ಲೋಕಸಭೆಯಲ್ಲಿ ಪ್ರಮೀಳೆಯರು

Team Udayavani, Jun 28, 2019, 2:54 PM IST

ಈ ಬಾರಿಯ ಲೋಕಸಭೆಯಲ್ಲಿ ಮಹಿಳೆಯರು ಇದೇ ಮೊದಲ ಬಾರಿಗೆ ದಾಖಲೆ ಸಂಖ್ಯೆಯಲ್ಲಿದ್ದಾರೆ. 2019ರ ಲೋಕಸಭೆಯಲ್ಲಿ 78 ಮಹಿಳಾ ಸದಸ್ಯರಿದ್ದು, ಇದು ದೇಶದ ಇತಿಹಾಸದಲ್ಲೇ ದಾಖಲೆ ಸಂಖ್ಯೆಯಾಗಿದೆ. ಹಾಗೆಂದು ಇಷ್ಟಕ್ಕೇ ತೃಪ್ತಿಪಡಲು ಸಾಧ್ಯವಿಲ್ಲ. ಬೇರೆ ಕೆಲವು ದೇಶಗಳಿಗೆ ಹೋಲಿಸಿದರೆ ಈ ಸಂಖ್ಯೆ ಏನೇನೂ ಅಲ್ಲ. ಅಲ್ಲದೆ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಬೇಕೆಂಬ ಬೇಡಿಕೆಯ ಹತ್ತಿರಕ್ಕೂ ಈ ಸಂಖ್ಯೆ ತಲುಪಲು ಸಾಧ್ಯವಾಗುತ್ತಿಲ್ಲ.

ಈ ಬಾರಿಯ 78 ಮಹಿಳಾ ಸದಸ್ಯೆಯರ ಸಂಖ್ಯೆ ಶೇ. 14.3ರಷ್ಟಾಗುತ್ತಷ್ಟೆ. ಲೋಕಸಭೆಗೆ ಮಹಿಳೆಯರ ಪ್ರವೇಶವಾದ 1962ರಿಂದ ಇದುವರೆಗೆ ಸಂಸತ್ತಿನಲ್ಲಿ ಕಾಣಿಸಿಕೊಂಡಿರುವ ಮಹಿಳೆಯರ ಸಂಖ್ಯೆ ಕೇವಲ 617 ಮಾತ್ರ. ಆದರೆ, ಹಿಂದಿನ 5 ವರ್ಷದ ಅವಧಿಗೆ ಹೋಲಿಸಿದರೆ ಈ ಬಾರಿ ದಾಖಲೆ ಏರಿಕೆಯಾಗಿರುವುದು ಸಮಾಧಾನಕರ ಸಂಗತಿ.

ಹಾಗೆ ನೋಡಿದರೆ ಮುಸ್ಲಿಂ ರಾಷ್ಟ್ರವಾಗಿರುವ ಬಾಂಗ್ಲಾ ದೇಶದಲ್ಲಿಯೇ ನಮ್ಮಿಂದ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಸದಸ್ಯರಿದ್ದಾರೆ. ಅಲ್ಲಿನ ಸದಸ್ಯರ ಶೇ. 21ರಷ್ಟು ಮಂದಿ ಮಹಿಳೆಯರಿದ್ದಾರೆ. ಅಮೆರಿಕದಲ್ಲಿ ಶೇ. 24, ಇಂಗ್ಲೆಂಡ್‌ನ‌ಲ್ಲಿ ಶೇ. 32 ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಶೇ. 63ರಷ್ಟು ಮಹಿಳಾ ಸದಸ್ಯರಿದ್ದಾರೆ ಎಂಬುದನ್ನು ಗಮನಿಸುವಾಗ ನಾವು ಇನ್ನೂ ಮಹಿಳೆಯರ ವಿಷಯದಲ್ಲಿ ಹಿಂದುಳಿದಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ.

ಸಂಸತ್ತಿನಲ್ಲಿರುವ ಮಹಿಳೆಯರಲ್ಲಿ ಕರ್ನಾಟಕ ಪಾಲು ಕೇವಲ ಮೂರು. ಲೋಕಸಭೆಯಲ್ಲಿರುವ ಶೋಭಾ ಕರಂದ್ಲಾಜೆ, ಸುಮಲತಾ ಅಂಬರೀಷ್‌ ಮತ್ತು ರಾಜ್ಯಸಭೆಯಲ್ಲಿರುವ ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದ ಕೊಡುಗೆಯಾಗಿದ್ದಾರೆ. ಉಳಿದಂತೆ ಮಹಿಳಾ ಸದಸ್ಯರ ವಿಷಯದಲ್ಲಿ ದೊಡ್ಡ ಪಾಲು ಹೊಂದಿರುವುದು ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ಆಗಿದೆ. ಆ ಬಳಿಕ ಮಧ್ಯಪ್ರದೇಶ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿವೆ.

715 ಮಂದಿ ಸ್ಪರ್ಧೆ
ಲಭ್ಯ ಅಂಕಿಅಂಶದ ಪ್ರಕಾರ ಈ ಬಾರಿ ಒಟ್ಟು 715 ಮಂದಿ ಮಹಿಳೆಯರು ಲೋಕಸಭೆಗೆ ಸ್ಪರ್ಧಿಸಿದ್ದರು. ಈ ಪೈಕಿ 396 ಮಂದಿ ಪದವೀಧರರಾಗಿದ್ದರು. 531 ಮಂದಿ 25ರಿಂದ 50 ವರ್ಷದೊಳಗಿನ ಪ್ರಾಯದವರು. ಉಳಿದವರು 51ರಿಂದ 80 ವರ್ಷದವರು. ಸ್ಪರ್ಧಿ ಸಿದ್ದ ಮಹಿಳೆಯರ ಪೈಕಿ 110 ಮಂದಿ ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದು, ಈ ಪೈಕಿ 78 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಸ್ಪರ್ಧಿಸಿದ್ದವರಲ್ಲಿ 255 ಮಂದಿ ಮಹಿಳೆಯರು ಕೋಟಿಪತಿಗಳಾಗಿದ್ದರು.

ಅತಿ ಕಿರಿಯ ಸಂಸದೆ
ಈ ಬಾರಿ ಪ್ರಥಮ ಪ್ರಯತ್ನದಲ್ಲೆ ಸಂಸದೆಯಾಗಿ ಆಯ್ಕೆಯಾಗಿರುವ ಒಡಿಸ್ಸಾದ ಚಂದ್ರಾಣಿ ಮುರ್ಮು ಅವರು ಲೋಕಸಭೆಯ ಅತಿ ಕಿರಿಯ ಸಂಸದೆಯಾಗಿದ್ದಾರೆ. ಅವರು ಒಡಿಸ್ಸಾದ ಬಿಜು ಜನತಾ ದಳದಿಂದ ಆಯ್ಕೆಯಾಗಿರುವವರು. ಇಂಜಿನಿಯರಿಂಗ್‌ ಪದವೀಧರೆಯಾಗಿರುವ ಅವರು ಬುಡಕಟ್ಟು ಸಮುದಾಯದವರು ಎಂಬುದು ಮತ್ತೂಂದು ಹೆಮ್ಮೆಯ ಸಂಗತಿ.

ಮತ್ತೆ ಮಹಿಳಾ ಸ್ಪೀಕರ್‌
ಲೋಕಸಭೆಗೆ ಈ ಬಾರಿಯೂ ಹಂಗಾಮಿ ಸ್ಪೀಕರ್‌ ಆಗಿ ಮೇನಕಾ ಗಾಂಧಿ ಅವರನ್ನು ಆರಿಸಲಾಗಿದೆ. ಒಂದೊಮ್ಮೆ ಖಾಯಂ ಸ್ಪೀಕರ್‌ ಆಗಿ ಅವರನ್ನೇ ಮುಂದುವರಿಸಿದರೆ ಲೋಕಸಭೆಯಲ್ಲಿ ಸ್ಪೀಕರ್‌ ಸ್ಥಾನವನ್ನು ಅಲಂಕರಿಸುವ ಮೂರನೆಯ ಮಹಿಳೆ ಇವರಾಗಲಿದ್ದಾರೆ. ಕಳೆದ ಬಾರಿ ಸುಮಿತ್ರಾ ಮಹಾಜನ್‌ (2014-19) ಅವರು ಸ್ಪೀಕರ್‌ ಆಗಿದ್ದರು. ಅದಕ್ಕಿಂತ ಹಿಂದಿನ ಅವಧಿಯಲ್ಲಿ ಮೀರಾಕುಮಾರ್‌ (2009-14) ಅವರು ಸ್ಪೀಕರ್‌ ಆಗಿ ಸಮರ್ಥವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದರು.

6 ಮಂದಿ ಸಚಿವೆಯರು
ಕಳೆದ ಬಾರಿ ಯಶಸ್ವಿ ಸಚಿವೆ ಎಂದು ವಿಶ್ವಮಟ್ಟದಲ್ಲಿ ಗುರು ತಿಸಿಕೊಂಡಿದ್ದ ಸುಷ್ಮಾ ಸ್ವರಾಜ್‌ ಅವರು ಈ ಬಾರಿ ಸಂಪುಟದಲ್ಲಿ ಇಲ್ಲದಿರುವುದು ಒಂದು ಕೊರತೆಯೇ. ಆದರೆ, ಈ ಬಾರಿ 6 ಮಂದಿ ಮಹಿಳೆಯರಿಗೆ ಸಚಿವ ಸ್ಥಾನ ಸಿಕ್ಕಿರುವುದು ಮತ್ತು ಅದರಲ್ಲೂ ವಿತ್ತ ಖಾತೆಯನ್ನು ನಿರ್ಮಲಾ ಸೀತಾರಾಮನ್‌ ಅವರಿಗೆ ನೀಡಿರುವುದು ಇಡೀ ದೇಶವೇ ಹೆಮ್ಮೆಪಡುವಂಥ ಸಂಗತಿ. ಕಳೆದ ಅವಧಿಯಲ್ಲಿ ರಕ್ಷಣಾ ಖಾತೆಯ ಜವಾಬ್ದಾರಿ ಹೊತ್ತಿದ್ದ ನಿರ್ಮಲಾ ಸೀತಾರಾಮನ್‌ ಅವರು ದೇಶದ ಪ್ರಥಮ ರಕ್ಷಣಾ ಸಚಿವೆ ಎಂಬ ಕೀರ್ತಿಗೆ ಭಾಜನರಾಗಿದ್ದರು. ಈ ಬಾರಿ ವಿತ್ತ ಖಾತೆಗೆ ಹೆಗಲೊಡ್ಡಿರುವ ಅವರು, ಇಂದಿರಾ ಗಾಂಧಿ ಬಳಿಕ ಈ ಖಾತೆಯನ್ನು ನಿಭಾಯಿಸುವ ಪ್ರಥಮ ಮಹಿಳೆಯಾಗಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಇಂಡೋ-ಆಂಗ್ಲೋ ಟ್ರೇಡ್‌ ವಿಷಯದಲ್ಲಿ ಪಿಎಚ್‌.ಡಿ. ಮಾಡಿರುವ ಇವರಿಗೆ ಅರ್ಹವಾಗಿಯೇ ವಿತ್ತ ಖಾತೆಯನ್ನು ನೀಡಲಾಗಿದೆ. 1959ರಲ್ಲಿ ತಮಿಳುನಾಡಿನ ಚೆನ್ನ ಯಲ್ಲಿ ಹುಟ್ಟಿರುವ ಇವರು ಇಂಗ್ಲಂಡ್‌ನಲ್ಲಿ ಸ್ವಲ್ಪ ಕಾಲ ಕಲಿಕೆ ಯೊಂದಿಗೆ ಸೇಲ್ಸ್‌ ಗರ್ಲ್ ಆಗಿಯೂ ದುಡಿದಿದ್ದರು ಎಂಬುದು ಅವರ ಪರಿಶ್ರಮಕ್ಕೆ ಸಾಕ್ಷಿ. ಸರಳತೆಯಲ್ಲೂ ಹೆಸರಾಗಿರುವ ಇವರು ಬಾಲ್ಯದಲ್ಲಿ ರಾಜಕೀಯದ ಕಡೆಗೆ ಆಕರ್ಷಿತರಾದವರಲ್ಲ. ಎರಡು ದಶಕಗಳ ಹಿಂದ ಷ್ಟೇ ರಾಜಕೀಯ ಸೇರಿದ್ದರೂ ಇಲ್ಲಿ ಇವರು ಮಾಡಿರುವ ಸಾಧನೆ ಅದ್ಭುತವಾದುದು.

ಮತ್ತೋರ್ವ ಪ್ರಭಾವಿ ಸಚಿವೆ ಸ್ಮತಿ ಇರಾನಿ. ಕಳೆದ ಬಾರಿಯೂ ಸಂಪುಟದಲ್ಲಿದ್ದವರು. ಶಿಕ್ಷಣ ಅರ್ಹತೆ ಬಗ್ಗೆ ಒಂದಷ್ಟು ವಿವಾದಕ್ಕೆ ಕಾರಣವಾಗಿದ್ದರೂ ಒಪ್ಪಿಸಿದ್ದ ಎರಡೂ ಇಲಾಖೆಯಲ್ಲಿ ಸಮರ್ಥವಾಗಿ ಕೆಲಸ ಮಾಡಿದವರು. ಕಳೆದ ಬಾರಿ ರಾಜ್ಯಸಭೆ ಸದಸ್ಯರಾಗಿದ್ದ ಇವರು ಈ ಬಾರಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನೇ ಸೋಲಿಸಿ ಅಮೇಠಿಯಿಂದ ಲೋಕಸಭೆಗೆ ಪ್ರವೇಶಿಸಿರುವ ಸಾಧಕಿ. ಕೇವಲ 43 ವರ್ಷ ಪ್ರಾಯದ ಇವರು ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದವರು. ಎಳವೆಯಲ್ಲೇ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದವರು ಮತ್ತು ಆರೆಸ್ಸೆಸ್‌ ಸಂಪರ್ಕದಲ್ಲಿದ್ದವರು. ಬಿಜೆಪಿಯ ಪ್ರಮುಖ ನಾಯಕರಲ್ಲಿ ಓರ್ವರಾಗಿ ಗುರುತಿಸಿ ಕೊಂಡವರು.

ಉಳಿದಂತೆ ಪಂಜಾಬಿನ ಹರ್‌ಸಿ ಮ್ರತ್‌ ಕೌರ್‌ ಬಾದಲ್‌, ಉತ್ತರ ಪ್ರದೇಶದ ಸಾಧ್ವಿ ನಿರಂಜನ್‌ ಜ್ಯೋತಿ, ಪಶ್ಚಿಮ ಬಂಗಾ ಳದ ದೇಬಶ್ರೀ ಚೌಧುರಿ ಹಾಗೂ ಛತ್ತೀಸ್‌ಗಢದ ರೇಣುಕಾ ಸಿಂಗ್‌ ಸರೂತ ಅವರು ಈ ಬಾರಿಯ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಈ ನಡುವೆ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಅವರು ಆಯ್ಕೆಯಾಗಿರುವುದು ಕೂಡ ಸಂಸತ್ತಿನಲ್ಲಿ ಮಹಿಳೆಯರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ. ಹೀಗೆ ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಮುಂದಕ್ಕೆ ಇಂಥ ಬೆಳವಣಿಗೆಯಲ್ಲಿ ರಾಜಕೀಯದ ಎಲ್ಲ ಹಂತದಲ್ಲೂ ಕಂಡು ಬರುವ ಸಾಧ್ಯತೆಯಿದೆ. ಈಗಿನ ಬೆಳವಣಿಗೆಯಲ್ಲಿ ಮಹಿಳಾ ಮೀಸಲಾತಿಯ ಕೊಡುಗೆ ಕಡಿಮೆ ಹಾಗೂ ಸಾಮರ್ಥ್ಯದ ಮಾನದಂಡವೇ ಮುಖ್ಯವಾದುದು ಎಂಬುದು ಮತ್ತಷ್ಟು ಖುಷಿ ಕೊಡುವ ಸಂಗತಿ.

ಪುತ್ತಿಗೆ ಪದ್ಮನಾಭ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ