ಗುಮ್ಮಟ ದರ್ಶಿಸದೇ ಸ್ಥಗಿತಗೊಂಡ ಸ್ವರ್ಣರಥ

ದೇಶದ ಪ್ರವಾಸೋದ್ಯಮಕ್ಕೆ ಕಾಲಕಲ್ಪ ನೀಡಲು ಭಾರತೀಯ ರೈಲಿನಿಂದ ಆರಂಭವಾಗಿತ್ತು ವಿಶೇಷ ಸೇವೆ

Team Udayavani, Aug 23, 2019, 10:59 AM IST

ಜಿ.ಎಸ್‌. ಕಮತರ
ವಿಜಯಪುರ:
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದು ರೈಲ್ವೇ ಸೇವೆಯಲ್ಲೂ ಕಾಣಸಿಗುತ್ತಿವೆ. ರಾಜ್ಯದಲ್ಲಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಆರಂಭಿಸಿದ್ದ ಸ್ವರ್ಣರಥ ಸೇವೆ ಸ್ಥಗಿತಗೊಂಡಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಗೋಲ್ಡನ್‌ ಚಾರಿಯೇಟ್ ಹೆಸರಿನ 7 ದಿನಗಳ ಈ ಐಷಾರಾಮಿ ರೈಲು, ಬಾಗಲಕೋಟೆಗೆ ಬಂದರೂ ಪ್ರವಾಸಿ ಪಟ್ಟಿಯಲ್ಲಿ ವಿಜಯಪುರಕ್ಕೆ ಸ್ಥಾನವೇ ಸಿಗಲಿಲ್ಲ. ಬಾಗಲಕೋಟೆಗೆ ಬರುತ್ತಿದ್ದ ಈ ವಿಶಿಷ್ಟ ಆನುಭೂತಿ ನೀಡುತ್ತಿದ್ದ ರೈಲು ಸೇವೆಯೂ ಇದೀಗ ಸ್ಥಗಿತಗೊಂಡಿದೆ.

ರಾಜ್ಯದಲ್ಲಿ ಪ್ರವಾಸೋದ್ಯಮ ಬಲಪಡಿಸಲು ರಾಜ್ಯ ಸರ್ಕಾರ ತನ್ನ ಅಧೀನದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ 2008ರಲ್ಲಿ ಆರಂಭಗೊಂಡಿದ್ದ ವಿಶೇಷ ರೈಲು ಪ್ರವಾಸಿ ಸೇವೆ 2018 ಫೆಬ್ರವರಿ ತಿಂಗಳಲ್ಲಿ ಈ ಸೇವೆ ಸ್ಥಗಿತಗೊಂಡಿದೆ.

2 ಎಂಜಿನ್‌ನ 18 ಬೋಗಿಗಳ ಈ ಪ್ರವಾಸಿ ರೈಲಿಗೆ ಸ್ವರ್ಣರಥ ಎಂದು ಹೆಸರಿಡಲಾಗಿತ್ತು. ಹಂಪಿಯಲ್ಲಿ ಕಲ್ಲಿನ ರಥವಿದ್ದು, ಚಿನ್ನವನ್ನು ರಸ್ತೆಯಲ್ಲಿಟ್ಟು ಮಾರಾಟ ಮಾಡುತ್ತಿದ್ದ ವಿಜಯನಗರ ಸುವರ್ಣ ಯುಗದ ವೈಭವವನ್ನು ಸ್ಮರಿಸುವುದಕ್ಕಾಗಿ ಗೋಲ್ಡನ್‌ ಚಾರಿಯೇಟ್ ಎಂದು ಹೆಸರು ಇರಿಸಲಾಗಿತ್ತು. ವಿಶಿಷ್ಟ ವಿನ್ಯಾಸಗೊಳಿಸಿದ್ದ ಈ ರೈಲು ಪ್ರಯಾಣದ ಪ್ರವಾಸ ವಿಶಿಷ್ಟ ಅನುಭವ ನೀಡುತ್ತಿತ್ತು. ರಾಜ್ಯದ ಐತಿಹಾಸಿಕ ಪರಂಪರೆ ತಾಣಗಳಿಗೆ ಭೇಟಿ ನೀಡುವ ಕಾರಣಕ್ಕೆ ಸ್ವರ್ಣರಥದ ಪ್ರತಿ ಬೋಗಿಗಳಿಗೆ ರಾಜ್ಯವನ್ನು ಆಳಿದ ಗಂಗ, ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರ, ಬಹಮನಿಮನಿ, ಆದಿಲ್ ಶಾಹಿ ಹೀಗೆ ಪ್ರತಿ ರಾಜಮನೆಗಳ ಹೆಸರನ್ನು ಇರಿಸಲಾಗಿತ್ತು.

ಹಂಪಿಯ ಐತಿಹಾಸಿಕ ಸ್ಮರಣೆಗಾಗಿ ಸ್ವರ್ಣರಥ ಎಂದು ಹೆಸರಿಸಿದ ಈ ವಿಶೇಷ ರೈಲು ಸೇವೆ ಒಂದು ಬೋಗಿಗೆ ಅದಿಲ್ ಶಾಹಿ ಹೆಸರು ಇರಿಸಿದ್ದರೂ ಈ ರೈಲಿನ ಪ್ರವಾಸಿ ಪಟ್ಟಿಯಲ್ಲಿ ಆದಿಲ್ ಶಾಹಿ ಅರಸರ ರಾಜಧಾನಿ ವಿಜಯಪುರ ಹೆಸರೇ ಇರಲಿಲ್ಲ. ಹೀಗಾಗಿ 10 ವರ್ಷಗಳಲ್ಲಿ ಒಂದೇ ಒಂದು ದಿನ ಸ್ವರ್ಣ ರಥ ಗೋಲಗುಮ್ಮಟ ದರ್ಶನ ಮಾಡಲೇ ಇಲ್ಲ.

ಬೆಂಗಳೂರಿನಿಂದ ಹೊರಡುತ್ತಿದ್ದ ಈ ರೈಲು ಕಬಿನಿ, ಬಂಡಿಪುರ ಅರಣ್ಯ, ಮ್ಯೆಸೂರು, ಹಾಸನ, ಹಂಪಿ, ಗದಗ ಮಾರ್ಗವಾಗಿ ಬಾಗಲಕೋಟೆ (ಬಾದಾಮಿ) ಗೆ ಬಂದು, ಮತ್ತೆ ಗದಗ-ಹುಬ್ಬಳ್ಳಿ ಮಾರ್ಗವಾಗಿ ಗೋವಾ ರಾಜ್ಯಕ್ಕೆ ತೆರಳುತ್ತಿತ್ತು.

ಬೆಂಗಳೂರಿನಿಂದ ವಿವಿಧ ಕಡೆಗಳಲ್ಲಿ ಸುತ್ತಿ ಬರುತ್ತಿದ್ದ ಈ ರೈಲು ಪಟ್ಟದಕಲ್ಲು, ಐಹೊಳೆ ವೀಕ್ಷಣೆಗೆ ಪ್ರವಾಸಿಗರನ್ನು ಕರೆದುಕೊಂಡು ಬಾದಾಮಿ ಮಾರ್ಗವಾಗಿ ಬಂದರೂ ಅಲ್ಲಿ ನಿಲ್ಲದೇ ಬಾಗಲಕೋಟೆ ನಿಲ್ದಾಣಕ್ಕೆ ಬರುತ್ತಿತ್ತು. ಹೀಗಾಗಿ ಅಲ್ಲಿಂದ ಪ್ರವಾಸಿಗರನ್ನು ಕೆಎಸ್‌ಟಿಡಿಸಿ ಸುಖಾಸೀನ ಬಸ್‌ನಲ್ಲಿ ಐಹೊಳೆ, ಪಟ್ಟದಕಲ್ಲು ವೀಕ್ಷಣೆಗೆ ಕರೆದೊಯ್ಯಲಾಗುತ್ತಿತ್ತು. ಇದನ್ನು ವೀಕ್ಷಿಸಿದ ಪ್ರವಾಸಿಗರನ್ನು ಮತ್ತೆ ಬಾಗಲಕೋಟೆಗೆ ಕರೆ ತಂದು ಅಲ್ಲಿಂದ ಗದಗ ಮಾರ್ಗವಾಗಿ ಗೋವಾ ರಾಜ್ಯಕ್ಕೆ ಕರೆದೊಯ್ಯಲಾಗುತ್ತಿತ್ತು.

ಸದರಿ ವಿಶೇಷ ಪ್ರವಾಸಿ ರೈಲು ನಿರ್ವಹಣೆಯನ್ನು ಮೇಪಲ್ ಹೊಟೇಲ್ ಎಂಬ ಉದ್ಯಮ ಸಂಸ್ಥೆಗೆ 10 ವರ್ಷಗಳ ಗುತ್ತಿಗೆ ನೀಡಿದ್ದ ರಾಜ್ಯ ಸರ್ಕಾರ, 2018ಕ್ಕೆ ಗುತ್ತಿಗೆ ಮುಕ್ತಾಯವಾದಾಗ ನವೀಕರಣಕ್ಕೆ ಆಸಕ್ತಿ ತೋರಲೇ ಇಲ್ಲ. ಅತ್ಯಂತ ಜನಪ್ರೀಯತೆ ಹಾಗೂ ಪ್ರವಾಸೋದ್ಯಮದಲ್ಲಿ ಹೊಸ ಅಲೆ ಸೃಷ್ಟಿಸಿ ದೇಶ-ವಿದೇಶಿ ಪ್ರವಾಸಿಗರನ್ನು ಇನ್ನಿಲ್ಲದಂತೆ ಆಕರ್ಷಿಸಿತ್ತು. ಸಮ್ಮಿಶ್ರ ಸರ್ಕಾರದ ರಾಜಕೀಯ ಜಂಜಾಟಗಳು, ಕರ್ತವ್ಯದ ಹೊರೆ ಕಡಿಮೆ ಮಾಡಿಕೊಳ್ಳುವ ಅಧಿಕಾರಿಗಳ ಹುನ್ನಾರಗಳಿಂದಾಗಿ ರಾಜ್ಯಕ್ಕೆ ಸಿಕ್ಕಿದ್ದ ಪ್ರವಾಸೋದ್ಯಮ ಸೇವೆಯೊಂದು ಸದ್ದಿಲ್ಲದೇ ಸ್ಥಗಿತಗೊಂಡಿದೆ. ರಾಜ್ಯದ ಪಾರಂಪರಿಕ ತಾಣಗಳ ವೀಕ್ಷಣೆಗೆ ರೂಪಿಸಲಾಗಿದ್ದ ಈ ರೈಲು ಪ್ರವಾಸದ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಗೆ ಕೊನೆಗೂ ಸ್ಥಾನ ಸಿಗಲೇ ಇಲ್ಲ. ಏಕೆಂದರೆ ಇದೀಗ ಈ ರೈಲು ಸೇವೆ ಕೂಡ 2018 ಫೆಬ್ರವರಿ ತಿಂಗಳಿಂದ ಬಂದ್‌ ಆಗಿದೆ.

ಸ್ವರ್ಣರಥದ ಪ್ರವಾಸಿ ಪಟ್ಟಿಯಲ್ಲಿ ವಿಜಯಪುರಕ್ಕೆ ಸ್ಥಾನ ನೀಡದ ಕುರಿತು ಹಲವರು ಪ್ರಶ್ನಿಸಿದ್ದಕ್ಕೆ ಬೆಂಗಳೂರಿನಲ್ಲಿ ಕುಳಿತಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ನೀಡಿದ್ದ ಉತ್ತರ ಗೋಲಗುಮ್ಮಟ ಎತ್ತರವಾಗಿದೆ, ಇದನ್ನು ಏರಲು ಪ್ರವಾಸಿಗರು ಪ್ರಯಾಸ ಪಡುತ್ತಾರೆ. ಅಲ್ಲದೇ ಹಂಪಿ ವೀಕ್ಷಿಸುವ ದೇಶ-ವಿದೇಶಿ ಪ್ರವಾಸಿಗರು ಗೋವಾಕ್ಕೆ ತೆರಳಲು ಆಸಕ್ತಿ ತೋರುತ್ತಾರೆ. ವಿಜಯಪುರಕ್ಕೆ ತೆರಳಿದರೆ ವಾರದ ಪ್ಯಾಕೇಜ್‌ ಅವಧಿ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂಬೆಲ್ಲ ಸಬೂಬು ನೀಡಿದ್ದರಂತೆ.

ವಿಜಯನಗರ ಸಾಮ್ರಾಜ್ಯದ ವೈಭವ, ಹಂಪಿಯ ಕಲ್ಲಿನ ರಥವನ್ನು ಹಿನ್ನೆಲೆಯಾಗಿ ಸ್ವರ್ಣರಥ ಎಂದು ಹೆಸರಿಸಿಕೊಂಡ ಈ ವಿಶೇಷ ಪ್ರವಾಸಕ್ಕೆ ವಿಜಯಪುರ ತಾಣವನ್ನು ಪ್ರವಾಸಿ ಪಟ್ಟಿಯಿಂದ ಕೈ ಬಿಡುವ ಮೂಲಕ ಹಂಪಿ-ವಿಜಯಪುರಕ್ಕೆ ಇರುವ ಐತಿಹಾಸಿಕ ಮೂಲ ಸಂಬಂಧವನ್ನೇ ಕಳಚಲಾಗಿದೆ. ಹಂಪಿಯ ವೈಭವ ಕಂಡೇ ಶಾಹಿ ಅರಸರು ವಿಜಯನಗರ ಸಾಮ್ರಾಜ್ಯದ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದರು. ವಿಜಯಪುರದ ಶಾಹಿ ಅರಸರ ನಿರಂತರ ದಾಳಿಯ ಕಾರಣವೇ ವಿಜಯನಗರ ಸಾಮ್ರಾಜ್ಯ ಸರ್ವನಾಶವಾಗಿ ಹಾಳು ಹಂಪೆ ಎನಿಸಿಕೊಂಡಿದೆ. ಹೀಗಾಗಿ ವಿಜಯಪುರ ಹೆಸರು ಕೈ ಬಿಡುವ ಮೂಲಕ ಹಂಪೆಯ ಕಥೆ ಹೇಳಿ, ಅದರೊಂದಿಗೆ ಇರುವ ಇತಿಹಾಸದ ಕೊಂಡಿಯನ್ನೇ ಈ ಸ್ವರ್ಣರಥ ಪ್ರವಾಸಿ ರೈಲು ಕಳಚಿದೆ ಎಂಬುದನ್ನು ಪ್ರವಾಸೋದ್ಯಮ ಕುರಿತು ಗಂಟೆಗಟ್ಟಲೆ ಭಾಷಣ ಮಾಡುವ ಸ್ಥಳೀಯರು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ.

ಇಷ್ಟಕ್ಕೂ ಸ್ವರ್ಣರಥ ಹೆಸರಿರುವ ವಾರದ ಪ್ಯಾಕೇಜಿನ ಈ ವಿಶೇಷ ಪ್ರವಾಸಿ ರೈಲಿನಲ್ಲಿ ಏನೇನು ಸೌಲಭ್ಯಗಳು ಇರುತ್ತಿದ್ದವು ಎಂದರೆ ಇಡಿ ರೈಲು ರಾಜ್ಯದ ಪಾರಂಪರಿಕ ಶೈಲಿಯಲ್ಲಿ ವಿನ್ಯಾಸಗೊಂಡಿರುತ್ತದೆ. ಬೋಗಿ ಒಳಗಡೆ ರಾಜರ ಕಾಲದ ವೈಭವ ಬಿಂಬಿಸುವ ಆಸನಗಳು, 1-3 ಪ್ರವಾಸಿಗರಿಗೆ ಪ್ರತ್ಯೇಕ ಹಾಗೂ ಸುಖಾಸೀನ ಸುವ್ಯವಸ್ಥಿತ ಹವಾನಿಯಂತ್ರಿತ ಕೋಣೆ ಇರುತ್ತಿತ್ತು. ಅತಿಥಿಗಳನ್ನು ಸತ್ಕರಿಸಲು ರಾಜರ ಕಾಲದ ಸೇವಕರ ಧಿರಿಸಿನಲ್ಲಿ ಪುರುಷ-ಮಹಿಳಾ ಸಿಬ್ಬಂದಿ ಸೌಜನ್ಯದ ಸೇವೆ ಇರುತ್ತಿತ್ತು.

ಇಂಟರ್‌ನೆಟ್, ಎಲ್ಇಡಿ ಟಿವಿ, ವ್ಯಾಯಾಮ ಮಾಡಲು ಜಿಮ್‌, ಆಯುರ್ವೇದ ಪದ್ಧತಿಯಲ್ಲಿ ದೇಹಕ್ಕೆ ಮಸಾಜ್‌, ಪಾನ ಪ್ರಿಯರಿಗೆ ಪ್ರತ್ಯೇಕ ಮದಿರಾ ಕೋಣೆ, ಪ್ರತ್ಯೇಕ ರೆಸ್ಟೋರೆಂಟ್, ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಸಸ್ಯಹಾರ ಹಾಗೂ ಮಾಂಸಹಾರದ ಗುಣಮಟ್ಟದ ಊಟದ ವ್ಯವಸ್ಥೆ ಹೀಗೆ ಹಲವು ಐಷಾರಾಮಿ ಸೇವೆಗಳು ಸ್ವರ್ಣರಥ ಪ್ರವಾಸಿ ರೈಲಿನಲ್ಲಿ ಇರುತ್ತವೆ.

ಏನೆಲ್ಲ ಸೇವೆ ಇರುತ್ತಿದ್ದ ಈ ರೈಲು ಬಸ್‌ ಪ್ರಯಾಣಕ್ಕೆ ಒಗ್ಗದ ವೃದ್ದರು, ಮಹಿಳೆಯರು, ವಿಕಲಚೇನತರಿಗೆ ಪ್ರವಾಸ ಮಾಡಲು ಅತ್ಯಂತ ಉತ್ತಮ ವ್ಯವಸ್ಥೆ ಆಗಿತ್ತು. ಪ್ರಮಾಣದ ಮಧ್ಯೆ ರೈಲು ಮಾರ್ಗ ಇಲ್ಲದ ಕಡೆಗಳಲ್ಲಿ ಅಲ್ಲಲ್ಲಿ ರಸ್ತೆ ಮಾರ್ಗದಲ್ಲಿ ವೀಕ್ಷಣೆಗೆ ಕೆಎಸ್‌ಟಿಡಿಸಿ ಸುಖಾಸೀನ ಬಸ್‌ ವ್ಯವಸ್ಥೆಗಳೂ ಇರುತ್ತದೆ. ಪ್ರವಾಸದುದ್ದಕ್ಕೂ ಪ್ರತಿ ಪ್ರವಾಸಿ ತಾಣದ ಹಿನ್ನೆಲೆ ಹಾಗೂ ಮಹ್ವದ ಕುರಿತು ವಿವರಣೆ ನೀಡಲು ಕನ್ನಡ, ಹಿಂದಿ, ಇಂಗ್ಲಿಷ್‌ ಮಾತ್ರವಲ್ಲದೇ ವಿವಿಧ ಭಾಷೆಗಳನ್ನು ಬಲ್ಲ ಅನುಭವಿ (ಗೈಡ್‌) ಮಾರ್ಗದರ್ಶಿ ಕೂಡ ಇರುತ್ತಾನೆ.

ರಾಜ್ಯದಲ್ಲಿ ಆರಂಭಗೊಂಡ ಈ ಪ್ರವಾಸಿ ವಿಶೇಷದ ಸ್ವರ್ಣ ರಥದಿಂದ ಸ್ಫೂರ್ತಿ ಪಡೆದ ಮಹಾರಾಷ್ಟ್ರ ಸರ್ಕಾರ 2005ರಲ್ಲಿ ಡೆಕ್ಕನ್‌-ಓಡಿಸಿ ಹೆಸರಿನಲ್ಲಿ ಪ್ರವಾಸಿ ವಿಶೇಷ ರೈಲು ಓಡಿಸಲು ಮುಂದಾಗಿದೆ. ಮುಂಬೈ, ಕೊಲಾØಪುರ, ವಿಜಯಪುರ, ಬಾದಾಮಿ, ಪಟ್ಟದಕಲ್, ಐಹೊಳೆ, ಹಂಪಿ, ಹೈದರಾಬಾದ್‌, ಅಜಂತಾ, ಎಲ್ಲೋರಾ, ಔರಂಗಾಬಾದ್‌ ಮಾರ್ಗವಾಗಿ ಮರಳಿ ಮುಂಬೈ ಸೇರುತ್ತಿತ್ತು. ಬಾದಾಮಿ ಮಾರ್ಗವಾಗಿಯೇ ಹೋದರೂ ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿರುವ ಅಪರೂಪದ ಗುಹಾಂತರ ಶಿಲ್ಪ ವೈಭವ ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರ ಐಚ್ಛಿಕವಾಗಿತ್ತು. ಮಹಾರಾಷ್ಟ್ರದ ಡೆಕ್ಕನ್‌-ಓಡಿಸಿ ರೈಲಿನಿಂದ ಸ್ಫೂರ್ತಿಗೊಂಡ ಕರ್ನಾಟಕ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳ ಪ್ರಮುಖ ಧಾರ್ಮಿಕ ಹಾಗೂ ಪಾರಂಪರಿಕ ಸ್ಮಾರಕಗಳನ್ನು ವೀಕ್ಷಿಸುವುದಕ್ಕಾಗಿ ತಮಿಳುನಾಡು, ಕೇರಳ ರಾಜ್ಯಗಳನ್ನು ಸುತ್ತುವ ರೈಲು ಸೇವೆ ಆರಂಭಿಸಿದರೂ ಆದರ ಕಥೆ ಏನಾಗಿದೆ ಎಂದು ಯಾರಿಗೂ ತಿಳಿದಿಲ್ಲ.

2018 ಫೆಬ್ರವರಿಯಲ್ಲಿ ಖಾಸಗಿ ಒಡೆತನದವರ ನಿರ್ವಹಣೆ ಗುತ್ತಿಗೆ ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರ ಗುತ್ತಿಗೆ ನವೀಕರಣ ಮಾಡಿಲ್ಲ. ಸ್ವರ್ಣ ರಥ ಪ್ರವಾಸಿ ಸೇವೆ ದೇಶದ ಪ್ರವಾಸೋದ್ಯಮದಲ್ಲಿ ವಿಶೇಷ ಅಲೆ ಸೃಷ್ಟಿಸಿತ್ತು. ಇದ್ದಕ್ಕಿದ್ದಂತೆ ಸೇವೆ ಸ್ಥಗಿತಗೊಂಡಿರುವ ಕಾರಣ ನಿತ್ಯವೂ ನೂರಾರು ಜನ ಸ್ವರ್ಣ ರಥ ಪ್ರವಾಸದ ಕುರಿತು ಅಂತರ್ಜಾಲದಲ್ಲಿ ಜಾಲಾಡುತ್ತಿದ್ದಾರೆ. ಸರ್ಕಾರ ಸ್ವರ್ಣರಥ ಪ್ರವಾಸಿ ಸೇವೆಯನ್ನು ಮುಂದುವರಿಸಿ ವಿಜಯಪುರ ಸ್ಮಾರಕಗಳ ತಾಣವನ್ನು ಈ ಪ್ರವಾಸಿ ಪಟ್ಟಿಯಲ್ಲಿ ಸೇರಿಸಬೇಕು.
ಚಂದ್ರಶೇಖರ ಕಟಗೇರಿ,
 ಡೆಕ್ಕನ್‌-ಓಡಿಸಿ ರೈಲು ಮಾರ್ಗದರ್ಶಿ, ಬಾದಾಮಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ