ಚುನಾವಣೆ ದೂರವಿದ್ದರೂ ಚಟುವಟಿಕೆ ಚುರುಕು

ಜುಲೈ 28ಕ್ಕೆ ಪಾಲಿಕೆ ಸದಸ್ಯರ ಅಧಿಕಾರ ಅಂತ್ಯ •35 ವಾರ್ಡ್‌ಗಳ ಕ್ಷೇತ್ರ -ಮೀಸಲು ಮರು ಹಂಚಿಕೆ‌

Team Udayavani, May 13, 2019, 11:12 AM IST

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಭವನ

ವಿಜಯಪುರ: ವಿಜಯಪುರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮೂರು ಪುರಸಭೆಗಳಿಗೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಆದರೆ ಚುನಾವಣೆ ಘೋಷಣೆಗೆ ಇನ್ನೂ ಎರಡು ತಿಂಗಳು ಬಾಕಿ ಇರುವಂತೆ ಮಹಾನಗರ ಪಾಲಿಕೆ ಚುನಾವಣೆಗೂ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ವಿವಿಧ ವಾರ್ಡ್‌ಗಳಲ್ಲಿ ಸ್ಪರ್ಧಾಕಾಂಕ್ಷಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.

2013 ಮಾರ್ಚ್‌ ತಿಂಗಳಲ್ಲಿ ವಿಜಯಪುರ ನಗರಸಭೆಗೆ ಚುನಾವಣೆ ನಡೆದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲು ವಿಷಯವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅಧಿಕಾರ ಹಂಚಿಕೆ ವಿಳಂಬವಾಗಿತ್ತು. ಈ ಹಂತದಲ್ಲೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದ ಹಲವು ನಗರಸಭೆಗಳನ್ನು ಮಹಾನಗರ ಪಾಲಿಕೆ ಹಂತಕ್ಕೆ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಿತ್ತು.

ಹೀಗಾಗಿ 2013 ಡಿಸೆಂಬರ್‌ ತಿಂಗಳಲ್ಲಿ ವಿಜಯಪುರ ನಗರಸಭೆ ಕೂಡ ಮಹಾನಗರ ಪಾಲಿಕೆ ಮಾನ್ಯತೆ ಪಡೆಯಿತು. ಇದರ ಫ‌ಲವಾಗಿ ಪೌರ ನಿಯಮಗಳ ಕಾಯ್ದೆಗೆ ತಿದ್ದುಪಡಿ ಮೂಲಕ ನಗರಸಭೆಗೆ ಆಯ್ಕೆಯಾಗಿದ್ದ ಸದಸ್ಯರನ್ನೇ ಅನಾಯಾಸವಾಗಿ ಮಹಾನಗರ ಪಾಲಿಕೆ ಸದಸ್ಯರನ್ನಾಗಿ ಬಡ್ತಿ ನೀಡಲಾಯಿತು. ಬಡ್ತಿ ಪಡೆದ ಪಾಲಿಕೆ ಮೊದಲ ಮೇಯರ್‌ ಸಜ್ಜಾದೆ ಪೀರಾ ಮುಶ್ರೀಫ್‌ ಅವರು ಅಧಿಕಾರಕ್ಕೆ ಬಂದ ದಿನದಿಂದ ಚುನಾಯಿತ ಸದಸ್ಯರ ಆಧಿಕಾರ ಐದು ವರ್ಷ ಇರುತ್ತದೆ. ಹೀಗೆ ಅಧಿಕಾರಕ್ಕೆ ಬಂದಿರುವ ಪಾಲಿಕೆ ಸದಸ್ಯರ ಅವಧಿ ಜುಲೈ 28ಕ್ಕೆ ಅಂತ್ಯವಾಗಲಿದೆ.

ಆದರೆ ಕಳೆದ ಕೆಲವು ತಿಂಗಳ ಹಿಂದೆ ವಿಜಯಪುರ ಪಾಲಿಕೆಯ ವಾರ್ಡ್‌ ಮರು ವಿಂಗಡಿಸಿ, ಮೀಸಲು ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಾಲಿ ಆಡಳಿತ ಮಂಡಳಿ ಅಧಿಕಾರದ ಅವಧಿ ಪೂರ್ಣಗೊಳ್ಳಲು ಇನ್ನೂ 2 ತಿಂಗಳು ಬಾಕಿದೆ. ಹೀಗಾಗಿ ಚುನಾವಣೆಗೆ ಸಾಕಷ್ಟು ಕಾಲಾವಕಾಶವಿದ್ದರೂ ಪಾಲಿಕೆಗೆ ಆವಧಿ ಪೂರ್ವ ಚುನಾವಣೆಗೆ ನಡೆಯಲಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ. ಹೀಗಾಗಿ ಅವಧಿಗೆ ಮುನ್ನವೇ ಸರ್ಕಾರ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಿಸುವ ನಿರೀಕ್ಷೆ ಇದೆ ಎಂಬ ಮಾತಿದೆ. ಇದರಿಂದಾಗಿ ಪಾಲಿಕೆ ಹಾಲಿ ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರು ಮತ್ತೂಮ್ಮೆ ಸ್ಪರ್ಧಿಸಿ ಆಯ್ಕೆಯಾಗುವ ಕನಸು ಕಟ್ಟಿಕೊಂಡಿದ್ದಾರೆ. ಇದಕ್ಕಾಗಿ ತಮಗೆ ಸೂಕ್ತ ಎನಿಸಿದ ವಾರ್ಡ್‌ಗಳ ಪ್ರಮುಖರು, ನಾಕರೊಂದಿಗೆ ಚರ್ಚೆಯಲ್ಲಿ ಮಗ್ನರಾಗಿದ್ದಾರೆ.

ಈಗಾಗಲೇ ಮಹಾನಗರ ಪಾಲಿಕೆಯ ಎಲ್ಲ 35 ವಾರ್ಡ್‌ಗಳ ವ್ಯಾಪ್ತಿಯನ್ನು ಬದಲಾಯಿಸಿ ಮರು ವಿಂಗಡಣೆ ಮಾಡಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ನಕ್ಷೆ, ವಾರ್ಡ್‌ ನಕ್ಷೆಗಳು ಸಿದ್ಧಗೊಂಡಿವೆ. ಮ್ತತೊಂದೆಡೆ ವಾರ್ಡ್‌ವಾರು ಮತದಾರರ ಪಟ್ಟಿ ಕೂಡ ಪ್ರಾಥಮಿಕ ಹಂತದಲ್ಲಿ ಸಿದ್ಧಗೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 2.70 ಲಕ್ಷ ಮತದಾರರಿದ್ದಾರೆ.

ಇದರ ಮಧ್ಯೆ ನಗರದ ವಾರ್ಡ್‌ ಮೀಸಲು ಪ್ರಶ್ನಿಸಿ ಪಾಲಿಕೆ ವಾರ್ಡ್‌ ನಂ. 5ರ ಸದಸ್ಯ ಕರಡಿ , ವಾರ್ಡ್‌ ನಂ. 7 ಸದಸ್ಯ ರಾಹುಲ್ ಜಾಧವ, ವಾರ್ಡ್‌ ನಂ. 9 ಸದಸ್ಯ ರಾಜು ಮಗೀಮಠ ಹಾಗೂ ವಾರ್ಡ್‌ ನಂ.13 ಸದಸ್ಯ ರಾಜೇಶ ದೇವಗಿರಿ ಇವರು ಮೀಸಲಾತಿ ವಿಷಯವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದ್ಯ ಪ್ರಕರಣ ಕಲಬುರಗಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ. ಹೀಗಾಗಿ ನ್ಯಾಯಾಲಯ ಆದೇಶ ಬರುವವರೆಗೆ ಈ ನಾಲ್ಕು ವಾರ್ಡ್‌ಗಳ ಚುನಾವಣೆ ಚಟುವಟಿಕೆ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ನ್ಯಾಯಾಲಯದಲ್ಲಿರುವ ನಾಲ್ಕು ವಾರ್ಡ್‌ ಹೊರತು ಪಡಿಸಿ ಚುನಾವಣೆ ನಡೆಸುತ್ತದೋ ಅಥವಾ ನ್ಯಾಯಾಲಯದ ತೀರ್ಪು ಹೊರ ಬಿದ್ದ ಮೇಲೆ ಎಲ್ಲ 35 ವಾರ್ಡ್‌ಗಳಿಗೆ ಚುನಾವಣೆ ನಡೆಸಿಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಇದರ ಹೊರತಾಗಿಯೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆಗೆ ಈಗಾಗಲೇ ಚಟುವಟಿಕೆ ಚುರುಕುಗೊಂಡಿವೆ. ಈಗಿರುವ ಪಾಲಿಕೆ ಸದಸ್ಯರು ಮತ್ತೆ ಸ್ಪರ್ಧೆಗೆ ಇಳಿಯಲು ತಮಗೆ ಯಾವ ವಾರ್ಡ್‌ ಸೂಕ್ತ, ಆಲ್ಲಿ ತಮಗಿರುವ ಅನುಕೂಲವೇನು, ಅನಾನುಕೂಲವೇನು, ತಮ್ಮ ಸಮುದಾಯದ ಮತದಾರರು ಎಷ್ಟಿದ್ದಾರೆ. ತಮ್ಮನ್ನು ಬೆಂಬಲಿಸುವ ಸಮುದಾಯಗಳ ಹಾಗೂ ಬಂಧುಗಳು, ಮಿತ್ರರ ಮತಗಳೆಷ್ಟು ಎಂದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

2013ರ ಮಾರ್ಚ್‌ ತಿಂಗಳಲ್ಲಿ ವಿಜಯಪುರ ನಗರಸಭೆಗೆ ಚುನಾವಣೆ ನಡೆದು, ಬಿಜೆಪಿ 13 ಸದಸ್ಯ ಬಲ, ಕಾಂಗ್ರೆಸ್‌ 10, ಜೆಡಿಎಸ್‌ 8, ಕೆಜೆಪಿ 1, ಪಕ್ಷೇತರರು 2 ಹಾಗೂ ಎನ್‌ಸಿಪಿ ಓರ್ವ ಸದಸ್ಯರಿದ್ದರು. ರಾಜಕೀಯ ವಿಪ್ಲವಗಳಿಂದಾಗಿ ಪಾಲಿಕೆ ಆಡಳಿತದಲ್ಲಿ ಚುನಾಯಿತ ಸದಸ್ಯರಲ್ಲಿ ಹಲವು ಏರುಪೇರಾಯಿತು. 13 ಸದಸ್ಯ ಬಲದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಅವರ ಬೆಂಬಲಿತ ಜೆಡಿಎಸ್‌ 8 ಸದಸ್ಯರು ಹಾಗೂ ಓರ್ವ ಕಾಂಗ್ರೆಸ್‌ ಹಾಗೂ ಓರ್ವ ಪಕ್ಷೇತರ ಸದಸ್ಯರ ಸೇರ್ಪಡೆಯಿಂದ 22ಕ್ಕೆ ಏರಿತ್ತು. ಮತ್ತೂಂದೆಡೆ 10 ಸದಸ್ಯ ಬಲದ ಕಾಂಗ್ರೆಸ್‌ ಪಕ್ಷಕ್ಕೆ ಪಾಲಿಕೆ ಮೇಯರ್‌ ಸ್ಥಾನಕ್ಕಾಗಿ ಸಂಗೀತಾ ಪೋಳ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿದ್ದ ಗೂಳಪ್ಪ ಶಟಗಾರ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದರು. ಕೆಜೆಪಿ ಹಾಗೂ ಎನ್‌ಸಿಪಿ ಪಕ್ಷದ ತಲಾ ಓರ್ವ ಸದಸ್ಯರು ಹಾಗೂ ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದರು.

ವಿಜಯಪುರ ಮಹಾನಗರ ಪಾಲಿಕೆ ಹಾಲಿ ಆಡಳಿತ ಮಂಡಳಿ ಅವಧಿ ಮುಂಬರು ಜುಲೈ 28ಕ್ಕೆ ಮುಕ್ತಾಯವಾಗಲಿದೆ. ನೂತನ ಪಾಲಿಕೆ ಆಡಳಿತ ಮಂಡಳಿ ಚುನಾವಣೆಗೆ ವಾರ್ಡ್‌ ಮರು ವಿಂಗಡಣೆ ಆಗಿದ್ದು, ನಾಲ್ಕು ವಾರ್ಡ್‌ಗಳ ಮೀಸಲು ಪ್ರಶ್ನಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಸರ್ಕಾರ ಚುನಾವಣೆ ಸಿದ್ಧತೆ ಕುರಿತು ನಮಗೆ ಯಾವ ಸೂಚನೆಯನ್ನೂ ನೀಡಿಲ್ಲ. ಹೀಗಾಗಿ ಚುನಾವಣೆಗೆ ನಮ್ಮ ಆಡಳಿತ ಯಾವ ಸಿದ್ಧತೆಯನ್ನೂ ನಡೆಸಿಲ್ಲ.
ಡಾ| ಔದ್ರಾಮ್‌, ಪೌರಾಯುಕ್ತರು,
ಮಹಾನಗರ ಪಾಲಿಕೆ, ವಿಜಯಪುರ

ವಿಜಯಪುರ ಮಹಾನಗರ ಪಾಲಿಕೆ ಕ್ಷೇತ್ರ ಮರು ವಿಂಗಡಣೆ ಹಂತದಲ್ಲಿ ಅವೈಜ್ಞಾನಿಕ ಮೀಸಲು ಪ್ರಶ್ನಿಸಿ ನಾಲ್ವರು ಸದಸ್ಯರು ಹೈಕೋರ್ಟ್‌ ಮೊರೆ ಹೋಗಿದ್ದೇವೆ. ನ್ಯಾಯಾಲಯದ ಆದೇಶಕ್ಕೆ ಕಾಯುತ್ತಿದ್ದೇವೆ. ಇದರ ಹೊರತಾಗಿ ಕೆಲವು ಹಾಲಿ ಸದಸ್ಯರು, ಕಳೆದ ಚುನಾವಣೆಯಲ್ಲಿ ಪರಾಭವಗೊಂಡವರು, ಹೊಸದಾಗಿ ಸ್ಪರ್ಧಿಸುವ ಆಸಕ್ತಿ ಹೊಂದಿರುವವರು ಕಣಕ್ಕಿಳಿಯಲು ತಮಗೆ ಸೂಕ್ತ ವಾರ್ಡ್‌ ಹುಡುಕಾಟದಲ್ಲಿದ್ದಾರೆ. ಇದಕ್ಕಾಗಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿರುವುದು ಸತ್ಯ.
ರಾಜೇಶ ದೇವಗಿರಿ,
ಸದಸ್ಯರು, ವಾರ್ಡ್‌ ನಂ.13 ಮಹಾನಗರ ಪಾಲಿಕೆ, ವಿಜಯಪುರ

ಜಿ.ಎಸ್‌. ಕಮತರ

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ