ಬಸವನಾಡಲಿ 3 ಕಡೆ ಪ್ರತ್ಯೇಕ ಜಿಲ್ಲೆ ಕೂಗು

ಮುದ್ದೇ ಬಿಹಾಳ-ಬಸವನಬಾಗೇವಾಡಿಯಲ್ಲಿ ಜಿಲ್ಲಾ ಹೋರಾಟ ಸಮಿತಿ ರಚಿಸಲು ಸಿದ್ಧತೆ

Team Udayavani, Oct 4, 2019, 11:56 AM IST

„ಜಿ.ಎಸ್‌.ಕಮತರ
ವಿಜಯಪುರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಭಜನೆ ಹಾಗೂ ಪ್ರತ್ಯೇಕ ಜಿಲ್ಲೆ ರಚನೆ ಕೂಗು ಜೋರಾಗುತ್ತಲೇ ವಿಜಯಪುರ ಜಿಲ್ಲೆಯಲ್ಲೂ ಪ್ರತ್ಯೇಕ ಜಿಲ್ಲೆ ರಚನೆಗಾಗಿ ಮೂರು ತಾಲೂಕಗಳಲ್ಲಿ ಹೋರಾಟಕ್ಕೆ ವೇದಿಕೆ ಸಿದ್ಧವಾಗುತ್ತಿವೆ. ಇಂಡಿ ಜಿಲ್ಲೆ ಹೋರಾಟಕ್ಕೆ ಧ್ವನಿ ಎತ್ತಿದ ಬೆನ್ನಲ್ಲೇ ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕು ಕೇಂದ್ರಗಳನ್ನು ಜಿಲ್ಲಾ ಕೇಂದ್ರ ಮಾಡಲು ಹೋರಾಟಕ್ಕೆ ಸಿದ್ಧತೆ ನಡೆದಿದೆ.

ದಶಕದ ಹಿಂದೆ ಪ್ರತ್ಯೇಕ ಜಿಲ್ಲೆ ರಚನೆ ಸಂದರ್ಭದಲ್ಲೇ ಬಸವನಬಾಗೇವಾಡಿ ತಾಲೂಕು ಕೇಂದ್ರವನ್ನು ಪ್ರತ್ಯೇಕ ಜಿಲ್ಲೆಗೆ ಪರಿಗಣಿಸುವಂತೆ ನಡೆದಿದ್ದ ಹೋರಾಟಕ್ಕೆ ಮತ್ತೆ ಜೀವ ಕೊಡಲು ಹೋರಾಟಗಾರರರು ಸನ್ನದ್ಧರಾಗುತ್ತಿದ್ದಾರೆ. ಅಲ್ಲದೇ ಸೆ. 5ರಂದು ಕೃಷ್ಣೆಗೆ ಬಾಗಿನ ಅರ್ಪಿಸಲು ಆಲಮಟ್ಟಿಗೆ ಬರುತ್ತಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇತ್ತ ಕಳೆದ ಎರಡು ವರ್ಷಗಳ ಹಿಂದೆ ನಡೆದ ಮುದ್ದೇಬಿಹಾಳ ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕೆ ಅಲ್ಲಿನ ಹೋರಾಟಗಾರರು ಅಣಿಯಾಗುತ್ತಿದ್ದಾರೆ.

ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ಜಿಲ್ಲೆ ಮಾಡಬೇಕು ಎಂಬ ಬೇಡಿಕೆ ಮಂಡಿಸುತ್ತಿರುವ ಎರಡೂ ಕಡೆಯವರು ಅದಕ್ಕಾಗಿ ತಮ್ಮ ಸಮರ್ಥನೆ ಕೊಡಲು ಪಟ್ಟಿಯನ್ನೂ ಮಾಡಿಕೊಂಡಿದ್ದಾರೆ. ಮುದ್ದೇಬಿಹಾಳ ತಾಲೂಕು ಕೇಂದ್ರವೇ ಈಗಿರುವ ಜಿಲ್ಲಾ ಕೇಂದ್ರಕ್ಕೆ ಸುಮಾರು 85 ಕಿ.ಮೀ. ದೂರವಿದ್ದು, ಈ ತಾಲೂಕಿನ ಕೊನೆ ಭಾಗದ ಹಳ್ಳಿಗಳು ಜಿಲ್ಲಾ ಕೇಂದ್ರಕ್ಕೆ ಬರಲು 130 ಕಿ.ಮೀ. ಕ್ರಮಿಸಬೇಕು. ಯಾವುದೇ ಜಿಲ್ಲೆ ಹಾಗೂ ತಾಲೂಕು ರಚನೆ ಸಂದರ್ಭದಲ್ಲಿ ಭೌಗೋಳಿಕವಾಗಿ ಮೂಲ ಕೇಂದ್ರಗಳಿಗೆ ದೂರ ಇರುವ ಸ್ಥಳಗಳನ್ನು ಪ್ರತ್ಯೇಕ ಮಾಡುವಾಗ ಪರಿಗಣಿಸಲಾಗುತ್ತದೆ. ಅಲ್ಲದೇ
ಬಸವಸಾಗರ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ಸಂತ್ರಸ್ತರು ಮುದ್ದೇಬಿಹಾಳ ತಾಲೂಕಿನಲ್ಲೇ ಇದ್ದು, ಕಂದಾಯ ಹಾಗೂ ನ್ಯಾಯಾಲಯಗಳಲ್ಲಿ ಈ ತಾಲೂಕಿನ ಪ್ರಕರಣಗಳೇ ಅಧಿಕ ಸಂಖ್ಯೆಯಲ್ಲಿ ವಿಚಾರಣೆಯಲ್ಲಿವೆ. ಮುದ್ದೇಬಿಹಾಳ ಜಿಲ್ಲಾ ಕೇಂದ್ರವಾದರೆ ಎಲ್ಲರಿಗೂ ಅನುಕೂಲವಾಗಲಿದೆ.

ಇನ್ನು ಜಿಲ್ಲಾ ಕೇಂದ್ರ ಮಾಡಲು ಅರ್ಹತೆ ಎಂಬಂತೆ ಈಗಾಗಲೇ ಜಿಲ್ಲಾ ನ್ಯಾಯಾಲಯ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆದಿದೆ. ಕೆಬಿಜೆಎನ್ನೆಲ್‌ ಕಚೇರಿಗಳನ್ನು ಆಲಮಟ್ಟಿಯಿಂದ ಮುದ್ದೇಬಿಹಾಳ ತಾಲೂಕಿಗೆ ಸ್ಥಳಾಂತರಿಸಲು ಸುಮಾರು 50 ಎಕರೆ ಜಮೀನು ಕೂಡ ಗುರುತಿಸಲಾಗಿದೆ. ಕಂದಾಯ ಉಪ ವಿಭಾಗಾಧಿಕಾರಿ ಕಚೇರಿಗೆ ಮಂಜೂರಾತಿ ಅಂತಿಮ ಹಂತದಲ್ಲಿದೆ. ಮುದ್ದೇಬಿಹಾಳ ಪಟ್ಟಣದಲ್ಲಿ ಈಗಾಗಲೇ ಹಳೆ ತಹಶೀಲ್ದಾರ್‌ ಕಚೇರಿ, ಹಳೆ ಕೋರ್ಟ್‌, ಪೊಲೀಸ್‌ ಠಾಣೆಗಳಂಥ ಕಟ್ಟಡಗಳು ಖಾಲಿಯಿದ್ದು ಅಗತ್ಯ ಕಚೇರಿಗಳನ್ನು ತೆರೆಯಲು ಸುಸಜ್ಜಿತವಾಗಿಯೇ ಇವೆ.

ವಿಜಯಪುರ ಜಿಲ್ಲೆಯಿಂದ ಮುದ್ದೇಬಿಹಾಳ ಜಿಲ್ಲಾ ಕೇಂದ್ರ ಮಾಡಿ ತಾಳಿಕೋಟೆ, ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ತಾಲೂಕು ಸೇರಿಸಿ ಪ್ರತ್ಯೇಕ ಜಿಲ್ಲೆ ಮಾಡುವುದು ಎಲ್ಲ ದೃಷ್ಟಿಯಿಂದ ಯೋಗ್ಯ ಎಂಬ ವಾದ ಮಂಡನೆಗೆ ವೇದಿಕೆ ಸಿದ್ಧವಾಗುತ್ತಿದೆ. ಹಲವು ವರ್ಷಗಳ ಹಿಂದೆ ಅಸ್ತಿತ್ವದಲ್ಲಿರುವ ಮುದ್ದೇಬಿಹಾಳ ನಗರ ಅಭಿವೃದ್ಧಿ ಹೋರಾಟ ವೇದಿಕೆಯಿಂದ ಸಂಚಾಲಕ ಬಸವರಾಜ ನಂದಿಕೇಶ್ವರಮಠ ನೇತೃತ್ವದಲ್ಲಿ 2017ರಲ್ಲಿ ಹೋರಾಟ ಮಾಡಿದ್ದು, ಇದೀಗ ಮತ್ತೆ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಸಿದ್ಧತೆ ನಡೆಸಿದೆ.

ಅ. 4ರಂದು ಮುದ್ದೇಬಿಹಾಳ ಪ್ರತ್ಯೇಕ ಜಿಲ್ಲೆ ರಚನೆಗಾಗಿ ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ಹೋರಾಟ ಹಮ್ಮಿಕೊಂಡಿದೆ. ಇದರ ಜೊತೆಗೆ ಮುದ್ದೇಬಿಹಾಳ ಜಿಲ್ಲಾ ನಿರ್ಮಾಣ ಹೋರಾಟ ಸಮಿತಿ ಪುನಾರಚಿಸಿ, ಬದ್ಧತೆಯ ಪದಾಧಿಕಾರಿಗಳನ್ನು ನೇಮಿಸಿ, ರಾಜಕೀಯ ರಹಿತವಾಗಿ ಹಾಲಿ ಶಾಸಕರು, ಮಾಜಿ ಸಚಿವರು ಸೇರಿದಂತೆ ತಾಲೂಕಿನ ಎಲ್ಲ ಪ್ರಮುಖರನ್ನು ಭೇಟಿ ಮಾಡಿ ಎಲ್ಲರ ಬೆಂಬಲ ಪಡೆಯುವುದಕ್ಕೆ ಸಿದ್ಧತೆ ನಡೆದಿದೆ.

ಇತ್ತ ವಿಜಯಪುರ ಜಿಲ್ಲೆಯಿಂದ ಬಸವನಬಾಗೇವಾಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಧ್ವನಿ ಎತ್ತಲಾಗಿದೆ. ಅಲ್ಲದೇ ಅ. 5ರಂದು ಅಲಮಟ್ಟಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಬರುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಅಲ್ಲದೇ ರಾಜ್ಯದಲ್ಲಿ ಎರಡು ದಶಕಗಳ ಹಿಂದೆ ಪ್ರತ್ಯೇಕ ಜಿಲ್ಲೆಗಳ ಹೋರಾಟ ಸಂದರ್ಭದಲ್ಲೇ ವಿಜಯಪುರ ಜಿಲ್ಲೆಯಲ್ಲಿ ಬಸವನಬಾಗೇವಾಡಿ ಪ್ರತ್ಯೇಕ ಜಿಲ್ಲೆಗೆ ಕೂಗು ಎದ್ದಿತ್ತು. ಆದರೆ ಬಾಗಲಕೋಟೆ ಜಿಲ್ಲೆ ಪ್ರತ್ಯೇಕಗೊಂಡ ಕಾರಣ ಅದು ಅಸಾಧ್ಯವಾಗಿದೆ.

ಈಗ ಜಿಲ್ಲಾ ಕೇಂದ್ರಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳಿವೆ. ಹೀಗಾಗಿ ಬಸವನಬಾಗೇವಾಡಿ ಪ್ರತ್ಯೇಕ ಜಿಲ್ಲೆ ರಚನೆ ಕುರಿತು ಶಾಸಕ ಶಿವಾನಂದ ಪಾಟೀಲ, ಮಾಜಿ ಸಚಿವರಾದ ಎಸ್‌. ಕೆ. ಬೆಳ್ಳುಬ್ಬಿ ಸೇರಿದಂತೆ ಎಲ್ಲ ರಾಜಕೀಯ ಹಾಗೂ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ಮಾಡಲು ವೇದಿಕೆ ರೂಪಿಸಲು ಸಿದ್ಧತೆ ನಡೆದಿದೆ.

ಬಸವನಬಾಗೇವಾಡಿ ತಾಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧವಿದೆ. ಡಿಎಸ್ಪಿ ಕಚೇರಿ, ಹೆಸ್ಕಾಂ ವಿಭಾಗೀಯ ಕಚೇರಿಗಳಿವೆ. ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲೇ ಇದ್ದ ಅಲಮಟ್ಟಿಯ ಶಾಸ್ತ್ರಿ ಜಲಾಶಯ, ಕೂಡಗಿ ಎನ್‌ಟಿಪಿಸಿ ಕೇಂದ್ರ, ಪವನ ವಿದ್ಯುತ್‌ ಘಟಕಗಳು ಸೇರಿದಂತೆ ಮೂಲಭೂತ ಸೌಲಭ್ಯಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಬಸವನಬಾಗೇವಾಡಿಯಿಂದ ಪ್ರತ್ಯೇಕಗೊಂಡಿರವ ಕೊಲ್ಹಾರ, ನಿಡಗುಂದಿ ತಾಲೂಕಗಳು ಹಾಗೂ ಮೂಲ ಮುದ್ದೇಬಿಹಾಳ ತಾಲೂಕು ಹಾಗೂ ಈ ತಾಲೂಕಿನಿಂದ ಪ್ರತ್ಯೇಕಗೊಂಡಿರುವ ತಾಳಿಕೋಟೆ ತಾಲೂಕು ಕೇಂದ್ರಗಳೆಲ್ಲ ಬಸವನಬಾಗೇವಾಡಿ ಕೇಂದ್ರಕ್ಕೆ ಕೇವಲ 30-40 ಕಿ.ಮೀ. ಅಂತರದಲ್ಲಿವೆ. ಬಸವನಬಾಗೇವಾಡಿ ಅಭಿವೃದ್ಧಿ ಪ್ರತ್ಯೇಕ ಪ್ರಾಧಿಕಾರ ರಚನೆಯೂ ಆಗಲಿದ್ದು ಅಭಿವೃದ್ಧಿಗೆ ಇನ್ನಷ್ಟು ಅನುದಾನದ ಬಲವೂ ಬರಲಿದೆ ಎಂಬ ವಾದ ಮುಂದಿರಿಸಿದ್ದಾರೆ.

ಹೀಗಾಗಿ ವಿಜಯಪುರ ಮೂಲ ಜಿಲ್ಲೆಯನ್ನು ಮತ್ತೂಮ್ಮೆ ವಿಭಜಿಸಿ ಪ್ರತ್ಯೇಕ ಜಿಲ್ಲೆ ಮಾಡಲು ಮೂರು ತಾಲೂಕುಗಳಲ್ಲಿ ಜಿಲ್ಲಾ ಕೇಂದ್ರ ಮಾಡಲು ಹೋರಾಟ ಸಮಿತಿಗಳು ವಿವಿಧ ರೀತಿಯಲ್ಲಿ ಹೋರಾಟಕ್ಕೆ ಅಣಿಯಾಗುತ್ತಿವೆ. ಹೋರಾಟಕ್ಕೆ ಜಯ ಯಾರಿಗೆ
ಲಭಿಸುತ್ತದೋ ಅಥವಾ ರಾಜಕೀಯವಾಗಿ ಇದು ಕೇವಲ ಚರ್ಚೆ ವಿಷಯವಾಗಿ ಮೂಲೆ ಗುಂಪಾಗುತ್ತದೋ, ಪ್ರತ್ಯೇಕ ಜಿಲ್ಲೆ ರಚನೆಯಾದಲ್ಲಿ ಯಾವ ತಾಲೂಕಿಗೆ ಜಿಲ್ಲಾ ಕೇಂದ್ರದ ಮಾನ್ಯತೆ ದೊರೆಯಲಿದೆ ಎಂಬುದು ಮುಂದಿನ ಹೋರಾಟಗಳು ಹಾಗೂ ಸರ್ಕಾರದ ನಡೆಗಳು ನಿರ್ಧಾರ ಹೇಳಲಿವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ