ಲಾಟರಿ ಮೂಲಕ ನಿವೇಶನ ಹಂಚಿಕೆ ತಡೆಗೆ ಆಗ್ರಹಿಸಿ ಮನವಿ
Team Udayavani, Jan 22, 2022, 1:15 PM IST
ಶಹಾಪುರ: ನಗರಸಭೆ ವ್ಯಾಪ್ತಿಯ ನಿವೇಶನಗಳನ್ನು ಫಲಾನುಭವಿಗಳಿಗೆ ನೀಡಲು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಪ್ರಕಟಣೆಯಲ್ಲಿ ತಿಳಿಸಿದ್ದು, ಕೂಡಲೇ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡುವುದು ತರವಲ್ಲ. ಇದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ ಶಹಾಪುರ ನಗರಸಭೆಯ ಬಿಜೆಪಿ ಸದಸ್ಯರ ತಂಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಿವೇಶನಗಳಿಗಾಗಿ ಒಟ್ಟು ಬಂದ ಅರ್ಜಿಗಳೆಷ್ಟು 31 ವಾರ್ಡ್‌ಗಳಲ್ಲಿ ಎಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ತಿರಸ್ಕೃತ ಅರ್ಜಿಗಳೆಷ್ಟು? ಎಂಬುದನ್ನು ಮೊದಲು ಸ್ಪಷ್ಟ ಪಡಿಸಬೇಕು. ಈ ಕುರಿತು ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಮಾಡಿದ್ದು, ಮೂರು ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಮಾಹಿತಿ ನಗರಸಭೆ ನೀಡಿಲ್ಲ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಲಿಖೀತ ಮಾಹಿತಿ ಕೇಳಿದರೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಲಾಟರಿ ಆಯ್ಕೆಯಲ್ಲಿ ಯಾವ ಮಾನದಂಡ ುಪಯೋಗಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳೂ ಕೂಡಲೇ ಲಾಟರಿ ಆಯ್ಕೆ ತಡೆಯಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಮುಖಂಡರಾದ ಲಾಲನಸಾಬ್ ಖುರೇಶಿ, ನಗರಸಭೆಯ ಬಿಜೆಪಿ ಸದಸ್ಯರಾದ ಮಲ್ಲಿಕಾರ್ಜುನ ಗಂಧದಮಠ, ಅಪ್ಪಣ್ಣ ದಶವಂತ, ಅಶೋಕ ನಾಯಕ, ಮಹ್ಮದ್ ಸಯ್ಯದ್ ಅಲಿ, ನಾಗರತ್ನ ಯಾಳಗಿ, ಚಂದ್ರಶೇಖರ ಯಾಳಗಿ, ಜ್ಯೋತಿ ಭಾಸುತ್ಕರ್, ಸಣ್ಣ ಮಾನಪ್ಪ, ಮಲ್ಲಿಕಾರ್ಜುನ ಉಳ್ಳಿ, ಗುರುರಾಜ ಇತರರಿದ್ದರು.