ಕೋರ್‌ ಗ್ರೀನ್‌ ಸಕ್ಕರೆ ಕಾರ್ಖಾನೆ ಜಪ್ತಿ

•ಕಲಬುರಗಿ-ಬೀದರ ಬೆಳೆಗಾರರಿಂದ ಕಬ್ಬು ಪೂರೈಕೆ•ಜೂನ್‌ ಕೊನೆ ವಾರ ಕಾರ್ಖಾನೆಗೆ ನೋಟಿಸ್‌

Team Udayavani, Jul 12, 2019, 4:11 PM IST

ಯಾದಗಿರಿ: ತುಮಕೂರಿನ ಕೋರ್‌ ಗ್ರೀನ್‌ ಶುಗರ್‌ ಕಂಪನಿ ಗೋದಾಮನ್ನು ವಡಗೇರಾ ತಹಶೀಲ್ದಾರ್‌ ಜಪ್ತಿ ಮಾಡಿದರು.

ಯಾದಗಿರಿ: ಸುಮಾರು ಎಂಟು ತಿಂಗಳಿಂದ ಕಬ್ಬು ಬೆಳೆಗಾರರ ಹಣ ಬಾಕಿ ಇರಿಸಿಕೊಂಡಿದ್ದ ಜಿಲ್ಲೆಯ ವಡಗೇರಾ ತಾಲೂಕು ಕೋರ್‌ ಗ್ರೀನ್‌ ಶುಗರ್ ಕಂಪನಿಯ ಅಂದಾಜು 19,600 ಕ್ವಿಂಟಲ್ ಸಕ್ಕರೆ ಇರುವ ಗೋದಾಮನ್ನು ಜಿಲ್ಲಾಡಳಿತ ಬುಧವಾರ ಸಂಜೆ ಜಪ್ತಿ ಮಾಡಿದೆ.

ರೈತರು ಜಿಲ್ಲಾಡಳಿತ ಭವನದ ಎದುರು ನಡೆಸಿದ ಹೋರಾಟದ ಒಂದು ತಿಂಗಳ ಬಳಿಕ ಜಿಲ್ಲಾಡಳಿತ ಜಪ್ತಿ ಮಾಡಿದೆ. ರೈತರಿಗೆ ಸುಮಾರು 70 ಕೋಟಿ ರೂ.ಗಳಷ್ಟು ಬಾಕಿಯಿರಿಸಿಕೊಂಡಿದ್ದ ಕಾರ್ಖಾನೆಗೆ ಜೂನ್‌ ಕೊನೆ ವಾರ ಜಿಲ್ಲಾಡಳಿತದಿಂದ ನೋಟಿಸ್‌ ಜಾರಿಯಾದ ಹಿನ್ನೆಲೆಯಲ್ಲಿ ಕಂಪನಿ ರೈತರ ಖಾತೆಗೆ ಹಣ ಜಮಾ ಮಾಡುವ ಕಾರ್ಯ ಚುರುಕುಗೊಳಿಸಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ 70 ಕೋಟಿ ರೂ.ಗಳಲ್ಲಿ ಇನ್ನು 15 ಕೋಟಿ ರೂ. ಪಾವತಿಗೆ ಬಾಕಿಯಿತ್ತು. ಈ ಮಧ್ಯೆಯೇ ವಡಗೇರಾ ತಹಶೀಲ್ದಾರರು ಬುಧವಾರ ಸಂಜೆ ಸಕ್ಕರೆ ಗೋದಾಮು ಜಪ್ತಿ ಮಾಡಿದ್ದಾರೆ.

ಕಬ್ಬು ಕಟಾವು ಮಾಡಿಕೊಂಡು ಸಕಾಲಕ್ಕೆ ಹಣ ಪಾವತಿಸದಿರುವುದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಹಂತ ಹಂತವಾಗಿ ರೈತರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸುತ್ತ ಬಂದಿದ್ದರೂ ಕಂಪನಿ ಆಡಳಿತ ಮಂಡಳಿ ಜಗ್ಗಿರಲಿಲ್ಲ. ಕಳೆದ ಜೂನ್‌ 4ರಂದು ಕಂಪನಿ ಧೋರಣೆಯಿಂದ ಬೇಸತ್ತ ಕಲಬುರಗಿ, ಬೀದರ ಜಿಲ್ಲೆಯ ನೂರಾರು ರೈತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಕಲಬುರಗಿ ಮತ್ತು ಬೀದರ ಜಿಲ್ಲೆಯ ಹಲವು ಗ್ರಾಮಗಳ 200ಕ್ಕೂ ಹೆಚ್ಚು ರೈತರಿಂದ ನವೆಂಬರ್‌ನಲ್ಲಿ ಕಬ್ಬು ಕಾರ್ಖಾನೆ ಪಡೆದಿದ್ದು, ರೈತರಿಂದ ಕಬ್ಬು ಕಟಾವು ಮಾಡಿಸಿಕೊಂಡ 15 ದಿನದಲ್ಲಿ ಹಣ ಪಾವತಿ ಮಾಡಬೇಕು ಎಂಬ ನಿಯಮವಿದ್ದರೂ ಕಾರ್ಖಾನೆ ಸಕ್ಕರೆ ಮಾರಾಟವಾಗಿಲ್ಲ ಎಂದು ನೆಪವೊಡ್ಡುತ್ತ ರೈತರನ್ನು ಕಾಡಿಸುತ್ತಿದೆ ಎಂದು ದೂರಿದ್ದರು. ರೈತರಿಗೆ ಪಾವತಿಸದೇ ಬರೀ ವಾಯ್ದೆ ಮೇಲೆ ವಾಯ್ದೆ ನೀಡುತ್ತ ಕಾಲ ಕಳೆಯುತ್ತಿದ್ದು, ಯಾವೊಬ್ಬ ರೈತರ ಖಾತೆಗೂ ಹಣ ಹಾಕುತ್ತಿಲ್ಲ ಎಂದು ರೈತರು ಗೋಳು ತೋಡಿಕೊಂಡಿದ್ದರು.

ಭರವಸೆ ನೀಡಿದ್ದ ಜಿಲ್ಲಾಧಿಕಾರಿ: ಜೂನ್‌ 4ರಂದು ರೈತರ ಕಷ್ಟ ಆಲಿಸಿದ್ದ ಜಿಲ್ಲಾಧಿಕಾರಿ ಕೂರ್ಮಾರಾವ್‌ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಜಿಲ್ಲಾಡಳಿತದಿಂದ ಜೂನ್‌ ಕೊನೆ ವಾರದಲ್ಲಿ ಸಕ್ಕರೆ ಕಾರ್ಖಾನೆಗೆ ನೋಟಿಸ್‌ ಜಾರಿಗೊಳಿಸಿ 10 ದಿನಗಳಲ್ಲಿ ರೈತರಿಗೆ ಬಾಕಿ ಹಣ ಪಾವತಿಸುವಂತೆ ಸೂಚಿಸಲಾಗಿತ್ತು ಎಂದು ತಿಳಿದು ಬಂದಿದೆ.

ಆಡಳಿತ ಮಂಡಳಿ ಜಿಲ್ಲಾಡಳಿತಕ್ಕೆ 15 ದಿನಗಳ ಕಾಲಾವಕಾಶ ಕೇಳಿತ್ತು ಎನ್ನಲಾಗಿದೆ. ಈ ಮಧ್ಯೆಯೇ ಜಿಲ್ಲಾಡಳಿತ ಆದೇಶದಂತೆ ವಡಗೇರಾ ತಹಶೀಲ್ದಾರ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಕ್ಕರೆ ಗೋದಾಮು ಜಪ್ತಿ ಮಾಡಿದೆ.

ಜಿಲ್ಲಾಡಳಿತ ತನಗೆ ಬರಬೇಕಿರುವ ಕಂದಾಯವನ್ನು ವಸೂಲಿ ಮಾಡಿಕೊಳ್ಳುವುದರ ಜತೆಗೆ ಉಳಿದ ರೈತರ ಹಣವನ್ನು ಶೀಘ್ರ ಪಾವತಿಸುವಂತೆ ಕ್ರಮಕೈಗೊಳ್ಳಲಿ ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮುಳಗುಂದ: ಸಮೀಪದ ಕಣವಿ ಗ್ರಾಮದಲ್ಲಿ ಕ್ಷಯರೋಗದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಣವಿ ಪ್ರಾ.ಆ.ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಆರ್‌.ವಿ.ಗುರಣ್ಣವರ...

  • ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿ ತಾಲೂಕಿನ ಗೋವನಾಳ, ಶಿಗ್ಲಿ, ಸೂರಣಗಿ, ಬಾಲೇಹೊಸೂರ, ಯಳವತ್ತಿ, ಯತ್ನಳ್ಳಿ, ಗೊಜನೂರ, ಅಕ್ಕಿಗುಂದ ಸೇರಿದಂತೆ ಅನೇಕ ಕಡೆಗಳ ಜಿಂಕೆಗಳ...

  • ಚಿಕ್ಕೋಡಿ: ಗ್ರಾಮೀಣ ಪ್ರದೇಶದಲ್ಲಿ ದಿನದಯಾಳ್‌ ಉಪಾಧ್ಯೆ ವಿದ್ಯುತ್‌ ಸಂಪರ್ಕ ವಿಚಾರದಲ್ಲಿ ಹೆಸ್ಕಾ ಅಧಿಕಾರಿಗಳು ಫಲಾನುಭವಿಗಳಿಗೆ ಸಮರ್ಪಕ ವಿದ್ಯುತ್‌ ತಲುಪಿಸುತ್ತಿಲ್ಲ...

  • ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡು ನಿಯಮಾವಳಿ ಪ್ರಕಾರ ಕಾಲೇಜುಗಳು ಪಠ್ಯಕ್ರಮ ರೂಪಿಸುವ ಹಾಗೂ ಪರೀಕ್ಷೆ...

  • ಜಮಖಂಡಿ: ನಗರದ ರಾಯಲ್ ಪ್ಯಾಲೇಸ್‌ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಂಕಾ ಮೇತ್ರಿ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಥಳಕ್ಕೆ...

ಹೊಸ ಸೇರ್ಪಡೆ