ಪಿ.ಸಿ.ಓ.ಡಿ. ಆತಂಕ ಬೇಡ, ಇರಲಿ ಉತ್ತಮ ಜೀವನಶೈಲಿ

Team Udayavani, Jun 10, 2019, 3:45 PM IST

ಮಹಿಳೆಯರಲ್ಲೇ ಹೆಚ್ಚಾಗಿ ಕಂಡುಬರುವ ಆರೋಗ್ಯ ಸಮಸ್ಯೆ ಪಿ.ಸಿ.ಓ.ಡಿ. ಹರೆಯದವರಿಂದ ಹಿಡಿದು ಎಲ್ಲ ವಯೋಮಾನದವರನ್ನು ಕಾಡುವುದರಿಂದ ಇದಕ್ಕಾಗಿ ಭಯ ಪಡುವ ಅಗತ್ಯವಿಲ್ಲ. ಇದು ಹಾರ್ಮೋನು ಅಸಮತೋಲನದಿಂದಲೇ ಉಂಟಾಗುವುದರಿಂದ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಸಂಪೂರ್ಣ ನಿವಾರಣೆ ಸಾಧ್ಯವಿದೆ.

ಹರೆಯದ ಹೆಣ್ಣುಮಕ್ಕಳನ್ನು ಕಾಡುತ್ತಿರುವ ದೀರ್ಘ‌ಕಾಲಿಕ ಸಮಸ್ಯೆಗಳಲ್ಲಿ ಪಿ.ಸಿ.ಓ.ಡಿಯೂ ಒಂದು. ಪಾಲಿಸಿಸ್ಟಿಕ್‌ ಒವೇರಿಯನ್‌ ಡಿಸೀಸ್‌ ಎಂದು ಕರೆಯಲ್ಪಡುವ ಈ ಸಮಸ್ಯೆ ಶೇ.15ರಿಂದ 25ರಷ್ಟು ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಋತುಚಕ್ರ ಆರಂಭವಾದಾಗಿನಿಂದ ನಿಲ್ಲುವವರೆಗೂ ಪ್ರತಿ ತಿಂಗಳು ಅಂಡಾಶಯದಲ್ಲಿರುವ ಫಾಲಿಕಲ್‌ಗ‌ಳಲ್ಲಿ ಒಂದೇ ಒಂದು ಪಕ್ವವಾಗಿ ಅದರಿಂದ ಅಂಡಾಣು ಬಿಡುಗಡೆಯಾಗುತ್ತದೆ.

ಆದರೆ ಹಾರ್ಮೋನುಗಳ ಅಸಮತೋಲನದಿಂದಾಗಿ ಒಮ್ಮೆಲೆ ಹೆಚ್ಚು ಫಾಲಿಕಲ್‌ಗ‌ಳು ಬೆಳೆದು ಅಂಡಾಣುಗಳು ಬಿಡುಗಡೆಯಾಗುವುದಿಲ್ಲ ಮತ್ತು ನೀರುಗುಳ್ಳೆಗಳ ರೂಪದಲ್ಲಿ ಬೆಳೆದು ನಿಲ್ಲುತ್ತದೆ. ಇದನ್ನೇ ಪಿ.ಸಿ.ಓ.ಡಿ ಎನ್ನಲಾಗುತ್ತದೆ. ಇದು ಸದ್ಯ ಬಹುತೇಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿದೆ.
ಪಿ.ಸಿ.ಓ.ಡಿ.ನಿಂದ ಮುಖದಲ್ಲಿ ಕೂದಲು ಬೆಳೆಯುವಿಕೆ, ತಲೆಕೂದಲು ಉದುರುವುದು, ತೂಕ ಹೆಚ್ಚಳ, ಗರ್ಭಧಾರಣೆಗೆ ತೊಡಕುಗಳು ಕಾಣಿಸಿಕೊಳ್ಳುತ್ತದೆ. ಪಿ.ಸಿ.ಓ.ಡಿ ಋತುಚಕ್ರದ, ಹಾರ್ಮೋನು ಉತ್ಪಾದನೆ, ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಂಜೆತನಕ್ಕೆ ಇದು ಒಂದು ಪ್ರಮುಖ ಕಾರಣವಾಗುತ್ತಿದೆ.

ಕಾರಣ
ಈ ಸಮಸ್ಯಗೆ ನಿರ್ದಿಷ್ಟ ಕಾರಣಗಳಿಲ್ಲ. ಆದರೆ ಆನುವಂಶೀಯ, ಕೌಟುಂಬಿಕ, ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಕ್ರಮ, ಹೆಚ್ಚುತ್ತಿರುವ ಒತ್ತಡ, ವ್ಯಾಯಾಮ ಇಲ್ಲದಿರುವಿಕೆ, ರಾಸಾಯನಿಕಗಳ ಬಳಕೆ, ಧೂಮಪಾನ, ಮದ್ಯಪಾನ, ಬೊಜ್ಜು ಇದಕ್ಕೆ ಕಾರಣವಾಗಬಹುದು.

ಸಮಸ್ಯೆ
ಪಿ.ಸಿ.ಓ.ಡಿ ಇರುವವರಲ್ಲಿ ಋತುಚಕ್ರ ಬೇಗನೆ ಆರಂಭವಾಗುತ್ತದೆ. ಹುಡುಗಿಯರಲ್ಲಿ ಕಡಿಮೆ ಮುಟ್ಟು ಅಥವಾ ಮೂರು ತಿಂಗಳಿಗೊಮ್ಮೆ ಮುಟ್ಟು ಕಾಣಿಸಿಕೊಳ್ಳುತ್ತದೆ. ಅತಿಯಾದ ರಕ್ತಸ್ರಾವ, ಕಂಕುಳು, ಮೊಣ ಕೈ, ಬೆರಳಿನ ಸಂಧಿಗಳಲ್ಲಿ ಚರ್ಮ ಒಣಗಿ ದಪ್ಪಗಾಗಿ ಬೂದು ಬಣ್ಣ ಉಂಟಾಗುವುದು ನಿದ್ರಾಹೀನತೆ, ಬೊಜ್ಜು, ಖನ್ನತೆ ಮತ್ತು ಆತಂಕಗಳು ಕಾಣಿಸಿಕೊಳ್ಳುತ್ತದೆ.

ಪತ್ತೆಹಚ್ಚುವುದು ಹೇಗೆ?
ಪಿ.ಸಿ.ಓ.ಡಿ ಸಮಸ್ಯೆ ಪತ್ತೆಹಚ್ಚುವುದರಲ್ಲಿ ಗೊಂದಲ ಉಂಟಾಗಬಹುದು. ಯಾಕೆಂದರೆ ಹದಿಹರೆಯದಲ್ಲಿ ಇರುವ ಕೆಲವು ಲಕ್ಷಣಗಳು ಪಿ.ಸಿ.ಓ.ಡಿಯಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗಾಗೀ ಗೊಂದಲಗಳು ಸಹಜ.
ಅಂಡಾಣು ಬಿಡುಗಡೆಯಾಗದೇ ಇರುವುದು ಅಥವಾ ಕಡಿಮೆ ಬಿಡುಗಡೆಯಾಗುವುದು, ಮುಟ್ಟಿನಲ್ಲಿ ಏರುಪೇರು ಗಳಾಗುವುದು, ಮೊಡವೆ, ಅಸಹಜ ಕೂದಲು ಬೆಳವಣಿಗೆ ಇದರ ಪ್ರಮುಖ ಲಕ್ಷಣಗಳಲ್ಲಿ ಸೇರಿಕೊಂಡಿವೆ.

ಚಿಕಿತ್ಸೆ
ಮುಟ್ಟಿನ ತೊಂದರೆಯನ್ನು ಸರಿಪಡಿಸಿ ಹೆಚ್ಚುವ ಆಂಡ್ರೋಜನ್‌ ಮಟ್ಟವನ್ನು ಕಡಿಮೆ ಮಾಡಬೇಕಾಗುತ್ತದೆ. ಇದಕ್ಕಾಗಿ ಆಹಾರ ಕ್ರಮಗಳನ್ನು ಬದಲಾಯಿಸಬೇಕು. ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯಬೇಕು. ಉಳಿದಂತೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಅಗತ್ಯ.

ಆಹಾರ ಸೇವನೆ
ಜಂಕ್‌ ಫುಡ್‌, ಫಾಸ್ಟ್‌ ಫುಡ್‌ಗಳನಂತಹ ಆಹಾರ ಕ್ರಮಗಳಿಂದ ದೂರವಿರಬೇಕು. ಹಸಿರು ಸೊಪ್ಪು ತರಕಾರಿಗಳು, ಕ್ಯಾಬೇಜ್‌, ಕ್ವಾಲೀಫವರ್‌, ಬ್ರೋಕ್‌ಲಿ, ಬಸಳೆ, ಮೂಲಂಗಿ, ಸೌತೆಕಾಯಿ ಆಹಾರದಲ್ಲಿರಲಿ. ದ್ವಿದಳ ಧ್ಯಾನಗಳಾದ ಬೀನ್ಸ್‌, ಕಿಡ್ನಿ ಬೀನ್ಸ್‌, ಸೋಯಾ ಬೀನ್ಸ್‌, ಒಣ, ತಾಜಾ ಹಣ್ಣುಗಳು, ಒಮೇಗಾ-3 ಅಂಶ ಹೆಚ್ಚಿರುವ ವಾಲ್‌ನಟ್‌, ಆಲೀವ್‌ ಎಣ್ಣೆ, ಸಾಲ್ಮನ್‌ ಮೀನು, ಅಗಸೆ ಬೀಜ ಸೇವಿಸಬೇಕು. ಆದಷ್ಟು ನೀರು ಸೇವನೆ ಮಾಡಬೇಕು. ಕಾಫಿ, ಟೀ, ಸೇವನೆಯನ್ನು ತ್ಯಜಿಸಿ. ಪ್ರತಿನಿತ್ಯ ವ್ಯಾಯಾಮ ಇರಲಿ.

ಪಿ.ಸಿ. ಓ.ಡಿ. ಸಮ ಸ್ಯೆ ಬಗ್ಗೆ ಭಯ ಪಡಬೇಕಾದ ಆವಶ್ಯಕತೆ ಇಲ್ಲ. ಆದರೆ ಅದನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ವೈದ್ಯರಿಂದ ಮಾರ್ಗದರ್ಶನ ಪಡೆದುಕೊಳ್ಳುವುದು ಬಹಳ ಮುಖ್ಯ. ಆಹಾರ ಸೇವನೆ, ವ್ಯಾಯಾಮ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರ ಮಾಡುತ್ತದೆ.
– ಶಿಲ್ಪಾ ಕಾಮತ್‌ , ಸ್ತ್ರೀ ರೋಗ ತಜ್ಞೆ

ಮನೆ ಮದ್ದು
·  ಬೆಚ್ಚಗಿನ ನೀರಿಗೆ 1 ಟೀ ಸ್ಪೂನ್‌ ಚಕ್ಕೆ ಅಥವಾ ದಾಲಿcನ್ನಿ ಪುಡಿ ಬೆರೆಸಿ ನಿತ್ಯ ಸೇವಿಸಬೇಕು. ಇದರಿಂದ ಮುಟ್ಟು ಕ್ರಮ ಪ್ರಕಾರವಾಗಿ ಉಂಟಾಗಿ ನೀರುಗುಳ್ಳೆಗಳು ಕರಗುತ್ತದೆ.
·  ಆಗಸೆ ಬೀಜವನ್ನು (1-2 ಚಮಚ) ಅರೆದು ನೀರಿನಲ್ಲಿ ಬೆರೆಸಿ (1 ಕಪ್‌) ಪ್ರತಿದಿನ 1-2 ಬಾರಿ ಸೇವಿಸಿದರೆ ಪರಿಣಾಮಕಾರಿ.
·  3 ಚಮಚ ಮೆಂತ್ಯೆಯನ್ನು ಆರು ಗಂಟೆ ನೀರಲ್ಲಿ ನೆನೆಸಿ, 1 ಚಮಚದಂತೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಆಹಾರಕ್ಕೆ ಮೊದಲು ಅರೆದು ಚಿಟಿಕೆ ಬೆಲ್ಲ ಅಥವಾ ಉಪ್ಪು ಬೆರೆಸಿ ನಿತ್ಯ ಸೇವಿಸಬೇಕು. ಮೆಂತ್ಯೆ ಸೊಪ್ಪು, ಮೊಳಕೆ ಬರಿಸಿದ ಮೆಂತ್ಯೆ ಕಾಳಿನ ಕೋಸಂಬರಿ ಆಹಾರದಲ್ಲಿ ನಿತ್ಯ ಬಳಸಿದರೆ ಪರಿಣಾಮಕಾರಿ.
·  ನಿತ್ಯ 8-10 ತುಳಸಿ ಎಲೆಗಳನ್ನು ಸೇವಿಸಿದರೆ ಪರಿಣಾಮಕಾರಿ. ಅಥವಾ ತುಳಸಿ ಚಹಾ
ಸೇವನೆಯೂ ಹಿತಕರ.
·  1-2 ಚಮಚ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಿಸಿ ನೀರಿನಲ್ಲಿ ನಿತ್ಯ ಬೆಳಗ್ಗೆ ಕುಡಿಯುವುದು ಕೂಡ ಪಿ.ಸಿ.ಓ.ಡಿ ಸಮಸ್ಯೆಗೆ ಪರಿಹಾರ.

   ಪ್ರಜ್ಞಾ ಶೆಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ