ಕಾರ್ಯಕರ್ತರೇ ಬಿಜೆಪಿ ಶಕ್ತಿ: ಕಟೀಲ್

ಸಾಮಾನ್ಯ ಕಾರ್ಯಕರ್ತನಿಗೂ ಮಹತ್ವದ ಜವಾಬ್ದಾರಿ ನೀಡುವ ಏಕೈಕ ಪಕ್ಷ

Team Udayavani, Sep 9, 2019, 12:17 PM IST

ವಿಜಯಪುರ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್ ಅವರನ್ನು ಸನ್ಮಾನಿಸಲಾಯಿತು.

ವಿಜಯಪುರ: ಪೋಸ್ಟರ್‌ ಹಚ್ಚುವ ಹುಡುಗ ಪಕ್ಷದ ರಾಜ್ಯಾಧ್ಯಕ್ಷ, ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಲು ಸಾಧ್ಯವಾಗಿರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ಸಾಧ್ಯ. ಸಾಮಾನ್ಯ ಕಾರ್ಯಕರ್ತರೇ ಬಿಜೆಪಿಯ ಬಹುದೊಡ್ಡ ಶಕ್ತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್ ಹೇಳಿದರು.

ಭಾರತೀಯ ಜನತಾ ಪಕ್ಷ ರಾಜ್ಯಾಧ್ಯಕ್ಷರಾಗಿ ರವಿವಾರ ಪ್ರಥಮ ಬಾರಿ ವಿಜಯಪುರಕ್ಕೆ ಆಗಮಿಸಿ ನಗರದ ಮಹೇಶ್ವರಿ ಮಂಗಲ ಕಾರ್ಯಾಲಯದಲ್ಲಿ ನಡೆದ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಸಾಮಾನ್ಯ ಕಾರ್ಯಕರ್ತನಿಗೂ ಜವಾಬ್ದಾರಿ ನೀಡುವ ಏಕೈಕ ಪಕ್ಷ ಬಿಜೆಪಿ. ಉಗ್ರ ಭಾಷಣ ಮಾಡುತ್ತಿದ್ದೆ, ಆಗ ಸಂಘದ ಹಿರಿಯರು ನನಗೆ ರಾಜಕೀಯ ರಂಗ ಪ್ರವೇಶ ಮಾಡು ಎಂದು ನಿರ್ದೇಶನ ನೀಡಿದರು. ನಾನು ಚುನಾವಣೆಗೆ ಸ್ಪರ್ಧಿಸಿದಾಗ ಜನರು ಒಂದೆಡೆ ಇರಲಿ ಎದುರಾಳಿ ಅಭ್ಯರ್ಥಿಯಾಗಿರುವ ಹಿರಿಯರಾದ ಜನಾರ್ಧನ ಪೂಜಾರಿ ಅವರಿಗೂ ಗೊತ್ತಿರಲಿಲ್ಲ. ಆದರೆ ನಮ್ಮ ಬಿಜೆಪಿ ಕಾರ್ಯಕರ್ತರು ಮನೆ-ಮನೆಗೆ ಹೋಗಿ ಪ್ರಚಾರ ಮಾಡಿದ ಪರಿಣಾಮ ನಾನು ಆಯ್ಕೆಯಾದೆ ಎಂದರು.

ವ್ಯಕ್ತಿಗಿಂತ ಪಕ್ಷ ಶ್ರೇಷ್ಠ. ಪಕ್ಷಕ್ಕಿಂತ ದೇಶ ಶ್ರೇಷ್ಠ ಎನ್ನವುದೇ ಭಾರತೀಯ ಜನತಾ ಪಕ್ಷದ ಸಿದ್ಧಾಂತ. ಕಾಶ್ಮೀರ ದೇಶದ ಅವಿಭಾಜ್ಯ ಅಂಗ ಎಂಬ ಉದ್ದೇಶವನ್ನಿಟ್ಟುಕೊಂಡು ಡಾ| ಶ್ಯಾಂ ಪ್ರಸಾದ ಮುಖರ್ಜಿ ಹೋರಾಡಿದರು. ಅವರ ಹೋರಾಟಕ್ಕೆ ಪ್ರಸ್ತುತ ಜಯ ಸಿಕ್ಕಿದಂತಾಗಿದೆ. ಮೋದಿ ಅವರು ಯಾವುದೇ ರೀತಿ ಆಶ್ವಾಸನೆ ನೀಡಲಿಲ್ಲ, ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಎಂದು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳಿದರು, ಅದರಂತೆ ನೋಟ್ ಬ್ಯಾನ್‌ ಸೇರಿದಂತೆ ಮೊದಲಾದ ಕ್ರಮ ಕೈಗೊಂಡು ನುಡಿದಂತೆ ನಡೆದರು ಎಂದರು.

ನಾನು ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯನಾಗಿದ್ದ ವೇಳೆ ವೆಂಕಯ್ಯ ನಾಯ್ಡು ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಈಗ ಅನೇಕ ಅಧ್ಯಕ್ಷರು ಬದಲಾವಣೆಯಾಗಿ ನಡ್ಡಾ ಅಧ್ಯಕ್ಷರಾಗಿದ್ದಾರೆ. ನಾನು ರಾಜಕೀಯಕ್ಕೆ ಬಂದಾಗ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷೆಯಾಗಿದ್ದರು, ಈಗ ಸಂಸದನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲಿಯೂ ಅವರೇ ಅಧ್ಯಕ್ಷೆಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿರುವುದು ತಾಯಿ-ಮಕ್ಕಳ ಸಂಸ್ಕೃತಿ, ಅವರ ಕುಟುಂಬಸ್ಥರೇ ಅಲ್ಲಿ ಅಧ್ಯಕ್ಷರಾಗಿದ್ದಾರೆ, ಆದರೆ ಸಂವಿಧಾನ ಬದ್ಧವಾಗಿ ಅಧಿಕಾರ ಹಂಚಿಕೆ ಮಾಡುವ ಏಕೈಕ ಪಕ್ಷ ಬಿಜೆಪಿ ಎಂದರು.

ನರೇಂದ್ರ ಮೋದಿ ಅವರನ್ನು ಜಗತ್ತೇ ಒಪ್ಪಿಕೊಂಡಿದೆ. ಈ ಹಿಂದಿನವರು ಅಮೆರಿಕ ಮಾಡುತ್ತೇವೆ, ಜಪಾನ ಮಾಡುತ್ತೇವೆ ಎಂಬಿತ್ಯಾದಿ ಹೇಳಿಕೆ ಮೊಳಗಿಸಿ ವೋಟು ಕೇಳುತ್ತಿದ್ದರು. ಆದರೆ ಮೋದಿ ಅವರ ವರ್ಚಸ್ಸು ಜಗತ್ತಿಗೆ ವ್ಯಾಪಿಸಿದೆ. ಈ ಕಾರಣಕ್ಕಾಗಿಯೇ ಟ್ರಂಪ್‌ ಸಹ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎನ್ನುವ ಮೋದಿ ಅವರ ಉಕ್ತಿಯನ್ನೇ ಬಳಸಿ ಅಮೆರಿಕದಲ್ಲಿ ಮತ ಕೇಳಿದರು ಎಂದರು.

ಅಂದು ವಾಜಪೇಯಿ ಸರ್ಕಾರ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿತು, ಇಂದು ಮೋದಿ ಸರ್ಕಾರ ಜನರಿಗೆ ಉಚಿತವಾಗಿ ಗ್ಯಾಸ್‌ ಒದಗಿಸಿದೆ. ಆದರೆ ಈಗ ಕಾಂಗ್ರೆಸ್‌ನವರು ನಿರುದ್ಯೋಗಿಗಳಾಗಿದ್ದಾರೆ. ಭ್ರಷ್ಟಾಚಾರ ಮಾಡಿದರೆ ಜೈಲಿಗೆ ಕಳುಹಿಸಲು ಮೋದಿ ನಿರ್ಧರಿಸಿದ್ದಾರೆ. ಆದರೆ ಕಾಂಗ್ರೆಸ್‌ನವರಿಗೆ ಕೋರ್ಟ್‌ನಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಲ್ಲ, ಈ ಕಾರಣಕ್ಕಾಗಿಯೇ ದ್ವೇಷದ ರಾಜಕಾರಣ ಎಂದು ಹೇಳುತ್ತಿದ್ದಾರೆ. ಬಿಜೆಪಿ ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಸಿಬಿಐ ಮೊದಲಾದವುಗಳು ಸ್ವಾಯುತ್ತ ಸಂಸ್ಥೆಗಳು, ತನ್ನ ಕೆಲಸವನ್ನು ತಾವು ಮಾಡುತ್ತಿವೆ ಎಂದರು.

ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ ಮಾತನಾಡಿದರು. ಚುನಾವಣಾ ಉಸ್ತುವಾರಿ ಹಾಗೂ ವಿ.ಪ. ಮಾಜಿ ಸದಸ್ಯ ಅಮರನಾಥ ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಪಕ್ಷದ ಜಿಲ್ಲಾದ್ಯಕ್ಷ ಚಂದ್ರಶೇಖರ ಕವಟಗಿ, ಶಾಸಕರಾದ ಬಸನಗೌಡ ಯತ್ನಾಳ, ಎ. ಎಸ್‌. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ಅರುಣ ಶಹಾಪುರ, ಹನುಮಂತ ನಿರಾಣಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜಯಕುಮಾರ ಪಾಟೀಲ, ಡಾ| ಗೋಪಾಲ ಕಾರಜೋಳ, ರಮೇಶ ಭೂಸನೂರ, ಸಂಗರಾಜ ದೇಸಾಯಿ, ದಯಾಸಾಗರ ಪಾಟೀಲ ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ