ಸುದ್ದಿ  ಕೋಶ: ಹಜ್‌ ಯಾತ್ರೆ ದಾಖಲೆ

Team Udayavani, Jul 1, 2018, 6:00 AM IST

ಕೇಂದ್ರ ಸರ್ಕಾರ ಹಜ್‌ ಯಾತ್ರಿಗಳ ಹೆಸರಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದ ಬಳಿಕ ಹೊಸದೊಂದು ದಾಖಲೆ ನಿರ್ಮಾಣವಾಗಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ, ಈ ವರ್ಷ ಅತಿ ಹೆಚ್ಚು 1,75,025 ಮುಸ್ಲಿಮರು ಹಜ್‌ ಯಾತ್ರೆ ಕೈಗೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಬರೋಬ್ಬರಿ 57 ಕೋಟಿ ರೂ.ನಷ್ಟು ಉಳಿತಾಯವೂ ಸಾಧ್ಯವಾಗಿದೆ ಎಂದು ಸ್ವತಃ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಟಾಸ್‌ ನಖೀ ಶನಿವಾರ ಹೇಳಿದ್ದಾರೆ.

1,75,025: ಮಂದಿ ಹಜ್‌ಗೆ ಪ್ರಯಾಣ
ಭಾರತದ ಇತಿಹಾಸದಲ್ಲಿ ಇದೊಂದು ದಾಖಲೆ. ಈ ವರ್ಷ 1,75,025 ಮಂದಿ ಹಜ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಸ್ವಾತಂತ್ರಾéನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಭಾರತೀಯರು ಹಜ್‌ ಯಾತ್ರೆ ಕೈಗೊಳ್ಳಲಿದ್ದಾರೆ. ವಿಶೇಷವೆಂದರೆ ಇವರಲ್ಲಿ ಶೇ.47ರಷ್ಟು ಮಹಿಳೆಯರಿರುವುದು ಕೂಡ ಒಂದು ದಾಖಲೆ.

ಉಳಿತಾಯ ಹೇಗಾಯ್ತು? ಎಷ್ಟು?
ಕೇಂದ್ರ ಸರ್ಕಾರ ಜನವರಿಯಲ್ಲಿ ಹಜ್‌ ಯಾತ್ರೆಗೆಂದು ಈವರೆಗೆ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿತ್ತು. ಅಲ್ಲದೇ, ಕಡಿಮೆ ದರದಲ್ಲಿ ವಿಮಾನಯಾನಕ್ಕೆ ಅವಕಾಶ ಮಾಡಿಕೊಡುವುದಾಗಿಯೂ ಹೇಳಿತ್ತು. ಇದರಿಂದ ಉಳಿತಾಯವಾಗುವ ಹಣವನ್ನು ಹಿಂದುಳಿದ ವರ್ಗದವರ ಶಿಕ್ಷಣಕ್ಕಾಗಿ ಬಳಸಲಾಗುತ್ತದೆ ಎಂದು ಘೋಷಿಸಿತ್ತು. ಈ ಕ್ರಮದಿಂದಾಗಿ ಏರ್‌ಲೈನ್ಸ್‌ಗೆ ನೀಡಬೇಕಾಗಿದ್ದ ಮೊತ್ತದಲ್ಲಿ 57ಕೋಟಿ ರೂ. ಉಳಿತಾಯವಾಗಿದೆ.

ಪುರುಷ ಪ್ರಧಾನಕ್ಕೂ ಬ್ರೇಕ್‌
ಇನ್ನೂ ಒಂದು ವಿಶೇಷ ಏನೆಂದರೆ, ಈ ವರ್ಷ ಯಾವುದೇ ರಕ್ತ ಸಂಬಂಧಿ ಪುರುಷರನ್ನು ಅವಲಂಬಿಸದೇ 1,308 ಮಹಿಳೆಯರು ಹಜ್‌ ಯಾತ್ರೆ ಕೈಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಈ ಅವಕಾಶ ಕಲ್ಪಿಸಲಾಗಿದೆ. ಒಡನಾಡಿಗಳೊಂದಿಗೆ ಪ್ರವಾಸ ಬೆಳೆಸುವುದನ್ನು ಅರಬ್ಬಿಯಲ್ಲಿ “ಮೆಹರಾಮ್‌’ ಎನ್ನಲಾಗುತ್ತದೆ.

ಎಲ್ಲೆಲ್ಲಿಂದ ವಿಮಾನ?
ಜು.14ರಂದು ದೆಹಲಿ, ಗಯಾ, ಗುವಾಹಟಿ, ಲಕ್ನೋ ಮತ್ತು ಶ್ರೀನಗರದಿಂದ, ಜು.17ರಂದು ಕೋಲ್ಕತಾ, 20ರಂದು ವಾರಾಣಸಿ, 21ರಂದು ಮಂಗಳೂರು, 26ರಂದು ಗೋವಾ, 29ರಂದು ಔರಂಗಾಬಾದ್‌, ಚೆನ್ನೈ, ಮುಂಬೈ ಮತ್ತು ನಾಗ್ಪುರದಿಂದ, 30ರಂದು ರಾಂಚಿಯಿಂದ ವಿಮಾನ ಪ್ರಯಾಣ ಬೆಳೆಸಲಿವೆ. ಬಳಿಕ ಆ.1ರಂದು ಅಹಮದಾಬಾದ್‌, ಬೆಂಗಳೂರು, ಕೊಚ್ಚಿ, ಹೈದರಾಬಾದ್‌ ಮತ್ತು ಜೈಪುರದಿಂದ ಪ್ರಯಾಣ ಬೆಳೆಸಿದರೆ, ಆ.3ರಂದು ಭೋಪಾಲ್‌ನಿಂದ ವಿಮಾನ ಹಜ್‌ ಕಡೆ ಸಾಗಲಿದೆ

1,24,852    2017ರಲ್ಲಿ ಹಜ್‌ಗೆ ಪ್ರಯಾಣ ಬೆಳೆಸಿದ್ದವರ ಸಂಖ್ಯೆ
1,030 ಕೋಟಿ ರೂ. ಕಳೆದ ವರ್ಷ ವೈಮಾನಿಕ ಸಂಸ್ಥೆಗಳಿಗೆ ನೀಡಿದ್ದ ಮೊತ್ತ
3,55,604  ಹಜ್‌ ಯಾತ್ರೆಗಾಗಿ ಈ ಬಾರಿ ಅರ್ಜಿ ಸಲ್ಲಿಸಿದವರು
1,89,217  ಪುರುಷರು 1,66,387 ಮಹಿಳೆಯರು
973ಕೋಟಿ ರೂ.  ಸರ್ಕಾರ ಈ ಬಾರಿ ವೈಮಾನಿಕ ಸಂಸ್ಥೆಗಳಿಗೆ ನೀಡಿರುವ ಮೊತ್ತ
57 ಕೋಟಿ ರೂ.  ಇದರಿಂದ ಉಳಿತಾಯವಾದ ಹಣ

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ