ಕಾರ್ಮಿಕರಿಗೆ ಬಂತು ಶುಕ್ರದೆಸೆ

ನಗರದಲ್ಲಿ ಹೆಸರು ನೋಂದಣಿಗೆ ವಿಶೇಷ ಕೌಂಟರ್‌ ಆರಂಭ•ಕೂಲಿ ಪಾವತಿಗೆ ನರೇಗಾ ನಿಯಮ ಸಡಿಲಿಕೆ

Team Udayavani, May 15, 2019, 10:48 AM IST

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಕಾರ್ಮಿಕರಿದ್ದ ಸ್ಥಳಕ್ಕೆ ಬಂದು ಕೆಲಸ ಕೊಡಲು ಹೆಸರು ನೋಂದಣಿ ಆರಂಭಿಸಿರುವ ತಾಪಂ ಅಧಿಕಾರಿಗಳ ತಂಡ.

ವಿಜಯಪುರ: ಹಳ್ಳಿಗಳಲ್ಲಿ ಉದ್ಯೋಗ ಸಿಗದೇ ವಿಜಯಪುರ ನಗರಕ್ಕೆ ಬರುತ್ತಿದ್ದ ಕಾರ್ಮಿಕರ ಸಮೀಕ್ಷೆ ನಡೆಸಿ, ತಕ್ಷಣವೇ ಉದ್ಯೋಗ ಕೊಡುವ ಕೆಲಸ ಆರಂಭಗೊಂಡಿದೆ. ನಗರದ ಅಥಣಿ ರಸ್ತೆಯಲ್ಲಿ ಉದ್ಯೋಗಕ್ಕಾಗಿ ಕಾರ್ಮಿಕರು ಅಂಗಲಾಚುತ್ತ ನಿಲ್ಲುತ್ತಿದ್ದ ಸ್ಥಳದಲ್ಲೇ ಜಾಬ್‌ ಕಾರ್ಡ್‌ ವಿತರಣೆ ಹಾಗೂ ಉದ್ಯೋಗ ನೀಡುವುದಕ್ಕೆ ಜಿಪಂ ಅಧಿಕಾರಿಗಳ ಪ್ರತ್ಯೇಕ ತಂಡವನ್ನು ನಿಯೋಜಿಸಿದೆ.

‘ವಿಜಯಪುರ ಮಾರುಕಟ್ಟೆಯಲ್ಲಿ ಕಾರ್ಮಿಕರು ಸಿಗುತ್ತಾರೆ’ ಶೀರ್ಷಿಕೆಯಲ್ಲಿ ‘ಉದಯವಾಣಿ’ ಮೇ 13ರಂದು ವಿಶೇಷ ವರದಿಗೆ ಪ್ರಕಟಿಸಿದ ಬೆನ್ನಲ್ಲೇ ಸ್ಪಂದನೆ ದೊರೆತಿದೆ. ವರದಿ ಪ್ರಕಟವಾಗುತ್ತಲೇ ಎಚ್ಚೆತ್ತ ವಿಜಯಪುರ ಜಿಪಂ ಸಿಇಒ ವಿಕಾಸ ಸುರಳಕರ ಕೂಡಲೇ ವಿಜಯಪುರ ನಗರಕ್ಕೆ ಉದ್ಯೋಗ ಅರಸಿ ಬರುವ ಹಳ್ಳಿಗರ ಸಮೀಕ್ಷೆ ನಡೆಸಲು ಸೂಚಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿದ್ದು ನೋಂದಣಿ ಕೇಂದ್ರವನ್ನೂ ತೆರೆದಿದ್ದಾರೆ.

ಇದಕ್ಕಾಗಿ ವಿಜಯಪುರ ನಗರದ ಆಥಣಿ ರಸ್ತೆಯಲ್ಲಿ ಉದ್ಯೋಗಕ್ಕಾಗಿ ಕಾರ್ಮಿಕರು ನಿಲ್ಲುತ್ತಿದ್ದ ಸ್ಥಳದಲ್ಲಿ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಉದ್ಯೋಗ ನೀಡಲು ಹೆಸರು ನೋಂದಣಿಗೆ ಶಾಶ್ವತವಾಗಿ ಕೌಂಟರ್‌ ತೆರೆಯಲಾಗಿದೆ. ಇಬ್ಬರು ಪಿಡಿಒಗಳನ್ನು ಈ ಕೇಂದ್ರಕ್ಕೆ ನಿಯೋಜಿಸಿದ್ದು, ಬುಧವಾರದಿಂದ ಈ ಕೇಂದ್ರ ಕಾರ್ಯಾರಂಭ ಮಾಡಿದೆ.

ಹಳ್ಳಿಗಳಲ್ಲಿ ಉದ್ಯೋಗ ಇಲ್ಲ ಎಂದು ನಗರಕ್ಕೆ ಬರುವ ನರೇಗಾ ಜಾಬ್‌ ಕಾರ್ಡ್‌ ಇರುವ ಕಾರ್ಮಿಕರಿಗೆ ತಕ್ಷಣವೇ ಸರ್ಕಾರಿ ವಾಹನದಲ್ಲಿ ಹತ್ತಿರದ ಹಳ್ಳಿಗೆ ಕರೆದೊಯ್ದು ಉದ್ಯೋಗ ಕೊಡಲು ವ್ಯವಸ್ಥೆ ಮಾಡಲಾಗಿದೆ. ನರೇಗಾ ಜಾಬ್‌ ಕಾರ್ಡ್‌ ಇಲ್ಲದ ಕಾರ್ಮಿಕರನ್ನು ಗುರುತಿಸಿ, ಸ್ಥಳದಲ್ಲೇ ಜಾಬ್‌ ಕಾರ್ಡ್‌ಗೆ ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ನೋಂದಣಿ ಕಾರ್ಮಿಕರ ಹೆಸರುಗಳನ್ನು ಆಯಾ ಗ್ರಾಪಂಗಳಿಗೆ ರವಾನಿಸಿ, ತಕ್ಷಣ ಉದ್ಯೋಗ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ.

‘ಉದಯವಾಣಿ’ ವರದಿ ಪರಿಣಾಮ ಜಿಲ್ಲೆಯಲ್ಲಿ ಈ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಲು ನಿರ್ಧರಿಸಿದೆ. ನರೇಗಾ ಯೋಜನೆಯ ನಿಮಯ ಸಡಿಲಿಸಿ 3 ದಿನಗಳಲ್ಲೇ ಎನ್‌ಎಂಆರ್‌ ಸಲ್ಲಿಸಿ, 4-5 ದಿನಗಳಲ್ಲಿ ಕೂಲಿ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಿ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮ ಎಂಬಂತೆ ಡೋಣೂರು ಪಿಡಿಒ ಫಾರ್ಮ್ ನಂ-6 ಅರ್ಜಿ ಸಲ್ಲಿಸಿದ ವಿಜಯಪುರ ನಗರಕ್ಕೆ ಕೂಲಿಗೆ ಬರುತ್ತಿದ್ದ ಪರಶುರಾಮ ತಳಕೇರಿ ಹಾಗೂ ಇತರೆ ಕಾರ್ಮಿಕರ ಮನೆಗೆ ಪಿಡಿಒ ಸ್ವಯಂ ತೆರಳಿ ಕೂಲಿ ಕೊಡಿಸಿದ್ದಾರೆ. ಸರ್ಕಾರಿ ವಾಹನದಲ್ಲಿ ನೆರೆಯ ಗ್ರಾಮ ಇಂಗಳೇಶ್ವರಕ್ಕೆ ಕರೆದೊಯ್ದು ಉದ್ಯೋಗ ಕೊಟ್ಟಿದ್ದಾರೆ. ಇದಲ್ಲದೇ ಗ್ರಾಮದಲ್ಲಿ ಸುಮಾರು 60 ಜನರಿಂದ ನರೇಗಾ ಯೋಜನೆಯಲ್ಲಿ ಉದ್ಯೋಗಕ್ಕಾಗಿ ಫಾರ್ಮ್-6 ಭರ್ತಿ ಮಾಡಿಸಿಕೊಂಡಿದ್ದು, ಎರಡು ದಿನಗಳಲ್ಲಿ ಗ್ರಾಮದಲ್ಲೇ ನಿರಂತರ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

ಬಸವನಬಾಗೇವಾಡಿಯಲ್ಲೂ ಕ್ರಮ
ಮತ್ತೊಂದೆಡೆ ಮಂಗಳವಾರ ಬಸವನಬಾಗೇವಾಡಿ ಪಟ್ಟಣದ ನಂದೀಶ್ವರ ದೇವಸ್ಥಾನದ ಎದುರು ಕೂಡ ಇದೇ ರೀತಿ ಕಾರ್ಮಿಕರು ಕೆಲಸಕ್ಕೆ ಅಲೆಯುವ ಸ್ಥಿತಿ ಇದ್ದು, ಸದರಿ ವರದಿಯಿಂದ ಈ ಸ್ಥಳದಲ್ಲೂ ಕಾರ್ಮಿಕರ ಹೆಸರು ನೋಂದಣಿ ಆರಂಭಿಸಿದ್ದಾರೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭೀಮರಾಯ ಇಂಡಿ ನೇತೃತ್ವದಲ್ಲಿ ಸಾಮಾಜಿಕ ಪರಿಶೋಧನಾ ಸಂಯೋಜಕ ಬಸವರಾಜ ಮಾದನಶಟ್ಟಿ, ಬಿ.ಎಸ್‌. ಧನಶೆಟ್ಟಿ, ತಾಂತ್ರಿಕ ಸಂಯೋಜಕ ವಿ.ಆರ್‌. ಪಟ್ಟಣಶೆಟ್ಟಿ, ಕಾರ್ಯದರ್ಶಿ ಘೋರ್ಪಡೆ‌, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಣ್ಣೂರು ಎಸ್‌.ಎಸ್‌. ಶೇಗುಣಸಿ, ನರಸಲಗಿ ಜೆ.ಎಂ. ಮಮದಾಪುರ, ಯರನಾಳದ ರವಿ ಗುಂಡಾಳ, ಹೂವಿನಹಿಪ್ಪರಗಿಯ ಎಂ.ಎನ್‌. ಕತ್ತಿ, ಕಣಕಾಲ ಬಿ.ಎಂ. ಅಂಕದ, ಮಸಬಿನಾಳ ಕಾರ್ಯದರ್ಶಿ ಶಂಕರ ಕೋಲಕಾರ, ಮುತ್ತಗಿ ಎಸ್‌ಡಿಎ ಆರ್‌.ಎ. ಸಿಕ್ಕಲಗಾರ ಅವರಿದ್ದ ತಂಡ ಕಾರ್ಮಿಕರ ಸಮೀಕ್ಷೆ, ನೋಂದಣಿ ಆರಂಭಿಸಿದೆ.

ಗ್ರಾಪಂನಲ್ಲಿ ಪಿಡಿಒ ಸಿಗದಿದ್ದರೂ ವಿಜಯಪುರ ನಗರದಲ್ಲಿ ನರೇಗಾ ಯೋಜನೆ ಹೆಸರು ನೋಂದಣಿ ಹಾಗೂ ಉದ್ಯೋಗ ಕಲ್ಪಿಸಲು ಪ್ರತ್ಯೇಕ ಅಧಿಕಾರಗಳ ತಂಡದೊಂದಿಗೆ ವಿಶೇಷ ಕೌಂಟರ್‌ ತೆರೆಯಲಾಗಿದೆ. ಕೂಲಿ ಹಣ ಪಾವತಿಗೆ ಈ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ ನರೇಗಾ ನಿಯಮ ಸಡಿಲಿಸಿ 3 ದಿನಗಳಲ್ಲಿ ಎನ್‌ಎಂಆರ್‌ ಸಲ್ಲಿಸಲು ಸೂಚಿಸಲಾಗಿದೆ.
ವಿಕಾಸ ಸುರಳಕರ, ಜಿಪಂ ಸಿಇಒ, ವಿಜಯಪುರ

ಜಿ.ಎಸ್‌. ಕಮತರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ