ಖಾಲಿ ನಿವೇಶನಗಳ ಪರಿಶೀಲನೆ
Team Udayavani, Jan 20, 2022, 5:53 PM IST
ಶಹಾಪುರ: ನಗರಸಭೆ ವ್ಯಾಪ್ತಿಯ ಸರ್ವೇ ನಂ. 7ರಲ್ಲಿನ ಆಶ್ರಯ ಕಾಲೋನಿಯಲ್ಲಿ ಇನ್ನೂ ಖಾಲಿ ಉಳಿದಿರುವ ನಿವೇಶನಗಳ ಕುರಿತು ಶಾಸಕ ಶರಣಬಸಪ್ಪ ದರ್ಶನಾಪುರ ನಗರಸಭೆ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ಅಲ್ಲದೇ ನಿವೇಶನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
2008ರಲ್ಲಿ 376 ನಿವೇಶನ ಹಂಚಿಕೆ ಮಾಡಲಾಗಿತ್ತು. ಇನ್ನೂ 134 ನಿವೇಶನ ಬಾಕಿ ಉಳಿದಿದ್ದು, ಉಳಿದವುಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೇ ಪ್ರಸ್ತುತ ಸರ್ವೇ ನಂಬರ್‌ನಲ್ಲಿ ಇನ್ನೂ 30 ನಿವೇಶನ ಉಳಿದಿದ್ದು, ಅರ್ಹರಿಗೆ ಹಂಚಿಕೆ ಮಾಡಲಾಗುವುದು ಎಂದರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಮಾತನಾಡಿ, ಪ್ರಸ್ತುತ ಸರ್ವೇ ನಂಬರ್‌ದಲ್ಲಿ 30 ನಿವೇಶನ ಬಾಕಿ ಉಳಿದದ್ದು, ಅವುಗಳನ್ನು ಪತ್ತೆ ಮಾಡಲಾಗಿದೆ. ಅವುಗಳ ಸಮರ್ಪಕ ವ್ಯವಸ್ಥೆ ಮಾಡಿ ಫಲಾನುಭವಿಗಳಿಗೆ ವಿತರಿಸಲು ಅನುಕೂಲವಾಗಲಿದೆ ಎಂದು ಶಾಸಕರಿಗೆ ಮಾಹಿತಿ ನೀಡಿದರು.
ಜ.26ರಂದು ಲಾಟರಿ ಮೂಲಕ ಹೊಸದಾಗಿ ಹಂಚಿಕೆ ಮಾಡುತ್ತಿರುವ ನಿವೇಶನಗಳ ಬಗ್ಗೆ ಅರ್ಹ ಫಲಾನುಭವಿಗಳ ಹಾಗೂ ಸರ್ಕಾರದ ಮಾರ್ಗಸೂಚಿ ನಿಯಮದ ಪ್ರಕಾರ ಮೀಸಲಾತಿಯಂತೆ ನಿವೇಶನ ಹಂಚಿಕೆ ಮಾಡಬೇಕು. ತ್ವರಿತವಾಗಿ ಎಲ್ಲವನ್ನು ಸಿದ್ಧಪಡಿಸಿಕೊಳ್ಳಿ ಎಂದು ಪೌರಾಯುಕ್ತ ಓಂಕಾರ ಅವರಿಗೆ ಶಾಸಕರು ಸೂಚಿಸಿದರು.
ಈ ವೇಳೆ ನಗರಸಭೆ ಎಇಇ ನಾನಾಸಾಬ, ಚಂದ್ರಶೇಖರ ಲಿಂಗದಳ್ಳಿ, ಭೀಮರಾಯ ಕದರಾಪುರ, ವೆಂಕಟೇಶ ಆಲೂರ, ಶಾಂತಪ್ಪ ಗುತ್ತೇದಾರ, ರವಿಚಂದ್ರ ಎದರಮನಿ, ಮಹಾದೇವ ದಿಗ್ಗಿ, ಹಣಮಂತ ಮಿನುಗಾರ, ಭೀಮಸಿಂಗ್ ಬೈಲಪತ್ತಾರ ಇತರರಿದ್ದರು.