ಕೃತಕ ಸಿಹಿಕಾರಕಗಳು

Team Udayavani, Jun 21, 2019, 1:25 PM IST

ಸಕ್ಕರೆ ನಾವು ಸೇವಿಸುವ ಆಹಾರದ ಅವಿಭಾಜ್ಯ ಅಂಗ. ಹೆಚ್ಚು ಸಕ್ಕರೆ ಸೇವನೆಯು ಕೆಲವು ಕಾಯಿಲೆಗಳು ಉಂಟಾಗುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬ ವಿಚಾರವು ಬಿಸಿ ಚರ್ಚೆಗೂ ಕಾರಣವಾಗಿದೆ. ಇದೇ ಕಾರಣದಿಂದ ಕೃತಕ ಸಿಹಿಕಾರಕ ಉತ್ಪನ್ನಗಳು ಗ್ರಾಹಕರ ಆಕರ್ಷಣೆಯನ್ನು ಪಡೆದುಕೊಂಡಿವೆ. ಕೃತಕ ಸಿಹಿಕಾರಕಗಳು ನಾವು ಉಪಯೋಗಿಸುವ ಸಕ್ಕರೆಯ ಹಲವು ಪಟ್ಟು ಹೆಚ್ಚು ಸಿಹಿಯನ್ನು ಹೊಂದಿರುವ ವಸ್ತುಗಳು. ಆದ್ದರಿಂದ ತುಂಬಾ ಕಡಿಮೆ ಸಿಹಿಕಾರಕ ಸಾಕಾಗುತ್ತದೆ ಮತ್ತು ಅದರಿಂದ ದೇಹಕ್ಕೆ ಪೂರೈಕೆಯಾಗುವ ಶಕ್ತಿ ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಕೃತಕ ಸಿಹಿಕಾರಕಗಳು ಒದಗಿಸುವ ಸಿಹಿ ರುಚಿಯು ಸಾಮಾನ್ಯ ಸಕ್ಕರೆಯ ಸಿಹಿರುಚಿಗಿಂತ ಭಿನ್ನವಾಗಿರುವ ಕಾರಣದಿಂದ ಅವುಗಳನ್ನು ಗಾಢವಾದ ಸಿಹಿರುಚಿಯನ್ನು ಉಂಟು ಮಾಡುವ ಸಂಕೀರ್ಣ ಮಿಶ್ರಣವಾಗಿ ಉಪಯೋಗಿಸುತ್ತಾರೆ.ಕೃತಕ ಸಿಹಿಕಾರಕಗಳು ದಿನನಿತ್ಯದ ಜೀವನದ ಪ್ರಾಮುಖ್ಯ ಭಾಗವಾಗಿ ಬಿಟ್ಟಿದೆಯಲ್ಲದೆ ವಿವಿಧ ಆಹಾರ ಮತ್ತು ಔಷಧೋತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಇವುಗಳನ್ನು ಸಸ್ಯಮೂಲದಿಂದ ಪಡೆದು ಅಥವಾ ರಾಸಾಯನಿಕವಾಗಿ ಸಂಸ್ಕರಿಸಿ ತಯಾರಿಸಲಾಗುತ್ತದೆ.

ಕೃತಕ ಸಿಹಿಕಾರಕಗಳ ಉಪಯೋಗ
ಕೃತಕ ಸಿಹಿಕಾರಕಗಳು ಸಂಸ್ಕರಿತ ಆಹಾರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿವೆ. ಅವುಗಳಲ್ಲಿ ಕೆಲವೆಂದರೆ,
– ಸಾಫ್ಟ್ ಡ್ರಿಂಕ್ಸ್‌, ಪಾನೀಯ ತಯಾರಿಸುವ ಪುಡಿಗಳು ಮತ್ತು ಇತರ ಪಾನೀಯಗಳು
– ಬೇಕರಿ ಆಹಾರಗಳು
– ಕ್ಯಾಂಡಿ
– ಪುಡಿಂಗ್‌ಗಳು
– ಕ್ಯಾನ್‌x ಆಹಾರಗಳು
– ಜ್ಯಾಮ್‌ಗಳು ಮತ್ತು ಜೆಲ್ಲಿಗಳು
– ಹೈನು ಉತ್ಪನ್ನಗಳು
– ಔಷಧಗಳು

ಕೃತಕ ಸಿಹಿಕಾರಕಗಳು ಗೃಹಬಳಕೆಯಲ್ಲೂ ಜನಪ್ರಿಯವಾಗುತ್ತಿವೆ. ಕೆಲವನ್ನು ಬೇಯಿಸಲು ಅಥವಾ ಅಡುಗೆಗೆ ಉಪಯೋಗಿಸಬಹುದಾಗಿದೆ. ಎಲ್ಲ ಕೃತಕ ಸಿಹಿಕಾರಕಗಳನ್ನು ಸಮಾನವಾಗಿ ತಯಾರಿಸಲಾಗುವುದಿಲ್ಲ. ಅಸ್ಪರ್ಟೇಮ್‌ ಸಚರೈನ್‌, ಸುಕ್ರಲೋಸ್‌, ನಿಯೊಟೇಮ್‌, ಅಸ್ಪರ್ಟೇಮ್‌-ಕೆ ಮತ್ತು ಸ್ಟೀವಿಯಾಗಳನ್ನು ಭಾರತೀಯ ಫ‌ುಡ್‌ ಆ್ಯಂಡ್‌ ಡ್ರಗ್‌ ಆ್ಯಡ್ಮಿನಿಸ್ಟ್ರೇಶನ್‌ ಸಾಮಾನ್ಯವಾಗಿ ಸುರಕ್ಷಿತ ಎಂದು ಘೋಷಿಸಿದೆ. ಇತ್ತೀಚೆಗಿನ ವರ್ಷಗಳಲ್ಲಿ ಸ್ವಿಂಗ್‌ಲ್‌ ಹಣ್ಣಿನ ಸಾರ ಮತ್ತು ಅಸ್ಪರ್ಟೇಮ್‌ ಎಂಬ ಇನ್ನೆರಡು ಕೃತಕ ಸಿಹಿಕಾರಕಗಳನ್ನು ಸೇರಿಸಿಕೊಳ್ಳಲಾಗಿದೆ. ಕೃತಕ ಸಿಹಿಕಾರಕಗಳ ಯಾದಿ ಬೆಳೆಯುತ್ತಲೇ ಇದೆ.

ಅಸೆಸಲ್ಫೇನ್‌ ಕೆ
ಅಸೆಸಲ್ಫೇನ್‌ ಪೊಟ್ಯಾಸಿಯಂಗೆ ಅಸೆಸಲ್ಫೇಮ್‌ ಕೆ ಎಂಬ ಹೆಸರೂ ಇದೆ. ಇದು ಕ್ಯಾಲೊರಿ ಮುಕ್ತವಾದ ಸಕ್ಕರೆಗೆ ಪರ್ಯಾಯ ಸಿಹಿಕಾರಕ. ಇದು ಸಕ್ಕರೆಗಿಂತ 200 ಪಟ್ಟು ಹೆಚ್ಚು ಸಿಹಿಯಾಗಿದೆ. ಸಚಾರಿನ್‌ನಂತೆಯೇ ಇದು ಕೂಡ ಹೆಚ್ಚು ಸಾಂದ್ರವಾಗಿದ್ದಾಗ ಸಿಹಿಯ ಬಳಿಕ ಸ್ವಲ್ಪ ಕಹಿಯ ಅನುಭವವನ್ನು ನೀಡುತ್ತದೆ. ಬೇಕಿಂಗ್‌ ಮತ್ತು ಅಡುಗೆಯ ಸಹಿತ ಬಿಸಿ ಮತ್ತು ಶೈತ್ಯ ಆಹಾರಗಳೆರಡರಲ್ಲೂ ಅಸಸಲ್ಫೆàಮ್‌ ಉಪಯೋಗಿಸಬಹುದಾಗಿದೆ. ಇದು ಸಕ್ಕರೆಗಿಂತ ಕಡಿಮೆ ಪಾರ್ಟಿಕಲ್‌ ಗಾತ್ರ ಹೊಂದಿರುವುದರಿಂದ ಇತರ ಸಿಹಿಕಾರಕಗಳ ಜತೆಗೆ ಮಿಶ್ರವಾಗಿ ಉಪಯೋಗಿಸಿದಾಗಲೂ ಸಮಾನ ಸಿಹಿ ಅನುಭವ ಕೊಡುತ್ತದೆ.

ಅಸ್ಪರ್ಟೇಮ್‌ನಂತಲ್ಲದೆ ಅಸಸಲ್ಫೇಮ್‌ ಕೆಯು ಸಾಧಾರಣ ಆಮ್ಲಿàಯ ಅಥವಾ ಮೂಲ ಸ್ಥಿತಿಗಳಲ್ಲಿ ಕಾಯಿಸುವಿಕೆಯಡಿ ಸ್ಥಿರವಾಗಿರುತ್ತದೆ. ಇದರಿಂದಾಗಿ ಬೇಕಿಂಗ್‌ ಅಥವಾ ದೀರ್ಘ‌ಕಾಲ ಉಳಿಯಬೇಕಾದ ಆಹಾರವಸ್ತುಗಳಲ್ಲಿ ಇದನ್ನು ಉಪಯೋಗಿಸಬಹುದಾಗಿದೆ. ಅಸಸಲ್ಫೇಮ್‌ ಪೊಟ್ಯಾಸಿಯಂ ಸ್ಥಿರ ಶೆಲ್ಫ್ ಲೈಫ್ ಹೊಂದಿದ್ದರೂ ನಿಧಾನವಾಗಿ ಅದು ಅಸೆಟೊಅಸೆಟಮೈಡ್‌ ಆಗಿ ಪರಿವರ್ತನೆಯಾಗಬಹುದಾಗಿದೆ. ಇದು ಹೆಚ್ಚು ಪ್ರಮಾಣದಲ್ಲಿದ್ದಾಗ ವಿಷಕಾರಕವಾಗಿದೆ.

ಕಾಬೊìನೇಟೆಡ್‌ ಪಾನೀಯಗಳಲ್ಲಿ ಇದನ್ನು ಅಸಸಲ್ಫೇಮ್‌ ಅಥವಾ ಸುಕ್ರಲೋಸ್‌ನಂತಹ ಇನ್ನೊಂದು ಕೃತಕ ಸಿಹಿಕಾರಕದ ಜತೆಗೆ ಬಳಸಲಾಗುತ್ತದೆ. ಪ್ರೊಟೀನ್‌ ಶೇಕ್‌ಗಳು ಮತ್ತು ಔಷಧಗಳು; ಅದರಲ್ಲಿಯೂ ಚೀಪುವ ಮತ್ತು ದ್ರವರೂಪಿ ಔಷಧಗಳಲ್ಲಿ ಅಸೆಸಲ್ಫೆàಮ್‌ ಕೆ ಬಳಕೆಯಾಗುತ್ತದೆ.

ಸುಕ್ರಲೋಸ್‌
ಸುಕ್ರಲೋಸ್‌ ಒಂದು ಕೃತಕ ಸಿಹಿಕಾರಕವಾಗಿದ್ದು, ಸಕ್ಕರೆಗೆ ಪರ್ಯಾಯವಾಗಿದೆ. ದೇಹಕ್ಕೆ ಪೂರೈಕೆಯಾದ ಸುಕ್ರಲೋಸ್‌ನ ಬಹ್ವಂಶ ಚಯಾಪಚಯ ಕ್ರಿಯೆಯಲ್ಲಿ ವಿಘಟನೆಗೆ ಒಳಗಾಗುವುದಿಲ್ಲ; ಆದ್ದರಿಂದ ಇದು ಕ್ಯಾಲೊರಿ ಮುಕ್ತವಾಗಿದೆ. ಸುಕ್ರೋಸ್‌ ಅಥವಾ ಸಕ್ಕರೆಯನ್ನು ಕ್ಲೊರಿನೇಶನ್‌ ಕ್ರಿಯೆಗೆ ಒಳಪಡಿಸುವುದರಿಂದ ಇದು ಲಭ್ಯವಾಗುತ್ತದೆ. ಸುಕ್ರಲೋಸ್‌ ಸಾದಾ ಸಕ್ಕರೆಗಿಂತ 320ರಿಂದ 1,000 ಪಟ್ಟು ಹೆಚ್ಚು ಸಿಹಿ ರುಚಿಯುಳ್ಳದ್ದಾಗಿದೆ. ಅಸ್ಪಾಟೇìಮ್‌ ಮತ್ತು ಅಸೆಸಲ್ಫೆàಮ್‌ ಪೊಟ್ಯಾಸಿಯಂಗಿಂತ ಮೂರು ಪಟ್ಟು ಹಾಗೂ ಸೋಡಿಯಂ ಸಚಾರಿನ್‌ಗಿಂತ ಎರಡು ಪಟ್ಟು ಹೆಚ್ಚು ಸಿಹಿ ಸ್ವಾದವುಳ್ಳದ್ದು ಇದಾಗಿದೆ.

ಸುಕ್ರಲೋಸ್‌ಅನ್ನು ತಂಪು ಮತ್ತು ಬಿಸಿ – ಎರಡೂ ಬಗೆಯ ಖಾದ್ಯಗಳಲ್ಲಿ ಹಾಗೂ ಬೇಕಿಂಗ್‌ ಮತ್ತು ಕುಕಿಂಗ್‌ – ಎರಡರಲ್ಲಿಯೂ ಉಪಯೋಗಿಸಬಹುದಾಗಿದೆ. ಸಂಸ್ಕರಿತ ಆಹಾರಗಳಲ್ಲಿ ಸುಕ್ರಲೋಸ್‌ ಇರಬಹುದಾಗಿದೆ. ನಿಯೊಟೇಮ್‌
ಸಾದಾ ಸಕ್ಕರೆಗಿಂತ 7,000ರಿಂದ 13,000 ಪಟ್ಟು ಹೆಚ್ಚು ಸಿಹಿಯಾಗಿರುವ ನ್ಯೂಟ್ರಾಸ್ವೀಟ್‌ನಿಂದ ನಿಯೊಟೇಮ್‌ ತಯಾರಿಸಲಾಗುತ್ತದೆ. ಇದು ಮಧ್ಯಮ ಪ್ರಮಾಣದ ಉಷ್ಣವನ್ನು ತಾಳಿಕೊಳ್ಳುವಂಥದ್ದಾಗಿದ್ದು, ಕ್ಷಿಪ್ರವಾಗಿ ಚಯಾಪಚಯ ಕ್ರಿಯೆಗೆ ಒಳಪಡುತ್ತದೆಯಲ್ಲದೆ ದೇಹದಲ್ಲಿ ಸಂಗ್ರಹವಾಗದೆ ಪೂರ್ಣವಾಗಿ ದೇಹದಿಂದ ಹೊರಹಾಕಲ್ಪಡುತ್ತದೆ. ಆಹಾರಗಳಿಗೆ ಸಿಹಿ ರುಚಿ ನೀಡಲು ಬೇಕಾಗುವುದು ಅತ್ಯಲ್ಪ ಪ್ರಮಾಣದ ನಿಯೊಟೇಮ್‌ ಆಗಿರುವುದರಿಂದ ಅದರಿಂದ ಪಡೆಯುವ ಮಿಥನಾಲ್‌ ಸಾಮಾನ್ಯ ಆಹಾರವಸ್ತುಗಳಲ್ಲಿ ಇರುವುದಕ್ಕಿಂತ ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ ಇದು ಆಹಾರವಸ್ತುಗಳಲ್ಲಿ ವ್ಯಾಪಕ ಬಳಕೆಗೆ ಇನ್ನೂ ಬಂದಿಲ್ಲ.

ಕೃತಕ ಸಿಹಿಕಾರಕಗಳನ್ನು ಪುಡಿ ರೂಪದಲ್ಲಿದ್ದರೆ ದಿನಕ್ಕೆ 2 ಚಹಾ ಚಮಚ ಅಥವಾ ಘನ ರೂಪದಲ್ಲಿದ್ದರೆ 2 ತುಂಡು ಸೇವಿಸಬಹುದು ಎಂದು ಶಿಫಾರಸು ಮಾಡಲಾಗಿದೆ. ಎಫ್ಡಿಎ ಸೂಚಿತ ಮಾರ್ಗದರ್ಶಿ ಸೂತ್ರಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಕೃತಕ ಸಿಹಿಕಾರಕಗಳನ್ನು ಸೇವಿಸುವುದು ತೀವ್ರ ದುಷ್ಪರಿಣಾಮಗಳನ್ನು ಉಂಟು ಮಾಡಬಹುದು ಮಾತ್ರವಲ್ಲದೆ ಮಧುಮೇಹಕ್ಕೆ ಕಾರಣವಾಗುವ ಬೊಜ್ಜಿಗೂ ದಾರಿ ಮಾಡಿಕೊಡಬಹುದು. ಕೃತಕ ಸಿಹಿಕಾರಕಗಳು ಸಕ್ಕರೆಗೆ ಆರೋಗ್ಯಪೂರ್ಣ ಪರ್ಯಾಯವಾಗಿರಲೇ ಬೇಕಾಗಿಲ್ಲ ಎಂಬುದು ಇತ್ತೀಚೆಗೆ ನಡೆಸಲಾದ ಅಧ್ಯಯನವೊಂದರಿಂದ ತಿಳಿದುಬಂದಿದೆ. ಅನೇಕ ವರ್ಷಗಳ ಕಾಲ ದಿನವೂ ಕೃತಕ ಸಿಹಿಕಾರಕಗಳನ್ನು ಸೇವಿಸುವವರ ಮೇಲೆ ಈ ಅಧ್ಯಯನವನ್ನು ನಡೆಸಲಾಗಿತ್ತು. ಕೃತಕ ಸಿಹಿಕಾರಕಗಳನ್ನು ಸೇವಿಸುವುದರಿಂದ ಕರುಳಿನಲ್ಲಿರುವ ಸೂಕ್ಷ್ಮಜೀವಿ ಜಗತ್ತಿನಲ್ಲಿ ರಾಚನಿಕ ಮತ್ತು ಕ್ರಿಯಾತ್ಮಕ ಪರಿವರ್ತನೆ ಉಂಟಾಗಿ ಗುÉಕೋಸ್‌ ಅಸಹಿಷ್ಣುತೆ ಬೆಳೆದುಬರುವುದು ಇನ್ನು ಕೆಲವು ಅಧ್ಯಯನಗಳಿಂದ ಗೊತ್ತಾಗಿದೆ. ಕೃತಕ ಸಿಹಿಕಾರಕಗಳನ್ನು ತಯಾರಿಸುವುದು ರಾಸಾಯನಿಕ ಸಂಕೀರ್ಣ ಕ್ರಿಯೆಗಳ ಮೂಲಕ, ಇದು ದೀರ್ಘ‌ಕಾಲದ ಸೇವನೆಯಿಂದ ದೇಹದ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುತ್ತದೆ. ಕೆಲವರು ಸಿಹಿಕಾರಕಗಳಿಗೆ ಸೂಕ್ಷ್ಮ ಸಂವೇದಿಗಳಾಗಿದ್ದು, ತಲೆನೋವು ಮತ್ತು ಹೊಟ್ಟೆನೋವಿನಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಮಧುಮೇಹ ಮತ್ತು ತೂಕ
ಇಳಿಸಿಕೊಳ್ಳಲು ಸ್ಟೀವಿಯಾ
ಸುರಕ್ಷಿತವೇ?
ಪ್ರಯೋಗಾಲಯಗಳಲ್ಲಿ ಉತ್ಪಾದನೆಯಾಗುವ ಶೂನ್ಯ ಕ್ಯಾಲೊರಿ ಇರುವ ಇತರ ಸಿಹಿಕಾರಕಗಳಂತಲ್ಲದೆ ಸ್ಟೀವಿಯಾ ಸಸ್ಯ ರಸವನ್ನು ದಕ್ಷಿಣ ಅಮೆರಿಕಾದಲ್ಲಿ ಬೆಳೆಯುವ ಸ್ಟೀವಿಯಾ ರಿಬುವಾಡಿಯಾನಾ ಸಸ್ಯದ ಎಲೆಯಿಂದ ಪಡೆಯಲಾಗುತ್ತದೆ. ಈ ಸಸ್ಯದ ಎಲೆಗಳು ಸ್ಟೀವಿಯೊಸೈಡ್‌ ಮತ್ತು ರಿಬುವಾಡಿಯೊಸೈಡ್‌ ಎ ಎಂಬ ಎರಡು ಸಿಹಿ ಸಂಯುಕ್ತಗಳನ್ನು ಹೊಂದಿರುತ್ತದೆ. ಇವೆರಡನ್ನು ಉಪಯೋಗಿಸಿ ಸಕ್ಕರೆಗಿಂತ ನೂರಾರು ಪಟ್ಟು ಹೆಚ್ಚು ಸಿಹಿಯಾಗಿರುವ ಸಿಹಿಕಾರಕಗಳನ್ನು ತಯಾರಿಸುತ್ತಾರೆ. ಸ್ಟೀವಿಯಾ ಸಸ್ಯರಸವು ಸಸ್ಯಜನ್ಯವಾದುದರಿಂದ ಅದರಿಂದ ಉತ್ಪಾದಿಸುವ ಸಿಹಿಕಾರಕಗಳನ್ನು ಸಾಮಾನ್ಯವಾಗಿ ನೈಸರ್ಗಿಕ ಎಂಬ ಲೇಬಲ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ.

ಅತ್ಯುಚ್ಚವಾಗಿ ಸಂಸ್ಕರಿಸಲಾದ ಸ್ಟೀವಿಯಾ ಉತ್ಪನ್ನಗಳನ್ನು ನವೀನ ಸಿಹಿಕಾರಕಗಳು ಎಂಬುದಾಗಿ ಎಫ್ಡಿಎ ಅನುಮೋದಿಸಿದೆ. ಸ್ಟೀವಿಯಾ ಆಧರಿತ ಸಿಹಿಕಾರಕಗಳು ಕ್ಯಾಲೊರಿ ಮುಕ್ತವಾಗಿದ್ದು, ರಕ್ತದ ಸಕ್ಕರೆಯಂಶದ ಮೇಲೆ ಅತ್ಯಲ್ಪ ಪರಿಣಾಮ ಉಂಟು ಮಾಡುತ್ತವೆ ಅಥವಾ ಪರಿಣಾಮವೇ ಇರುವುದಿಲ್ಲ. ಇದರಿಂದಾಗಿ ಮಧುಮೇಹಿಗಳಿಗೆ ಇದು ಸಕ್ಕರೆಯ ಅತ್ಯುತ್ತಮ ಪರ್ಯಾಯವಾಗಿದೆ. ಎಫ್ಡಿಎಯು ಸಾಮಾನ್ಯವಾಗಿ ಸುರಕ್ಷಿತ ಎಂಬುದಾಗಿ ಪರಿಗಣಿತವಾಗಿರುವ ಕೆಲವೊಂದು ಸ್ಟೀವಿಯಾ ಉತ್ಪನ್ನಗಳ ಬಳಕೆಯನ್ನು ಅನುಮೋದಿಸಿದೆ. ನೀವು ಮಧುಮೇಹಿಗಳಲ್ಲದೆ ಇದ್ದರೆ ಸಕ್ಕರೆಯ ಮದ್ಯಸಾರಗಳು ಅಥವಾ ನೈಸರ್ಗಿಕ ಸಿಹಿಕಾರಕಗಳಂತಹ ಇತರ ಸಿಹಿಕಾರಕಗಳನ್ನು ಉಪಯೋಗಿಸಬಹುದಾಗಿದೆ.

ಸಕ್ಕರೆಯ ಮದ್ಯಸಾರಗಳು
ಇತರ ಸಕ್ಕರೆಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಅಥವಾ ಸಂಸ್ಕರಿತ ಸಿಹಿ ಕಾಬೊìಹೈಡ್ರೇಟ್‌ಗಳೇ ಸಕ್ಕರೆಯ ಮದ್ಯಸಾರಗಳು. ಇವುಗಳನ್ನು ಸಿಹಿಕಾರಕಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇವು ಸಕ್ಕರೆಗಿಂತ ಸಿಹಿಯಲ್ಲದ್ದರಿಂದ ಇವುಗಳನ್ನು ತೀಕ್ಷ್ಣ ಸಿಹಿಕಾರಕಗಳಾಗಿ ಪರಿಗಣಿಸಲಾಗುವುದಿಲ್ಲ. ಹಾಗೆ ನೋಡಿದರೆ ಇವುಗಳಲ್ಲಿ ಕೆಲವು ಸಕ್ಕರೆಗಿಂತ ಕಡಿಮೆಯೇ ಸಿಹಿರುಚಿಯನ್ನು ಹೊಂದಿರುತ್ತವೆ. ಕೃತಕ ಸಿಹಿಕಾರಕಗಳಂತೆಯೇ ಎಫ್ಡಿಎಯು ಸಕ್ಕರೆಯ ಮದ್ಯಸಾರಗಳಿಗೂ ನಿಯಂತ್ರಣ ವಿಧಿಸಿದೆ.

ಅಸ್ಪರ್ಟೇಮ್‌
ಇದು ಸಾಮಾನ್ಯ ಸಕ್ಕರೆಗಿಂತ 200 ಪಟ್ಟು ಹೆಚ್ಚು ಸಿಹಿಯಾಗಿರುತ್ತದೆ. ಚಯಾಪಚಯ ಕ್ರಿಯೆಗೆ ಒಳಪಟ್ಟಾಗ ಒಂದು ಗ್ರಾಮ್‌ ಅಸಸಲ್ಫೇಮ್‌ ನಾಲ್ಕು ಕಿಲೊಕ್ಯಾಲೊರಿಗಳಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. ಸಿಹಿ ರುಚಿಯನ್ನು ಪಡೆಯಲು ಬೇಕಾಗುವ ಅಸ್ಪಾರ್ಟೇಮ್‌ನ ಪ್ರಮಾಣ ಎಷ್ಟು ಅತ್ಯಲ್ಪ ಎಂದರೆ, ಅದರ ಕ್ಯಾಲೊರಿ ಕೊಡುಗೆಯು ನಗಣ್ಯ ಎಂಬಂತಿರುತ್ತದೆ. ಅಸ್ಪರ್ಟೇಮ್‌ ಮತ್ತು ಇತರ ಕೃತಕ ಸಿಹಿಕಾರಕಗಳ ಸಿಹಿ ರುಚಿಯು ಸಾಮಾನ್ಯ ಸಕ್ಕರೆಗಿಂತ ಭಿನ್ನವಾಗಿರುತ್ತದೆಯಾದರೂ ಸಿಹಿ ರುಚಿಯು ಎಷ್ಟು ಕಾಲ ಉಳಿದುಕೊಳ್ಳುತ್ತದೆ ಎಂಬ ವಿಚಾರದಲ್ಲಿ ಅಸ್ಪಾರ್ಟೇಮ್‌ ಇತರ ಸಿಹಿಕಾರಕಗಳಿಗಿಂತ ಸಕ್ಕರೆಗೆ ಹೆಚ್ಚು ಸನಿಹದಲ್ಲಿದೆ. ಅಸ್ಪಾರ್ಟೇಮ್‌ನ ಸಿಹಿರುಚಿಯು ಸಕ್ಕರೆಗಿಂತ ಹೆಚ್ಚು ದೀರ್ಘ‌ಕಾಲ ಉಳಿಯುವುದರಿಂದ ಅದನ್ನು ಅಸೆಸಲ್ಫೆàಮ್‌ ಪೊಟ್ಯಾಸಿಯಂನಂತಹ ಇತರ ಸಿಹಿಕಾರಕಗಳ ಜತೆಗೆ ಸಮ್ಮಿಶ್ರಣಗೊಳಿಸಿ ಸಕ್ಕರೆಯಂತಹ ಸಮಗ್ರ ಸಿಹಿರುಚಿಯನ್ನು ಪಡೆಯಲಾಗುತ್ತದೆ. ಅಸ್ಪಾಟೇìಮ್‌ನ ಉಪ ಉಪ ಉತ್ಪನ್ನಗಳಲ್ಲಿ ಫಿನೈಲಲನೈನ್‌ ಒಳಗೊಂಡಿದೆ. ಅಸ್ಪಾರ್ಟೇಮ್‌ನ್ನು ತಂಪು ಮತ್ತು ಬಿಸಿ ಆಹಾರಗಳೆರಡರಲ್ಲೂ ಉಪಯೋಗಿಸಬಹುದು. ಅತಿಹೆಚ್ಚು ಉಷ್ಣತೆಯಲ್ಲಿ ಅಸ್ಪಾರ್ಟೇಮ್‌ ಸ್ವಲ್ಪಾಂಶ ಸಿಹಿಯನ್ನು ಕಳೆದುಕೊಳ್ಳಬಹುದು. ಫಿನೈಲ್‌ಕೆಟೊನೂರಿಯಾ (ಫಿನೈಲಲನೈನ್‌ ಅನ್ನು ಚಯಾಪಚಯ ಕ್ರಿಯೆಗೆ ಒಳಪಡಿಸಲಾಗದೆ ಇರುವ ಸ್ಥಿತಿ) ಎಂಬ ಆರೋಗ್ಯ ಸ್ಥಿತಿ ಇರುವವರು ಈ ಕೃತಕ ಸಿಹಿಕಾರಕವನ್ನು ಬಳಸಬಾರದು.

ಸಚರಿನ್‌: ಸೋಡಿಯಂ ಸಚರಿನ್‌
(ಬೆಂಜೋಯಿಕ್‌ ಸಲ್ಫಿಮೈಡ್‌)
ಇದೊಂದು ಕೃತಕ ಸಿಹಿಕಾರಕವಾಗಿದ್ದು, ಇದರಲ್ಲಿ ಆಹಾರ ಶಕ್ತಿ ಮತ್ತು ಪೌಷ್ಟಿಕಾಂಶ ಮೌಲ್ಯ ಇಲ್ಲವೇ ಇಲ್ಲ. ಇದು ಸಕ್ಕರೆಗಿಂತ 400 ಪಟ್ಟು ಹೆಚ್ಚು ಸಿಹಿರುಚಿಯನ್ನು ಹೊಂದಿರುತ್ತದೆ. ಆದರೆ ಹೆಚ್ಚು ಸಾಂದ್ರವಾಗಿದ್ದಾಗ ಕಹಿ ರುಚಿಯನ್ನು ಕೊಡುತ್ತದೆ. ಸಚ್ಚಾರಿನ್‌ ಅಧಿಕ ಉಷ್ಣತೆಯಲ್ಲಿಯೂ ಸ್ಥಿರವಾಗಿರುತ್ತದೆ. ಚೆನ್ನಾಗಿ ದಾಸ್ತಾನು ಮಾಡಿದರೆ ಇದು ಇತರ ಆಹಾರಾಂಶಗಳ ಜತೆಗೆ ಪ್ರತಿಕ್ರಿಯಿಸುವುದಿಲ್ಲ. ಪಥ್ಯಾಹಾರದಲ್ಲಿ ಉಪಯೋಗಿಸುವ ಕಾಬೊìನೇಟೆಡ್‌ ಸಾಫ್ಟ್ಡ್ರಿಂಕ್‌ಗಳಲ್ಲಿ ಇದನ್ನು ಅಸ್ಪಾರ್ಟೇಮ್‌ಜತೆಗೆ ಉಪಯೋಗಿಸುತ್ತಾರೆ. ಆಗ ಅಸ್ಪಾಟೇìಮ್‌ನ ಅಲ್ಪ ಶೆಲ್ಫ್ ಲೈಫ್ ವಿಸ್ತರಣೆಯಾಗುತ್ತದೆ. ಪಾನೀಯಗಳು, ಕ್ಯಾಂಡಿಗಳು, ಕುಕೀಗಳು ಮತ್ತು ಔಷಧಗಳನ್ನು ಸಿಹಿಯಾಗಿಸಲು ಸಚಾರಿನ್‌ ಉಪಯೋಗಿಸುತ್ತಾರೆ. ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯಕ್ಕಾಗಿ ಸಚಾರಿನ್‌ ಬಳಕೆಯನ್ನು ವರ್ಜಿಸಬೇಕು.

-ಮುಂದುವರಿಯುವುದು

-ರಾಜೇಶ್ವರಿ ನಾಯಕ್‌,
ಪಥ್ಯಾಹಾರ ತಜ್ಞೆ
ಕೆಎಂಸಿ ಆಸ್ಪತ್ರೆ, ಮಣಿಪಾಲ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ