ಮಹಿಳೆಯರಿಗಾಗಿ ಲಘು ವ್ಯಾಯಾಮ

Team Udayavani, May 14, 2019, 5:27 PM IST

ಮಹಿಳೆಯರಲ್ಲಿ ವ್ಯಾಯಾಮದ ಬಗ್ಗೆ ಹೆಚ್ಚು ಗೊಂದಲಗಳಿರುತ್ತವೆ. ಕೆಲವೊಂದು ವ್ಯಾಯಾಮವನ್ನು ಮಾಡಬಹುದೇ? ಅದರಲ್ಲೂ ಮುಖ್ಯವಾಗಿ ಋತುಚಕ್ರದ ವೇಳೆ ಯಾವ ರೀತಿಯ ವ್ಯಾಯಾಮ ಮಾಡಬಹುದು, ಯಾವುದನ್ನು ಮಾಡಬಾರದು ಎಂಬ ಗೊಂದಲಗಳಿರುತ್ತವೆ. ಯಾವ ವ್ಯಾಯಾಮ ಮಾಡಿದರೆ ದೇಹಕ್ಕೆ ಅಪಾಯವಿದೆಯೋ ಅಥವಾ ವ್ಯಾಯಾಮ ಮಾಡದಿದ್ದರೆ ದೇಹ ಸೌಂದರ್ಯ ಹಾಳಾಗುತ್ತದೋ ಎಂಬ ಆತಂಕ ಇದ್ದೇ ಇರುತ್ತದೆ.

ಋತುಚಕ್ರದ ವೇಳೆ ವ್ಯಾಯಾಮ ಮಾಡಬಾರದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ವೈದ್ಯರು ಈ ಸಂದರ್ಭದಲ್ಲಿ ವ್ಯಾಯಾಮ ಮಾಡುವ ಸಲಹೆಯನ್ನೇ ನೀಡುತ್ತಾರೆ. ಕಾರಣ ದೇಹ ಹೆಚ್ಚು ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಅಲ್ಲದೇ ಋತುಚಕ್ರದ ವೇಳೆ ಬಾಧಿಸುವ ಹೊಟ್ಟೆ ನೋವು, ತಲೆನೋವು, ದೇಹದ ನಿಶ್ಶಕ್ತಿ, ಹಾರ್ಮೋನ್‌ಗಳ ಏರುಪೇರನ್ನು ಇದು ಹೋಗಲಾಡಿಸುತ್ತದೆ. ಋತುಚಕ್ರದ ಸಂದರ್ಭದಲ್ಲಿ ಶರೀರ ಹೆಚ್ಚು ವಿಶ್ರಾಂತಿಯನ್ನು ಬಯಸುವುದರಿಂದ ದೇಹಕ್ಕೆ ಹೆಚ್ಚು ಆಯಾಸ ಉಂಟು ಮಾಡುವ ವ್ಯಾಯಾಮಗಳನ್ನು ಮಾಡದಿರುವುದು ಉತ್ತಮ. ಹೆಚ್ಚು ಶರೀರಕ್ಕೆ ಆಯಾಸ ಮಾಡಿದರೆ ಮುಂದೆ ಅನಾರೋಗ್ಯ ಕಾಡಬಹುದು.

ಯೋಗ

ಋತುಚಕ್ರದ ಸಂದರ್ಭದಲ್ಲಿ ಅತಿಹೆಚ್ಚು ನಿಶ್ಯಕ್ತಿ ಉಂಟಾಗಿ ಮನಸ್ಸಿಗೆ ಕಿರಿಕಿರಿಯಾಗುತ್ತಿದ್ದರೆ ಯೋಗ ಮಾಡುವುದು ಸೂಕ್ತ. ಇದರಿಂದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ನಿಮಗೆ ಯಾವುದೇ ತೊಂದರೆ ಇಲ್ಲ ಎಂದಾದರೆ ನಿಮ್ಮ ದಿನನಿತ್ಯದ ವ್ಯಾಯಾಮವನನ್ನೇ ಮುಂದುವರಿಸಬಹುದು.

ಜಾಗಿಂಗ್‌/ ವಾಕಿಂಗ್‌

ಋತುಚಕ್ರದ ವೇಳೆಯಲ್ಲಿ ವಾಕಿಂಗ್‌ ಅಥವಾ ಜಾಗಿಂಗ್‌ ಮಾಡುವುದರಿಂದ ಶರೀರಕ್ಕೆ ಹೆಚ್ಚೇನೂ ಆಯಾಸ ಉಂಟಾಗುವುದಿಲ್ಲ. ಬದಲಾಗಿ ಹೊರಗಿನ ವಾತಾವರಣದ ಸ್ಪರ್ಶದಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ.

ಆರ್ಮ್ ಸರ್ಕಲ್ಸ್

ಕೈಕಾಲುಗಳಿಗೆ ಕೆಲಸ ನೀಡುವಂತಹ ಆರ್ಮ್ ಸರ್ಕಲ್ ಸರಳ ವ್ಯಾಯಾಮವನ್ನು ಈ ಸಂದರ್ಭದಲ್ಲಿ ಮಾಡಬಹುದು.

ಈ ವ್ಯಾಯಾಮಗಳನ್ನು ಮಾಡಬೇಡಿ
ಋತುಚಕ್ರದ ವೇಳೆ ಸೊಂಟ, ಹೊಟ್ಟೆಗೆ ಹೆಚ್ಚು ಭಾರ ಬೀಳುವಂತಹ ಅಥವಾ ಆಯಾಸ ನೀಡುವಂತಹ ವ್ಯಾಯಾಮಗಳನ್ನು ಮಾಡಬಾರದು. ಇದರಿಂದ ಹೆಚ್ಚು ನಿಶ್ಶಕ್ತಿ ಉಂಟಾಗಬಹುದು. ಋತುಚಕ್ರದ ವೇಳೆ ಶರೀರ ಬಯಸುವುದು ಕೇವಲ ಆರಾಮವನ್ನು . ಆದುದರಿಂದ ವ್ಯಾಯಾಮದೊಂದಿಗೆ ವಿಶ್ರಾಂತಿಯೂ ಅಗತ್ಯ.
•••••ಸುಶ್ಮಿತಾ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ