ಕೊಂಚೂರು ಹನುಮನ ತಾಣದಲ್ಲಿ ಮಂಗಗಳ ಕಾಟ!

ಮನೆಗಳ ಮಾಳಿಗೆ ಧ್ವಂಸ-ಮರಗಳು ಸರ್ವನಾಶ

Team Udayavani, Aug 15, 2019, 10:37 AM IST

ವಾಡಿ: ಕೊಂಚೂರು ಗ್ರಾಮ ಹನುಮಾನ ದೇಗುಲದ ಆವರಣದಲ್ಲಿ ಓಡಾಡುತ್ತಿರುವ ಮಂಗಗಳು.

ಮಡಿವಾಳಪ್ಪ ಹೇರೂರು
ವಾಡಿ:
ರಾಮಭಕ್ತ ಹನುಮನನ್ನು ಸ್ಮರಿಸಿ ಹತ್ತಿರ ಬರುವ ಮಂಗಗಳಿಗೆ ಹಣ್ಣು ನೀಡಿ ಭಕ್ತಿ ಮೆರೆಯುವ ಭಕ್ತರು ಒಂದೆಡೆಯಾದರೇ, ಇದೇ ಮಂಗಗಳು ಮನೆಗೆ ಬಂದರೆ ಕೋಲಿನಿಂದ ಹೊಡೆದು ಓಡಿಸುವ ಗ್ರಾಮಸ್ಥರು ಇನ್ನೊಂದೆಡೆ.

ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಪಂ ವ್ಯಾಪ್ತಿಯ ಕೊಂಚೂರು ಗ್ರಾಮದಲ್ಲಿ ಐತಿಹಾಸಿಕ ಶ್ರೀ ಹನುಮಾನ ದೇವಸ್ಥಾನವಿದ್ದು, ಜಿಲ್ಲೆಯ ವಿವಿಧೆಡೆಯಿಂದ ಶನಿವಾರ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ.

ಭಕ್ತರ ಪ್ರಸಾದದ ಆಸೆಗೆ ಸುಮಾರು 500ಕ್ಕೂ ಹೆಚ್ಚು ಮಂಗಗಳು ಅರಣ್ಯದಿಂದ ಓಡಿಬಂದು ಊರು ಸೇರಿಕೊಂಡಿವೆ. ಕಳೆದ 15 ವರ್ಷಗಳಿಂದ ಮಂಗಗಳ ಉಪಟಳ ಹೆಚ್ಚಾಗಿದೆ. ಹಣ್ಣು ಕೊಟ್ಟು ದೇವಸ್ಥಾನದ ಅಂಗಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಭಕ್ತರಿಗೆ ಮೋಜಿನಾಟವಾದರೆ, ಸ್ಥಳೀಯರ ಪಾಲಿಗೆ ಇದು ಶಾಪವಾಗಿ ಪರಿಣಮಿಸಿದೆ. ರಾತ್ರಿ ಹಗಲೆನ್ನದೆ ಗ್ರಾಮಸ್ಥರ ಮನೆಗಳ ಮೇಲೆ ಜಿಗಿದಾಡುವ ಮಂಗಗಳ ನಾಲ್ಕಾರು ಹಿಂಡು, ಹಾಸುಗಲ್ಲಿನ ಮಾಳಿಗೆಗಳನ್ನು ಪುಡಿಪುಡಿ ಮಾಡಿ ಧ್ವಂಸಗೊಳಿಸುತ್ತಿವೆ. ಮನೆಯೊಳಗೆ ನುಗ್ಗಿ ಅಡುಗೆ ಪಾತ್ರೆಗಳನ್ನು ಹೆಕ್ಕುತ್ತವೆ. ರೊಟ್ಟಿ ಬಾಯಲ್ಲಿ ಹಿಡಿದು ಪರಾರಿಯಾಗುತ್ತವೆ. ಅಂಗಡಿಗಳಿಂದ ಬಹಿರಂಗವಾಗಿ ಹಾಲು ಬ್ರೆಡ್‌ ತರುವಂತಿಲ್ಲ. ಕಂಡರೆ ಇವು ಬಿಡುವುದಿಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಕೋಲು ಕಡ್ಡಾಯ. ಮಂಗಗಳು ಮನೆ ಮೇಲೆ ಬಂದರೆ ಕೋಲಿನಿಂದ ಹೊಡೆದು ಓಡಿಸುವುದು ನಿತ್ಯದ ಕಾಯಕವಾಗಿದೆ.

ಗ್ರಾಮದಲ್ಲಿದ್ದ 50ಕ್ಕೂ ಹೆಚ್ಚು ಮರಗಳು ಮಂಗಗಳ ಕಾಟಕ್ಕೆ ನಾಶವಾಗಿವೆ. ಈಗ ನೆರಳಿಗಾಗಿ ಒಂದು ಮರವೂ ಉಳಿದಿಲ್ಲ. ದೇವಸ್ಥಾನದ ಬಾವಿ ಹತ್ತಿರವಿದ್ದ 200 ವರ್ಷದಷ್ಟು ಹಳೆಯದಾದ ಹುಣಸೆ ಮರ ಮಂಗಗಳ ದಾಳಿಗೆ ತತ್ತರಿಸಿ ಬಾಡಿದೆ. ಬದುಕುಳಿದಿರುವ ಹನುಮನ ದೇವಸ್ಥಾನದ ಮುಂದಿನ ಏಕೈಕ ನಂದಿ ಆಲದ ಮರವೂ ಕೂಡ ಈ ಮರ್ಕಟಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಎತ್ತರಕ್ಕೇರುವ ಬದಲು ಅಡ್ಡವಾಗಿ ಬೆಳೆಯುತ್ತಿದೆ. ಹೊಲಗಳಿಗೂ ದಾಳಿಯಿಡುತ್ತಿರುವ ಮಂಗಗಳ ದಂಡು, ಬೆಳೆಗಳ ಪೈರು ಕಿತ್ತು ಬೀಸಾಡುತ್ತಿವೆ. ಈ ಪ್ರಾಣಿಗಳ ಕಾಟಕ್ಕೆ ಹೆದರಿ ರೈತರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮನುಷ್ಯರ ಮೇಲೂ ಇವು ದಾಳಿ ಮಾಡಿ ಗಾಯಗೊಳಿಸುತ್ತಿವೆ. ಮಂಗಗಳನ್ನು ಹಿಡಿದು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮದಲ್ಲಿನ ಬದುಕೇ ಬೇಡವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಊರಿನ ಹಿರಿಯರಾದ ಸಿದ್ರಾಮ ಲೊಡ್ಡ, ಮಂಜುನಾಥ ದಂಡಗುಂಡ, ಹಮೀದ್‌ಮಿಯ್ನಾ ಹಾಗೂ ಗುರಪ್ಪ ಮಾಂಗ್‌.

ಕಲಬುರಗಿ ಜಿಲ್ಲೆಯ ವಿವಿಧೆಡೆ ಮಂಗಗಳ ಕಾಟ ಇರುವುದನ್ನು ಗಮನಿಸಿದ್ದೇನೆ. ಕೊಂಚೂರಿನಲ್ಲಿ 500ಕ್ಕೂ ಹೆಚ್ಚು ಮಂಗಗಳಿರುವುದು ಆಶ್ಚರ್ಯ ತರಿಸಿದೆ. ಇದೊಂದು ದೊಡ್ಡ ಸಮಸ್ಯೆಯೇ ಸರಿ. ಅಲ್ಲದೆ ಮಂಗಗಳನ್ನು ನಿಯಂತ್ರಿಸಲು ಅಥವಾ ಸ್ಥಳಾಂತರಿಸಲು ಇಲಾಖೆಯಲ್ಲಿ ಅವಕಾಶಗಳಿಲ್ಲ. ಹೊಲಗದ್ದೆಗಳಲ್ಲಿನ ಬೆಳೆ ನಾಶ ಮಾಡುತ್ತಿದ್ದರೆ ರೈತರು ಅರಣ್ಯ ಇಲಾಖೆಗೆ ದೂರು ಕೊಟ್ಟರೆ ಬೆಳೆ ಪರಿಹಾರ ಸಿಗುತ್ತದೆ. ಮಂಗಗಳು ಮನುಷ್ಯರ ಮೇಲೆ ದಾಳಿ ಮಾಡಿ ಗಾಯಗೊಳಿಸಿದರೆ ಚಿಕಿತ್ಸಾ ವೆಚ್ಚ ಭರಿಸುತ್ತೇವೆ. ಇದಕ್ಕೆ ಹೊರತಾಗಿ ಮತ್ತೇನೂ ಮಾಡುವಂತಿಲ್ಲ. ಮಂಗಗಳ ಸ್ಥಳಾಂತರ ವಿಚಾರ ಸರಕಾರದ ಮಟ್ಟದಲ್ಲಿ ನಡೆಯಬೇಕಿದೆ.
ಮುಜೀಬ್‌ ಉದ್ದೀನ್‌,
ಅರಣ್ಯಾಧಿಕಾರಿ, ಚಿತ್ತಾಪುರ ತಾಲೂಕು ವಲಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೊಪ್ಪಳ: ಐವರು ವಿದ್ಯಾರ್ಥಿಗಳಿಗೆ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟ ಪ್ರಕರಣವನ್ನು ಶೀಘ್ರ ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡುವಂತೆ ಮುಖ್ಯಮಂತ್ರಿಗಳ...

  • ಸಾಗರ: ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಅಡಕೆ ಬೆಳೆಗೆ ತೀವ್ರತರದ ಕೊಳೆರೋಗ ಬಾಧಿಸಿ ಶೇ. 50 ರಿಂದ 80ರಷ್ಟು ಬೆಳೆ ನಷ್ಟವಾಗಿದೆ. ಸರ್ಕಾರ ತಕ್ಷಣ ಕೊಳೆರೋಗಕ್ಕೆ...

  • ಶಿವಮೊಗ್ಗ: ಆಶ್ಲೇಷ ಮಳೆ ಅಬ್ಬರಕ್ಕೆ ಜಿಲ್ಲೆಯ ರಸ್ತೆಗಳೆಲ್ಲ ಕ್ಲೇಷವಾಗಿವೆ. ವಾರದ ಕಾಲದ ಎಡೆಬಿಡದೆ ಸುರಿದ ಮಳೆಯಿಂದ ಬಹುತೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು....

  • ಚಳ್ಳಕೆರೆ: ಜಿಲ್ಲಾಧಿಕಾರಿಗಳ ಸೂಚನೆಯಂತೆ ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿ ಕಳೆದ ಹಲವು ತಿಂಗಳುಗಳಿಂದ ನಗರದ ಎಲ್ಲಾ ಅಂಗಡಿ, ಹೋಟೆಲ್, ಬೇಕರಿ, ಫುಟ್ಪಾತ್‌...

  • ಹೊಳಲ್ಕೆರೆ: ಮಾನವ ತನ್ನ ಅರಿವಿಗೆ ಬಾರದೇ ದುರ್ಬುದ್ಧಿಗೆ ಒಳಗಾಗುತ್ತಾನೆ. ದುರ್ಬುದ್ಧಿಯ ಮಾತನ್ನು ಕೇಳಿದವರು ಸಂಕಷ್ಟ ಅನುಭವಿಸಿದರೆ, ಸದ್ಭುದ್ಧಿಯ ಮಾತನ್ನು...

ಹೊಸ ಸೇರ್ಪಡೆ