ಪಾರಂಪರಿಕ ಹಬ್ಬಕ್ಕೆ ಕಪ್ಪು ಚುಕ್ಕೆ

ಹೋರಿ ಇರಿತಕ್ಕೊಳಗಾಗಿದ್ದ ವ್ಯಕ್ತಿ ಸಾವು•ಕಾಖಂಡಕಿ ಕಾರ ಹುಣ್ಣಿಮೆಯಲ್ಲಿ ದುರಂತ

Team Udayavani, Jun 29, 2019, 11:19 AM IST

ಜಿ.ಎಸ್‌. ಕಮತರ
ವಿಜಯಪುರ:
ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆ ಎಂದರೆ ಮೊದಲು ನೆನಪಿಗೆ ಬರುವುದು ಕಾಖಂಡಕಿ ಗ್ರಾಮದಲ್ಲಿ ನಡೆಯುವ ಹೋರಿ ಓಟದ ಸ್ಪರ್ಧೆ. ಅತ್ಯಂತ ಆಪಾಯಕಾರಿ ರೀತಿಯ ಸಾಹಸ ಎಂಬಂತೆ ಹೋರಿಗಳನ್ನು ಓಡಿಸುವ ಪಾರಂಪರಿಕವಾಗಿ ನಡೆದು ಬಂದಿರುವ ಹಬ್ಬಕ್ಕೆ ವ್ಯಕ್ತಿಯೊಬ್ಬನ ಸಾವಿನಿಂದಾಗಿ ಇದೀಗ ಕಪ್ಪು ಚುಕ್ಕೆ ಮೆತ್ತಿಕೊಂಡಿದೆ. ಸಾಂಪ್ರದಾಯಿಕ ಈ ಹಬ್ಬವನ್ನೇ ರದ್ದು ಮಾಡುವ ಕುರಿತು ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಪ್ರತಿ ವರ್ಷದ ಕಾರ ಹುಣ್ಣಿಮೆ ನಂತರ ಏಳನೇ ದಿನ ಕರಿ ಹಬ್ಬಕ್ಕಾಗಿ ಹೋರಿ-ಎತ್ತುಗಳನ್ನು ಬೆದರಿಸಿ ಓಡಿಸುವ ಸ್ಪರ್ಧೆ ನಡೆಯುತ್ತದೆ. ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಬಹುತೇಕ ಹಳ್ಳಿಗಳಲ್ಲಿ ಕಾರ ಹುಣ್ಣಿಮೆ ಹಬ್ಬದ ದಿನದಂದು ಅನ್ನದಾತರು ತಮ್ಮ ನೆಚ್ಚಿನ ಎತ್ತು-ಹೋರಿಗಳನ್ನು ಸಿಂಗರಿಸಿ ಕರಿ ಹರಿಯಲು ಓಡಿಸುವುದು ಪರಂಪರಾಗತ ಹಬ್ಬ ಎನಿಸಿದೆ.

ಕಾಖಂಡಕಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಬಳಿಕದ 7ನೇ ದಿನ ನಡೆಯುವ ಕರಿ ಹಬ್ಬಕ್ಕೆ ಸುಮಾರು 400 ವರ್ಷಗಳ ಇತಿಹಾಸ ಇದೆ. ಹಿಂದೆಲ್ಲ ಕಾರ ಹುಣ್ಣಿಮೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ತರುವ ಹೋರಿಗಳಿಗೆ ವರ್ಷ ಪೂರ್ತಿ ಪೌಷ್ಟಿಕ ಆಹಾರ ನೀಡಿ ಆರೋಗ್ಯಪೂರ್ಣವಾಗಿ ಸ್ಪರ್ಧೆಗೆ ಸಿದ್ದಗೊಳಿಸಲಾಗುತ್ತಿತ್ತು. ಆದರೆ ಹಿಂದಿನವರಂತೆ ಈಗಿನವರು ಪೌಷ್ಟಿಕ ಆಹಾರ ನೀಡುವ ಬದಲು ಮದ್ಯ ಕುಡಿಸುವುದು, ಬಂಗ್‌ನಂಥ ಮಾದಕ ವಸ್ತುಗಳನ್ನು ನೀಡಿ ಸ್ಪರ್ಧೆಗೆ ಜಾನುವಾರುಗಳನ್ನು ಓಡಿಸುತ್ತಾರೆ. ಕಾರಣ ಸಭ್ಯ ಹೋರಿಗಳು ಕೂಡ ಮತ್ತಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಮನುಷ್ಯರ ಮೇಲೆ ಆಪಾಯಕಾರಿ ರೀತಿಯಲ್ಲಿ ದಾಳಿ ಮಾಡುತ್ತಿವೆ. ಪರಿಣಾಮ ಹಿಂದಿಗಿಂತ ಇಂದಿನ ಕಾರ ಹುಣ್ಣಿಮೆ ಸ್ಪರ್ಧೆ ಅತ್ಯಂತ ಆಪಾಯಕಾರಿ ರೀತಿಯಲ್ಲಿ ನಡೆಯುತ್ತಿದ್ದು ಸಾರ್ವಜನಿಕರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯತೊಡಗಿದೆ.

ಹಿಂದೆಲ್ಲ ಈ ಸ್ಪರ್ಧೆಗೆ ನೆರೆಯ ಜಿಲ್ಲೆಗಳ ಸಾವಿರಾರು ಜನರು ಮಾತ್ರ ಬರುತ್ತಿದ್ದರು. ಆದರೆ ಈಚೆಗೆ ಸಾಂಪ್ರದಾಯಿಕ ಸ್ಪರ್ಧೆ ಸಂಪೂರ್ಣ ಅತಿರೇಕಕ್ಕೆ ಹೋಗಿದೆ. ಅಲ್ಲದೇ ಮಾಧ್ಯಮಗಳು ನಿರೀಕ್ಷೆ ಮೀರಿ ಪ್ರಚಾರ ನೀಡುತ್ತಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈಭವೀಕರಣ ನಡೆಯುತ್ತಿದೆ. ಇದರಿಂದಾಗಿ ಸಾಂಪ್ರದಾಯಿಕ ಸ್ಪರ್ಧೆ ಹೆಸರಿನಲ್ಲಿ ಜಾನುವಾರುಗಳ ಮೇಲೆ ಅನಗತ್ಯ ದೌರ್ಜನ್ಯ ಹಾಗೂ ಮನುಷ್ಯರ ಜೀವಕ್ಕೆ ಆಪಾಯಕಾರಿ ರೀತಿಯಲ್ಲಿ ಎತ್ತುಗಳನ್ನು ಓಡಿಸಲಾಗುತ್ತಿದೆ. ಇಂಥ ಆತಿರೇಕದ ಕರಿ ಹಬ್ಬದ ಹೋರಿಗಳ ಓಟದ ರೋಮಾಂಚನ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಕರ್ನಾಟಕ ಮಾತ್ರವಲ್ಲ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯದಿಂದಲೂ ಸಾವಿರಾರು ಜನರು ಕಾಖಂಡಕಿ ಗ್ರಾಮದತ್ತ ಬರುತ್ತಾರೆ.

ಈಚಿನ ದಿನಗಳಲ್ಲಿ ಹತ್ತಾರು ಜನರು ಸ್ಪರ್ಧೆ ಹೋರಿಗಳ ದಾಳಿಯಿಂದ ತೀವ್ರ ಸ್ವರೂಪದಲ್ಲಿ ಗಾಯಗೊಳ್ಳುತ್ತಿದ್ದರು. ಜಾನುವಾರುಗಳು ಕೂಡ ಓಟದ ಭರದಲ್ಲಿ ಬಿದ್ದು ಕಾಲು ಮುರಿದುಕೊಂಡು, ಕಣ್ಣು ಕಳೆದುಕೊಂಡು ಅಂಗವ್ಯೆಕಲ್ಯ ಕಂಡಿವೆ. ಇದೇ ಕಾರಣಕ್ಕೆ ಕಳೆದ ಒಂದು ದಶಕದಿಂದ ಸ್ಪರ್ಧೆ ಸಂದರ್ಭದಲ್ಲಿ ಕಾರ ಹುಣ್ಣಿಮೆ ಸ್ಪರ್ಧೆಯ ದಿನ ಕಾಖಂಡಕಿ ಗ್ರಾಮದಲ್ಲಿ ಮುಂಜಾಗೃತಾ ಕ್ರಮವಾಗಿ ಆಂಬ್ಯುಲೆನ್ಸ್‌ ವಾಹನಗಳನ್ನು ಸಜ್ಜುಗೊಳಿಸಿ, ಸ್ಥಳದಲ್ಲಿ ನಿಯೋಜಿಸುವ ಕೆಲಸವೂ ನಡೆಯುತ್ತಿದೆ.

ಆದರೆ ಪ್ರಸಕ್ತ ವರ್ಷದ ಕರಿ ಹಬ್ಬದಲ್ಲಿ ರೊಚ್ಚಿಗೆದ್ದು ಓಡುವ ಒಂದು ಎತ್ತು ಹತ್ತಾರು ಜನರು ಎರಡು ಹಗ್ಗಗಳಿಂದ ಕಟ್ಟಿ ಹಿಡಿದಿದ್ದರೂ ಜನರ ಮೇಲೆ ಮಾರಕ ರೀತಿಯಲ್ಲಿ ದಾಳಿ ಮಾಡಿದೆ. ಬಲಭೀಮ ಮೈಲಾರಿ ಪೋಳ ಎಂಬ 40 ವರ್ಷದ ವ್ಯಕ್ತಿಯನ್ನು ಕೊಂಬಿನಿಂದ ಇರಿದು ತೀವ್ರ ಗಾಯಗೊಳಿಸಿತ್ತು. ತುರ್ತು ಚಿಕಿತ್ಸೆ ಸಿಗದೇ ಶುಕ್ರವಾರ ಅಸುನೀಗಿದ್ದಾನೆ. ಈ ಸಾವಿನ ಮೂಲಕ ಕಾಖಂಡಕಿ ಗ್ರಾಮದ ಐತಿಹಾಸಿಕ ಹಾಗೂ ಪಾರಂಪರಿಕ ಕರಿ ಹಬ್ಬದ ಮೇಲೆ ಕಪ್ಪು ಚುಕ್ಕೆ ಮೂಡಿಸಿದೆ.

ಇದಲ್ಲದೇ ಸ್ಪರ್ಧೆಯನ್ನು ನೋಡಲು ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಾಖಂಡಕಿ ಗ್ರಾಮದಲ್ಲಿ ಹಳೆ ಮನೆಗಳ ಮೇಲೆ, ವಿದ್ಯುತ್‌ ಕಂಬ-ಪರಿವರ್ತಕಗಳ ಮೇಲೆ, ಮರಗಳ ಮೇಲೆ ಮಿತಿ ಮೀರಿ ಜನರು ಕುಳಿತುಕೊಳ್ಳುತ್ತಾರೆ. ಇದರಿಂದ ಭವಿಷ್ಯದಲ್ಲಿ ಇನ್ನೂ ಭಾರಿ ದುರಂತ ಸಂಭವಿಸುವ ಭೀತಿಯನ್ನೂ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಸಾರ್ವಜನಿಕ ವಲಯದಲ್ಲಿ ಜೀವ ಘಾತುಕ ರೀತಿಯ ಈ ಸ್ಪರ್ಧೆಯನ್ನು ರದ್ದುಗೊಳಿಸುವ ಕುರಿತು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಸಾಂಪ್ರದಾಯಿಕ ಹೆಸರಿನಲ್ಲಿ ಈಚೆಗೆ ಕರಿ ಓಡಿಸುವ ಹೋರಿಗಳಿಗೆ‌ ಮಾದಕ ವಸ್ತುಗಳನ್ನು ನೀಡಲಾಗುತ್ತಿದೆ. ಹೀಗಾಗಿ ಪ್ರತಿ ವರ್ಷ ಹಲವರಿಗೆ ಗಂಭೀರ ಗಾಯಾಗಳಾಗುತ್ತಿವೆ. ಮತ್ತೂಂದೆಡೆ ಸುಪ್ರೀಂ ಕೋರ್ಟ್‌ ನಿರ್ದೇಶನಕ್ಕೆ ವಿರುದ್ಧವಾಗಿ ಪರಂಪರೆ ಹೆಸರಿನಲ್ಲಿ ಜಾನುವಾರುಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಜೀವಕ್ಕೆ ಕುತ್ತು ತರುತ್ತಿರುವ ಕಾಖಂಡಕಿ ಕರಿ ಹಬ್ಬವನ್ನು ರದ್ದು ಮಾಡುವುದೇ ಲೇಸು. ಇಲ್ಲವಾದಲ್ಲಿ ಗ್ರಾಮಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ಇನ್ನೂ ಹೆಚ್ಚಿನ ದುರಂತ ಸಂಭವಿಸುವ ಮುನ್ನವೇ ಸರ್ಕಾರ-ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.
ಎಸ್‌.ಬಿ. ಕೋರಿ, ಕಾಖಂಡಕಿ ಗ್ರಾಮಸ್ಥ

ಪಾರಂಪರಿಕ ವ್ಯವಸ್ಥೆಯಲ್ಲಿ ಲೋಪಗಳಿದ್ದರೆ ನ್ಯೂನ್ಯತೆ ಸರಿಪಸಬೇಕೆ ಹೊರತು ಹಿರಿಯರು ಮಾಡಿಕೊಂಡು ಬಂದಿದ್ದ ಕರಿ ಹಬ್ಬವನ್ನೇ ರದ್ದು ಮಾಡುವುದು ಪರಿಹಾರವಲ್ಲ. ಇದೇ ಮೊದಲ ಬಾರಿಗೆ ನಮ್ಮೂರಲ್ಲಿ ನಡೆದಿರುವ ಜೀವ ಅಪಾಯಕಾರಿ ದುರಂತದಿಂದ ಪಾಠ ಕಲಿತು, ಮಾರ್ಪಾಡಿನೊಂದಿಗೆ ಕರಿ ಹಬ್ಬ ಮುಂದುವರಿಸಬೇಕು. ಘಟನೆಯಲ್ಲಿ ಮೃತನಾದ ಬಲಭೀಮ ಪೋಳ ಮದ್ಯ ವ್ಯಸನಿಯಾಗಿದ್ದು, ದೈಹಿಕ ಶಕ್ತಿ ಇಲ್ಲದಿದ್ದರೂ ಸ್ಪರ್ಧೆಯಲ್ಲಿ ಪಾಲ್ಗೊಂಡು ಹುಂಬತನದಿಂದ ವರ್ತಿಸಿದ್ದ. ಗಾಯಗೊಂಡರೂ ತನಗೇನೂ ಆಗಿಲ್ಲ ಎಂದು ತುರ್ತು ಚಿಕಿತ್ಸೆ ಪಡೆಯುವಲ್ಲಿ ನಿರ್ಲಕ್ಷ್ಯ ಮಾಡಿದ್ದೇ ಸಾವಿಗೆ ಕಾರಣವಾಗಿದೆ.
•ಮಲ್ಲಿಕಾರ್ಜುನ ಪರಸಣ್ಣವರ,
ಕಾಖಂಡಕಿ ಗ್ರಾಪಂ ಮಾಜಿ ಅಧ್ಯಕ್ಷ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ