ತಂಪು ಬಾಟಲಿ ನೀರಿನ ಹೆಸರಲ್ಲಿ ಸುಲಿಗೆ ದಂಧೆ

Team Udayavani, May 16, 2019, 10:08 AM IST

ವಾಡಿ: ಜಲ ಕ್ರಾಂತಿಯ ಕಾಲವೇ ಬೇಸಿಗೆಯಾದರೆ, ಜನರ ಬಾಯಾರಿಕೆಯೇ ಬಾಟಲಿ ನೀರಿನ ಕಂಪನಿಗಳಿಗೆ ಬಂಡವಾಳ. ಅಂತರ್ಜಲ ಬತ್ತಿದ್ದರಿಂದ ಉಂಟಾದ ನೀರಿನ ಬವಣೆ ಸಂದರ್ಭವನ್ನೇ ಬಳಸಿಕೊಳ್ಳುತ್ತಿರುವ ನೀರು ಮಾರಾಟಗಾರರು, ದುಪ್ಪಟ್ಟು ದರ ವಸೂಲಿ ಮಾಡುವ ಮೂಲಕ ಗ್ರಾಹಕರ ಸುಲುಗೆಗೆ ನಿಂತಿದ್ದಾರೆ.

ಕಾಲ ಬದಲಾಗುವುದನ್ನೇ ಕಾಯುತ್ತ ಕುಳಿತಿದ್ದ ನೀರು ದಂಧೆಕೋರರು, ಶುದ್ಧ ಮಿನಿರಲ್ ವಾಟರ್‌ ಹೆಸರಿನಲ್ಲಿ ಬಾಟಲಿಗೆ ನೀರು ತುಂಬಿ ಪಟ್ಟಣದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಫೆಬ್ರುವರಿ, ಮಾರ್ಚ್‌, ಏಪ್ರಿಲ್ ಹಾಗೂ ಮೇ ತಿಂಗಳು ಪುರ್ತಿ ಮಾರುಕಟ್ಟೆಯಲ್ಲಿ ಅಸಲಿ ಕಂಪನಿಗಳ ಜತೆಗೆ ನಕಲಿ ನೀರಿನ ಕಂಪನಿಗಳ ನೀರು ಜನರ ಗಂಟಲಿಗೆ ಇಳಿದಿದೆ. 10ರೂ.ಗೆ (ಒಂದು ಲೀಟರ್‌) ಸಿಗುವ ಬಾಟಲಿ ನೀರು 20ರೂ.ಗೆ ಮತ್ತು 15ರೂ.ಗೆ ದೊರೆಯುವ ನೀರು 20ರೂ.ಗೆ ಮಾರಾಟವಾಗುತ್ತಿವೆ. ಎಳೆ ನೀರಿನ ಸ್ವಾದ ನೀಡುವ ಮಿನಿರಲ್ ವಾಟರ್‌ಗಳು ಒಂದೆಡೆಯಾದರೆ, ಗಟಾರದ ವಾಸನೆ ಬೀರುವ ನಕಲಿ ಕಂಪನಿಗಳ ಬಾಟಲಿಯ ಅಶುದ್ಧ ನೀರು ಮತ್ತೂಂದೆಡೆ. ಹೀಗೆ ಜನರ ಬಾಯಾರಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಸುಲಿಗೆ ಕಂಪನಿಗಳು, ರಾಜಾರೋಷವಾಗಿ ಗ್ರಾಹಕರಿಗೆ ಮೋಸ ಮಾಡುತ್ತಿವೆ.

ನಗರ ಮತ್ತು ಪಟ್ಟಣಗಳ ಬೇಕರಿಗಳಲ್ಲಿ, ಹೋಟೆಲ್, ಖಾನಾವಳಿಗಳಲ್ಲಿ ಮಾತ್ರ ಲಭ್ಯವಿರುತ್ತಿದ್ದ ತಂಪು ನೀರಿನ ಬಾಟಲಿಗಳು, ಈಗ ಕಿರಾಣಿ ಅಂಗಡಿ, ಮೊಬೈಲ್ ರಿಚಾರ್ಜ್‌ ಶಾಪ್‌, ಸೈಕಲ್ ಪಂಕ್ಚರ್‌ ಅಂಗಡಿ, ಗುಟುಕಾ, ಪಾನ್‌ ಬೀಡಾ ಅಂಗಡಿಗಳಲ್ಲೂ ಮಾರಾಟವಾಗುತ್ತಿವೆ. ನೀರಿನ ವ್ಯಾಪಾರವು ಹಲವರಿಗೆ ಸ್ವಯಂ ಉದ್ಯೋಗ ಒದಗಿಸಿ ಉಪಜೀವನಕ್ಕೆ ದಾರಿಯಾಗಿದ್ದು ಖುಷಿಯ ಸಮಾಚಾರವೇ ಸರಿ. ಆದರೆ, ಕಲುಷಿತ ನೀರು ಬಾಟಲಿಗೆ ಮತ್ತು ಪ್ಲ್ಯಾಸ್ಟಿಕ್‌ ಪ್ಯಾಕೆಟ್‌ಗಳಿಗೆ ತುಂಬಿ ಸುಲಿಗೆ ದಂಧೆಗಿಳಿದಿರುವ ವಂಚಕರ ದೊಡ್ಡ ಜಾಲ ಆಹಾರ ಇಲಾಖೆ ಅಧಿಕಾರಿಗಳ ಬಲೆಗೆ ಬೀಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅತ್ತ ನೀರೂ ನಕಲಿ, ಇತ್ತ ದರವೂ ದುಪ್ಪಟ್ಟು. ಇದರ ಪೆಟ್ಟು ನೇರವಾಗಿ ಗ್ರಾಹಕರ ಮೇಲೆ ಬೀಳುತ್ತಿದೆ.

ಸುಡುವ ಬಿಸಿಲ ತಾಪ ತಾಳಲಾಗದೆ ಪದೇಪದೆ ಬಾಯಾರಿಕೆ ಉಂಟಾಗಿ ಒಡಲು ತಂಪು ನೀರು ಬಯಸುವುದು ಸಹಜ. ಹೀಗಾಗಿ ಜನರು ತಂಪು ನೀರಿನ ಬಾಟಲಿ ಖರೀದಿಸುವುದು ಅನಿವಾರ್ಯವಾಗಿದೆ. ನೂರಾರು ಕಂಪನಿಗಳ ಹೆಸರಿನಲ್ಲಿ ಬಾಟಲಿ ನೀರು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದು, ಶುದ್ಧ ನೀರಿನ ಮಧ್ಯೆ ಅಶುದ್ಧ ನೀರು ಸರಬರಾಜು ಸದ್ದಿಲ್ಲದೆ ಸಾಗಿದೆ. ಬಾಟಲಿಗಳ ಮೇಲೆ ಮುದ್ರಿತವಾದ ದರಕ್ಕೂ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿರುವ ಹಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಂಪನಿಗಳ ಮೋಸ, ವಂಚನೆ ಹಾಗೂ ಸುಲಿಗೆಗೆ ಕಡಿವಾಣ ಹಾಕಬೇಕಿರುವ ಸಂಬಂಧಿತ ಅಧಿಕಾರಿಗಳು ಮೌನ ವಹಿಸಿರುವುದು ಗ್ರಾಹಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮಡಿವಾಳಪ್ಪ ಹೇರೂರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ