ದಾಳಿಂಬೆಯ ಸವಿ

Team Udayavani, Jun 23, 2019, 6:00 AM IST

ಹೃದ್ಯ ಫ‌ಲ ದಾಳಿಂಬೆಯ ಸೇವನೆ ಹೃದಯಕ್ಕೆ ಬಹಳ ಉತ್ತಮ. ರಕ್ತದಲ್ಲಿರುವ ಫ್ರೀರಾಡ್ರಿಕಲ್ಸ್‌ನ್ನು ನಾಶಮಾಡುವ, ರಕ್ತದಲ್ಲಿರುವ ವೈರಸ್‌ ಮತ್ತು ಜೀವ ನಿರೋಧಕ ಗುಣವನ್ನು ಹೊಂದಿರುವ ಈ ಹಣ್ಣಿನ ಸೇವನೆಯು ಪ್ರೋಸ್ಟೇಟ್‌ ಕ್ಯಾನ್ಸರ್‌ ಬಾರದಂತೆಯೂ ತಡೆಯಬಲ್ಲದು. ಪ್ರತೀ ನಿತ್ಯವೂ ದಾಳಿಂಬೆಯನ್ನು ಹಲವು ರೀತಿಯಲ್ಲಿ ಆಹಾರದಲ್ಲಿ ಬಳಸಿ ಪ್ರಯೋಜನ ಪಡೆಯಬಹುದು.

ದಾಳಿಂಬೆ ಲಸ್ಸಿ
ಬೇಕಾಗುವ ಸಾಮಗ್ರಿ: ದಾಳಿಂಬೆ- ಅರ್ಧ ಕಪ್‌, ಪುದಿನ- ಒಂದು ಚಮಚ, ಕೊತ್ತಂಬರಿಸೊಪ್ಪು – ಅರ್ಧ ಚಮಚ, ಮೊಸರು- ಒಂದು ದೊಡ್ಡ ಕಪ್‌, ಕ್ಯಾರೆಟ್‌ ತುರಿ- ಎರಡು ಚಮಚ, ಸಕ್ಕರೆ ಮತ್ತು ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ದಾಳಿಂಬೆಯ ಜೊತೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಂಡು ಐಸ್‌ ಪೀಸ್‌ ಸೇರಿಸಿ ಸರ್ವ್‌ ಮಾಡಬಹುದು. ಈ ಲಸ್ಸಿಯ ಸೇವನೆ ದೇಹ ತಂಪಾಗಿಸಲು ಬಹಳ ಉತ್ತಮ.

ದಾಳಿಂಬೆ ಸಲಾಡ್‌
ಬೇಕಾಗುವ ಸಾಮಗ್ರಿ: ದಾಳಿಂಬೆ- ಎಂಟು ಚಮಚ, ಕ್ಯಾರೆಟ್‌ತುರಿ- ಆರು ಚಮಚ, ಮೂಲಂಗಿ ತುರಿ- ನಾಲ್ಕು ಚಮಚ, ತೆಂಗಿನ ತುರಿ- ಮೂರು ಚಮಚ, ಮೊಳಕೆ ಹೆಸರುಕಾಳು- ನಾಲ್ಕು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ, ಲಿಂಬೆರಸ- ಒಂದು ಚಮಚ ಬೇಕಿದ್ದರೆ ಕಾಳುಮೆಣಸಿನ ಪುಡಿ ಅಥವಾ ಹಸಿಮೆಣಸು ಮತ್ತು ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಮಿಕ್ಸಿಂಗ್‌ ಬೌಲ್‌ನಲ್ಲಿ ದಾಳಿಂಬೆ ಜೊತೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಬೇಕಿದ್ದರೆ ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ನೀಡಿ.

ದಾಳಿಂಬೆ ವಿದ್‌ ಸ್ಟ್ರಾಬೆರಿ ಲಸ್ಸಿ
ಬೇಕಾಗುವ ಸಾಮಗ್ರಿ: ದಾಳಿಂಬೆ- ಅರ್ಧ ಕಪ್‌, ಸ್ಟ್ರಾಬೆರಿ ಹಣ್ಣು- ಎರಡು, ಮೊಸರು- ಒಂದು ಕಪ್‌, ಜೇನುತುಪ್ಪ- ಎರಡು ಚಮಚ, ಸಕ್ಕರೆ ಮತ್ತು ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ದಾಳಿಂಬೆಯ ಜೊತೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಬೇಕಷ್ಟು ನೀರು ಮತ್ತು ಐಸ್‌ಪೀಸ್‌ ಸೇರಿಸಿ ಸರ್ವ್‌ ಮಾಡುವಾಗ ಕೊತ್ತಂಬರಿಸೊಪ್ಪು ಹರಡಿ.

ದಾಳಿಂಬೆ ಚಾಟ್‌
ಬೇಕಾಗುವ ಸಾಮಗ್ರಿ: ದಾಳಿಂಬೆ- ಆರು ಚಮಚ, ಎಣ್ಣೆಯಲ್ಲಿ ಕರಿದ ತೆಳ್ಳಗಿನ ಕಾರ್ನ್- ಆರು ಚಮಚ, ಹುರಿದಶೇಂಗಾ- ನಾಲ್ಕು ಚಮಚ, ಹೆಚ್ಚಿದ ನೀರುಳ್ಳಿ- ಆರು ಚಮಚ, ಹೆಚ್ಚಿದ ಟೊಮೆಟೋ- ನಾಲ್ಕು ಚಮಚ, ಹೆಚ್ಚಿದ ಹಸಿಮೆಣಸು- ಒಂದು, ಸಾರಿನ ಪುಡಿ- ಒಂದು ಚಮಚ, ಚಾಟ್‌ಮಸಾಲ- ಒಂದು ಚಮಚ, ಬೇಯಿಸಿದ ಮೊಳಕೆ ಹೆಸರು- ನಾಲ್ಕು ಚಮಚ, ದಾಳಿಂಬೆ- ನಾಲ್ಕು ಚಮಚ, ಕಾಳುಮೆಣಸಿನ ಪುಡಿ- ಕಾಲು ಚಮಚ, ಖರ್ಜೂರ, ಹುಣಸೆರಸ ಮತ್ತು ಬೆಲ್ಲ ಸೇರಿಸಿ ಕುದಿಸಿದ ಚಟ್ನಿ- ಎರಡು ಚಮಚ, ಉಪ್ಪು ರುಚಿಗೆ ಬೇಕಷ್ಟು, ಕೊತ್ತಂಬರಿಸೊಪ್ಪು- ನಾಲ್ಕು ಚಮಚ.

ತಯಾರಿಸುವ ವಿಧಾನ: ಎಣ್ಣೆ ಕಾದ ಕೂಡಲೇ ಕಾರ್ನ್ನ್ನು ಕರಿದು ಆರಲು ಬಿಡಿ. ಮಿಕ್ಸಿಂಗ್‌ಬೌಲ್‌ಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದನ್ನು ಸರ್ವಿಂಗ್‌ ಪ್ಲೇಟ್‌ನಲ್ಲಿ ಹಾಕಿ ಮೇಲಿನಿಂದ ಕಾರ್ನ್, ಶೇಂಗಾಬೀಜ, ಸೇವ್‌ ಇತ್ಯಾದಿಗಳನ್ನು ಹರಡಿ ಮೇಲಿನಿಂದ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ ಸರ್ವ್‌ಮಾಡಬಹುದು.

ಗೀತಸದಾ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ