ವಡವಡಗಿ ಗ್ರಾಪಂನಲ್ಲಿ ಜಾಬ್‌ ಕಾರ್ಡ್‌ ಕೇಳಿದರೆ ಬೆದರಿಕೆ!

ನರೇಗಾ ಬಂದು ದಶಕ ಕಳೆದರೂ ಕಾರ್ಮಿಕರಿಲ್ಲ ಜಾಬ್‌ ಕಾರ್ಡ್‌ ಖಾಸಗಿ ವ್ಯಕ್ತಿಗಳಲ್ಲಿವೆ ನೋಂದಾಯಿತ ಜಾಬ್‌ ಕಾರ್ಡ್‌

Team Udayavani, May 15, 2019, 10:57 AM IST

ವಿಜಯಪುರ: ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೂರು ಹಳ್ಳಿಗಳಲ್ಲಿ ನೈಜ ಕಾರ್ಮಿಕರು ಕೂಲಿ ಕೆಲಸಕ್ಕಾಗಿ ಜಾಬ್‌ ಕಾರ್ಡ್‌ ಕೇಳುವಂತಿಲ್ಲ, ಪಡೆದರೂ ಕೂಲಿ ಕೆಲಸ ಕೇಳುವಂತಿಲ್ಲ. ಒಂದೊಮ್ಮೆ ಜಾಬ್‌ ಕಾರ್ಡ್‌ ಹಾಗೂ ನರೇಗಾ ಯೋಜನೆಯಲ್ಲಿ ಕೆಲಸ ಕೇಳಿದರೆ ಬೆದರಿಕೆ ನೀಡಲಾಗುತ್ತದೆ. ಇಂಥದ್ದೊಂದು ಆರೋಪ ವಿಜಯಪುರ ಜಿಲ್ಲೆಯಲ್ಲಿ ಕೇಳಿ ಬಂದಿದೆ.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ಪ್ರತಿನಿಧಿಸುವ ಬಸವನಬಾಗೇವಾಡಿ ತಾಲೂಕು ವ್ಯಾಪ್ತಿಯ ಹಾಗೂ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಪ್ರತಿನಿಧಿಸುತ್ತಿರುವ ದೇವರಹಿಪ್ಪರಗಿ ಕ್ಷೇತ್ರದಲ್ಲಿರುವ ವಡವಡಗಿ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಮಿಕರಿಂದ ಕೇಳಿ ಬರುತ್ತಿರುವ ದೂರಿದು. ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ವಡವಡಗಿ, ನಾಗರಾಳ ಹಾಗೂ ಹುಲುಬೆಂಚಿ ಗ್ರಾಮಗಳ ನೂರಾರು ಕಾರ್ಮಿಕರಿಗೆ ನರೇಗಾ ಯೋಜನೆ ಜಾರಿಯಾಗಿ ದಶಕಗಳೇ ಕಳೆದರೂ ಜಾಬ್‌ ಕಾರ್ಡ್‌ ನೀಡಲಾಗಿಲ್ಲ.

ವಡವಡಗಿ ಗ್ರಾಪಂ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ನರೇಗಾ ಯೋಜನೆಯಲ್ಲಿ ಖರ್ಚಾಗುತ್ತಿದೆ. ಆದರೂ ಈ ಪಂಚಾಯತ್‌ ವ್ಯಾಪ್ತಿಯ ಮೂರು ಗ್ರಾಮಗಳ ಬಹುತೇಕರಿಗೆ ನಿಜವಾಗಿ ದುಡಿಯುವ ಕಾರ್ಮಿಕರಿಗೆ ಜಾಬ್‌ ಕಾರ್ಡ್‌ ಇಲ್ಲ. ನರೇಗಾ ಯೋಜನೆಯಲ್ಲಿ ಸ್ಥಳೀಯ ರಾಜಕೀಯ, ಮಧ್ಯವರ್ತಿಗಳ ಹಾವಳಿ ಹಾಗೂ ಪರಿಶ್ರಮದಿಂದ ದುಡಿದರೂ ಕೂಲಿಗಾಗಿ ಅಲೆಯುವ ದುಸ್ಥಿತಿಯೇ ಬೇಡ ಎಂದು ನೂರಾರು ಕಾರ್ಮಿಕರು ಜಾಬ್‌ ಕಾರ್ಡ್‌ ಮಾಡಿಸಲು ಮುಂದಾಗಿಲ್ಲ.

ಗ್ರಾಮೀಣ ದುಡಿಯುವ ಕೈಗಳು ಕೂಲಿ ಅರಸಿ ನಗರಕ್ಕೆ ಗುಳೇ ಹೋಗಿ ಆಲೆಯುವುದನ್ನು ತಪ್ಪಿಸಲೆಂದೇ ಉದ್ಯೋಗಕ್ಕೆ ಖಾತ್ರಿ ನೀಡಲು ನರೇಗಾ ಯೋಜನೆಯ ಕಾಯ್ದೆ ಜಾರಿಯಾಗಿ ದಶಕಗಳೇ ಕಳೆದಿವೆ. ಮತ್ತೂಂದೆಡೆ ವಿಜಯಪುರ ಜಿಲ್ಲೆ ಪ್ರಸಕ್ತ ಹಂತದಲ್ಲಿ ನರೇಗಾ ಯೋಜನೆಯಲ್ಲಿ ಮಾನವ ದಿನಗಳು ಹಾಗೂ ಅನುದಾನ ಬಳಕೆ ಸೇರಿದಂತೆ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ರ್‍ಯಾಂಕಿಂಗ್‌ನ ಹಿರಿಮೆ ಹೊಂದಿದೆ. ಇಷ್ಟಿದ್ದರೂ ಜಿಲ್ಲೆಯ ಹಲವು ಗ್ರಾಪಂಗಳಲ್ಲಿ ನರೇಗಾ ಯೋಜನೆಯ ದುರವಸ್ಥೆ ರಾಚುವಂತಾಗಿದೆ. ಇಂಥ ದುಸ್ಥಿತಿಯಲ್ಲೇ ಮೇಲಧಿಕಾರಿಗಳು ಕೆಳ ಹಂತದ ಆಧಿಕಾರಿಗಳು ನೀಡುವ ಸುಳ್ಳು ವರದಿಯನ್ನೇ ದಾಖಲಿಸಿ ಆತ್ಯುತ್ತಮ ಪ್ರಗತಿ ಹಾಗೂ ಸಾಧನೆ ಎಂದು ಬಿಂಬಿಸುತ್ತಿರುವುದು ಅನುಮಾನ ಮೂಡುತ್ತಿದೆ.

ಕಾರ್ಡ್‌ ಇದ್ದರೂ ಬಹುತೇಕ ಕಾರ್ಮಿಕರ ಕಾರ್ಡುಗಳು ನರೇಗಾ ಯೋಜನೆಯಲ್ಲಿ ಅಕ್ರಮವಾಗಿ ಜೆಸಿಬಿ ಮೂಲಕ ಕೆಲಸ ಮಾಡುವ ಗುತ್ತಿಗೆದಾರರು, ಗ್ರಾಪಂ ಸದಸ್ಯರ ಬಳಿಯೇ ಇರುತ್ತವೆ. ಕಾರ್ಮಿಕರ ಹೆಸರಿನಲ್ಲಿ ಯಂತ್ರದ ಮೂಲಕ ಕೆಲಸ ಮಾಡಿಸಿ, ಬ್ಯಾಂಕ್‌ ಮೂಲಕ ಕಾರ್ಮಿಕರ ಖಾತೆಗೆ ಹಣ ಜಮೆ ಮಾಡಿಸಲಾಗುತ್ತದೆ. ನಂತರ ಬ್ಯಾಂಕ್‌ನಲ್ಲಿ ಕಾರ್ಡ್‌ದಾರ ಕಾರ್ಮಿಕರಿಂದ ಸಹಿ ಮಾಡುತ್ತಲೇ ಜಾಬ್‌ ಕಾರ್ಡ್‌ ಕೊಟ್ಟಿರುವ ಕಾರ್ಮಿಕರಿಗೆ ಕಮೀಷನ್‌ ಕೊಟ್ಟು, ಯೋಜನೆ ಹಣವನ್ನು ಗುತ್ತಿಗೆದಾರರು ಹಾಗೂ ಗ್ರಾಪಂ ನರೇಗಾ ಮಧ್ಯವರ್ತಿಗಳು ಹಂಚಿಕೊಳ್ಳುತ್ತಾರೆ.

ಇನ್ನು ಈ ದುರವಸ್ಥೆ ಪ್ರಶ್ನಿಸಿದರೆ ಕಾರ್ಮಿಕರಿಗೆ ಗ್ರಾಮದಲ್ಲಿ ಬೆದರಿಕೆ ಹಾಗೂ ಕಿರುಕುಳ ನೀಡಲು ಆರಂಭಿಸುತ್ತಾರೆ. ನರೇಗಾ ಮಧ್ಯವರ್ತಿಗಳು, ಇಂಥ ಕೃತ್ಯದಲ್ಲಿ ಭಾಗಿಯಾಗಿರುವ ಗ್ರಾಪಂ ಪ್ರಭಾವಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿ ನಮ್ಮನ್ನೇ ಪ್ರಶ್ನಿಸುತ್ತಿಯಾ ಎಂದು ಬೆದರಿಕೆ ಹಾಕಿಸಲಾಗುತ್ತದೆ. ಇಂಥ ಕೆಲಸಕ್ಕಾಗಿಯೇ ಕೆಲವು ಮದ್ಯವ್ಯಸನಿಗಳನ್ನು ಹಿಂಬಾಲಕರನ್ನಾಗಿ ಮಾಡಿಕೊಂಡಿದ್ದಾರೆ. ಇಂಥವರ ಮೂಲಕ ನರೇಗಾದಲ್ಲಿ ಕೆಲಸ ಕೇಳುವ ಹಾಗೂ ಜಾಬ್‌ ಕಾರ್ಡ್‌ ಮಾಡಿಸಲು ಮುಂದಾಗುವ ನೈಜ ಕಾರ್ಮಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತದೆ. ಹೀಗಾಗಿ ಮುಜುಗುರಕ್ಕೀಡಾಗುವ ದುರವಸ್ಥೆಯೇ ಬೇಡ ಎಂದು ನೈಜವಾಗಿ ದುಡಿಯುವ ಕಾರ್ಮಿಕರು ಜಾಬ್‌ ಕಾರ್ಡ್‌ ಮಾಡಿಸುವ ಗೋಜಿಗೆ ಹೋಗಿಲ್ಲ.

ಬದಲಾಗಿ ಎಷ್ಟೇ ಕಷ್ಟವಾದರೂ ತಾಲೂಕ ಬಸವನಬಾಗೇವಾಡಿ ಇಲ್ಲವೇ ಜಿಲ್ಲಾ ಕೇಂದ್ರ ವಿಜಯಪುರ ನಗರಕ್ಕೆ ಬಸ್‌ ಚಾರ್ಜ್‌ ಮಾಡಿಕೊಂಡು ಕೂಲಿ ಕೆಲಸಕ್ಕೆ ಬರುತ್ತಾರೆ. ಬಸ್‌ ಚಾರ್ಜ್‌ ಹಾಗೂ ತಮ್ಮ ಖರ್ಚು ಕಳೆದರೂ ಕಿರಿ ಕಿರಿ ಇಲ್ಲದೇ ಪರಿಶ್ರಮಕ್ಕೆ ತಕ್ಕಂತೆ ಕನಿಷ್ಠ 200 ರೂ. ಉಳಿಯುವ ಕಾರಣ ಬಹುತೇಕ ಕಾರ್ಮಿಕರು ನರೇಗಾ ಹೆಸರು ನೋಂದಣಿ ಹಾಗೂ ಕೆಲಸ ಕೊಡಿ ಎಂಬ ಸಹವಾಸಕ್ಕೆ ಹೋಗಿಲ್ಲ.

ನಮ್ಮ ಗ್ರಾಪಂ ದುಡಿಯುವ ಕಾರ್ಮಿಕರಿಗೆ ನರೇಗಾದಲ್ಲಿ ಉದ್ಯೋಗವನ್ನೇ ಕೊಡುವುದಿಲ್ಲ. ನಿತ್ಯವೂ ಕೂಲಿ ಮಾಡುವ ನೂರಾರು ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಹೆಸರನ್ನೇ ನೋಂದಾಯಿಸಿ, ಜಾಬ್‌ ಕಾರ್ಡ್‌ ನೀಡಿಲ್ಲ. ಇದನ್ನು ಪ್ರಶ್ನಿಸಿದರೆ ರಾಜಕೀಯ ಪ್ರಭಾವ ಬಳಸಿ ಬೆದರಿಸುವ ಕೆಲಸ ಮಾಡಲಾಗುತ್ತದೆ. ಹೀಗಾಗಿ ನಾವು ಬಸ್‌ಚಾರ್ಜ್‌ ವೆಚ್ಚವಾದರೂ ನಗರ ಪ್ರದೇಶಕ್ಕೆ ದುಡಿಯಲು ಬರುತ್ತೇವೆ.
ಶ್ರೀಶೈಲ ಮನಹಳ್ಳಿ,
ನಗರಕ್ಕೆ ಕೂಲಿಗೆ ಬರುವ ಕಾರ್ಮಿಕ, ಸಾ| ವಡವಡಗಿ

ನರೇಗಾ ಯೋಜನೆಯ ಅಯಾ ನೋಂದಾಯಿತ ಕಾರ್ಮಿಕರ ಬಳಿಯೇ ಜಾಬ್‌ ಕಾರ್ಡ್‌ ಇರಬೇಕು. ಕೂಲಿ ಕೇಳಿದ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಕೆಲಸ ಕಲ್ಪಿಸಬೇಕು. ನಿಯಮ ಬಾಹೀರವಾಗಿ ಯಾವುದೇ ರೀತಿಯಲ್ಲಿ ಅನ್ಯರು ಜಾಬ್‌ ಕಾರ್ಡ್‌ ಇರಿಸಿಕೊಳ್ಳುವ ಹಾಗೂ ಹಣದ ಅಕ್ರಮಕ್ಕೆ ಅವಕಾಶ ನೀಡಬಾರದು. ಇಂಥ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರಿಗಿಸಲಾಗುತ್ತದೆ.
ವಿಕಾಸ ಸುರಳಕರ, ಜಿಪಂ ಸಿಇಒ

ಗ್ರಾಪಂ ಸದಸ್ಯರು ಸೇರಿದಂತೆ ಅನ್ಯರ ಬಳಿ ನರೇಗಾ ಜಾಬ್‌ ಕಾರ್ಡ್‌ ಇರುವುದು, ಜಾಬ್‌ ಕಾರ್ಡ್‌ ಕೇಳಿದರೆ ಬೆದರಿಕೆ ಹಾಕಿರುವುದು ನನ್ನ ಗಮನಕ್ಕೆ
ಬಂದಿಲ್ಲ. ಎರಡು ವಾರದ ಹಿಂದಷ್ಟೇ ವರ್ಗಾವಣೆಗೊಂಡಿರುವ ನಾನು ನನ್ನ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಕೆಲಸ ಕೊಡಿಸಲು ಯೋಜನೆ ರೂಪಿಸುತ್ತೇನೆ.
ರಾಘವೇಂದ್ರ ಪಂಚಾಳ
ವಡವಡಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ

ಜಿ.ಎಸ್‌. ಕಮತರ


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್‌.ಪುರದ ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ...

  • ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ...

  • ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲೂ ಪಕ್ಷ ಇಟ್ಟುಕೊಂಡಿದ್ದ ಗುರಿ ತಲುಪಲು ಶ್ರಮಿಸಿದ...

  • ಬೆಂಗಳೂರು: ಚುನಾವಣೆ ಫ‌ಲಿತಾಂಶ ಹೊರ ಬಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರ ಹಿಡಿದಿದೆ. ಈ ಸಂದರ್ಭದಲ್ಲಿ ದೇಶ, ರಾಜ್ಯ ಹಾಗೂ ನನ್ನ ಕ್ಷೇತ್ರದ...

  • ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವಷ್ಟರಲ್ಲಿ ಪೂರ್ಣಗೊಳಿಸುವಂತೆ ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ...

ಹೊಸ ಸೇರ್ಪಡೆ