ವಕೀಲರ ಮೇಲಿನ ಹಲ್ಲೆಖಂಡಿಸಿ ಕಲಾಪ ಬಹಿಷ್ಕಾರ
Team Udayavani, Feb 7, 2018, 5:44 PM IST
ಶಹಾಪುರ: ಧಾರವಾಡದಲ್ಲಿ ವಕೀಲರಾದ ಬಿ.ಐ. ದೊಡ್ಮನಿ ಅವರ ಮೇಲೆ ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆ ಖಂಡಿಸಿ ನಗರದಲ್ಲಿ ವಕೀಲರ ಸಂಘದಿಂದ ಮಂಗಳವಾರ ಕಲಾಪ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ವಕೀಲರ ಮೇಲೆ ನಿರಂತರ ಹಲ್ಲೆ, ಕೊಲೆ ಯತ್ನದಂತ ಪ್ರಕರಣ ನಡೆಯುತ್ತಿದ್ದು, ವಕೀಲರಲ್ಲಿ ಆತಂಕ ಸೃಷ್ಟಿಯಾಗಿದೆ. ಯಾವುದೇ ಒಂದು ಪ್ರಕರಣದಲ್ಲಿ ಕಲಾಪ ನಡೆಸಿ ಹೊರ ಬರಲು ಪೊಲೀಸ್ ಸಿಬ್ಬಂದಿಯ ಸಹಾಯ ಕೋರುವಂತ ಸ್ಥಿತಿ ಬಂದಿದೆ. ಮನೆವರೆಗೆ ತಲುಪಿಸದಲು ಪೊಲೀಸರ ರಕ್ಷಣೆ ಕೋರುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಕಲಾಪ ಮುಗಿಸಿ ಹೊರಬರುತ್ತಿದ್ದಂತೆ ದೊಡ್ಮನಿ ವಕೀಲರ ಹಿಂದೆ ಬೆನ್ನು ಬಿದ್ದ ದುಷ್ಕರ್ಮಿಗಳು ಕಚೇರಿಗೆ ಬರುತ್ತಿದ್ದಂತೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದು ಖಂಡನೀಯ. ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರುಯಾಗಿಬೇಕು. ಸಮಾಜದಲ್ಲಿ ವಕೀಲರಿಗೆ ರಕ್ಷಣೆ ನೀಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲದೆ ನ್ಯಾಯಾಲಯದಲ್ಲಿಯೂ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಬೇಕಿದೆ ಎಂದು ಯುವ ವಕೀಲರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹೊನ್ನಾರಡ್ಡಿ ವಕೀಲರು, ವಿಶ್ವನಾಥರಡ್ಡಿ ಪಾಟೀಲ್, ಇಬ್ರಾಹಿಂಸಾಬ ವನದುರ್ಗ, ಶ್ರೀಮಂತ ಕಂಚಿ ಇತರರಿದ್ದರು.