ಸೌಲಭ್ಯ ಪಡೆದು ಜೀವನ ಸಾಗಿಸಿ

Team Udayavani, May 21, 2019, 4:24 PM IST

ಶಿರಸಿ: ಕರ್ನಾಟಕದಲ್ಲಿ ನೆಲೆಸಿರುವ ವಿವಿಧ ಸಮುದಾಯಗಳ ಕೊಂಕಣಿ ಭಾಷಿಕರು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ನೀಡುತ್ತಿರುವ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ನಿರ್ದೇಶಕ ಗುರುದತ್ತ ಬಂಟವಾಳಕರ ಹೇಳಿದರು.

ಅವರು ನಗರದ ಮಹಾವಿಷ್ಣು ದೇವಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿಶ್ವ ಕೊಂಕಣಿ ಕೇಂದ್ರವು ಕೊಂಕಣಿ ಭಾಷಿಕರಿಗೆ ನೀಡುವ‌ ಅನೇಕ ಸೌಲಭ್ಯಗಳಲ್ಲಿ 2010ರಿಂದ ಪ್ರಾರಂಭಿಸಲಾದ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಫಂಡ್‌ ಅತ್ಯಂತ ಮಹತ್ವದ್ದಾಗಿದ್ದು ವಿದ್ಯಾರ್ಥಿಗಳಿಗೆ ಉಚ್ಚಶಿಕ್ಷಣ ಪಡೆಯಲು ತುಂಬ ಸಹಕಾರಿಯಾಗಿದೆ. ಹಿರಿಯ ಮುತ್ಸದ್ದಿ ಹಾಗೂ ಸಾಂಸ್ಥಿಕ ಮುಂದಾಳು ಟಿ.ವಿ. ಮೋಹನದಾಸ ಪೈ ಅವರ ಕನಸಿನ ಕೂಸಾಗಿ ಬೆಳೆದು ಬಂದ ಈ ನಿಧಿ ವತಿಯಿಂದ ಇಂಜಿನಿಯರಿಂಗ್‌ ಪದವಿ ಪಡೆಯಬಯಸುವ ವಿದ್ಯಾರ್ಥಿಗೆ ಮೊದಲ ವರ್ಷದಿಂದ ಅವರು ಪದವಿ ಪಡೆಯುವವರೆಗೆ ಪ್ರತಿವರ್ಷ 30 ಸಾವಿರ ರೂ. ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುವವರಿಗೆ ಪ್ರತಿವರ್ಷ 40 ಸಾವಿರ ರೂ. ಶಿಷ್ಯವೇತನ ನೀಡಲಾಗುತ್ತಿದೆ. ಎಸ್‌.ಎಸ್‌.ಎಲ್.ಸಿ ಯಲ್ಲಿ ಶೇ.70 ಮಾರ್ಕ್ಸ್ ಪಡೆದು ಸಿಇಟಿಯಲ್ಲಿ 2000 ರ್‍ಯಾಂಕ್‌ ಒಳಗೆ ಆಯ್ಕೆಯಾಗಿದ್ದು ಪಾಲಕರ ಉತ್ಪನ್ನ ವಾರ್ಷಿಕ 4.5 ಲಕ್ಷದ ಒಳಗೆ ಇದ್ದವರು ಈ ಶಿಷ್ಯವೇತನ ಪಡೆಯಲು ಅರ್ಹರಾಗುತ್ತಾರೆ ಎಂದರು.

ಜೂ.10 ರಿಂದ ಪ್ರಾರಂಭವಾಗುವ ಅರ್ಜಿ ಸಲ್ಲಿಕೆಯು ಜು.10 ರಂದು ಮುಕ್ತಾಯವಾಗುತ್ತಿದ್ದು ಆ ಅವಧಿಯಲ್ಲಿ ಕೇಂದ್ರದ ವೆಬ್‌ಸೈಟ್‌ನಲ್ಲಿ ಆನ್‌ಲೈನ ಮೂಲಕವೇ ಅರ್ಜಿ ಸಲ್ಲಿಸಬೇಕು. ಆರ್ಥಿಕ ಸಮಸ್ಯೆಯಿಂದಾಗಿ ಯಾವುದೇ ಕೊಂಕಣಿ ವಿದ್ಯಾರ್ಥಿಯು ಉಚ್ಚ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ಈ ಯೋಜನೆಯ ಧ್ಯೇಯವಾಕ್ಯವಾಗಿದೆ. ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ವಾರ್ಷಿಕ ಒಂದು ಲಕ್ಷ ಹಾಗೂ ಭಾರತದಲ್ಲಿ ಉನ್ನತ ವ್ಯಾಸಂಗಕ್ಕೆ ಅವರವರ ಅವಶ್ಯಕತೆಗೆ ತಕ್ಕಂತೆ ಶಿಷ್ಯವೇತನ ಕೂಡ ನೀಡಲಾಗುತ್ತದೆ ಎಂದರು.

ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಫಂಡ್‌ನ‌ ನಿರ್ವಾಹಕ ಸಹನಾ ಕಿಣಿ, ಈ ವಿದ್ಯಾರ್ಥಿವೇತನ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣ ಮುಗಿಸಿ ಉತ್ತಮ ಕೆಲಸ ದೊರೆತು ಆದಾಯಗಳಿಸಲು ಪ್ರಾರಂಭಿಸಿದ ನಂತರ ಮುಂದಿನ ಇಬ್ಬರು ವಿದ್ಯಾರ್ಥಿಗಳ ಶಿಕ್ಷಣ ವೆಚ್ಚ ಭರಿಸುವ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ತೆಗೆದುಕೊಳ್ಳಬೇಕು ಎಂದರು. ಈ ಹಿಂದೆ ಈ ಸೌಲಭ್ಯ ಪಡೆದು ಕೆಲಸ ಸಂಪಾದಿಸಿರುವ ಲಕ್ಷ್ಮೀಶ ಕೆರೆಮನೆ, ವಿಕ್ರಮ ಶಾನಭಾಗ, ಜೀವನದಾಸ ಪೈ ಮುಂತಾದವರು ತಮ್ಮ ಅನುಭವ ಹಂಚಿಕೊಂಡರು. ವಿಶ್ವ ಕೊಂಕಣಿ ಕೇಂದ್ರದ ಈ ಪ್ರಯತ್ನವನ್ನು ಶ್ಲಾಘಿಸಿ ಮಾತನಾಡಿದ ಜಿಎಸ್‌ಬಿ ಸೇವಾವಾಹಿನಿಯ ರಾಮು ಕಿಣಿ, ಕೊಂಕಣಿ ಭಾಷಿಕರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಿರುವ ವಿಶ್ವ ಕೊಂಕಣಿ ಕೇಂದ್ರವು ಕೊಂಕಣಿ ಮಾತೃಭಾಷೆಯ ಜನರಿಗೆ ತವರು ಮನೆ ಇದ್ದಂತೆ. ಅವರ ಆರ್ಥಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಆರೋಗ್ಯ, ಶಿಕ್ಷಣ, ಕಲೆ, ಸಂಸ್ಕೃತಿ ಎಲ್ಲ ಕ್ಷೇತ್ರಗಳಲ್ಲೂ ಸಹಾಯ ಹಸ್ತ ನೀಡುತ್ತಿದೆ ಎಂದರು.

ಜಿಎಸ್‌ಬಿ ಸೇವಾವಾಹಿನಿ ಅಧ್ಯಕ್ಷ ವಾಸುದೇವ ಶಾನಭಾಗರು ಸ್ವಾಗತಿಸಿದರು. ಪಾಂಡುರಂಗ ಪೈ, ಪ್ರಕಾಶ ನೇತ್ರಾವಳಿ, ನಾಗರಾಜ ಕಾಮತ್‌, ದತ್ತಾತ್ರಯ ಪ್ರಭು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ