ಕೊಳೆಗಟ್ಟಿದ ಮಾಜಿ ಶಾಸಕರ ಬಡಾವಣೆ

ಪುರಸಭೆ ವಿರೋಧ ಪಕ್ಷದ ನಾಯಕನ ವಾರ್ಡ್‌•ಸೊಳ್ಳೆಗಳ ಸಾಮ್ರಾಜ್ಯ-ಗಬ್ಬೆಸುತ್ತಿವೆ ಹಂದಿ ಗ್ಯಾಂಗ್‌

Team Udayavani, May 15, 2019, 10:02 AM IST

ವಾಡಿ: ರೆಸ್ಟ್‌ಕ್ಯಾಂಪ್‌ ತಾಂಡಾ ಬಡಾವಣೆಯಲ್ಲಿ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ.

ವಾಡಿ: ಅರ್ಧಕ್ಕೆ ಸ್ಥಗಿತವಾದ ಸಿಸಿ ಚರಂಡಿ ಕಾಮಗಾರಿಯೇ ನೈರ್ಮಲ್ಯ ವ್ಯವಸ್ಥೆ ಹದಗೆಡಲು ಕಾರಣವಾಗಿದ್ದು, ಜನರ ಮನೆ ಅಂಗಳದಲ್ಲಿ ಭಾರಿ ಪ್ರಮಾಣದ ಕೊಳೆ ಮಡುಗಟ್ಟಿ, ಸೊಳ್ಳೆಗಳು ಸಾಮ್ರಾಜ್ಯ ಕಟ್ಟಿಕೊಂಡಿವೆ. ಹಂದಿಗಳ ಗ್ಯಾಂಗ್‌ ಗಲ್ಲಿ ಸುತ್ತಿ ಗಬ್ಬೆಬ್ಬಿಸುತ್ತಿವೆ. ರಾಡಿ ನೀರಿನೊಂದಿಗೆ ತಿಪ್ಪೆ ಕಸ ರೋಡಿಗೆ ಹರಿದು ಗಲೀಜು ವಾತಾವರಣ ಸೃಷ್ಟಿಸಿವೆ. ತಲೆ ಕೆಡುವ ಕೆಟ್ಟ ವಾಸನೆ ಸಹಿಸಿಕೊಳ್ಳಲಾಗದೆ ಜನರು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ.

ಇದು ಅಸಹಾಯಕ, ಜನಸಾಮಾನ್ಯರ ಬಡಾವಣೆ ಕಥೆಯಲ್ಲ. ಚಿತ್ತಾಪುರ ಮೀಸಲು ಮತಕ್ಷೇತ್ರವನ್ನು ಮೂರು ವರ್ಷ ಕಾಲ ಆಳಿದ ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ವಾಲ್ಮೀಕಿ ನಾಯಕ, ಪುರಸಭೆ ವಿರೋಧ ಪಕ್ಷದ ನಾಯಕ, ಬಿಜೆಪಿಯ ಪ್ರಕಾಶ ನಾಯಕ ವಾಸಿಸುವ ವಾರ್ಡ್‌ 4ರ ರೆಸ್ಟ್‌ಕ್ಯಾಂಪ್‌ ತಾಂಡಾ ಬಡಾವಣೆಯಲ್ಲಿ ಅಕ್ಷರಶಃ ನರಕವಾದ ನೈರ್ಮಲ್ಯದ ದುಸ್ಥಿತಿಯಿದು.

ಈ ಬಡಾವಣೆಯಲ್ಲಿ ಬಹುತೇಕ ಬಂಜಾರಾ ಸಮುದಾಯದ ಬಡ ಕುಟುಂಬಗಳೇ ವಾಸವಾಗಿವೆ. ಇತರ ಜನಾಂಗದ ಜನರೂ ಇಲ್ಲಿ ಸಹಬಾಳ್ವೆ ಮಾಡುತ್ತಿದ್ದಾರೆ. ರಸ್ತೆಗಳು ಅಭಿವೃದ್ಧಿಯಾಗಿವೆ. ಚರಂಡಿಗಳು ಮಾತ್ರ ರಕ್ತ ಹೀರುವ ಸೊಳ್ಳೆಗಳನ್ನು ಸಾಕುತ್ತಿವೆ. ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ಮನೆ ಹಿಂದೆ ಚರಂಡಿ ಅರ್ಧಕ್ಕೆ ಸ್ಥಗಿತಗೊಂಡು ಇಡೀ ಬಡಾವಣೆ ಗಬ್ಬೇಳುವಂತೆ ಮಾಡಿ ಅವಾಂತರ ಸೃಷ್ಟಿಸಿದೆ. ದಲಿತ ಮನೆಯಂಗಳಕ್ಕೆ ಕೊಳೆ ನೀರು ಹರಿದು ಬದುಕು ದುಸ್ಥರಗೊಳಿಸಿದೆ. ಸಿಸಿ ಚರಂಡಿ ಹಾಗೂ ಸಿಸಿ ರಸ್ತೆಗಳ ಕಾಂಕ್ರಿಟ್ ಒಡೆದು ಕಂದಕ ನಿರ್ಮಾಣವಾಗಿವೆ. ಸಂಚರಿಸುವ ಜನರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೆಜ್ಜೆಯಿಡಬೇಕಾದ ಪರಿಸ್ಥಿತಿ ಜೀವಂತವಿದೆ.

ಹದಗೆಟ್ಟ ನೈರ್ಮಲ್ಯ ವ್ಯವಸ್ಥೆಯಿಂದ ನಿವಾಸಿಗಳಿಗೆ ಅನಾರೋಗ್ಯ ಕಾಡುತ್ತಿದೆ. ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ ಮುಂದುವರಿಸಲು ಮಾಜಿ ಶಾಸಕ ವಾಲ್ಮೀಕಿ ನಾಯಕರ ಸಹೋದರನೇ ಅಡ್ಡಗಾಲು ಹಾಕಿದ್ದಾರೆ ಎನ್ನುವ ಆರೋಪ ಜನರದ್ದಾಗಿದೆ. ವಿರೋಧ ಪಕ್ಷದ ನಾಯಕನ ಕೂಗು ಕೇಳಿಸಿಕೊಳ್ಳದ ಪುರಸಭೆ ಅಧ್ಯಕ್ಷೆ ಕಾಂಗ್ರೆಸ್‌ನ ಮೈನಾಬಾಯಿ ರಾಠೊಡ, ಇದೇ ಬಡಾವಣೆಯ ಪಕ್ಕದ (ವಾರ್ಡ್‌-5) ಏರಿಯಾದಲ್ಲಿ ವಾಸವಿದ್ದಾರೆ. ಜನರು ಪದೇಪದೆ ದೂರು ನೀಡುತ್ತಿದ್ದರೂ ಒಮ್ಮೆಯೂ ಸ್ಥಳಕ್ಕೆ ಭೇಟಿ ನೀಡಿಲ್ಲ. ನಮ್ಮ ಕಷ್ಟ ಕೇಳಲು ಯಾರೂ ಬರುತ್ತಿಲ್ಲ ಎಂದು ರೆಸ್ಟ್‌ಕ್ಯಾಂಪ್‌ ತಾಂಡಾದ ಜನರು ದೂರುತ್ತಿದ್ದಾರೆ.

ರೆಸ್ಟ್‌ಕ್ಯಾಂಪ್‌ ತಾಂಡಾ ಬಡಾವಣೆಯನ್ನು ಪುರಸಭೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಚರಂಡಿಯ ಕೊಳಕು ನೀರು ಎರಡು ವರ್ಷದಿಂದ ನಮ್ಮ ಮನೆ ಬಾಗಿಲಲ್ಲಿ ಕೆರೆಯಂತೆ ನಿಂತಿದೆ. ಹೊಲಸು ವಾಸನೆ ಸೇವಿಸಿ ಸಾಕಾಗಿದೆ. ಸೊಳ್ಳೆ ಕಚ್ಚಿಸಿಕೊಂಡು ಪದೇಪದೆ ಆಸ್ಪತ್ರೆ ಸೇರುತ್ತಿದ್ದೇವೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗುತ್ತಿಲ್ಲ. ನಮ್ಮ ಕಷ್ಟ ಕೇಳಲು ಯಾರೂ ಇಲ್ಲದಂತಾಗಿದೆ. ವಾರ್ಡ್‌ ಜನರು ಸೇರಿ ಪುರಸಭೆ ವಿರುದ್ಧ ಹೋರಾಟ ರೂಪಿಸುತ್ತೇವೆ.
•ಗುರುಪಾದ ದೊಡ್ಡಮನಿ, ದಲಿತ ಮುಖಂಡ

ರೆಸ್ಟ್‌ಕ್ಯಾಂಪ್‌ ತಾಂಡಾದಲ್ಲಿ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ. ಈ ಕುರಿತು ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ಗಮನ ಸೆಳೆದಿದ್ದೇನೆ. ಆದರೂ ಸಮಸ್ಯೆ ನಿವಾರಣೆಗೆ ಅವರು ಮುಂದಾಗಿಲ್ಲ. ಪುರಸಭೆಯಲ್ಲಿರುವ ಕಾಂಗ್ರೆಸ್‌ ಆಡಳಿತಕ್ಕೆ ವಾರ್ಡ್‌ ಜನರ ಸಂಕಟಗಳು ಅರ್ಥವಾಗುತ್ತಿಲ್ಲ. ಅಧ್ಯಕ್ಷರು ಮತ್ತು ಅಧಿಕಾರಿಗಳು ವಾರ್ಡ್‌ಗಳಿಗೆ ಭೇಟಿ ನೀಡುವುದನ್ನೇ ಕೈಬಿಟ್ಟಿದ್ದಾರೆ. ನಾನಂತೂ ನಿರಂತರವಾಗಿ ಜನರ ಧ್ವನಿಯಾಗಿ ಹೋರಾಡುತ್ತಿದ್ದೇನೆ. ಸಮಸ್ಯೆ ಕುರಿತು ಮತ್ತೂಮ್ಮೆ ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಬಗೆಹರಿಸುತ್ತೇನೆ.
• ಪ್ರಕಾಶ ನಾಯಕ, ವಾರ್ಡ್‌ ಸದಸ್ಯ,
ಪುರಸಭೆ ವಿರೋಧ ಪಕ್ಷದ ನಾಯಕ

ಮಡಿವಾಳಪ್ಪ ಹೇರೂರ


ಈ ವಿಭಾಗದಿಂದ ಇನ್ನಷ್ಟು

  • ವಾಡಿ: ಕಾಂಗ್ರೆಸ್‌ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಭದ್ರಕೋಟೆ ಭೇದಿಸಿರುವ ಬಿಜೆಪಿಯ ಡಾ| ಉಮೇಶ ಜಾಧವ ಮೋದಿ ಸರಕಾರದಲ್ಲಿ ಸಚಿವರಾಗಲಿದ್ದಾರೆ...

  • •ಶಾಮರಾವ ಚಿಂಚೋಳಿ ಚಿಂಚೋಳಿ: ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಕಾಲದಲ್ಲಿ ನೀರನ್ನು ಹರಿ ಬಿಡಲಾಗುತ್ತಿರುವುದರಿಂದ ಜನ-ಜಾನುವಾರುಗಳ...

  • •ಹಣಮಂತರಾವ ಭೈರಾಮಡಗಿ ಕಲಬುರಗಿ: ಬೈಕ್‌ ಸವಾರುದಾರರು ಹಾಗೂ ಇತರ ವಾಹನದಾರರು ಇನ್ನೂ ಸಮಯ ಇರುವಾಗಲೇ ಟ್ರಾಫಿಕ್‌ ಸಿಗ್ನಲ್ ದಾಟಿದರೆ, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ,...

  • ಕಲಬುರಗಿ: ಹೈದ್ರಾಬಾದ್‌-ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ ಪೆಡಂಭೂತವಾಗಿ ಕಾಡುತ್ತಿದೆ. ಈ ಪ್ರದೇಶದ ಆರು ಜಿಲ್ಲೆಗ ಳಲ್ಲಿ ಶೇ.25ರಷ್ಟು ಮಕ್ಕಳು ಅಪೌಷ್ಟಿಕತೆ ಯಿಂದ...

  • ಅಫಜಲಪುರ: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ಜನ ಜಾನುವಾರುಗಳು ತತ್ತರಿಸಿವೆ. ಹೀಗಾಗಿ, ಈ ಬಾರಿ ಉತ್ತಮ ಮಳೆ, ಬೆಳೆಯಾಗಿ ರೈತರಿಗೆ ಅನುಕೂಲವಾಗಲಿ. ಎಲ್ಲವೂ ಸಮೃದ್ಧವಾಗಿ...

ಹೊಸ ಸೇರ್ಪಡೆ