ಬಾಲ್ಯದಲ್ಲೇ ಬೊಜ್ಜು! ಕಾರಣವೇನು? ಪರಿಹಾರ ಹೇಗೆ?

Team Udayavani, Jul 11, 2019, 12:02 PM IST

ಇಪ್ಪತ್ತೂಂದನೆಯ ಶತಮಾನದ ಅತಿ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲಿ ಒಂದು ಮಕ್ಕಳು ಬಾಲ್ಯದಲ್ಲಿಯೇ ಬೊಜ್ಜು ಬೆಳೆಸಿಕೊಳ್ಳುವುದು. ಈ ಸಮಸ್ಯೆ ಜಾಗತಿಕವಾದುದು ಮತ್ತು ಕೆಳ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿದೆ. ಮಗು ಆತನ/ ಆಕೆಯ ವಯಸ್ಸು ಮತ್ತು ಎತ್ತರಕ್ಕೆ ಸಹಜವಾದ ಅಥವಾ ಆರೋಗ್ಯಕರವಾದ ದೇಹತೂಕಕ್ಕಿಂತ ಹೆಚ್ಚು ತೂಕವನ್ನು ಹೊಂದಿದ್ದರೆ ಅದನ್ನು ಬೊಜ್ಜು ಎನ್ನಲಾಗುತ್ತದೆ. ಬಾಲ್ಯದಲ್ಲಿಯೇ ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿರುವ ಮಕ್ಕಳು ಪ್ರೌಢವಯಸ್ಕರಾದಾಗಲೂ ಈ ಸಮಸ್ಯೆ ಹಾಗೆಯೇ ಉಳಿದುಬಿಡುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಹೃದ್ರೋಗಗಳಂತಹ ತೊಂದರೆಗೆ ತುತ್ತಾಗುವ ಸಾಧ್ಯತೆಗಳು ಅಧಿಕ. ಅಧಿಕ ದೇಹತೂಕ ಅಥವಾ ಬೊಜ್ಜು ಹಾಗೂ ಇವುಗಳಿಗೆ ಸಂಬಂಧಿಸಿದ ಇತರ ಕಾಯಿಲೆಗಳು ಬಹುತೇಕವಾಗಿ ತಡೆಗಟ್ಟಬಲ್ಲಂಥವು. ಆದ್ದರಿಂದ ಬಾಲ್ಯದಲ್ಲಿಯೇ ಬೊಜ್ಜು ಬೆಳೆಯುವುದನ್ನು ತಡೆಗಟ್ಟುವುದಕ್ಕೆ ಹೆಚ್ಚು ಪ್ರಾಮುಖತೆಯನ್ನು ನೀಡಬೇಕಾದ ಅಗತ್ಯವಿದೆ. ಕೆಳ ಸಾಮಾಜಿಕ- ಆರ್ಥಿಕ ಸ್ಥಿತಿಗತಿಯ ಸಮುದಾಯಗಳು ಮತ್ತು ತಾಯಂದಿರನ್ನು ಉದ್ದೇಶಿಸಿ ಶೈಕ್ಷಣಿಕ ಅರಿವನ್ನು ಮೂಡಿಸುವ ಸಂದರ್ಭದಲ್ಲಿ ಬೊಜ್ಜು ಅಥವಾ ಅಧಿಕ ದೇಹತೂಕವು ಉತ್ತಮ ಆರೋಗ್ಯವನ್ನು ಸಂಕೇತಿಸುವುದಿಲ್ಲ ಎಂಬ ಸಂದೇಶವನ್ನು ಹರಡುವುದಕ್ಕೆ ಹೆಚ್ಚು ಒತ್ತನ್ನು ನೀಡಬೇಕಾದ ಅಗತ್ಯವಿದೆ.

ಬಾಲ್ಯದಲ್ಲಿ ಬೊಜ್ಜು: ಆರೋಗ್ಯ ಸಮಸ್ಯೆಯಾಗಿ ಪರಿಗಣಿತವಾಗಿರುವುದು ಯಾಕೆ?

ಬಾಲ್ಯದಲ್ಲಿ ಬೊಜ್ಜು ಅಥವಾ ಅಧಿಕ ದೇಹತೂಕ ಉಂಟಾದರೆ ಅದು ಅನೇಕ ರೀತಿಗಳಲ್ಲಿ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಬೊಜ್ಜು ಹೊಂದಿರುವ ಮಕ್ಕಳು ಈ ಕೆಳಗಿನ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಅಧಿಕ:

• ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟರಾಲ್ – ಇವೆರಡೂ ಹೃದ್ರೋಗ (ಸಿವಿಡಿ)ಗಳ ಅಪಾಯಾಂಶಗಳಾಗಿವೆ.

• ಗ್ಲುಕೋಸ್‌ ಸಹಿಷ್ಣುತೆ, ಇನ್ಸುಲಿನ್‌ ಪ್ರತಿರೋಧ ಶಕ್ತಿ ಕಡಿಮೆಯಾಗುವುದು ಮತ್ತು ಟೈಪ್‌ 2 ಮಧುಮೇಹ ಉಂಟಾಗುವ ಅಪಾಯ ಹೆಚ್ಚುವುದು.

• ಅಸ್ತಮಾ ಮತ್ತು ಸ್ಲೀಪ್‌ ಅಪ್ನಿಯಾದಂತಹ ಉಸಿರಾಟ ಸಂಬಂಧಿ ತೊಂದರೆಗಳು.

• ಸಂದುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸ್ನಾಯು-ಎಲುಬು ಸಂಬಂಧಿ ಅನಾರೋಗ್ಯಗಳು

• ಫ್ಯಾಟಿ ಲಿವರ್‌ ಕಾಯಿಲೆ, ಮೂತ್ರಪಿಂಡದಲ್ಲಿ ಕಲ್ಲು ಮತ್ತು ಗ್ಯಾಸ್ಟ್ರೊ ಎಸೊಫೇಜಿಯಲ್ ಡಿಸ್‌ಕಂಫ‌ರ್ಟ್‌ (ಎದೆಯುರಿ, ಹುಳಿತೇಗು)

ಮಕ್ಕಳು ಅಧಿಕ ದೇಹತೂಕ ಅಥವಾ ಬೊಜ್ಜನ್ನು ಬೆಳೆಸಿಕೊಳ್ಳುವುದೇಕೆ?

ಆಹಾರ ಮತ್ತು ಜೀವನಶೈಲಿ
ಹೆತ್ತವರ ಉದ್ಯೋಗ ಜೀವನದ ಇಡುಕಿರದ ಕಾರ್ಯಭಾರದಿಂದಾಗಿ ಅವರಿಗೆ ಮಕ್ಕಳಿಗಾಗಿ ಸಮಯ ನೀಡಲು ಆಗುವುದಿಲ್ಲ. ಇದರಿಂದ ಮಕ್ಕಳಿಗೆ ಹೆತ್ತವರ ಮಾರ್ಗದರ್ಶನದ ಕೊರತೆ ಉಂಟಾಗುತ್ತದೆ. ಹೀಗಾಗಿ ಸರಿಯಾದ ಪೌಷ್ಟಿಕಾಂಶ ಸೇವನೆಯ ಬಗ್ಗೆ ಮಕ್ಕಳಿಗೆ ಹೇಳಿಕೊಡುವುದಕ್ಕೆ ಹೆತ್ತವರ ಬಳಿ ಸಮಯವಿರುವುದಿಲ್ಲ. ಹೆತ್ತವರ ಕಾರ್ಯಭಾರದಿಂದಾಗಿ ಅನೇಕ ಮಕ್ಕಳು ಮನೆಯೂಟ ಬದಲಾಗಿ ಯಾವುದೋ ಫಾಸ್ಟ್‌ಫ‌ುಡ್‌ ರೆಸ್ಟೋರೆಂಟ್‌ಗಳಲ್ಲಿ ಊಟ-ಉಪಾಹಾರಗಳನ್ನು ಪೂರೈಸಿಕೊಳ್ಳಬೇಕಾಗುತ್ತದೆ.
ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳ ಕೊರತೆ
ಅನೇಕ ಮಕ್ಕಳಿಗೆ ಸಾಕಷ್ಟು ದೈಹಿಕ ಚಟುವಟಿಕೆ, ವ್ಯಾಯಾಮ ಸಿಗುವುದಿಲ್ಲ. ಹೊರಾಂಗಣದಲ್ಲಿ ಆಟವಾಡುವ ಬದಲಾಗಿ ಮನೆಯೊಳಗೆ ಡಿಜಿಟಲ್ ಉಪಕರಣಗಳ ಜತೆಗೆ ಆಟವಾಡುವುದರಲ್ಲಿಯೇ ಮಕ್ಕಳು ಹೆಚ್ಚು ಕಾಲ ಕಳೆಯುತ್ತಾರೆ. ದಿನಕ್ಕೆ ಎರಡು ತಾಸು ಅಥವಾ ಅದಕ್ಕಿಂತ ಕಡಿಮೆ ಕಾಲ ಟಿವಿ ವೀಕ್ಷಿಸುವ ಮಕ್ಕಳಿಗಿಂತ ದಿನಕ್ಕೆ ನಾಲ್ಕು ತಾಸುಗಳಿಗಿಂತ ಹೆಚ್ಚು ಕಾಲ ಟಿವಿ ವೀಕ್ಷಿಸುವ ಮಕ್ಕಳು ಬೊಜ್ಜು ಬೆಳೆಸಿಕೊಳ್ಳುವ ಸಾಧ್ಯತೆ ಅಧಿಕ.

ವಂಶವಾಹಿ
ಮಕ್ಕಳ ದೇಹತೂಕದಲ್ಲಿ ವಂಶವಾಹಿಗಳೂ ಪಾತ್ರ ವಹಿಸುತ್ತವೆ. ನಮ್ಮ ದೇಹವಿಧ ಮತ್ತು ದೇಹವು ಎಷ್ಟು ಮತ್ತು ಹೇಗೆ ಕೊಬ್ಬನ್ನು ದಹಿಸಬೇಕು ಮತ್ತು ಶೇಖರಿಸಿಟ್ಟುಕೊಳ್ಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ವಂಶವಾಹಿಗಳು ಸಹಾಯ ಮಾಡುತ್ತವೆ. ಹೆತ್ತವರು ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿದವರಾಗಿದ್ದರೆ ಮಗು ಕೂಡ ಈ ಸಮಸ್ಯೆಗೆ ತುತ್ತಾಗುವ ಸಾಧ್ಯತೆಗಳು ಅಧಿಕ.

ಶಿಶುಗಳಲ್ಲಿ ಬೊಜ್ಜು ತಡೆಯುವುದು
ಮಗುವಿಗೆ ಹೆಚ್ಚು ಕಾಲ ಎದೆಹಾಲು ಉಣಿಸಿದರೆ ಮಗು ಬೆಳೆದಂತೆ ಅಧಿಕ ದೇಹತೂಕ, ಬೊಜ್ಜು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಮುಂದುವರಿಯುವುದು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ