Hair Transplant: ಬೋಳುತಲೆಗೆ ಇದೆ ಪರಿಹಾರ: ಕೂದಲು ಕಸಿಯ ಕ್ರಾಂತಿ!


Team Udayavani, Aug 4, 2024, 3:00 PM IST

5-hair-transpalnt

ತಲೆಯ ಕೂದಲುಗಳು ಉದುರಿಹೋಗಿ ತಲೆ ಬೋಳಾದರೆ ಆತ್ಮವಿಶ್ವಾಸ ನಷ್ಟ ಹಾಗೂ ಒಟ್ಟಾರೆ ಕ್ಷೇಮಕ್ಕೆ ಕುಂದು ಉಂಟಾಗಿ ಅನೇಕರಿಗೆ ತೊಂದರೆ ಉಂಟಾಗಬಹುದಾಗಿದೆ. ಇದು ಸಾಕಷ್ಟು ಪುರಾತನ ಕಾಲದಿಂದ ಪರಿಹಾರ ಇಲ್ಲದ ಒಂದು ಸಮಸ್ಯೆಯಾಗಿತ್ತು.

ಈ ಸಮಸ್ಯೆಯ ಪರಿಹಾರಕ್ಕಾಗಿ ಅಸಂಖ್ಯ ಅಪ್ರಾಯೋಗಿಕ ಮತ್ತು ಅಸಮರ್ಪಕ ತಂತ್ರಗಳನ್ನು ಅನುಸರಿಸಿ ವೈಫ‌ಲ್ಯ ಹೊಂದಿರುವುದಕ್ಕೆ ಸಾಹಿತ್ಯ ಮತ್ತು ಐತಿಹಾಸಿಕ ಸಾಕ್ಷ್ಯಗಳು ಲಭಿಸುತ್ತವೆ. ಅದೃಷ್ಟವಶಾತ್‌, ವೈದ್ಯಕೀಯ ವಿಜ್ಞಾನದಲ್ಲಿ ನಡೆದಿರುವ ಪ್ರಯೋಗಗಳು ಮತ್ತು ಅವುಗಳ ಫ‌ಲಿತಾಂಶಗಳ ಯಶಸ್ವಿ ಅಳವಡಿಕೆಯು ಬೋಳುತಲೆಯ ಸಮಸ್ಯೆಗೆ ಪರಿಹಾರವಾಗಿ ಒದಗಿಬಂದಿವೆ.

ಪ್ರಸ್ತುತ ಬೋಳು ತಲೆ ಅಥವಾ ಬೊಕ್ಕ ತಲೆಗೆ ಪರಿಣಾಮಕಾರಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾತ್ಮಕ ಪರಿಹಾರವಾಗಿ ಕೂದಲು ಕಸಿಯು ಒದಗಿಬಂದಿದೆ. ಕೂದಲು ಕಸಿಯು ಸರಿಸುಮಾರು ಒಂದು ಶತಮಾನಕ್ಕಿಂತಲೂ ಸುದೀರ್ಘ‌ ಕಾಲದಿಂದ ಚಾಲ್ತಿಯಲ್ಲಿದೆ. 1897ರಲ್ಲಿ ಕೂದಲು ಕಸಿಯ ಮೊದಲ ಪ್ರಕರಣ ವರದಿಯಾದರೆ, 1930ರ ಅವಧಿಯಲ್ಲಿ ಜಪಾನೀಯರು ಇದರಲ್ಲಿ ಅನೇಕ ಆಧುನಿಕ ತಂತ್ರಗಳನ್ನು ಅನ್ವೇಷಿಸಿದರು; ಆದರೆ ದ್ವಿತೀಯ ವಿಶ್ವಯುದ್ಧದ ಕಾರಣದಿಂದಾಗಿ ಜಗತ್ತು ಕೂದಲು ಕಸಿಯ ಸಂಭಾವ್ಯ ಸಾಧ್ಯತೆಗಳನ್ನು ಅರಿತುಕೊಳ್ಳಲು ಸಾಧ್ಯವಾಗಲಿಲ್ಲ.

ಆ ಬಳಿಕವಷ್ಟೇ ಇದನ್ನು ಹೊಸ ಮತ್ತು ಸುಧಾರಿತ ತಂತ್ರಗಳು ಹಾಗೂ ಪೂರಕ ವೈದ್ಯಕೀಯ ಚಿಕಿತ್ಸೆಗಳ ಮೂಲಕ ಪುನರ್‌ ಅನ್ವೇಷಿಸಿ, ಪರಿಪೂರ್ಣಗೊಳಿಸಿ ಜನಪ್ರಿಯಗೊಳಿಸಲಾಯಿತು. ಇಂದು ಕೂದಲಿನ ಜೀವಶಾಸ್ತ್ರದ ಹೆಚ್ಚು ಆಳವಾದ ಅರಿವು ಮತ್ತು ತಂತ್ರಜ್ಞಾನದಲ್ಲಿ ಉಂಟಾಗಿರುವ ಪ್ರಗತಿಗಳು ಕೂದಲು ಕಸಿಯ ಫ‌ಲಿತಾಂಶಗಳು ಹೆಚ್ಚು ಯಶಸ್ವಿಯಾಗಲು ಮತ್ತು ಇದೊಂದು ಸುರಕ್ಷಿತ ಕಾರ್ಯವಿಧಾನವಾಗಿ ಗುರುತಿಸಿಕೊಳ್ಳುವುದಕ್ಕೆ ಕಾರಣವಾಗಿವೆ.

ಕೂದಲು ಕಸಿ: ಚಿಕಿತ್ಸೆಯನ್ನು ಅರ್ಥ ಮಾಡಿಕೊಳ್ಳುವುದು‌

ಕೂದಲುಗಳು ಕಡಿಮೆಯಾಗಿರುವ ಅಥವಾ ಸಂಪೂರ್ಣವಾಗಿ ಉದುರಿಹೋಗಿರುವ ತಲೆಯ ಭಾಗಕ್ಕೆ ದೇಹದ ಇನ್ನೊಂದು ಭಾಗದಿಂದ; ಸಾಮಾನ್ಯವಾಗಿ ತಲೆಯದೇ ಹಿಂಭಾಗ ಅಥವಾ ಪಾರ್ಶ್ವಗಳಿಂದ ಕೂದಲುಗಳ ಫಾಲಿಕಲ್‌ಗ‌ಳನ್ನು ಕಸಿ ಮಾಡುವ ಮೂಲಕ ಕೂದಲು ನಷ್ಟವನ್ನು ಪರಿಹರಿಸುವ ಉದ್ದೇಶದ ಶಸ್ತ್ರಚಿಕಿತ್ಸಾತ್ಮಕ ಕಾರ್ಯವಿಧಾನವೇ ಕೂದಲು ಕಸಿ ಅಥವಾ ಹೇರ್‌ ಟ್ರಾನ್ಸ್‌ಪ್ಲಾಂಟೇಶನ್‌. ಕಸಿ ಮಾಡಲಾಗಿರುವ ಕೂದಲು ಆ ವ್ಯಕ್ತಿಯ ಜೀವಿತಾವಧಿಯುದ್ದಕ್ಕೂ ಬೆಳವಣಿಗೆ ಕಾಣುವುದರಿಂದ ಇದು ಸಹಜ ಸುಂದರ ಫ‌ಲಿತಾಂಶಗಳನ್ನು ಒದಗಿಸುತ್ತದೆ.

ಕೂದಲು ಕಸಿ ಕಾರ್ಯವಿಧಾನಕ್ಕೆ ಒಳಗಾಗುವ ಮುನ್ನ ವ್ಯಕ್ತಿಗಳು ಪರಿಣತರ ಜತೆಗೆ ವಿವರವಾದ ಸಮಾಲೋಚನೆಯನ್ನು ನಡೆಸಬೇಕಾಗಿರುತ್ತದೆ. ಈ ಸಮಾಲೋಚನೆಗಳ ವೇಳೆ ಕೂದಲು ಕಸಿ ಮಾಡಿಸಿಕೊಳ್ಳುವವರು ತಮ್ಮ ತೊಂದರೆ, ನಿರೀಕ್ಷೆಗಳು ಮತ್ತು ವೈದ್ಯಕೀಯ ಹಿನ್ನೆಲೆಯ ಬಗ್ಗೆ ಚರ್ಚಿಸಬಹುದಾಗಿದೆ. ಕೂದಲು ಕಸಿ ಮಾಡುವ ಸರ್ಜನ್‌ ಕೂದಲು ನಷ್ಟವಾಗಿರುವ ಮತ್ತು ಕೂದಲುಗಳು ಸರಿಯಾಗಿರುವ ತಲೆಚರ್ಮದ ಭಾಗಗಳ ಆರೋಗ್ಯ, ತಲೆಯಲ್ಲಿ ಕೂದಲುಗಳ ಹಂಚಿಕೆ ಮತ್ತು ಗುಣಮಟ್ಟವನ್ನು ವಿಶ್ಲೇಷಿಸುತ್ತಾರೆ ಹಾಗೂ ಕೂದಲು ಪುನರ್‌ಸ್ಥಾಪನೆಗೆ ಅತ್ಯಂತ ಸೂಕ್ತವಾದ ಕಾರ್ಯವಿಧಾನದ ಕುರಿತು ನಿರ್ಧರಿಸುತ್ತಾರೆ. ಬಹುತೇಕ ಬಾರಿ ಔಷಧಗಳು ಮತ್ತು ಲೋಶನ್‌ಗಳನ್ನು ಪ್ರಯೋಗಿಸಿ ನೋಡಲಾಗುತ್ತದೆ. ಕೂದಲು ಬೆಳವಣಿಗೆ ಮತ್ತು ಅವುಗಳ ಗುಣಮಟ್ಟವನ್ನು ವೃದ್ಧಿಸುವುದಕ್ಕಾಗಿ ಸಾಂದ್ರ ಪ್ಲೇಟ್‌ಲೆಟ್‌ ಗಳನ್ನು ಹೊಂದಿರುವ ಸಂಸ್ಕರಿತ ರಕ್ತದ ಇಂಜೆಕ್ಷನ್‌ನ್ನು ಸ್ಥಳೀಯವಾಗಿ ನೀಡುವುದು ಒಂದು ಜನಪ್ರಿಯ ತಂತ್ರವಾಗಿದ್ದರೂ ಕೂದಲು ಕಸಿಯಿಂದ ಒದಗುವ ಫ‌ಲಿತಾಂಶಕ್ಕೆ ಇದು ಸಾಟಿಯಾಗುವುದಿಲ್ಲ.

ಜಾಗತಿಕವಾಗಿ ಅನುಸರಿಸಲ್ಪಡುವ ಎರಡು ಶಸ್ತ್ರಚಿಕಿತ್ಸಾತ್ಮಕ ತಂತ್ರಗಳು ಎಂದರೆ ಫಾಲಿಕ್ಯುಲಾರ್‌ ಯೂನಿಟ್‌ ಟ್ರಾನ್ಸ್‌ಪ್ಲಾಂಟೇಶನ್‌ (ಎಫ್ಯುಟಿ) ಮತ್ತು ಫಾಲಿಕ್ಯುಲಾರ್‌ ಯೂನಿಟ್‌ ಎಕ್ಸ್‌ಟ್ರಾಕ್ಷನ್‌ (ಎಫ್ಯುಇ). ಈ ಎರಡೂ ತಂತ್ರಗಳು ತಮ್ಮದೇ ಪ್ರಯೋಜನಗಳನ್ನು ಹೊಂದಿದ್ದು, ಗರಿಷ್ಠ ಫ‌ಲಿತಾಂಶ ಪಡೆಯುವುದಕ್ಕಾಗಿ ಇವುಗಳನ್ನು ಸಂಯೋಜಿಸಿಯೂ ಪ್ರಯೋಗಿಸಬಹುದಾಗಿದೆ. ಎರಡೂ ತಂತ್ರಗಳಿಗಾಗಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವುದಿಲ್ಲ; ವ್ಯಕ್ತಿಯು ಕೂದಲು ಕಸಿ ಮಾಡಿಸಿಕೊಂಡ ದಿನವೇ ಮನೆಗೆ ಮರಳಬಹುದಾಗಿದೆ.

ಫಾಲಿಕ್ಯುಲಾರ್‌ ಯೂನಿಟ್‌ ಟ್ರಾನ್ಸ್ ಪ್ಲಾಂಟೇಶನ್‌ (ಎಫ್ಯುಇ) ಈ ಕಾರ್ಯತಂತ್ರದಲ್ಲಿ, ಕೂದಲು ಉದುರುವಿಕೆಗೆ ಒಳಗಾಗಿರದ ಮತ್ತು ಆರೋಗ್ಯಯುತ ಕೂದಲುಗಳು ದಟ್ಟವಾಗಿ ಬೆಳೆಯುತ್ತಿರುವ ತಲೆಯ ಹಿಂಭಾಗದಿಂದ ಕೂದಲುಗಳ ಫಾಲಿಕಲ್‌ಗ‌ಳನ್ನು ಹೊಂದಿರುವ ಚರ್ಮದ ಪಟ್ಟಿಯೊಂದನ್ನು ತೆಗೆದುಕೊಳ್ಳಲಾಗುತ್ತದೆ. ಈ ಚರ್ಮದ ಪಟ್ಟಿಯನ್ನು ಬಳಿಕ 2-4 ಕೂದಲುಗಳ ಬೇರುಸಹಿತ ಗುತ್ಛವನ್ನು ಹೊಂದಿರುವ ಸಣ್ಣ ತುಣುಕುಗಳನ್ನಾಗಿ ಕತ್ತರಿಸಲಾಗುತ್ತದೆ.

ಫಾಲಿಕ್ಯುಲಾರ್‌ ಹೇರ್‌ ಎಕ್ಸ್‌ಟ್ರಾಕ್ಷನ್‌ (ಎಫ್ಯುಟಿ) ದಾನಿ ಪ್ರದೇಶದಿಂದ 2-4 ಕೂದಲುಗಳು ಇರುವ ಪ್ರತ್ಯೇಕ ಕೂದಲು ಘಟಕಗಳನ್ನು ವಿಶೇಷ ಸಲಕರಣೆಗಳನ್ನು ಉಪಯೋಗಿಸಿ ತೆಗೆಯುವುದನ್ನು ಎಫ್ಯುಇ ಒಳಗೊಂಡಿರುತ್ತದೆ. ಇಲ್ಲಿಯೂ ಹೀಗೆ ತೆಗೆಯುವಾಗ ಕೂದಲು ಬೇರುಗಳ ಸಂರಕ್ಷಣೆ ಬಹಳ ನಿರ್ಣಾಯಕವಾಗಿರುತ್ತದೆ. ಈ ಫಾಲಿಕಲ್‌ಗ‌ಳನ್ನು ಬಳಿಕ ಕೂದಲು ಉದುರುತ್ತಿರುವ ತಲೆಯ ಭಾಗಕ್ಕೆ ಕಸಿ ಮಾಡಲಾಗುತ್ತದೆ. ಎಫ್ಯುಇಯು ಅತ್ಯಂತ ಕಡಿಮೆ ಗಾಯ ಉಂಟುಮಾಡುವ ಮತ್ತು ಗುಣ ಹೊಂದುವುದಕ್ಕೆ ಕಡಿಮೆ ಕಾಲ ಸಾಕಾಗುವುದರಿಂದ ಅನೇಕ ವ್ಯಕ್ತಿಗಳು ಈ ಕಾರ್ಯತಂತ್ರವನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗುತ್ತಾರೆ.

ಹೀಗೆ ತೆಗೆದುಕೊಂಡಿರುವ ಮತ್ತು ಕಸಿಗೆ ತಯಾರು ಮಾಡಿಕೊಳ್ಳಲಾಗಿರುವ ಕೂದಲು ಘಟಕಗಳನ್ನು ಬಳಿಕ ತಲೆಯ ಕೂದಲು ಉದುರುತ್ತಿರುವ ಭಾಗದಲ್ಲಿ ಮಾಡಲಾಗಿರುವ ಸೂಕ್ಷ್ಮ ರಂಧ್ರಗಳಲ್ಲಿ ನವಿರಾಗಿ ಕಸಿ ಮಾಡಲಾಗುತ್ತದೆ. ಮೇಲ್ನೋಟಕ್ಕೆ ಇದು ಬಹಳ ಸರಳವಾಗಿ ಕಾಣಿಸಬಹುದು; ಆದರೆ ಹೀಗೆ ಕೂದಲು ಘಟಕಗಳನ್ನು ಕಸಿ ಮಾಡುವ ಸಂದರ್ಭದಲ್ಲಿ ಗರಿಷ್ಠ ಶೈಲಿ, ದಿಕ್ಕು ಮತ್ತು ಸಾಂದ್ರತೆಯನ್ನು ಸಾಧಿಸುವ ವಿಷಯದಲ್ಲಿ ಕೂದಲು ಕಸಿ ಮಾಡುತ್ತಿರುವ ಸರ್ಜನ್‌ರ ನೈಜ ಕಲಾತ್ಮಕತೆ ಮತ್ತು ಪರಿಣತಿ ಒರೆಗೆ ಹಚ್ಚಲ್ಪಡುತ್ತದೆ. ಈ ಪ್ರಕ್ರಿಯೆ ಎಷ್ಟು ಚೆನ್ನಾಗಿ ನಡೆದಿದೆ ಎಂಬುದನ್ನು ಆಧರಿಸಿ ಕಸಿಗೊಳಗಾಗಿರುವ ವ್ಯಕ್ತಿಯ ಪುನರ್‌ಸ್ಥಾಪಿತ ಕೂದಲುಗಳ ಬೆಳವಣಿಗೆ ಮತ್ತು ಅಂತಿಮ ಫ‌ಲಿತಾಂಶ ಲಭ್ಯವಾಗುತ್ತದೆ. ಸರಿಯಾಗಿ ಮತ್ತು ಕೌಶಲಯುಕ್ತವಾಗಿ ಕೂದಲು ಕಸಿ ನಡೆದಾಗ ನೈಸರ್ಗಿಕ ಮತ್ತು ಸಹಜ ಶೈಲಿಯ ಕೂದಲು ಬೆಳವಣಿಗೆ ಪುನರ್‌ಸ್ಥಾಪನೆಯಾಗುತ್ತದೆ.

ಕೂದಲು ಕಸಿಯ ಬಳಿಕ ಏನನ್ನು ನಿರೀಕ್ಷಿಸಬಹುದು?

ಕೂದಲು ಕಸಿಯ ಬಳಿಕ ಔಷಧಗಳು ಮತ್ತು ಕಸಿಯ ಬಳಿಕದ ಆರೈಕೆ ಹಾಗೂ ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಶಿಫಾರಸುಗಳನ್ನು ನೀಡಿ ಮನೆಗೆ ಕಳುಹಿಸಲಾಗುತ್ತದೆ. ಏನು ಮಾಡಬಾರದು ಎಂಬ ವಿವರ, ಸರಿಯಾಗಿ ತಲೆಸ್ನಾನ ಮಾಡುವ ತಂತ್ರಗಳು ಹಾಗೂ ಗುಣ ಹೊಂದಲು ಮತ್ತು ಗರಿಷ್ಠ ಫ‌ಲಿತಾಂಶ ಸಿಗುವುದಕ್ಕಾಗಿ ಶಿಫಾರಸು ಮಾಡಲಾಗಿರುವ ಔಷಧಗಳನ್ನು ಉಪಯೋಗಿಸುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಒಂದು ವಾರದ ವರೆಗೆ ಕನಿಷ್ಠತಮ ಊತ ಇರಬಹುದಾಗಿದೆ. ಆದರೆ ಇದು ದೈನಿಕ ಚಟುವಟಿಕೆಗಳು ಮತ್ತು ಸ್ವಯಂ ಆರೈಕೆಗೆ ಅಡ್ಡಿಯಾಗುವುದಿಲ್ಲ.

ಕೂದಲು ಉದುರುವುದೇತಕ್ಕೆ?

ನಾವು ಕಾಣುವ ಅಥವಾ ಅನುಭವಿಸುವ ತಲೆಕೂದಲು ಉದುರುವಿಕೆಯು ಕೂದಲಿನ ಸಹಜ ಜೀವನಚಕ್ರದ ಭಾಗಿವಾಗಿರುತ್ತದೆ. ಪ್ರತಿದಿನ 50ರಿಂದ 100 ಕೂದಲುಗಳು ಉದುರುವುದು ಸಹಜ ಪ್ರಕ್ರಿಯೆಯಾಗಿದ್ದು, ಇದರ ಬಗ್ಗೆ ಗಾಬರಿ ಪಡಬೇಕಿಲ್ಲ. ಆದರೆ ಕೆಲವು ಪುರುಷರಲ್ಲಿ ತಲೆಯ ಮೇಲೆ ಕೂದಲು ಸಾಲು ಕಡಿಮೆಯಾಗುವುದು ಮತ್ತು ಕೂದಲು ಬೆಳವಣಿಗೆ ತೆಳುವಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇದು 40 ವರ್ಷ ವಯಸ್ಸಿನ ಬಳಿಕ ಪ್ರತೀ ಇಬ್ಬರು ಪುರುಷರಲ್ಲಿ ಒಬ್ಬರಲ್ಲಿ ಕಂಡುಬರುವ “ಮೇಲ್‌ ಪ್ಯಾಟರ್ನ್ ಬಾಲ್ಡ್‌ನೆಸ್‌’ ಅಥವಾ “ಆ್ಯಂಡ್ರೊಜೆನೆಟಿಕ್‌ ಅಲೊಪೇಸಿಯಾ’ ಎಂಬ ಸಮಸ್ಯೆಯ ಫ‌ಲಿತಾಂಶವಾಗಿರುತ್ತದೆ.

ಇದು ಸಾಮಾನ್ಯವಾಗಿ ತಲೆಯ ಎದುರುಭಾಗ, ಹಣೆ ಮತ್ತು ನೆತ್ತಿಯನ್ನು ಬಾಧಿಸುತ್ತದೆ. ಇದೊಂದು ರೋಗವಲ್ಲ; ಆದರೆ ತಲೆಯ ಕೂದಲುಗಳು ಬೆಳೆಯುವ ಜೀವಕೋಶಗಳು ಮತ್ತು ಪುರುಷ ಹಾರ್ಮೋನ್‌ಗಳ ಸಂಕೀರ್ಣ ಕಾರ್ಯಚಟುವಟಿಕೆಯಿಂದಾಗಿ ಇದು ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಆನುವಂಶೀಯವಾಗಿದ್ದು, ಬಹುತೇಕ ಪ್ರಕರಣಗಳಲ್ಲಿ ತಡೆಯಲಸಾಧ್ಯವಾಗಿರುತ್ತದೆ. ಆದರೆ ಇಂತಹ ವ್ಯಕ್ತಿಗಳು ಕೂದಲು ಕಸಿಯಿಂದ ಬಹಳ ಪ್ರಯೋಜನ ಹೊಂದಬಹುದಾಗಿರುತ್ತದೆ.

ಮಹಿಳೆಯರಲ್ಲಿ ಕೂಡ ಕೂದಲು ಕಡಿಮೆಯಾಗುವುದು ಅಥವಾ ಸಂಪೂರ್ಣ ಕೂದಲು ನಷ್ಟ ಉಂಟಾಗುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಇದು ತಲೆಯಲ್ಲಿ ಕೂದಲನ್ನು ವಿಭಾಗಿಸುವ ಸ್ಥಳ ಅಥವಾ “ಬೈತಲೆ’ಯಲ್ಲಿ ಉಂಟಾಗಿ ಅಗಲಗೊಳ್ಳುತ್ತದೆ ಹಾಗೂ ಇದನ್ನು “ಫೀಮೇಲ್‌ ಪ್ಯಾಟರ್ನ್ ಬಾಲ್ಡ್‌ನೆಸ್‌’ ಎಂದು ಕರೆಯುತ್ತಾರೆ. ತಲೆಕೂದಲನ್ನು ಬಿಗಿಯಾಗಿ ಕಟ್ಟುವುದು ಕೂಡ ಕೂದಲು ನಷ್ಟಕ್ಕೆ ಕೊಡುಗೆ ನೀಡಬಹುದಾಗಿದೆ.

ಥೈರಾಯ್ಡ್ ಅನಾರೋಗ್ಯಗಳು, ಸೋಂಕುಗಳು, ಗಾಯ ಮತ್ತು ಕೆಲವು ಪೌಷ್ಟಿಕಾಂಶ ಕೊರತೆಗಳಂತಹ ಕೆಲವು ವೈದ್ಯಕೀಯ ತೊಂದರೆಗಳಿಂದಲೂ ಅಪರೂಪಕ್ಕೆ ಬೋಳು ತಲೆ ಉಂಟಾಗಬಹುದು. ಈ ತೊಂದರೆಗಳನ್ನು ಸರಿಪಡಿಸಿದರೆ ಕೂದಲು ಬೆಳವಣಿಗೆ ಸರಿಹೋಗಿ ಕೂದಲು ಹಿಂದಿನ ಸ್ಥಿತಿಗೆ ಮರಳಬಹುದಾಗಿದೆ. ಕೆಲವು ವಿಧವಾದ ಕ್ಯಾನ್ಸರ್‌ಗಳಿಗೆ ಕಿಮೋಥೆರಪಿ ಪಡೆಯುವ ರೋಗಿಗಳು ಕೂಡ ಅಲ್ಪಕಾಲೀನ ಕೂದಲು ನಷ್ಟಕ್ಕೆ ಒಳಗಾಗಬಹುದಾಗಿದ್ದು, ಚಿಕಿತ್ಸೆ ನಿಂತ ಬಳಿಕ ಕೂದಲು ಮರಳಿ ಬೆಳೆಯಬಹುದಾಗಿದೆ.
ಸಮರ್ಪಕವಾದ ಔಷಧಗಳನ್ನು ನೀಡಲಾಗುತ್ತದೆ ಮತ್ತು ಇವು ನೀವು ಸಹಜವಾಗಿ ಇರುವುದಕ್ಕೆ ಸಹಾಯ ಮಾಡುತ್ತವೆ. ಒಂದು ವಾರದ ಬಳಿಕ ಫಾಲೊಅಪ್‌ಗಾಗಿ ಕರೆಯಲಾಗುತ್ತದೆ. ಕೂದಲು ಕಸಿಯ ಪ್ರಗತಿ ಮತ್ತು ಗುಣಹೊಂದುತ್ತಿರುವ ಪ್ರಕ್ರಿಯೆಯನ್ನು ಗಮನಿಸಲಾಗು ತ್ತದೆ, ಹೊಲಿಗೆಗಳನ್ನು ತೆಗೆಯಲಾಗುತ್ತದೆ ಹಾಗೂ ಫ‌ಲಿತಾಂಶವನ್ನು ಗರಿಷ್ಠ ಮಟ್ಟಕ್ಕೇರಿಸಲು ಮತ್ತು ಕೂದಲು ಆರೈಕೆಯ ವಿಚಾರದಲ್ಲಿ ಇನ್ನಷ್ಟು ಸೂಚನೆಗಳನ್ನು ನೀಡಲಾಗುತ್ತದೆ.

ಪರಿಣತ ಸರ್ಜನ್‌ರನ್ನೇ ಸಂಪರ್ಕಿಸುವುದು ಏಕೆ ಮುಖ್ಯ?

ಯಾವುದೇ ಶಸ್ತ್ರಚಿಕಿತ್ಸೆಯಲ್ಲಿ ಸುರಕ್ಷೆಯು ಅತ್ಯಂತ ಪ್ರಾಮುಖ್ಯವಾಗಿದೆ. ಇದಕ್ಕಾಗಿ ತರಬೇತಾದ, ಪರಿಣತ ಸರ್ಜನ್‌, ವೃತ್ತಿಪರವಾಗಿ ನುರಿತ ಸಹಾಯಕ ವೈದ್ಯಕೀಯ ಸಿಬಂದಿಯ ತಂಡ ಮಾತ್ರವಲ್ಲದೆ ಅತ್ಯುತ್ತಮ ಗುಣಮಟ್ಟ ಮತ್ತು ಶ್ರೇಷ್ಠ ದರ್ಜೆಯ, ಉತ್ಕೃಷ್ಟ ಮಟ್ಟದ ಸೋಂಕುರಹಿತ ಶಸ್ತ್ರಕ್ರಿಯಾ ಕೊಠಡಿಯ ಸೌಲಭ್ಯಗಳು ಅಗತ್ಯವಾಗಿರುತ್ತವೆ. ಈ ವಿಷಯದಲ್ಲಿ ಅಲ್ಪಸ್ವಲ್ಪ ರಾಜಿ ಮಾಡಿಕೊಂಡರೂ ಪ್ರಾಣಾಪಾಯಕಾರಿ ಸೋಂಕುಗಳು ಉಂಟಾಗಬಹುದಾಗಿದೆ. ಕಸಿಯಾಗಿರುವ ಕೂದಲುಗಳು ಹೇಗೆ ಉಳಿಯುತ್ತವೆ ಹಾಗೂ ತಲೆಯ ಮೇಲೆ ಕಸಿಗೊಂಡಿರುವ ಕೂದಲುಗಳು ಎಷ್ಟು ಸಹಜ ಮತ್ತು ನೈಸರ್ಗಿಕವಾಗಿ ಬೆಳೆದುಬರುತ್ತವೆ ಎಂಬ ವಿಷಯದಲ್ಲಿ ಕೂದಲು ಕಸಿ ಮಾಡಿರುವ ಸರ್ಜನ್‌ರ ತರಬೇತಿ ಮತ್ತು ಅನುಭವವೂ ಪಾತ್ರ ವಹಿಸುತ್ತದೆ.

ಸಾರಾಂಶ

ಕೂದಲು ಕಸಿಯು ಸೌಂದರ್ಯಾತ್ಮಕ ಪ್ರಗತಿ ಮಾತ್ರವೇ ಅಲ್ಲದೆ ಇನ್ನೂ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಸಂಪೂರ್ಣವಾಗಿ ಕೂದಲು ಹೊಂದಿರುವ ತಲೆಯು ಆತ್ಮವಿಶ್ವಾಸ, ವ್ಯಕ್ತಿಘನತೆಗಳನ್ನು ವೃದ್ಧಿಸುವುದು ಮಾತ್ರವಲ್ಲದೆ ಸಾಮಾಜಿಕ ಸಂವಹನದ ಗುಣಮಟ್ಟ ವೃದ್ಧಿ ಮತ್ತು ಒಟ್ಟಾರೆ ಜೀವನ ಗುಣಮಟ್ಟ ಹೆಚ್ಚಳಕ್ಕೂ ಕಾರಣವಾಗುತ್ತದೆ. ಅಲ್ಲದೆ ಈ ಪ್ರಕ್ರಿಯೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದ್ದು, ದೀರ್ಘ‌ಕಾಲೀನ ಸಹಜ, ನೈಸರ್ಗಿಕ ಫ‌ಲಿತಾಂಶಗಳನ್ನು ಒದಗಿಸುತ್ತದೆ.

ಕೂದಲು ಕಸಿಯು ತಲೆಕೂದಲು ಮಾತ್ರವೇ ಅಲ್ಲದೆ ಆತ್ಮವಿಶ್ವಾಸ ಮತ್ತು ವ್ಯಕ್ತಿಘನತೆಯನ್ನು ಪುನರ್‌ ಸ್ಥಾಪಿಸಬಲ್ಲ ಬದುಕನ್ನು ಬದಲಾಯಿಸುವ ಪ್ರಕ್ರಿಯೆಯಾಗಿದೆ. ಮಣಿಪಾಲ ಕೆಎಂಸಿಯಲ್ಲಿ ನಿಪುಣ ಪ್ಲಾಸ್ಟಿಕ್‌ ಸರ್ಜನ್‌ಗಳು ಮತ್ತು ಚರ್ಮರೋಗಶಾಸ್ತ್ರಜ್ಞ ವೈದ್ಯರನ್ನು ಹೊಂದಿರುವ ನಮ್ಮ ತಂಡವು ವ್ಯಕ್ತಿನಿರ್ದಿಷ್ಟ ಆರೈಕೆ ಮತ್ತು ಉತ್ಕೃಷ್ಟ ಫ‌ಲಿತಾಂಶಗಳನ್ನು ಒದಗಿಸಲು ಪರಿಣತಿಯನ್ನು ಸಹಾನುಭೂತಿಯೊಂದಿಗೆ ಜೋಡಿಸಿ ಕಾರ್ಯನಿರ್ವಹಿಸುತ್ತಿದೆ.

ಹೆಚ್ಚುವರಿ ಮಾಹಿತಿ ಮತ್ತು ವಿವರಗಳಿಗಾಗಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಹೊಸ ಬ್ಲಾಕ್‌ನಲ್ಲಿ ಇರುವ ಹೇರ್‌ ಟ್ರಾನ್ಸ್‌ಪ್ಲಾಂಟ್‌ ಕ್ಲಿನಿಕ್‌ ಸಂಪರ್ಕಿಸಬಹುದು.

ಡಾ| ಜೋಸೆಫ್ ಥಾಮಸ್‌,

ಪ್ರೊಫೆಸರ್‌ ಮತ್ತು ಹೆಡ್‌

-ಡಾ| ಹರ್ಷವರ್ಧನ ಶೆಟ್ಟಿ

ಅಸಿಸ್ಟೆಂಟ್‌ ಪ್ರೊಫೆಸರ್‌

ಪ್ಲಾಸ್ಟಿಕ್‌ ಸರ್ಜರಿ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪ್ಲಾಸ್ಟಿಕ್‌ ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Nagamangala Case: “ಟಾರ್ಗೆಟ್‌ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ

Nagamangala Case: “ಟಾರ್ಗೆಟ್‌ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Ramanagara: ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

bjValmiki Corporation Scam ಯತ್ನಾಳ್‌, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆValmiki Corporation Scam ಯತ್ನಾಳ್‌, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆ

Valmiki Corporation Scam ಯತ್ನಾಳ್‌, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆ

CM ಗಾದಿ ಆಕಾಂಕ್ಷಿಗಳ ಜತೆಗೆ ಸಿದ್ದರಾಮಯ್ಯ ಉಪಾಹಾರ ಕೂಟ

CM ಗಾದಿ ಆಕಾಂಕ್ಷಿಗಳ ಜತೆಗೆ ಸಿದ್ದರಾಮಯ್ಯ ಉಪಾಹಾರ ಕೂಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

16

Health: ಸ್ತನ ಕಸಿ ಮತ್ತು ಕ್ಯಾನ್ಸರ್‌ ಪರಸ್ಪರ ಸಂಬಂಧ ಇದೆಯೇ?

9

Children’s Health: ತಂತ್ರಜ್ಞಾನ ಮತ್ತು ಕೋಮಲ ಮನಸ್ಸುಗಳು

8

Healthy Spine; ಬೆನ್ನಿನ ಮೇಲೊಂದು ಪಕ್ಷಿನೋಟ!

11-tooth

Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Nagamangala Case: “ಟಾರ್ಗೆಟ್‌ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ

Nagamangala Case: “ಟಾರ್ಗೆಟ್‌ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ

ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Ramanagara: ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.