಾದರಿ ಗ್ರಂಥಾಲಯವಾಗಿರುವ ಇಲ್ಲಿನ ಗ್ರಂಥಾಲಯಕ್ಕೆ ಸಮರ್ಪಕ ಕಟ್ಟಡದ್ದೇ ಕೊರತೆ.

ಇಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಓದುಗರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಅಲ್ಲದೇ ಈಗಾಗಲೇ 16 ಸಾವಿರದ ಹತ್ತಿರ ಪುಸ್ತಕಗಳಿದ್ದು, ಈಗ ಮತ್ತೆ 3 ಸಾವಿರ ಪುಸ್ತಕ ಬಂದಿದೆ. ಅವನ್ನು ಇರಿಸಿಕೊಳ್ಳುವುದು ಕಷ್ಟವಾಗಿದೆ. ಮಹಿಳೆ ಮತ್ತು ಮಕ್ಕಳಿಗೆ ಪ್ರತ್ಯೇಕ ಓದುವ ಸ್ಥಳ ಒದಗಿಸಬೇಕೆಂದು ಯೋಚನೆ ಇದ್ದರೂ ಸಾಧ್ಯವಾಗುತ್ತಿಲ್ಲ. ಶಿಥಿಲವಾದ ಕಟ್ಟಡ, ಹಳೆಯ ಬಾಗಿಲುಗಳು ರಕ್ಷಣೆಯ ಕಾರಣಕ್ಕೆ ಆತಂಕ ಹುಟ್ಟಿಸಿದೆ. ಇಲ್ಲಿನ ಓದುಗರ ಸ್ಪಂದನೆ ಉತ್ತಮವಾಗಿದೆ. ಮೇಲಾಧಿಕಾರಿಗಳ ಸಹಕಾರವೂ ಕಾಲಕಾಲಕ್ಕೆ ದೊರಕುತ್ತಿದೆ.ಶೋಭಾ ಜಿ., ಶಾಖಾ ಗ್ರಂಥಾಲಯ ಸಹಾಯಕಿ

 

-ಗಂಗಾಧರ ಕೊಳಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ