ಪಾರದರ್ಶಕ ಪರಿಶೀಲನೆ ನಡೆಸಿ ದೃಢೀಕರಿಸಿ

ಅನರ್ಹ ಮತದಾರರ ಕೈ ಬಿಡಿ•ಎನ್‌ವಿಎಸ್‌ಪಿ ಆ್ಯಪ್‌ ಬಳಕೆಗೆ ಪ್ರಚಾರ ನೀಡಿ: ಕೂರ್ಮಾರಾವ್‌

Team Udayavani, Sep 8, 2019, 12:12 PM IST

ಯಾದಗಿರಿ: ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹಮ್ಮಿಕೊಂಡ ಎನ್‌ವಿಎಸ್‌ಪಿ ಆ್ಯಪ್‌/ ಪೋರ್ಟಲ್ ಹಾಗೂ ಬಿಎಲ್ಒ ಆ್ಯಪ್‌ ಬಳಕೆಯ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿದರು.

ಯಾದಗಿರಿ: ಭಾರತ ಚುನಾವಣಾ ಆಯೋಗ ಹೊಸದಾಗಿ ಪರಿಚಯಿಸಿರುವ ಎನ್‌ವಿಎಸ್‌ಪಿ ಪೋರ್ಟಲ್/ ಎನ್‌ವಿಎಸ್‌ಪಿ ಆ್ಯಪ್‌ ಮತದಾರ ಸ್ನೇಹಿಯಾಗಿದೆ. ಪ್ರತಿಯೊಬ್ಬ ನಾಗರಿಕರು ತಮ್ಮ ಆ್ಯಂಡ್ರಾಯಿಡ್‌ ಮೊಬೈಲ್ನಲ್ಲಿ ಎನ್‌ವಿಎಸ್‌ಪಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ವಿವಿಧ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು. ಹಾಗಾಗಿ, ಮತದಾರರಿಗೆ ಈ ಆ್ಯಪ್‌ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅಂಗವಾಗಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಎನ್‌ವಿಎಸ್‌ಪಿ ಆ್ಯಪ್‌/ ಪೋರ್ಟಲ್ ಹಾಗೂ ಬಿಎಲ್ಒ ಆ್ಯಪ್‌ ಬಳಕೆಯ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮತದಾರರು ತಮ್ಮ ಸ್ವ-ವಿವರಗಳ ಎಂಟು ಬಗೆಯ ತಿದ್ದುಪಡಿ, ಪೋಟೋ ತಿದ್ದುಪಡಿ, ಮತದಾರರ ಸ್ಥಳಾಂತರ ಸೇರಿದಂತೆ ಇತರೆ ಮಾಹಿತಿಗಳನ್ನು ತಮ್ಮ ಮೊಬೈಲ್ ಮೂಲಕ ಎನ್‌ವಿಎಸ್‌ಪಿ ಆ್ಯಪ್‌ನಲ್ಲಿ ಲಾಗಿನ್‌ ಆಗಿ ತಿದ್ದುಪಡಿ ಮಾಡಲು ಅವಕಾಶವಿದೆ. ಆ್ಯಂಡ್ರಾಯಿಡ್‌ ಮೊಬೈಲ್ ಇಲ್ಲದ ಅಥವಾ ಆ್ಯಪ್‌ ಬಳಕೆ ಮಾಡಲು ಬಾರದ ಮತದಾರರು ಸಿಎಸ್‌ಸಿ, ಅಟಲ್ಜೀ ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯಿತಿಗಳಿಗೆ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದ ಮಾಹಿತಿಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಹೇಳಿದರು.

2020ರ ಜನವರಿ 1ಕ್ಕೆ 18 ವರ್ಷ ಪೂರೈಸುವ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಮತ್ತು ಅರ್ಹರು ಕೂಡ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು. ಅನರ್ಹ ಮತದಾರರನ್ನು ಕೈ ಬಿಡಬೇಕು. ಮತದಾರರ ಪಟ್ಟಿಯು ಮ್ಯಾನುವಲ್ನಿಂದ ಆನ್‌ಲೈನ್‌ಗೆ ವರ್ಗವಾಗುತ್ತಿರುವುದರಿಂದ ಬಿಎಲ್ಒಗಳು ಮ್ಯಾನುವಲ್ ಅರ್ಜಿ ಸಲ್ಲಿಸುವುದು ತಪ್ಪುತ್ತದೆ. ಇದರಿಂದ ಮತದಾರರ ಪಟ್ಟಿಯನ್ನು ಶೇ. 100ರಷ್ಟು ಪಾರದರ್ಶಕವಾಗಿ ತಯಾರಿಸಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಮೇಲ್ವಿಚಾರಕರು ಬಿಎಲ್ಒಗಳಿಗೆ ಬಿಎಲ್ಒ ಆ್ಯಪ್‌ ಬಳಕೆಯ ಕುರಿತು ಸರಿಯಾದ ತರಬೇತಿ ನೀಡಿ, ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.

ಸಾರ್ವಜನಿಕರಿಂದ ಎನ್‌ವಿಎಸ್‌ಪಿ ಆ್ಯಪ್‌ ಮೂಲಕ ಸಲ್ಲಿಕೆಯಾದ ಅರ್ಜಿಗಳು ನೆರವಾಗಿ ಬಿಎಲ್ಒ ಆ್ಯಪ್‌ಗೆ ಬಂದು ಸೇರುತ್ತವೆ. ಬಿಎಲ್ಒಗಳು ಚುನಾವಣಾ ಆಯೋಗವು ನೀಡಿದ ಲಾಗಿನ್‌ ಆ್ಯಪ್‌ನಲ್ಲಿ ಆಗಿ ಮತದಾರರ ಮನೆ-ಮನೆಗೆ ತೆರಳಿ ಪಾರದರ್ಶಕವಾಗಿ ಪರಿಶೀಲನೆ ನಡೆಸಿ ದೃಢೀಕರಿಸಬೇಕು. ದೃಢೀಕರಿಸಿದ ಅರ್ಜಿಗಳು ನೇರವಾಗಿ ಇಆರ್‌ಒ ನೆಟ್‌ಗೆ ವರ್ಗವಾಗುತ್ತವೆ ಎಂದು ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಮಾತನಾಡಿ, ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್‌/ವೋಟರ್‌ ಹೆಲ್ಪಲೈನ್‌ ಮೊಬೈಲ್ ಆ್ಯಪ್‌, ಹೊಸ ಎನ್‌ವಿಎಸ್‌ಪಿ ಪೋರ್ಟಲ್, 1950 ಮತದಾರರ ಸಹಾಯ ವಾಣಿ, ಸಾಮಾನ್ಯ ಸೇವಾ ಕೇಂದ್ರ, ಅಟಲ್ಜೀ ಜನಸ್ನೇಹಿ ಕೇಂದ್ರ, ಮತದಾರರ ನೋಂದಣಿ ಅಧಿಕಾರಿಗಳ ಕಚೇರಿ ಯಲ್ಲಿರುವ ವೋಟರ್‌ ಫೆಸಿಲಿಟೇಷನ್‌ ಸೆಂಟರ್‌ ಮೂಲಕ ಮತದಾರರು ತಮ್ಮ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಎಂದು ಸೂಚಿಸಿದರು.

ಸಹಾಯಕ ಆಯುಕ್ತರಾದ ಶಂಕರಗೌಡ ಎಸ್‌. ಸೋಮನಾಳ ಮಾತನಾಡಿದರು. ಜಿಲ್ಲಾ ಮಾಸ್ಟರ್‌ ಟ್ರೇನರ್‌ ಹಣಮಂತರಾವ್‌ ಗೋಂಗ್ಲೆ ತರಬೇತಿ ನೀಡಿ, ಎನ್‌ವಿಎಸ್‌ಪಿ ಪೋರ್ಟಲ್ ಮತ್ತು ಎನ್‌ವಿಎಸ್‌ಪಿ ಆ್ಯಪ್‌ ಬಳಕೆದಾರರ ಸ್ನೇಹಿಯಾಗಿದೆ. ಇದರಲ್ಲಿ ಮತದಾರರು ಎಂಟು ಬಗೆಯ ಮಾಹಿತಿಗಳನ್ನು ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶವಿದೆ. ವಿಶೇಷವಾಗಿ ಮತದಾರನು ತನ್ನ ಕುಟುಂಬಕ್ಕೆ ಸಂಬಂಧಿಸಿದ ಎಪಿಕ್‌ ಕಾರ್ಡ್‌ ಸಂಖ್ಯೆ ನಮೂದಿಸುವ ಮೂಲಕ ಎನ್‌ವಿಎಸ್‌ಪಿ ಆ್ಯಪ್‌ನಲ್ಲಿರುವ ಫ್ಯಾಮಿಲಿ ಟ್ಯಾಗ್‌ನ್ನು ಬಳಕೆ ಮಾಡಿ ಒಂದೇ ಪಟ್ಟಿಯಲ್ಲಿ ಇರಲು ಅವಕಾಶವಿದೆ. ಫ್ಯಾಮಿಲಿ ಟ್ಯಾಗ್‌ನ್ನು ಕುಟುಂಬದ ಒಬ್ಬ ಸದಸ್ಯನು ಮಾತ್ರ ಬಳಕೆ ಮಾಡಬಹುದು. ಫ್ಯಾಮಿಲಿ ಟ್ಯಾಗ್‌ನಿಂದ ಹೊರಗುಳಿದ ಸದಸ್ಯನನ್ನು ಮತ್ತೆ ಫ್ಯಾಮಿಲಿ ಟ್ಯಾಗ್‌ಗೆ ಸೇರ್ಪಡೆ ಮಾಡಲು ಬರುವುದಿಲ್ಲ. ಕೊನೆಯವರೆಗೆ ಆತನು ಹೊರಗುಳಿಯುತ್ತಾನೆ. ಹೀಗಾಗಿ ಫ್ಯಾಮಿಲಿ ಟ್ಯಾಗ್‌ ಬಳಕೆ ಮಾಡುವಾಗ ಎಚ್ಚರ ವಹಿಸಬೇಕು ಎಂದು ವಿವರಿಸಿದರು.

ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಚುನಾವಣಾ ಶಾಖೆಯ ಖಲೀಲ್ಸಾಬ್‌ ಸೇರಿದಂತೆ ವಿಧಾನಸಭಾ ಕ್ಷೇತ್ರಗಳ ಮಾಸ್ಟರ್‌ ಟ್ರೇನರ್‌ಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ನಾಡ ಕಚೇರಿ ಉಪ ತಹಶೀಲ್ದಾರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬಿಎಲ್ಒಗಳ ಮೇಲ್ವಿಚಾರಕರು, ಗ್ರಾಮ ಪಂಚಾಯಿತಿ ಕಂಪ್ಯೂಟರ್‌ ಆಪರೇಟರ್‌ಗಳು, ಅಟಲ್ಜೀ ಜನಸ್ನೇಹಿ ಕೇಂದ್ರ ಡಾಟಾ ಎಂಟ್ರಿ ಆಪರೇಟರ್‌ಗಳು ಹಾಗೂ ಸಿಎಸ್‌ಸಿ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ